ನಾಲ್ಕು ರಾಜ್ಯದಲ್ಲಿ ಬಿಜೆಪಿಗಿಂತ ಹೆಚ್ಚು ಮತ ನಮಗೆ ಬಂದಿದೆ: ಕಾಂಗ್ರೆಸ್‌ ನಾಯಕ ಬಿ.ಕೆ ಹರಿಪ್ರಸಾದ್

Update: 2023-12-04 09:25 GMT

ಬೆಂಗಳೂರು: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್‌, “ಒಟ್ಟಾರೆ ನಾಲ್ಕು ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಬಿಜೆಪಿ ಪಕ್ಷಕ್ಕಿಂತ 9,44,444 ಹೆಚ್ಚು ಮತ ಬಂದಿದೆ” ಎಂದು ಅಂಕಿ ಅಂಶಗಳ ಸಹಿತ ವಿವರಿಸಿದ್ದಾರೆ.

ಈ ಬಗ್ಗೆ ʼಎಕ್ಸ್‌ʼ ನಲ್ಲಿ ಬರೆದುಕೊಂಡಿರುವ ಅವರು, ʼಚುನಾವಣೆಯಲ್ಲಿ ನಾವು ಅಧಿಕಾರದಿಂದ ದೂರ ಇದ್ದೇವೆ, ಆದರೆ ಜನರ ನಂಬಿಕೆ ಮತ್ತು ಪ್ರೀತಿಯಿಂದಲ್ಲ.! ನಮ್ಮ ಪಕ್ಷಕ್ಕೆ ಜನರು ಅಧಿಕಾರ ನೀಡದೆ ಇರಬಹುದು, ಆದ್ರೆ ಮನದಾಳದಿಂದ ಮತ ನೀಡಿದ್ದಾರೆ. ಅವರಿಗೆ ತಲೆಬಾಗಿದ್ದೇವೆ, ಕೃತಜ್ಞರಾಗಿದ್ದೇವೆʼ ಎಂದು ಟ್ವೀಟ್‌ ಮಾಡಿದ್ದಾರೆ.

“ಚುನಾವಣೆ ಎಂದರೆ ಕೇವಲ ಅಂಕಿ ಸಂಖ್ಯೆಗಳ ಜಾದು ಅಲ್ಲ. ಸಂವಿಧಾನದ ರೀತಿ-ರಿವಾಜುಗಳ ಜೊತೆ ಅಲ್ಲೊಂದು ನಂಬಿಕೆ ಇದೆ, ವಿಸ್ವಾಸವಿದೆ. ಜನರ ಬದುಕಿನ ಪ್ರಶ್ನೆಗಳಿವೆ. ಕಾಂಗ್ರೆಸ್ ಪಕ್ಷ ಈ ನಾಲ್ಕು ರಾಜ್ಯಗಳಲ್ಲಿ ಜನರ ಬಳಿ ಇಂತಹ ಪ್ರಶ್ನೆಗಳನ್ನ ಇಟ್ಟುಕೊಂಡೇ ಮತ ಕೇಳಿದ್ದೇವೆ. ಅದಕ್ಕೆ ಮತದಾರರು ಅಭೂತಪೂರ್ವ ಸ್ಪಂದನೆ ನೀಡಿದ್ದಾರೆ. ಬಿಜೆಪಿಗಿಂತಲೂ ಹೆಚ್ಚು ಮತವನ್ನೂ ನೀಡಿದ್ದಾರೆ.!” ಎಂದು ಹೇಳಿದ್ದಾರೆ.

ನಾಲ್ಕು ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಬಿಜೆಪಿ ಪಕ್ಷಕ್ಕಿಂತ 9,44,444 ಹೆಚ್ಚು ಮತ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ ಒಟ್ಟು 49,077,907 ಮತಗಳು ಬಂದರೆ, ಬಿಜೆಪಿಗೆ 48,133,463 ಮತಗಳು ಬಂದಿವೆ. ಇದು ಕೋಮು ಧ್ರುವೀಕರಣ, ದ್ವೇಷ ರಾಜಕಾರಣ ಸೋಲಲ್ಲದೇ ಬೇರೇನಲ್ಲ.

ಛತ್ತೀಸ್ಗಢದಲ್ಲಿ ಬಿಜೆಪಿಗೆ 46.27%, ಕಾಂಗ್ರೆಸ್ ಪಕ್ಷಕ್ಕೆ 42.23%, ಮಧ್ಯಪ್ರದೇಶದಲ್ಲಿ ಬಿಜೆಪಿಗೆ 48.55% ನಮ್ಮ ಪಕ್ಷಕ್ಕೆ 40.40%, ರಾಜಸ್ತಾನದಲ್ಲಿ 41.69% ನಮ್ಮ ಪಕ್ಷಕ್ಕೆ 39.53% ನೀಡಿದೆ. ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಪಕ್ಷವನ್ನು ಸರಾಸರಿ ಶೇ 50ರಷ್ಟು ಮತದಾರರು ನಿರಾಕರಿಸಿರುವುದು ಸ್ಪಷ್ಟ

ನಾವು ಅಧಿಕಾರದಿಂದ ದೂರ ಇದ್ದರೂ, ಜನರ ಬದುಕು ಬವಣೆಗಳ ಬಗ್ಗೆ ಧ್ವನಿಯಾಗುತ್ತೇವೆ, ದ್ವೇಷ ರಾಜಕೀಯದ ವಿರುದ್ಧ ಪ್ರೀತಿ ವಿಸ್ವಾಸದ ರಾಜಕೀಯ ಮುಂದುವರೆಸುತ್ತೇವೆ. ಶ್ರೀಮತಿ ಸೋನಿಯಾ ಗಾಂಧಿ, ಶ್ರೀ ರಾಹುಲ್ ಗಾಂಧಿ , ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಾವು ಮತ್ತೆ ಭಾರತವನ್ನು ಒಗ್ಗೂಡಿಸುತ್ತೇವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News