ಬಸ್ ಹತ್ತುವಾಗ ಮಹಿಳೆಯ ಕೈ ತುಂಡಾಗಿಲ್ಲ: ಸಾರಿಗೆ ನಿಗಮದ ಅಧಿಕಾರಿ ಸ್ಪಷ್ಟನೆ

Update: 2023-06-26 04:15 GMT
ಸಾಂದರ್ಭಿಕ ಚಿತ್ರ

ಮಂಡ್ಯ, ಜೂ.26: ಜಿಲ್ಲೆಯ ಹುಲ್ಲೇನಹಳ್ಳಿ ಬಳಿ ಕಿಟಕಿ ಮೂಲಕ ಬಸ್‌ ಹತ್ತುವಾಗ ಮಹಿಳೆಯ ಕೈ ತುಂಡಾಗಿದೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ವೀಡಿಯೊ ಸತ್ಯವಲ್ಲ ಮತ್ತು ಆ ಮಹಿಳೆಯ ಕೈ ತುಂಡಾಗಿರುವುದು ಬಸ್ ಹತ್ತುವಾಗ ಸಂಭವಿಸಿದ ಅಪಘಾತದಿಂದಲ್ಲ ಎಂದು ಕೆಎಸ್ಸಾರ್ಟಿಸಿ ಮಂಡ್ಯ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ನಾಗರಾಜು ಸ್ಪಷ್ಟಪಡಿಸಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡಿನಿಂದ ಟಿ.ನರಸೀಪುರಕ್ಕೆ ತೆರಳುತ್ತಿದ್ದ ಸಾರಿಗೆ ಬಸ್‌ಗೆ ಬಸವರಾಜಪುರದ ಹತ್ತಿರ ಲಾರಿ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯರ ಕೈ ತುಂಡರಿಸಿದ್ದು, ಇದನ್ನು ಮಹಿಳೆ ಕಿಟಕಿ ಮೂಲಕ ಬಸ್ ಹತ್ತುವಾಗ ಮಂಡ್ಯ ಜಿಲ್ಲೆಯ ಹುಲ್ಲೇನಹಳ್ಳಿ ಬಳಿ ಅವಘಡ ಸಂಭವಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವನ್ನು ತಪ್ಪಾಗಿ ಅರ್ಥೈಸಿ ಹರಿಯ ಬಿಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜೂ.18 ರಂದು ಚಾಮರಾಜನಗರ ವಿಭಾಗದ ನಂಜನಗೂಡು ಘಟಕದ ಸಾರಿಗೆ ಬಸ್‌ ನಂಜನಗೂಡಿನಿಂದ ಟಿ.ನರಸೀಪುರಕ್ಕೆ ಸಂಚಾರ ಮಾಡುತ್ತಿರುವಾಗ ಮಧ್ಯಾಹ್ನ ಸುಮಾರು 1:45ರಲ್ಲಿ ಬಸವರಾಜಪುರದ ಹತ್ತಿರ ಎದುರು ದಿಕ್ಕಿನಿಂದ ಅತಿವೇಗದಲ್ಲಿ ಬಂದ ಲಾರಿ ಬಸ್‌ನ ಬಲ ಹಿಂಬದಿಯ ಕಿಟಕಿಯ ಬಳಿ ಢಿಕ್ಕಿಯಾಗಿ ಅಪಘಾತವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಅಪಘಾತದಲ್ಲಿ ಕಿಟಕಿಗಳ ಬಳಿ ಇರುವ ಆಸನಗಳಲ್ಲಿ ಕುಳಿತಿದ್ದ ಎಚ್.ಡಿ.ಕೋಟೆ ತಾಲೂಕು ಮಾಗುಡಿಲು ಗ್ರಾಮದ ಬಸವರಾಜುರ ಪತ್ನಿ ಶಾಂತಕುಮಾರಿ ಅವರ ಬಲಗೈ ತುಂಡಾಗಿದ್ದು, ನಂಜನಗೂಡು ತಾಲೂಕು ಹುಲ್ಲಹಳ್ಳಿ ಗ್ರಾಮದ ನಾಗರಾಜ ನಾಯಕ ಅವರ ಪತ್ನಿ ರಾಜಮ್ಮ ಅವರ ಬಲಗೈ ತೀವ್ರ ಪೆಟ್ಟಾಗಿರುತ್ತದೆ. ಗಾಯಾಳುಗಳನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾರಿಗೆ ಸಂಸ್ಥೆಯೇ ಚಿಕಿತ್ಸಾ ವೆಚ್ಚ ಭರಿಸುತ್ತಿದೆ. ಲಾರಿ ಚಾಲಕನ ವಿರುದ್ಧ ಬಿಳಿಗೆರೆ ಪೋಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News