‘ಬುರ್ಕಾ ಹಾಕಿಬಂದರೆ ಕೆಲಸ ಮಾಡಿಕೊಡಲ್ಲ’ ಎಂದ ಯತ್ನಾಳ್‍ಗೆ ಅಲ್ಪಸಂಖ್ಯಾತರ ಅನುದಾನವೇಕೆ ?: ಸಚಿವ ಝಮೀರ್ ಅಹ್ಮದ್

Update: 2024-02-19 15:07 GMT

ಬೆಂಗಳೂರು: ‘ಬುರ್ಕಾ ಹಾಕಿದವರ, ಮುಸ್ಲಿಮರ ಕೆಲಸವನ್ನು ಶಾಸಕನಾಗಿ ನಾನು ಮಾಡಲ್ಲ’ ಎಂದು ಸಾರ್ವಜನಿಕವಾಗಿ ಹೇಳಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ‘ಈಗ ಅಲ್ಪಸಂಖ್ಯಾತರ ಅನುದಾನವೇಕೇ?’ ಎಂದು ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಖಾರವಾಗಿ ಪ್ರಶ್ನಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಬಿ.ವೈ.ವಿಜಯೇಂದ್ರ, ‘ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಗಮನ ಸೆಳೆದರು. ಕಾಂಗ್ರೆಸ್ ಶಾಸಕರಿಗೆ ಮಾತ್ರವಲ್ಲ, ಬೇರೆ ಪಕ್ಷದ ಶಾಸಕರಿಗೆ ಅಲ್ಪಸಂಖ್ಯಾತ ಕಾಲನಿಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಬಜೆಟ್‍ನಲ್ಲೂ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದೂ ಉಲ್ಲೇಖ ಮಾಡಿದರು. ಈ ವೇಳೆ ಝಮೀರ್ ಅಹ್ಮದ್ ಉತ್ತರ ನೀಡಿ, ಬಜೆಟ್‍ನಲ್ಲಿ ಅಲ್ಪಸಂಖ್ಯಾತರಿಗೆ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡಿಲ್ಲ. ಕ್ರಿಯಾಯೋಜನೆ ಅಷ್ಟೇ ಮಾಡಿದ್ದು. ಹಣ ಯಾವುದೂ ಬಿಡುಗಡೆ ಮಾಡಿಲ್ಲ. ಬರೀ 165 ಕೋಟಿ ರೂ.ಮಾತ್ರ ಬಿಡುಗಡೆ ಆಗಿದೆ. ಒಟ್ಟು ಬಜೆಟ್‍ನಲ್ಲಿ ಶೇ.1ಕ್ಕೂ ಕಡಿಮೆ ಪ್ರಮಾಣದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇನ್ನೂ, ಅಲ್ಪಸಂಖ್ಯಾತರು ಹೆಚ್ಚಿರುವ ಕಾಲನಿ ಅಭಿವೃದ್ಧಿಗೆ ಎ, ಬಿ, ಸಿ ಎಂದು ವರ್ಗೀಕರಣ ಮಾಡಿ ಜನಸಂಖ್ಯೆ ಆಧರಿಸಿ ಅಲ್ಪಸಂಖ್ಯಾತ ಕಾಲನಿಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. 29 ಬಿಜೆಪಿ ಶಾಸಕರು ಹಾಗೂ ಎಂಟು ಜೆಡಿಎಸ್ ಶಾಸಕರು ಸೇರಿದಂತೆ ಎಲ್ಲ ಪಕ್ಷದ ಶಾಸಕರಿಗೂ ಅನುದಾನ ಕೊಟ್ಟಿದ್ದೇವೆ ಎಂದು ಅವರು  ಮಾಹಿತಿ ನೀಡಿದರು.

ಈ ವೇಳೆ ಎದ್ದುನಿಂತ ಯತ್ನಾಳ್, ‘ತಮಗೆ ಬೇಕಾಗಿರುವ ಶಾಸಕರು, ದೊಡ್ಡವರಿಗೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಪ್ರಶ್ನಿಸಿದರು. ಆಗ ಝಮೀರ್, ಯತ್ನಾಳ್ ಅವರು ನನಗೆ ಅನುದಾನ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ನಿಮಗೆ ಅನುದಾನ ಕೊಡಬೇಕಾ? ಮುಸ್ಲಿಮರ ಪರವಾಗಿ ಕೆಲಸ ಮಾಡುತ್ತೀರಾ? ತಾವು ಶಾಸಕರಾಗಿ ಆಯ್ಕೆಯಾದ ಬಳಿಕ ಯಾವ ಬುರ್ಕಾ ಹಾಕಿದವರು, ಮುಸ್ಲಿಮರ ಕೆಲಸ ಮಾಡಲ್ಲ ಎಂದು ಹೇಳಿದ ಬಳಿಕ ಏಕೆ ಅನುದಾನ ಕೊಡುವುದು?’ ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಅಶ್ವತ್ಥ ನಾರಾಯಣ, ‘ಸರಕಾರ ಎಲ್ಲರನ್ನೂ ತಲುಪಬೇಕು. ನೀವು ಸರಕಾರವಾಗಿ ಕೆಲಸ ಮಾಡಿ ಎಂದರು. ಈ ವೇಳೆ ಅಲ್ಪಸಂಖ್ಯಾತರ ಕೆಲಸ ಮಾಡುತ್ತೇನೆ ಎಂದು ಒಪ್ಪಿಕೊಂಡರೆ ಐದಲ್ಲ, ಹತ್ತು ಕೋಟಿ ಕೊಡುತ್ತೇನೆ’ ಎಂದು ಯತ್ನಾಳ್‍ಗೆ ಝಮೀರ್ ತಿರುಗೇಟು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News