ಎಫ್‌ಎಸ್‌ಎಲ್‌ ವರದಿ ಬಿಡುಗಡೆ ಮಾಡಲು ಸರಕಾರಕ್ಕೆ ಹಿಂಜರಿಕೆ ಯಾಕೆ? : ಆರ್‌. ಅಶೋಕ್‌ ಪ್ರಶ್ನೆ

Update: 2024-03-04 14:03 GMT

ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವರದಿ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಕಡೆಗೂ ಜನಾಕ್ರೋಶಕ್ಕೆ ಮಣಿದು ಮೂರು ಆರೋಪಿಗಳನ್ನು ಬಂಧಿಸಿದೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.

ಈ ಸಂಬಂಧ ʻಎಕ್ಸ್‌ʻ ಪ್ರತಿಕ್ರಿಯಿಸಿದ ಅವರು, "ಎಫ್‌ಎಸ್‌ಎಲ್‌ ವರದಿಯಲ್ಲಿ ಘೋಷಣೆ ಕೂಗಿದ್ದು ಧೃಢಪಟ್ಟ ನಂತರವೇ ಈ ಮೂವರು ಆರೋಪಿಗಳ ಬಂಧನವಾಗಿರುವುದು ಸ್ಪಷ್ಟಾಗಿದ್ದರೂ, ಸರಕಾರ ಇನ್ನೂ ಎಫ್‌ಎಸ್‌ಎಲ್‌ ವರದಿ ಬಹಿರಂಗ ಮಾಡದಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಸರಕಾರ ಏನನ್ನೂ ಮುಚ್ಚಿಡುತ್ತಿಲ್ಲ, ಯಾರನ್ನೂ ರಕ್ಷಿಸುತ್ತಿಲ್ಲ ಎನ್ನುವುದಾದರೆ ವರದಿ ಬಹಿರಂಗ ಮಾಡಲು ಹಿಂಜರಿಕೆ ಏಕೆ?" ಎಂದು ಅವರು ಪ್ರಶ್ನಿಸಿದ್ದಾರೆ.

"ಸರಕಾರ ಈ ಮೂವರು ಆರೋಪಿಗಳನ್ನು ಬಂಧಿಸಿದರೆ ಸಾಲದು, ಇವರ ಮೇಲೆ IPC ಯ ಸೆಕ್ಷನ್ 124A ಅಡಿ ದೇಶದ್ರೋಹ ಪ್ರಕರಣ ದಾಖಲಿಸಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರನ್ನೂ ಸಹ ಈ ಪ್ರಕರಣದಲ್ಲಿ ಶಾಮೀಲು ಮಾಡಬೇಕು. ಇದರ ಜೊತೆಗೆ 25 ಜನರಿಗೆ ಪಾಸ್ ನೀಡಿ ಸುಮಾರು ನೂರು ಜನ ಬೆಂಬಲಿಗರಿಗೆ ವಿಧಾನಸೌಧದ ಒಳಗೆ ಪ್ರವೇಶ ನೀಡಿ ಕರ್ತವ್ಯ ಲೋಪ ಎಸಗಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ವಿಚಾರಣೆ ನಡೆಸಬೇಕು" ಎಂದು ಹೇಳಿದರು.

ಈ ಇಡೀ ಪ್ರಕರಣ ಕಾಂಗ್ರೆಸ್ ಪಕ್ಷದ ದೇಶಪ್ರೇಮಕ್ಕೆ, ರಾಷ್ಟ್ರ ನಿಷ್ಠೆಗೆ ಒಂದು ಅಗ್ನಿ ಪರೀಕ್ಷೆಯಾಗಿದ್ದು, ಕಾಂಗ್ರೆಸ್ ಸರಕಾರದ ನಡೆಯನ್ನ ಬರೀ ಕರ್ನಾಟಕ ಅಲ್ಲ, ಇಡೀ ದೇಶದ ಜನತೆ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News