‘ನವರಂಗಿ ನಕಲಿ ಸ್ವಾಮಿ’ ಆಗಿರುವ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಇಲ್ಲದ ಕ್ರಮ ನಮ್ಮ ವಿರುದ್ಧವೇಕೆ?: ರಾಜ್ಯಪಾಲರಿಗೆ ಡಿ.ಕೆ. ಶಿವಕುಮಾರ್ ಪ್ರಶ್ನೆ

Update: 2024-08-19 15:20 GMT

ಬೆಂಗಳೂರು: ಬರೀ ಬುರುಡೆ ಬಿಡುವ ನವರಂಗಿ ನಕಲಿ ಸ್ವಾಮಿ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಇಲ್ಲದ ಕ್ರಮ ನಮ್ಮ ವಿರುದ್ಧವೇಕೆ ರಾಜ್ಯಪಾಲರೇ? ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಗಳ ವಿರುದ್ಧದ ವಿಚಾರಣೆಗೆ ರಾಜ್ಯಪಾಲರು ನೀಡಿರುವ ಅನುಮತಿಯನ್ನು ಖಂಡಿಸಿ ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿ ಅವರ ಮೇಲೂ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿ ಕಳಂಕಿತರ ವಿರುದ್ದ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರೂ ಏಕೆ ಪುರಸ್ಕರಿಸಿಲ್ಲ ರಾಜ್ಯಪಾಲರೇ? ಎಂದು ಕೇಳಿದರು.

ವಿರೋಧ ಪಕ್ಷದವರು ಹತ್ತು ಜನ್ಮ ಎತ್ತಿದರೂ ಕಾಂಗ್ರೆಸ್ ಸರಕಾರ ಬೀಳಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮಂತ್ರದಿಂದ ಮಾವಿನಕಾಯಿ ಉದುರಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಪರವಾಗಿ ಡಿ.ಕೆ.ಶಿವಕುಮಾರ್ ಒಬ್ಬನೇ ಅಲ್ಲ ಇಂಡಿಯಾ ಒಕ್ಕೂಟ ಹಾಗೂ ರಾಜ್ಯದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಕಟ್ಟ ಕಡೆಯ ಮತದಾರರು ಆಶೀರ್ವಾದ ಮಾಡಿ ಬೆನ್ನಲುಬಾಗಿ ನಿಂತಿದ್ದಾರೆ ಎಂದೂ ಅವರು ಉಲ್ಲೇಖಿಸಿದರು.

ಸರ್ಕಾರ ನೀಡಿರುವ ಸಲಹೆಗಳನ್ನೂ ಓದದ ರಾಜ್ಯಪಾಲರು ಟಿ.ಜೆ.ಅಬ್ರಹಾಂ ಎನ್ನುವ ವ್ಯಕ್ತಿ ಬೆಳಗ್ಗೆ ಅರ್ಜಿ ಕೊಟ್ಟರೆ, ಸಾಯಂಕಾಲದ ವೇಳೆಗೆ ಒಂದೇ ದಿನದಲ್ಲಿ ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಬಿಜೆಪಿಯವರು ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ರಾಜ್ಯಪಾಲರೇ ನಿಮ್ಮದು ಸಾಂವಿಧಾನಿಕ ಹುದ್ದೆ, ನಿಮ್ಮ ಮೇಲೆ ಈಗಲೂ ಗೌರವವಿದೆ. ನಿಮಗೆ ಸಾಕಷ್ಟು ಸಮಯವಿದ್ದು ವಿಚಾರಣೆಗೆ ನೀಡಿರುವ ಅನುಮತಿ ವಾಪಸ್ ಪಡೆಯಿರಿ ಎಂದು ಒತ್ತಾಯಿಸಿದರು.

