ಶೀಘ್ರದಲ್ಲಿಯೇ ಲೋಡ್ ಶೆಡ್ಡಿಂಗ್ ಸಮಸ್ಯೆ ಬಗೆಹರಿಸುತ್ತೇವೆ: ಸಚಿವ ಚಲುವರಾಯಸ್ವಾಮಿ

Update: 2023-10-12 14:14 GMT

ಬೆಂಗಳೂರು, ಅ.12: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆಗುತ್ತಿರುವುದು ಸತ್ಯ. ಆದರೆ, ಇದನ್ನು ಮುಖ್ಯಮಂತ್ರಿ ಗಂಭೀರವಾಗಿ ತೆಗೆದುಕೊಂಡಿದ್ದು, ಶೀಘ್ರದಲ್ಲಿಯೇ ಸರಿಪಡಿಸುತ್ತೇವೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರಿ ಪ್ರಮಾಣದಲ್ಲಿ ವಿದ್ಯುತ್ ಸಮಸ್ಯೆ ಇದೆ. ಇದನ್ನು ಮುಖ್ಯಮಂತ್ರಿ ಗಂಭೀರವಾಗಿ ತೆಗೆದುಕೊಂಡಿದ್ದು, ಸರಿಪಡಿಸುತ್ತೇವೆ. ಈ ಕುರಿತು ಯಾವುದೇ ರೀತಿಯ ಆತಂಕ ಬೇಡ ಎಂದು ಅವರು ತಿಳಿಸಿದರು.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರಾತ್ರಿ 12 ಗಂಟೆಯ ಸುಮಾರಿಗೆ ನೀರು ಹರಿಸಿದ್ದರು. ಇದೀಗ ಎದೆಗಾರಿಕೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಮಾತ್ರ ಎದೆಗಾರಿಕೆ ಇರುವುದು ಬೇರೆ ಯಾರಿಗೂ ಕರ್ನಾಟಕದಲ್ಲಿ ಎದೆಗಾರಿಕೆಯೇ ಇಲ್ಲ ಎಂದು ಟೀಕಿಸಿದ ಅವರು, ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ನೀರು ಬಿಡಲು ಹೇಳಿದೆ. 4 ದಿನಗಳಿಂದ ಮಳೆ ಆಗಿದ್ದು, ಸುಮಾರು 7-8 ಸಾವಿರ ಕ್ಯುಸೆಕ್ ಸಂಗ್ರವಾಗಿದ್ದು, ಸದ್ಯಕ್ಕೆ ತೊಂದರೆ ಇಲ್ಲ ಎಂದು ಅವರು ಹೇಳಿದರು.

ಇನ್ನೂ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ 900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಿ.ಸಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕಳೆದ ವರ್ಷ ಇದೇ ಸಮಯಕ್ಕೆ 113 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವರ್ಷ 22 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಆತ್ಮಹತ್ಯೆ ಪ್ರಮಾಣ ಕಡಿಮೆ ಆಗಿದೆ. ಪೂರ್ಣ ಪ್ರಮಾಣವಾಗಿ ಆತ್ಮಹತ್ಯೆ ನಿಲ್ಲಿಸಲು ಸರಕಾರ ಮುಂದಾಗಿದೆ ಎಂದರು.

ರಾಜ್ಯದಲ್ಲಿ ಒಟ್ಟು ಬಿತ್ತನೆ ಪ್ರದೇಶ 118 ಲಕ್ಷ ಹೆಕ್ಟೇರ್ ಆಗಿದ್ದು, ಶೇ.89 ರಷ್ಟು ಬಿತ್ತನೆಯಾಗಿದೆ. ರಾಜ್ಯದಲ್ಲಿ ಹಾನಿಯಾದ ಒಟ್ಟು ಕೃಷಿ ಪ್ರದೇಶ 39.74 ಲಕ್ಷ ಹೆಕ್ಟೇರ್ ಇದ್ದು, ತೋಟಗಾರಿಕೆ ಬೆಳೆ 1.82 ಲಕ್ಷ ಹೆಕ್ಟೇರ್ ಆಗಿದೆ. ಕೃಷಿ ಹಾಗೂ ತೋಟಗಾರಿಕೆ ಸೇರಿ ಒಟ್ಟು 41.52 ಲಕ್ಷ ಹೆಕ್ಟೇರ್ ಅಂದಾಜು ಬೆಳೆ ಹಾನಿ (ಕೃಷಿ ಮತ್ತು ತೋಟಗಾರಿಕೆ) ಆಗಿದೆ. 30.43 ಸಾವಿರ ಕೋಟಿ ರೂ. ಮೌಲ್ಯದ ನಷ್ಟವಾಗಿದೆ ಎಂದು ವಿವರಿಸಿದರು.

ಅದೇ ರೀರಿ, 2023ರ ಮುಂಗಾರು ಆಹಾರ ಧಾನ್ಯಗಳ ಉತ್ಪಾದನೆ ಗುರಿ 111 ಲಕ್ಷ ಟನ್ ಇದೆ. ಬರಗಾಲದಿಂದ ಅಂದಾಜಿಸಲಾದ ಉತ್ಪಾದನಾ ಹಾನಿ 58 ಲಕ್ಷ ಮೆಟ್ರಿಕ್ ಟನ್. ಬರ ಹಿನ್ನೆಲೆಯಲ್ಲಿ ಕೇಂದ್ರ ತಂಡ 13 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ ಸಂಧರ್ಭ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲಾಗಿದೆ ಎಂದ ಅವರು, ಸೀಡ್ಸ್ ಕಾರ್ಪೊರೇಷನ್ 34 ಜನರ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಶೀಘ್ರದಲ್ಲಿಯೇ ಆದೇಶ ಹೊರಬರಲಿದೆ ಎಂದು ನುಡಿದರು.

ಮಳೆ ಕೊರತೆಯಿಂದ ಬರಗಾಲ ಬಂದಿದ್ದರು ಶೇ.91 ಬಿತ್ತನೆ ಆಗಿದೆ. ಇನ್ನೊಂದೆಡೆ ಅಕ್ರಮವಾಗಿ ದಾಸ್ತಾನು ಮಾಡಿದ ನಿಷೇಧಿತ ರಸಗೊಬ್ಬರ ಜಪ್ತಿ ಮಾಡಲಾಗಿದೆ. ಸಬ್ಸಿಡಿ ಬೀಜ ಅಕ್ರಮ ಸಾಗಾಣಿಕೆ ಮಾಡುತ್ತಿದ್ದ 24 ಟನ್ ಯೂರಿಯಾ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಆಯುಕ್ತ ವೈ.ಎಸ್.ಪಾಟೀಲ್, ಕಾರ್ಯದರ್ಶಿ ಅನ್ಬುಕುಮಾರ್, ಕೃಷಿ ನಿರ್ದೇಶಕ ಡಾ.ಜಿ.ಟಿ.ಪುತ್ರ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News