ಉಡುಪಿ ಕಾಲೇಜಿನ ವಿದ್ಯಾರ್ಥಿನಿಯರ ಬಗ್ಗೆ ನಕಲಿ ಸುದ್ದಿ ಸೃಷ್ಟಿಸಿದ ಬಿಜೆಪಿ, ABVP ಅಧ್ಯಕ್ಷನ ಅಸಲಿ ಸುದ್ದಿ ಬಗ್ಗೆ ಮೌನ ಮುರಿಯುವುದು ಯಾವಾಗ?: ಕಾಂಗ್ರೆಸ್ ಪ್ರಶ್ನೆ

Update: 2023-07-25 16:20 GMT

ಬೆಂಗಳೂರು, ಜು.25: ಉಡುಪಿಯ ಕಾಲೇಜಿನಲ್ಲಿ ‘ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ’ ಎಂದು ನಕಲಿ ಸುದ್ದಿ ಸೃಷ್ಟಿಸಿ ಕೋಮು ಪ್ರಚೋದನೆಗೆ ಮುಂದಾಗಿರುವ ಬಿಜೆಪಿ, ತೀರ್ಥಹಳ್ಳಿಯಲ್ಲಿ ಹಿಂದೂ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ಎಬಿವಿಪಿ ಅಧ್ಯಕ್ಷನ ಅಸಲಿ ಸುದ್ದಿಯ ಬಗ್ಗೆ ಮೌನ ಮುರಿಯುವುದು ಯಾವಾಗ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ವಿದ್ಯಾರ್ಥಿನಿಯರ ಮಕ್ಕಳಾಟವನ್ನು ರಾಜಕೀಯದ ಕಳ್ಳಾಟಕ್ಕೆ ಬಳಸಿಕೊಳ್ಳಲು ಉಪ್ಪು ಖಾರ, ಮಸಾಲೆಗಳನ್ನು ಬೆರಸಿ ಚಪ್ಪರಿಸಲು ಹೊರಟಿದ್ದ ರಾಜ್ಯ ಬಿಜೆಪಿಗೆ ನಮ್ಮ ಧಕ್ಷ ಪೊಲೀಸರು ತಡಮಾಡದೆ ತನಿಖೆ ಮಾಡಿ ಸತ್ಯಾಂಶ ಬಯಲಿಗೆಳೆದು ನಿರಾಸೆ ಮೂಡಿಸಿದ್ದಾರೆ ಎಂದು ತಿಳಿಸಿದೆ.

ಸೋಲಿನ ಹತಾಶೆಯಲ್ಲಿರುವ ಬಿಜೆಪಿ ಫೇಕ್ ಫ್ಯಾಕ್ಟರಿ ಹೊಸ ಹೊಸ ಟೂಲ್ ಕಿಟ್ ತಯಾರು ಮಾಡುತ್ತಿದೆ, ಅದರ ಭಾಗವಾಗಿ ‘ಉಡುಪಿಯ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ’ ಎಂದು ನಕಲಿ ಸುದ್ದಿಯ ಸ್ಕ್ರಿಪ್ಟ್ ತಯಾರಿಸಿದೆ ಎಂದು ಕಾಂಗ್ರೆಸ್ ಕಿಡಿಗಾರಿದೆ.

ಯಾವುದೇ ದೂರು ದಾಖಲಾಗದಿದ್ದರೂ ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಯಾವುದೇ ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟಿರುವುದು ಪತ್ತೆಯಾಗಿಲ್ಲ. ಬಿಜೆಪಿಯ ಫೇಕ್ ಫ್ಯಾಕ್ಟರಿಯ ಸದಸ್ಯೆ ಸೃಷ್ಟಿಸಿದ ಸುಳ್ಳನ್ನೆ ಹಿಡಿದು ಜಗ್ಗಾಡುತ್ತಿರುವ ರಾಜ್ಯ ಬಿಜೆಪಿನಾಯಕರ ಹತಾಶೆಯು ಮಿತಿಮೀರಿ ಕಟ್ಟೆಯೊಡೆದಿರುವುದಕ್ಕೆ ಈ ವಿಷಯವೇ ಸಾಕ್ಷಿ ಎಂದು ಕಾಂಗ್ರೆಸ್ ಟೀಕಿಸಿದೆ.

► ಉಡುಪಿ ಎಸ್ಪಿ ಸ್ಪಷ್ಟನೆ

''ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಚಿತ್ರೀಕರಣ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ, ತಪ್ಪು ಸಂದೇಶಗಳು ಹರಿದಾಡುತ್ತಿವೆ. ಇಲ್ಲಿ ಯಾವುದೇ ಹಿಡನ್ ಕ್ಯಾಮೆರಾ ಇಟ್ಟಿರುವುದು, ವಿಡಿಯೋವನ್ನು ಹಂಚಿ ಬ್ಲಾಕ್ಮೇಲ್ ಮಾಡಿ ತೊಂದರೆ ಕೊಟ್ಟಿರುವ ವಿಚಾರ ಇಲಾಖೆಯ ಗಮನಕ್ಕೆ ಬಂದಿಲ್ಲ''

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News