ಮಂಗಳಸೂತ್ರದ ಬಗ್ಗೆ ಕಣ್ಣೀರು ಹಾಕುವ ವಿಶ್ವಗುರು ಪ್ರಜ್ವಲ್ ಪ್ರಕರಣದಲ್ಲಿ ಇನ್ನೂ ಯಾಕೆ ಮೌನ?: ದಿನೇಶ್ ಗುಂಡೂರಾವ್ ಟೀಕೆ

Update: 2024-04-30 13:48 GMT

ಬೆಂಗಳೂರು: ಮಂಗಳಸೂತ್ರದ ಬಗ್ಗೆ ಕಣ್ಣೀರು ಹಾಕುವ ವಿಶ್ವಗುರುಗಳು ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಕುರಿತು ಇನ್ನೂ ಏಕೆ ಮೌನವಾಗಿದ್ದಾರೆ. ಹೆಣ್ಣುಮಕ್ಕಳ ಮಂಗಳಸೂತ್ರ ಕಸಿದ ಪ್ರಜ್ವಲ್ ರೇವಣ್ಣ ಮೇಲೆ ಮಮಕಾರ ಯಾಕೆ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ ಅವರು, ಇಸ್ರೇಲ್-ಫೆಲೆಸ್ತೈನ್ ಯುದ್ಧ ನಿಲ್ಲಿಸುವಷ್ಟು ಧಮ್ ಇದೆ ಎಂಬ ಸುದ್ದಿ ಅಂಧ ಭಕ್ತರ ವಲಯದಲ್ಲಿ ಹರಿದಾಡುತ್ತಿತ್ತು. ಇಷ್ಟು ಪ್ರಭಾವವಿರುವ ವಿಶ್ವಗುರುವಿಗೆ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣರನ್ನು ಹಿಡಿಸಿ ತರಲು ಸಾಧ್ಯವಿಲ್ಲವೆ.? ಎಂದು ಪ್ರಶ್ನಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಕುರಿತು ಕ್ರಮ ಯಾಕೆ ತೆಗೆದುಕೊಂಡಿಲ್ಲ ಎಂದು ಅಮಿತ್ ಶಾ ಅವರು ನಮ್ಮ ಸರಕಾರವನ್ನು ಕೇಳಿದ್ದಾರೆ. ಅಮಿತ್ ಶಾರವರೇ, ಮಾಹಿತಿ ಗೊತ್ತಿಲ್ಲದಿದ್ದರೆ ಮಾತಾಡಬೇಡಿ. ಅದು ಅಪಹಾಸ್ಯವಾಗುತ್ತದೆ. ಪ್ರಜ್ವಲ್ ರೇವಣ್ಣರ ಕರ್ಮಕಾಂಡ ತಿಳಿದ ತಕ್ಷಣವೇ ಕರ್ನಾಟಕ ಸರಕಾರ ತನಿಖೆಗೆ ಎಸ್‍ಐಟಿ ರಚಿಸಿದೆ. ಎಸ್‍ಐಟಿ ತಂಡ ಈಗಾಗಲೇ ತನಿಖೆಯನ್ನೂ ಆರಂಭಿಸಿದೆ ಎಂದು ಹೇಳಿದ್ದಾರೆ.

ಎಸ್‍ಐಟಿ ತನಿಖೆಯಲ್ಲಿ ಯಾರು ತಪ್ಪಿತಸ್ಥರು ಎಂದು ತಿಳಿಯುತ್ತೋ ಅವರ ವಿರುದ್ಧ ಖಂಡಿತವಾಗಿಯೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಅದರ ಬಗ್ಗೆ ನಿಮಗೆ ಚಿಂತೆ ಬೇಡ. ಪ್ರಜ್ವಲ್ ರೇವಣ್ಣರ ಕಿರಾತಕ ಕೃತ್ಯ ನಿಮಗೆ ಮೊದಲೇ ತಿಳಿದಿತ್ತು. ಹೀಗಿದ್ದರೂ ಆತನನ್ನು ಎನ್‍ಡಿಎ ಅಭ್ಯರ್ಥಿ ಮಾಡಿ ಚುನಾವಣೆಗೆ ನಿಲ್ಲಿಸಿದ್ದೀರಲ್ಲಾ.. ನೀವು ಎಂತವರಿರಬಹುದು? ಅಮಿತ್ ಶಾ ರವರೇ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News