ಕೇಂದ್ರದ ಭ್ರಷ್ಟಾಚಾರಗಳನ್ನು ಬಯಲು ಮಾಡಿರುವ CAG ವರದಿ ಬಗ್ಗೆ ಮೌನ ಏಕೆ?: ಪ್ರಧಾನಿ ಮೋದಿಗೆ ಪ್ರಶ್ನೆಗಳ ಸುರಿಮಳೆಗೈದ ಸಿಎಂ ಸಿದ್ದರಾಮಯ್ಯ

Update: 2023-08-18 17:30 GMT

ಬೆಂಗಳೂರು, ಆ. 18: ‘ಹಿಂದಿನ ಬಿಜೆಪಿ ಸರಕಾರದ ಶೇ.40 ಕಮಿಷನ್ ಹಗರಣವನ್ನು ತನಿಖೆಗೆ ವಹಿಸಿದ ಬೆನ್ನಲ್ಲೆ, ಕೇಂದ್ರ ಸರಕಾರದ ಭ್ರಷ್ಟಾಚಾರಗಳನ್ನು ಬಯಲು ಮಾಡಿರುವ ಸಿಎಜಿ ವರದಿ ಕುರಿತು ತನಿಖೆ ನಡೆಸಬೇಕು ಎಂದು ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದು, ‘ಭಾರತ್ ಮಾಲಾ, ದ್ವಾರಕಾ ಎಕ್ಸ್‍ಪ್ರೆಸ್ ವೇನಲ್ಲಿ ನಡೆದಿರುವ ಹಗರಣಗಳ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಮೋದಿ ಅವರೇ, ಹಿಂದಿನ ನಿಮ್ಮ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ರಾಜ್ಯದ ಗುತ್ತಿಗೆದಾರರು ಮಾಡಿರುವ ಶೇ.40 ಕಮಿಷನ್ ಆರೋಪದ ತನಿಖೆಗೆ ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಸಮಿತಿಯನ್ನು ರಚನೆ ಮಾಡುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ’ ಎಂದು ತಿಳಿಸಿದ್ದಾರೆ.

‘ನಿಮ್ಮದೇ ಸರಕಾರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಿಎಜಿ ನೀಡಿರುವ ವರದಿಯ ಬಗ್ಗೆ ನೀವು ಯಾವಾಗ ತನಿಖೆ ನಡೆಸಿ ‘ನಾ ಖಾವೂಂಗಾ ನಾ ಖಾನೆ ದೂಂಗಾ’ ಎಂಬ ನಿಮ್ಮ ಘೋಷಣೆಗೆ ಅನುಗುಣವಾಗಿ ನುಡಿದಂತೆ ನಡೆಯುವಿರಿ?. ಮೋದಿ ಅವರೇ, ನಿಮ್ಮ ಮೂಗಿನಡಿಯಲ್ಲಿಯೇ ದ್ವಾರಕಾ ಎಕ್ಸ್‍ಪ್ರೆಸ್ ಹೈವೇ ಯೋಜನೆಯಲ್ಲಿ ಪ್ರತಿ ಕಿ.ಮೀ.ಗೆ 250ಕೋಟಿ ರೂ.ಕೊಳ್ಳೆ ಹೊಡೆಯಲಾಗಿದೆ. 5 ಟೋಲ್ ಪ್ಲಾಜಾಗಳಲ್ಲಿ 132 ಕೋಟಿ ರೂ.ಹಣವನ್ನು ಲೂಟಿ ಮಾಡಲಾಗಿದೆ, ನೀವು ಪದೇ ಪದೇ ಉಲ್ಲೇಖಿಸುವ ‘ಆಯುಷ್ಮಾನ್ ಭಾರತ್’ ಯೋಜನೆಯಲ್ಲಂತೂ ಮೃತಪಟ್ಟ 88ಸಾವಿರ ಫಲಾನುಭವಿಗಳ ಹೆಸರಿನಲ್ಲಿ ಹೊಸದಾಗಿ ಬಿಲ್‍ಗಳನ್ನು ಕ್ಲೈಮ್ ಮಾಡಿ ಹಣ ನುಂಗಿ ಹಾಕಲಾಗಿದೆ ಎಂದು ಸಿಎಜಿ ವರದಿ ಮಾಡಿದೆ. ಈ ಬಗ್ಗೆ ತನಿಖೆ ನಡೆಸುವ ಧೈರ್ಯ ತೋರಿಸುವಿರಾ?’ ಎಂದು ಪ್ರಶ್ನಿಸಿದ್ದಾರೆ.