ಅದು ಅಲ್ಲದೆ, ರಾಜ್ಯಪಾಲರು ಸಿಎಂ ಅವರ ವಿರುದ್ಧ ನೀಡಿರುವ ಅನುಮತಿ ವಿರುದ್ದ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇವೆ. ಹಿಂಬಾಗಿಲ ಮೂಲಕ ಬಿಜೆಪಿ, ಜೆಡಿಎಸ್ ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿವೆ. ಸಂವಿಧಾನದ ಮೂಲಕ ರಾಜ್ಯಪಾಲರ ಕುರ್ಚಿಯನ್ನು ಸೃಷ್ಟಿ ಮಾಡಿದ್ದೇ ಕಾಂಗ್ರೆಸ್ ಸರ್ಕಾರ. ನಮ್ಮ ಪಕ್ಷ ಕೊಟ್ಟಿರುವ ಸಂವಿಧಾನದ ಹಕ್ಕನ್ನು ದುರುಪಯೋಗ ಪಡಿಸಿಕೊಂಡು ಮುಖ್ಯಮಂತ್ರಿಗಳ ವಿರುದ್ಧ ವಿಚಾರಣೆಗೆ ಅವಕಾಶ ನೀಡಿರುವುದು ಹಾಸ್ಯಾಸ್ಪದ ಎಂದು ಹೇಳಿದರು.

ಪ್ರತಿಪಕ್ಷಗಳಿಗೆ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳ ಮೇಲೆ ಅಸೂಯೆ. ಬಡವರ ಪರವಾಗಿ ಕೆಲಸ ಮಾಡುತ್ತಿರುವ ಹಿಂದುಳಿದ ವರ್ಗದ ನಾಯಕನೊಬ್ಬ ಗ್ಯಾರಂಟಿಗಳನ್ನು ನೀಡಿ ಜನರ ಹೃದಯ ಗೆದ್ದಿದ್ದಾರೆ ಎಂಬುದನ್ನು ಪ್ರತಿಪಕ್ಷಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಧಿಕಾರ ಸಿಗಲಿಲ್ಲ ಎಂದು ಕೈ, ಕೈ ಹೊಸಕಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜನ ಬಹುಮತ ನೀಡಿರುವ ಕಾರಣಕ್ಕೆ ರಾಜ್ಯಪಾಲರು ಸರಕಾರಕ್ಕೆ ಪ್ರಮಾಣ ವಚನ ಭೋದನೆ ಮಾಡಿದರು. ಏಕೆ ಈಗ ಒಳಸಂಚು ಮಾಡುತ್ತಿದ್ದೀರಿ. ನಿಮಗೆ ಸಂವಿಧಾನವನ್ನು ಕಾಪಾಡುವ ಜವಾಬ್ದಾರಿ ನೀಡಲಾಗಿದೆ. ಆದರೆ ನೀವು ಏಕೆ ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ? ಸಂವಿಧಾನವನ್ನು ಕಾಪಾಡಬೇಕೆ ಹೊರತು, ಆ ಕುರ್ಚಿಗೆ ಕಳಂಕ ತರಬಾರದು ಎಂದು ನಿಮಗೆ ಸಲಹೆಯನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

ಶಾಸಕರನ್ನು ಖರೀದಿಸಲು ಸಾಧ್ಯವಿಲ್ಲ:

ಬಿಜೆಪಿಯ ಹುನ್ನಾರಗಳನ್ನು ಜನರಿಗೆ ತಿಳಿಸುವ ಕೆಲಸ ಮುಂದಿನ ದಿನಗಳಲ್ಲಿ ಮಾಡಲಾಗುವುದು. ಬಿಜೆಪಿಯವರು ಅಧಿಕಾರಕ್ಕೆ ಏಕೆ ಬರಲಿಲ್ಲ. ನೀವು ಈ ಹಿಂದೆ 17 ಜನರನ್ನು ಕರೆದುಕೊಂಡು ಹೋಗಿ ಆಪರೇಷನ್ ಕಮಲ ಮಾಡಿ ಜನತಾದಳ ಹಾಗೂ ಕಾಂಗ್ರೆಸ್ ಸರಕಾರವನ್ನು ಬೀಳಿಸಿದರು. ಈ ಬಾರಿಯೂ ಸ್ವಲ್ಪ ಪ್ರಯತ್ನ ಪಟ್ಟರು. ಆದರೆ ಅವರ ಆಟ ನಡೆಯಲಿಲ್ಲ. ಮುಂದಕ್ಕೂ ನಡೆಯುವುದಿಲ್ಲ. ಕಾಂಗ್ರೆಸ್ ಪಕ್ಷದ ಒಬ್ಬನೇ ಒಬ್ಬ ಶಾಸಕನನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News