ಒಂದು ತಿಂಗಳು ಸಮಯ ನೀಡುತ್ತೇವೆ; ನಮ್ಮ ಸರಕಾರವನ್ನು ಸಾಧ್ಯವಿದ್ದರೆ ಅಲ್ಲಾಡಿಸಿ ತೋರಿಸಲಿ..: ಬಿ.ಎಲ್‌ ಸಂತೋಷ್‌ ಗೆ ಪ್ರಿಯಾಂಕ್‌ ಖರ್ಗೆ ಸವಾಲು

Update: 2023-09-01 12:02 GMT

ಬೆಂಗಳೂರು: ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಬಿ.ಎಲ್. ಸಂತೋಷ್ ಅವರ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. 

ಈ ಸಂಬಂಧ ಶುಕ್ರವಾರ ಟ್ವೀಟ್‌ ಮಾಡಿರುವ ಅವರು, ʼʼಬಿ.ಎಲ್‌ ಸಂತೋಷ್‌ ಅವರಿಗೆ ಒಂದು ಸವಾಲು, ಒಂದು ದಿನವಲ್ಲ, ಒಂದು ತಿಂಗಳು ಸಮಯ ನೀಡುತ್ತೇವೆ, ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ ಎಂದು ತೋರಿಸಲಿʼʼ ಎಂದು ಸವಾಲು ಹಾಕಿದ್ದಾರೆ. 

ʼʼಇದೆಲ್ಲವಕ್ಕೂ ಮಿಗಿಲಾಗಿ ಮತ್ತೊಂದು ಸವಾಲು, ಒಂದು ವಾರದ ಸಮಯದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಹಾಗೂ ಮೇಲ್ಮನೆಯ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ತೋರಿಸಲಿ. ಈ ಸವಾಲನ್ನು ಸ್ವೀಕರಿಸುವ ದಮ್ಮು, ತಾಕತ್ತು ಇದೆಯೇ?ʼʼ ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನೆ ಮಾಡಿದ್ದಾರೆ. 

ʼʼನೂರು ದಿನಗಳು ಕಳೆದರೂ ಮೂರು ನಾಯಕರನ್ನು ಆಯ್ಕೆ ಮಾಡಲಾಗಿಲ್ಲʼʼ

ʼʼನಮ್ಮ ಸರ್ಕಾರ ರಚನೆಯಾಗಿ ನೂರು ದಿನಗಳು ಕಳೆದಿವೆ, ನೂರು ದಿನಗಳಲ್ಲಿ ನೂರಾರು ಜನಪರ ಯೋಜನೆಗಳು, ನಿರ್ಧಾರಗಳೊಂದಿಗೆ ಮುನ್ನಡೆಯುತ್ತಿದ್ದೇವೆ. ಆದರೆ ಬಿಜೆಪಿಗೆ ನೂರು ದಿನಗಳು ಕಳೆದರೂ ಮೂರು ನಾಯಕರನ್ನು ಆಯ್ಕೆ ಮಾಡಲಾಗಿಲ್ಲ. ವಿರೋಧ ಪಕ್ಷದ ನಾಯಕ, ರಾಜ್ಯಧ್ಯಕ್ಷ, ವಿಧಾನ ಪರಿಷತ್ ವಿಪಕ್ಷ ನಾಯಕನ ಹುದ್ದೆಗೆ ನಾಯಕರು ಸಿಗದಷ್ಟು ರಾಜಕೀಯ ದಿವಾಳಿತನ ಎದುರಿಸುತ್ತಿದೆಯೇ ಬಿಜೆಪಿ?. ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದ ಬಿಜೆಪಿಯವರಿಗೆ ಈ ಮೂರು ಹುದ್ದೆಗಳಿಗೆ ನೇಮಕದ ಗ್ಯಾರಂಟಿ ಇಲ್ಲದಿರುವುದು ದುರಂತ!ʼʼ ಎಂದು ಟೀಕಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News