ವಿಧಾನ ಪರಿಷತ್ ಚುನಾವಣೆ| ಹೈಕಮಾಂಡ್‍ಗೆ 65 ಮಂದಿ ಸಂಭಾವ್ಯರ ಪಟ್ಟಿ ಕೊಟ್ಟು ಬಂದಿದ್ದೇವೆ: ಡಿ.ಕೆ. ಶಿವಕುಮಾರ್

Update: 2024-05-30 14:26 GMT

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲು 300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ದಿಲ್ಲಿ ನಾಯಕರ ಜತೆ ಚರ್ಚೆ ಮಾಡಿ ಎಲ್ಲ ವರ್ಗದ 65 ಸಂಭಾವ್ಯರ ಪಟ್ಟಿಯನ್ನು ಕೊಟ್ಟು ಬಂದಿದ್ದೇವೆ. ಉಳಿದಂತೆ ಹೈಕಮಾಂಡ್ ನಾಯಕರು ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಗುರುವಾರ ಹೊಸದಿಲ್ಲಿ ಪ್ರವಾಸದಿಂದ ಬೆಂಗಳೂರಿಗೆ ಮರಳಿದ ಬಳಿಕ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮಾಜಿ ಶಾಸಕ ಯತೀಂದ್ರ ವಿಚಾರವಾಗಿ ಹೈಕಮಾಂಡ್ ನಾಯಕರು ಈಗಾಗಲೆ ಮಾತು ಕೊಟ್ಟಿದ್ದರು. ಕೇವಲ ಬೆಂಗಳೂರು ಮಾತ್ರವಲ್ಲದೇ ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಎಲ್ಲ ವಲಯಗಳಿಂದಲೂ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಮಂಗಳೂರಿನಲ್ಲಿ 21, ಚಿಕ್ಕಮಗಳೂರಿನಲ್ಲಿ 9 ಮಂದಿ ಆಕಾಂಕ್ಷಿಗಳಿದ್ದಾರೆ ಎಂದರು.

ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಹಿರಿಯರ ಅಭಿಪ್ರಾಯ ಕೇಳಬೇಕಿತ್ತು ಎಂಬ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾವು ಅವರ ಅಭಿಪ್ರಾಯ ಕೇಳಿದ್ದೇವೆ. ಪರಮೇಶ್ವರ್ ಅವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ’ ಎಂದರು.

ಅಭ್ಯರ್ಥಿಗಳ ಆಯ್ಕೆಗೆ ಮಾನದಂಡ ಏನು? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಸಂಘಟನೆಗೆ ಆದ್ಯತೆ ನೀಡಲಾಗುವುದು. ಅನೇಕ ಪ್ರಮುಖರು, ಹಿರಿಯರು ಹಾಗೂ ಚುನಾವಣೆಯಲ್ಲಿ ಸೋತವರು, ವಿಧಾನಸಭೆ ಟಿಕೆಟ್ ತ್ಯಾಗ ಮಾಡಿರುವವರು ಟಿಕೆಟ್ ಕೇಳಿದ್ದು, ಹೈಕಮಾಂಡ್ ನಾಯಕರು ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದರು.

ವಿಧಾನಪರಿಷತ್ತಿನಲ್ಲಿ ಸಭಾ ನಾಯಕರು ಆಗಿರುವ ಸಚಿವ ಭೋಸರಾಜು ಅವರಿಗೆ ಮತ್ತೆ ಅವಕಾಶ ಕಲ್ಪಿಸಲಾಗುತ್ತದೆಯೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ‘ಈ ವಿಚಾರವಾಗಿ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ’ ಎಂದರು.

ಜೂ.2ರಂದು ಶಾಸಕಾಂಗ ಪಕ್ಷದ ಸಭೆ: ಜೂನ್ 2 ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಶಾಸಕಾಂಗ ಪಕ್ಷದ ಸಭೆ ಇದೆ. ಪರಿಷತ್ ಸದಸ್ಯರು, ಶಾಸಕರು ಹಾಗೂ ಸಂಸದರಿಗೆ ಆಹ್ವಾನ ನೀಡಲಾಗುವುದು. ಪರಿಷತ್ ಚುನಾವಣೆ ಸೇರಿದಂತೆ ಪಕ್ಷದ ಕೆಲವು ವಿಚಾರ ಚರ್ಚೆ ಮಾಡಲಾಗುವುದು. ಜೂ.1ರಂದು ಕರೆಯಲಾಗಿದ್ದ ಪಕ್ಷದ ಪದಾಧಿಕಾರಿಗಳ ಸಭೆಯನ್ನು ಮುಂದೂಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಸುರೇಶ್ ಎಂಬುದು ಶುದ್ಧ ಸುಳ್ಳು. ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮುಗಿಯಲಿ. ನಾನು ಅಧಿಕಾರ ಬಿಡುವ ವೇಳೆಗೆ ಪಕ್ಷದ ಸಂಘಟನೆಯನ್ನು ಒಂದು ಹಂತಕ್ಕೆ ತಂದು ನಿಲ್ಲಿಸಬೇಕು. ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನ ಕಟ್ಟಡ ದುರ್ಬಲವಾಗುತ್ತಿದ್ದು, ಹೊಸ ಕಟ್ಟಡ ನಿರ್ಮಾಣ ಮಾಡಬೇಕಿದೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆ ಬಳಿಕ ಸಚಿವ ಸಂಪುಟ ಪುನಾರಚನೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ‘ಈ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಕೇಳಿ’ ಎಂದರು. ಅದೇ ರೀತಿ, ಹಾಸನದಲ್ಲಿ ಪ್ರಗತಿಪರ ಹಾಗೂ ಮಹಿಳಾ ಸಂಘಟನೆಗಳ ಪ್ರತಿಭಟನೆ ಬಗ್ಗೆ ಕೇಳಿದಾಗ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟದ ಹಕ್ಕನ್ನು ಯಾರು ತಡೆಯಲು ಆಗುವುದಿಲ್ಲ” ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಅಂಚೆ ಕಚೇರಿಯಲ್ಲಿ ಮಹಿಳೆಯರು ಖಾತೆ ತೆರೆಸಲು ಮುಗಿಬಿದ್ದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಅಷ್ಟು ವಿಶ್ವಾಸ ಮೂಡುತ್ತಿದೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ. ನಾವು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ. ನೀಡಲಾಗುವುದು ಎಂದು ನಮ್ಮ ನಾಯಕರು ಹಾಗೂ ಮಿತ್ರ ಪಕ್ಷಗಳ ನಾಯಕರು ಹೇಳಿದ್ದಾರೆ” ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News