ಕರಸೇವಕ ಶ್ರೀಕಾಂತ್ ಪೂಜಾರಿ ಮೇಲೆ ಕೇಸ್ ಹಾಕಿದರೆ ನಮಗೇನು ಲಾಭ: ಸಚಿವ ಸಂತೋಷ್ ಲಾಡ್ ಪ್ರಶ್ನೆ
ಹುಬ್ಬಳ್ಳಿ: ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯವರನ್ನು ಬಿಟ್ಟು ಹಿಂದೂಗಳಿಗೆ ಏನಾದರೂ ಲಾಭ ಆಗಿದೆಯಾ ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರಸೇವಕ ಶ್ರೀಕಾಂತ್ ಪೂಜಾರಿ ಮೇಲೆ ಕೇಸ್ ಹಾಕಿದರೆ ನಮಗೇನು ಲಾಭ. ಈಗಾಗಲೇ ಆತನ ಮೇಲೆ ಹಲವಾರು ಪ್ರಕರಣಗಳಿವೆ. ಬಿಜೆಪಿಗರಿಗೆ ಇಂತದ್ದೇ ಬೇಕು. ಹಾಗಾಗಿ ಪ್ರತಿಭಟನೆ ಮಾಡಿ ತಮ್ಮ ಬೆಳೆ ಬೇಯಿಸಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.
ʼರಾಮ ಮಂದಿರ ಪಕ್ಕದ ಜಮೀನಿನ ವಿಚಾರದಲ್ಲಿ ಭ್ರಷ್ಟಾಚಾರ ಆಗಿದೆ. ಜಮೀನು ಬೆಲೆ ಹೆಚ್ಚು ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ. ಈ ಮೂಲಕ ಅಲ್ಲಿರುವ ಪದಾಧಿಕಾರಿಗಳು ಕೋಟ್ಯಾಂತರ ರೂ. ಲಾಭ ಮಾಡಿಕೊಂಡಿದ್ದಾರೆ. ಒಂದು ಅಂದಾಜಿನ ಪ್ರಕಾರ 17 ಲಕ್ಷಕ್ಕೆ ಭೂಮಿ ತಗೊಂಡು ಮೂರು ಕೋಟಿಗೆ ಮಾರಾಟ ಮಾಡಿದ್ದಾರೆ. ಇದರ ಬಗ್ಗೆ ಯಾರು ಹೋರಾಟ ಮಾಡಬೇಕುʼ ಎಂದು ಪ್ರಶ್ನೆ ಮಾಡಿದರು.
ರಾಮನೂ ನಮ್ಮ ದೇವರು, ಗಂಡಿ ದುರ್ಗಮ್ಮ ನಮ್ಮ ದೇವರು, ಈ ಹಿನ್ನೆಲೆ ಹರಿಪ್ರದಾದ್ ಹೇಳಿಕೆ ಹೇಗೆ ವಿವಾದ ಆಗುತ್ತೆ ಎಂದರು.
ಪ್ರಧಾನಿ ನರೇಂದ್ರ ಮೋದಿ ವಿಶ್ವ ಗುರು ಅಂತಾರೆ, ಅವರಿಗೆ ಇಷ್ಟು ಪ್ರಚಾರ ಬೇಕಾ?. ಅವರು ಒಂದು ತಿಂಗಳು ಟಿವಿ ಬಂದ್ ಮಾಡಿ ಮತ ಕೇಳಲಿ. ಅವರನ್ನು ದೇವರು ಅಂತಾ ತೋರಿಸಿದ್ರೆ ನಾವು ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.