‘ಮೋದಿ ಅವರೇ, ನೀವು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಅಧ್ಯಕ್ಷರೂ ಆಗಿದ್ದೀರಿ. ಭಾರತ್ ಮಾಲಾ ಯೋಜನೆಯಲ್ಲಿ ಪ್ರತಿ ಕಿ.ಮೀ.ಗೆ 15.37 ಕೋಟಿ ರೂ.ಗಳಿಂದ 32 ಕೋಟಿ ರೂ.ವರೆಗೆ ಹೆಚ್ಚುವರಿ ಖರ್ಚು ತೋರಿಸಲಾಗಿದೆ ಎಂದು ಸಿಎಜಿ ವರದಿ ಮಾಡಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ಸಂಪರ್ಕ ವ್ಯವಸ್ಥೆ ಸುಧಾರಣೆಯ ಅತಿ ಪ್ರಚಾರದ ಭಾರತ ಮಾಲಾ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿಯೇ ಅಕ್ರಮ ನಡೆದಿದೆ ಮತ್ತು ಆ ಯೋಜನೆ ಬಗೆಗೆ ವಿಸ್ತೃತವಾದ ವರದಿಯೇ ಸಲ್ಲಿಕೆಯಾಗಿಲ್ಲ. ಹೀಗಿದ್ದರೂ 3,500 ಕೋಟಿ ರೂ.ಹಣ ವರ್ಗಾಯಿಸಲಾಗಿದೆ ಎಂದು ಸಿಎಜಿ ಲೋಪವನ್ನು ಎತ್ತಿ ತೋರಿಸಿದೆ. ಪ್ರಧಾನಿ ಮೋದಿ ಅವರೇ, ಈ ಬಗ್ಗೆ ನಿಮ್ಮ ಮೌನವನ್ನು ಅಕ್ರಮದಲ್ಲಿ ಶಾಮೀಲಾಗಿದ್ದೀರಿ ಎಂದು ವ್ಯಾಖ್ಯಾನಿಸಬಹುದೇ?’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮೋದಿ ಅವರೇ, ದಿಲ್ಲಿ-ಗುರುಗ್ರಾಮ ಗಡಿಯಲ್ಲಿರುವ ದ್ವಾರಕಾ ಎಕ್ಸ್‌ ಪ್ರೆಸ್ ವೇ ಯೋಜನೆಯಲ್ಲಿ ಅಕ್ರಮ ನಡೆದಿರುವ ವರದಿಗಳಿವೆ. ಪ್ರತಿ ಕಿ.ಮೀ.ಗೆ 18.2ಕೋಟಿ ರೂ.ಗಳಿಂದ 251ಕೋಟಿ ರೂ.ವರೆಗೆ ನಿರ್ಮಾಣ ವೆಚ್ಚವನ್ನು ಅವೈಜ್ಞಾನಿಕ ರೀತಿಯಲ್ಲಿ ಏರಿಸಲಾಗಿರುವ ಆರೋಪಗಳಿವೆ. ಈ ಬಗ್ಗೆ ಸಮಗ್ರ ತನಿಖೆಯ ಅಗತ್ಯ ಇದೆ ಎಂದು ನಿಮಗೆ ಅನಿಸುವುದಿಲ್ಲವೇ?’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

‘ಮೋದಿ ಅವರೇ, ನೀವು ‘ಇಂಡಿಯಾ’ ಒಕ್ಕೂಟವನ್ನು ಭ್ರಷ್ಟರ ಒಕ್ಕೂಟವೆಂದು ಸುಳ್ಳು ಆರೋಪ ಹೊರಿಸಿ ಸಂಭ್ರಮಿಸುತ್ತೀರಿ, ನಿಮ್ಮದೇ ಸರಕಾರ ಬ್ರಹ್ಮಾಂಡ ಭ್ರ‌ಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಸಿಎಜಿ ವರದಿಯು ಬಟಾಬಯಲು ಮಾಡಿದ್ದರೂ ಕಣ್ಣು, ಬಾಯಿಮುಚ್ಚಿ ಕೂತಿದ್ದೀರಿ. ಇದು ಆತ್ಮವಂಚಕ ನಡವಳಿಕೆ ಅಲ್ಲವೇ?’ ಎಂದು ಸಿದ್ದರಾಮಯ್ಯ ದೂರಿದ್ದಾರೆ.

‘ಮೋದಿ ಅವರೇ, ಅಯೋಧ್ಯೆಯ ರಾಮ ಮಂದಿರ ನಿರ್ಮಾಣದಲ್ಲಿ ವ್ಯಾಪಕ ಭ್ರμÁ್ಟಚಾರ ನಡೆದಿರುವ ಬಗ್ಗೆ ನಿಮ್ಮದೇ ಪರಿವಾರ ಆರೋಪಗಳನ್ನು ಮಾಡತೊಡಗಿದೆ. ‘ಪಿಎಂ ಕೇರ್ಸ್ ಫಂಡ್’ ಅನ್ನು ಸರಕಾರದ್ದೆಂದು ಭಾವಿಸಿ ಮುಗ್ಧ ಜನತೆ ಅಪಾರ ಪ್ರಮಾಣದಲ್ಲಿ ಹಣವನ್ನು ದಾನವಾಗಿ ನೀಡುತ್ತಿದ್ದಾರೆ. ಆದರೆ, ನಿಮ್ಮ ಸರಕಾರ ಅದನ್ನು ಸಾರ್ವಜನಿಕ ದತ್ತಿ ಟ್ರಸ್ಟ್ ಎಂದು ಹೆಸರಿಸಿ ಅದನ್ನು ಮಾಹಿತಿ ಹಕ್ಕಿನಿಂದ ಹೊರಗಿರಿಸಿರಿದೆ. ಈ ದುಡ್ಡಿನಿಂದ ಯಾರಿಗೆ ಲಾಭವಾಗುತ್ತಿದೆ ಹೇಳಬಲ್ಲಿರಾ?’

-ಸಿದ್ದರಾಮಯ್ಯ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News