ಮಣಿಪುರ ವಿಚಾರದಲ್ಲಿ ಮೋದಿಯವರ ಮೌನದ ಹಿಂದಿನ ಮರ್ಮವೇನು: ದಿನೇಶ್ ಗುಂಡೂರಾವ್
ಬೆಂಗಳೂರು: ಮಣಿಪುರ ಗಲಭೆಯ ಬಗ್ಗೆ ಸುಪ್ರೀಂ ಕೋರ್ಟ್ ಎಚ್ಚರಿಸುತ್ತಿದ್ದರೂ ಮೌನ ವಹಿಸಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಣಿಪುರ ಗಲಭೆ ಸಂಬಂಧ ಸುಪ್ರೀಂ ಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪದೇ ಪದೇ ಚಾಟಿ ಬೀಸುತ್ತಲೇ ಇದೆ. ಇಷ್ಟಾದರೂ ಡಬಲ್ ಇಂಜೀನ್ ಸರ್ಕಾರದ ದಪ್ಪ ಚರ್ಮಕ್ಕೆ ಯಾವುದೇ ಚಾಟಿ ಏಟು ತಾಗುತ್ತಿಲ್ಲ. ಮಣಿಪುರ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತಾಳಿರುವ ಕೇಂದ್ರ ಭಾರತದ ನೆಲದಲ್ಲಿ ಸುದೀರ್ಘ ರಕ್ತಸಿಕ್ತ ಅಧ್ಯಾಯ ಬರೆಯಲು ಮುಂದಾಗಿದೆ ಎಂದು ಹೇಳಿದ್ದಾರೆ.
ಮಣಿಪುರ ವಿಚಾರದಲ್ಲಿ ಪ್ರಧಾನಿಯವರು ಯಾಕೆ ಮೌನ ಮುರಿಯುತ್ತಿಲ್ಲ? ಅವರ ಮೌನದ ಹಿಂದಿರುವುದು ಅಸಹಾಯಕತೆಯೋ ಅಥವಾ ರಾಜಕೀಯ ಲಾಭ ಗಳಿಸುವ ಕುಯುಕ್ತಿಯೋ ತಿಳಿಯುತ್ತಿಲ್ಲ. ಗುಜರಾತ್ ಗಲಭೆ ಸಂದರ್ಭದಲ್ಲೂ ಮೋದಿ ಇದೇ ಮೌನ ವಹಿಸಿದ್ದರು. ಈಗ ಪ್ರಧಾನಿಯಾದಾಗಲೂ ಮಣಿಪುರ ವಿಚಾರದಲ್ಲಿ ಮೌನವಹಿಸಿದ್ದಾರೆ. ಮೋದಿಯವರ ಮೌನದ ಹಿಂದಿನ ಮರ್ಮವೇನು? ಎಂದು ಪ್ರಶ್ನಿಸಿದ್ದಾರೆ.