ಬಿಜೆಪಿ ಶಾಸಕರ ವಿರುದ್ಧ ಇಲ್ಲದ CBI ತನಿಖೆ ನನ್ನ ವಿರುದ್ಧ ಮಾತ್ರ ಏಕೆ? : ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-10-20 10:30 GMT

ಬೆಂಗಳೂರು: “ರಾಜಕೀಯ ಉದ್ದೇಶಕ್ಕಾಗಿಯೇ ಯಡಿಯೂರಪ್ಪ ಅವರು ನನ್ನ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದಾರೆ. ಬಿಜೆಪಿ ಪಕ್ಷದ ಶಾಸಕರ ವಿರುದ್ಧವೂ ಬೇಕಾದಷ್ಟು ಪ್ರಕರಣಗಳಿವೆ. ಬೇರೆಯವರದ್ದನ್ನು ತನಿಖೆಗೆ ನೀಡದೆ ನನ್ನದನ್ನು ಮಾತ್ರ ನೀಡಿದರು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.

ಕುಮಾರಕೃಪ ಅತಿಥಿಗೃಹದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯಿಸಿದರು. 

“ಅಡ್ವೋಕೇಟ್ ಜನರಲ್ ಅವರೇ ಈ ಪ್ರಕರಣದ ಸಿಬಿಐ ತನಿಖೆಗೆ ಅನುಮತಿ ನೀಡಲು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಈ ವಿಚಾರವನ್ನು ಸ್ಪೀಕರ್ ಬಳಿಯೂ ತೆಗೆದುಕೊಂಡು ಹೋಗದೆ ಯಡಿಯೂರಪ್ಪ ಅವರು ಸೀದಾ ಸಿಬಿಐ ತನಿಖೆಗೆ ಅನುಮತಿ ನೀಡಿದರು. ಸಿಬಿಐ ಅವರು ಶೇ 90 ರಷ್ಟು ತನಿಖೆ ಮುಗಿದಿದೆ ಎಂದು ಹೇಳಿದ್ದಾರೆ. ನನ್ನ ಬಳಿ ಯಾವ ವಿಚಾರಣಾಧಿಕಾರಿಯೂ ಬಂದಿಲ್ಲ. ವಿವರವನ್ನೂ ಪಡೆದಿಲ್ಲ. ನೋಡೋಣ ಏನು ಮಾಡುತ್ತಾರೋ. ನಾನು ನನ್ನ ವಕೀಲರ ಬಳಿ ಚರ್ಚೆ ಮಾಡುತ್ತೇನೆ" ಎಂದರು.

ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ, "ಹಾದಿ- ಬೀದಿಯಲ್ಲಿ ಹೋಗುವವರಿಗೆಲ್ಲಾ ಉತ್ತರ ಕೊಡಲು ಆಗುವುದಿಲ್ಲ. ನ್ಯಾಯಾಲಯ ಏನು ಹೇಳುತ್ತದೆಯೋ ಅದಕ್ಕೆ ಗೌರವ ಕೊಡಬೇಕು. ನೀವು ಅಷ್ಟೇ (ಮಾಧ್ಯಮದವರು) ಮಿಕ್ಕಿದವರ ಮಾತಿಗೆಲ್ಲಾ ಕಿವಿಗೊಡಬಾರದು” ಎಂದು ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News