ಅದಾನಿ ಕಂಪೆನಿ ಮೇಲೆ ಈಡಿ ದಾಳಿ ಮಾಡುವುದು ಯಾವಾಗ?: ಪ್ರಧಾನಿ ಮೋದಿಗೆ ಕಾಂಗ್ರೆಸ್ ಪ್ರಶ್ನೆ

Update: 2023-10-07 12:47 GMT
ಪಿಟಿಐ ಚಿತ್ರ

ಬೆಂಗಳೂರು, ಅ. 7: ‘ಅದಾನಿ ಕಂಪೆನಿಯಲ್ಲಿ ಚೀನಾದವರ ಹೂಡಿಕೆ ಇದೆ, ‘ಅದಾನಿ ಚೀನಿ ಬಾಯಿ ಬಾಯಿ’ ಎನ್ನುವಂತಿದೆ. ಮೋದಿ ಅವರೇ, ಅದಾನಿ ಕಂಪೆನಿ ಮೇಲೆ ಈಡಿ ದಾಳಿ ಮಾಡುವುದು ಯಾವಾಗ? ನಿಮ್ಮ ಗೆಳೆಯನ ಹಿತಕ್ಕಾಗಿ ಚೀನಾದ ಅತಿಕ್ರಮಣ ನೋಡಿ ಸುಮ್ಮನಿದ್ದೀರಾ? ಭಾರತದ ಭೂಮಿಯನ್ನು ಬಲಿ ಕೊಡುತ್ತಿದ್ದೀರಾ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಶನಿವಾರ ಎಕ್ಸ್‌ ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ‘ಚೀನಾ ಕಂಪೆನಿಗಳಿಂದ ದೇಣಿಗೆ ಪಡೆಯಲಾಗಿದೆ ಎಂದು ಆರೋಪಿಸಿ ನ್ಯೂಸ್ ಕ್ಲಿಕ್ ಮಾಧ್ಯಮ ಸಂಸ್ಥೆಯ ಮೇಲೆ ದಾಳಿ ಮಾಡಲಾಗಿದೆ. ಚೀನಾ ಕಂಪೆನಿಗಳಿಂದ ದೇಣಿಗೆ ಸ್ವೀಕರಿಸುವುದು ಅಪರಾಧವೆಂದಾದರೆ ಮೊದಲು ಅಪರಾಧಿ ಸ್ಥಾನದಲ್ಲಿ ಮೋದಿಯೇ ನಿಲ್ಲುತ್ತಾರೆ’ ಎಂದು ಟೀಕಿಸಿದೆ.

‘ಪಿಎಂ ಕೇರ್ಸ್ ಎಂಬ ಗೋಲ್ಮಾಲ್ ನಿಧಿಗೆ ಚೀನಾ ಕಂಪೆನಿಗಳಿಂದ ಕೋಟಿ ಕೋಟಿ ರೂ.ಹಣ ಸಂಗ್ರಹಿಸಲಾಗಿದೆ. ಸರ್ದಾರ್ ಪಟೇಲರ ಪ್ರತಿಮೆ ನಿರ್ಮಾಣದ ಹೊಣೆಯನ್ನು ಚೀನಾ ಕಂಪೆನಿಗೆ ನೀಡಿದ್ದು ಕೇಂದ್ರ ಸರಕಾರವೇ. ಮೋದಿಯವರಿಗೆ ದಮ್ಮು ತಾಕತ್ತಿದ್ದರೆ ಭಾರತದ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ಮಾಡುವ ಬದಲು ಭಾರತವನ್ನು ಆಕ್ರಮಿಸಿರುವ ಚೀನಾ ಮೇಲೆ ದಾಳಿ ಮಾಡಲಿ... ಕನಿಷ್ಠ ಪಕ್ಷ ‘ಚೀನಾ’ ಎಂದು ಹೆಸರು ಹೇಳಿ ವಾಗ್ದಾಳಿಯನ್ನಾದರೂ ಮಾಡಲಿ’ ಎಂದು ಕಾಂಗ್ರೆಸ್ ಸಲಹೆ ನೀಡಿದೆ.

‘ಇತ್ತೀಚೆಗಷ್ಟೇ ಜಿ20 ಸಮಾವೇಶದ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷರು ಭಾರತದ ಮಾಧ್ಯಮಗಳ ಸ್ವಾತಂತ್ರ್ಯವು ಅಪಾಯದಲ್ಲಿದೆ ಎಂದು ವಿದೇಶದಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಮೋದಿಗೆ ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸುವಂತೆ ಬುದ್ದಿ ಹೇಳಿದ್ದೇನೆ ಎಂದಿದ್ದರು. ಈ ಅವಮಾನದ ಬೆನ್ನಲ್ಲೇ ಮೋದಿ ಸರ್ಕಾರ ನ್ಯೂಸ್ ಕ್ಲಿಕ್ ಸಂಸ್ಥೆಯ ಮೇಲೆ ದಾಳಿ ಮಾಡಿದೆ. ಭಾರತದ ಸತ್ಯ ಹೇಳುವ ಮಾಧ್ಯಮಗಳ ಕತ್ತು ಹಿಸುಕಲಾಗುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮೋದಿ ಭಜನೆಯ ‘ಗೋದಿ ಮೀಡಿಯಾ’ಗಳಿಗೆ ಮಾತ್ರ ಇಲ್ಲಿ ಸ್ವತಂತ್ರವಿದೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

‘ರಾಜ್ಯದ ಬರಪರಿಸ್ಥಿತಿಯ ಅವಲೋಕನಕ್ಕೆ ಬಂದಿರುವ ಕೇಂದ್ರ ಅಧ್ಯಯನ ತಂಡಕ್ಕೆ ರಾಜ್ಯದ ಸ್ಥಿತಿಯನ್ನು ನಮ್ಮ ಸರಕಾರ ಸಮರ್ಪಕವಾಗಿ ಮನವರಿಕೆ ಮಾಡಿಕೊಟ್ಟಿದೆ. ಈ ತಂಡವು ಸೂಕ್ತ ರೀತಿಯಲ್ಲಿ ಜಿಲ್ಲಾವಾರು ಅಧ್ಯಯನ ಮಾಡಬೇಕು, ರಾಜ್ಯಕ್ಕೆ ಅಗತ್ಯವಿರುವ ಪರಿಹಾರವನ್ನು ಕೇಂದ್ರ ಒದಗಿಸಬೇಕು. ಬಿಜೆಪಿ ಸಂಸದರು ರಾಜ್ಯಕ್ಕೆ ಬರ ಪರಿಹಾರ ಕೊಡುವ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News