2500 ಎಕರೆ ಅಕ್ರಮ ಭೂಮಿ ಹಂಚಿಕೆ ಆರೋಪ ಹೊತ್ತ ಆರ್.ಅಶೋಕ್ ವಿರುದ್ಧ ಯಡಿಯೂರಪ್ಪ ತನಿಖೆಗೆ ಒತ್ತಾಯಿಸುವರೇ?: ರಮೇಶ್ ಬಾಬು ಪ್ರಶ್ನೆ

Update: 2024-08-04 18:04 GMT

ರಮೇಶ್ ಬಾಬು

ಬೆಂಗಳೂರು: ಮುಡಾ ಪ್ರಕರಣದಲ್ಲಿ ಪಾದಯಾತ್ರೆ ಉದ್ಘಾಟಿಸಿರುವ ಯಡಿಯೂರಪ್ಪ, ಬೆಂಗಳೂರಿನ ಬಿ.ಎಂ.ಕಾವಲುನಲ್ಲಿ ಸುಮಾರು 2500 ಎಕರೆ ಅಕ್ರಮ ಭೂಮಿ ಹಂಚಿಕೆ ಆರೋಪ ಹೊತ್ತಿರುವ ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ತನಿಖೆಗೆ ಒತ್ತಾಯಿಸುವರೇ? ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಪ್ರಶ್ನಿಸಿದ್ದಾರೆ.

ರವಿವಾರ ಈ ಬಗ್ಗೆ ಪತ್ರಿಕಾ ಹೇಳಿಕೆ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಹಲವು ಪ್ರಶ್ನೆಗಳನ್ನು ಕೇಳಿರುವ ಅವರು, 2008ರಲ್ಲಿ ಬಿ.ಎಸ್.ಯಡಿಯೂರಪ್ಪನವರು ಜೆಡಿಎಸ್ ಪಕ್ಷದ ಎಚ್.ಡಿ.ಕುಮಾರಸ್ವಾಮಿ ಮೇಲೆ ಮಾಡಿದ್ದ ವಚನ ಭ್ರಷ್ಟತೆಯ ಆರೋಪವನ್ನು ಹಿಂಪಡೆಯುತ್ತಾರೆಯೇ? ಎಂದಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು ಮತ್ತು ಅವರ ಕುಟುಂಬದವರಿಗೆ ಮೈಸೂರಿನ ಮುಡಾದಲ್ಲಿ ಅಕ್ರಮವಾಗಿ 48 ನಿವೇಶನಗಳನ್ನು ನೀಡಿರುವುದಾಗಿ 2011ರಲ್ಲಿ ಯಡಿಯೂರಪ್ಪ ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ ಎಂದು ರಮೇಶ್‍ಬಾಬು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಅವರಿಗೆ ಮುಡಾದಲ್ಲಿ ನಿವೇಶನ ಸಂಖ್ಯೆ-17ಬಿ(1) ವಿಸ್ತೀರ್ಣ 75/280 ಅಡಿ 1984ರಲ್ಲಿ ಅಕ್ರಮವಾಗಿ ಹಂಚಿಕೆಯಾಗಿದೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪನವರು ಈ ರಾಜ್ಯದ ಒಬ್ಬ ಜನನಾಯಕರಾಗಿದ್ದು, ಸದನದ ಒಳಗಡೆ ಅವರು ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಮೇಲೆ ಹಲವು ಆರೋಪಗಳನ್ನು ಮಾಡಿದ್ದು, ಇವುಗಳು ಅಧಿಕೃತ ದಾಖಲೆಗಳಾಗಿ ಉಳಿದುಕೊಂಡಿವೆ. ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಅವರ ನಾಯಕತ್ವಕ್ಕೆ ಅನುಗುಣವಾಗಿ ಯಡಿಯೂರಪ್ಪನವರು ಉತ್ತರ ನೀಡಬೇಕು ಎಂದು ರಮೇಶ್‍ಬಾಬು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News