ತುಳಿತಕ್ಕೆ ಒಳಗಾದ ಸಮುದಾಯವನ್ನು ಒಡೆಯುವ ಕೆಲಸ ಆಗಬಾರದು: ಬಿ.ಕೆ.ಹರಿಪ್ರಸಾದ್

Update: 2023-12-11 11:22 GMT

ಬೆಳಗಾವಿ: ತುಳಿತಕ್ಕೆ ಒಳಗಾದ ಸಮುದಾಯವನ್ನು ಒಡೆಯುವ ಕೆಲಸವನ್ನು ಯಾರು ಮಾಡಬಾರದು. ನಿನ್ನೆ ಬೆಂಗಳೂರಿನಲ್ಲಿ ನಡೆದ ಬಿಲ್ಲವ ಈಡಿಗರ ಸಮಾವೇಶದಲ್ಲಿ ಸಮಾಜದ ಎಲ್ಲ ಸ್ವಾಮಿಗಳು ಬಂದಿದ್ದರೆ ಒಗ್ಗಟ್ಟು ಸಾಧ್ಯವಾಗುತ್ತಿತ್ತು. ಆದರೆ, ಎಲ್ಲ ಸ್ವಾಮಿಗಳಿಗೆ ಆಹ್ವಾನ ನೀಡದೇ ಇದ್ದದ್ದು ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಸೋಮವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದಾಯ ಒಡೆಯಲು ಈ ಸಮಾವೇಶ ನಡೆದಿದೆ ಎಂಬ ಧಾಟಿಯಲ್ಲಿ ನಾನು ಹೇಳುತ್ತಿಲ್ಲ. ಕೆಲವು ಸ್ವಾಮಿಗಳು ಈ ಸಮಾವೇಶದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಕೋರಿಕೆಯ ಮೇರೆಗೆ ನಾನು ಸಮಾವೇಶಕ್ಕೆ ಹೋಗಲಿಲ್ಲ ಎಂದರು.

ನಮ್ಮ ಸಮುದಾಯದಲ್ಲಿ ಮತ್ತೊಬ್ಬ ನಾಯಕನಾಗುತ್ತಿದ್ದಾನೆ ಎಂದರೆ ಸಂತೋಷ. ಸೈಡ್ ಲೈನ್ ಮಾಡುವುದು, ಟಾರ್ಗೆಟ್ ಮಾಡುವುದನ್ನು ಬಹಳ ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ನನ್ನನ್ನು ಟಾರ್ಗೆಟ್, ಸೈಡ್ ಲೈನ್ ಮಾಡಬಯಸುವವರು ಭ್ರಮನಿರಸನದಲ್ಲಿ ಇರಬೇಕು ಎಂದು ತಮ್ಮ ವಿರೋಧಿಗಳಿಗೆ ಹರಿಪ್ರಸಾದ್ ತಿರುಗೇಟು ನೀಡಿದರು.

ಸಮಾವೇಶದಲ್ಲಿ ಏನು ಬೇಡಿಕೆ ಇಟ್ಟಿದ್ದಾರೆ ಎಂದು ನನಗೆ ಗೊತ್ತಿಲ್ಲ. ನಾರಾಯಣ ಗುರು ಅಧ್ಯಯನ ಪೀಠ ಈಗಾಗಲೇ ಪ್ರಾರಂಭ ಆಗಿದೆ. ಅದನ್ನು ಪ್ರಾರಂಭ ಮಾಡಬೇಕು ಎಂದು ಮುಖ್ಯಮಂತ್ರಿಗೆ ಯಾರೋ ತಪ್ಪುದಾರಿಗೆ ಎಳೆದಿದ್ದಾರೆ. ನನ್ನ ಅನುದಾನದಲ್ಲಿ 50 ಲಕ್ಷ ರೂ.ಕೊಟ್ಟು ಪ್ರಾರಂಭ ಮಾಡಿದ್ದೇನೆ. ಅರ್ಧದಲ್ಲಿ ನಿಂತಿರುವ ಅಧ್ಯಯನ ಪೀಠ ಪೂರ್ಣ ಮಾಡಲು 2 ಕೋಟಿ ರೂ.ಕೊಡಿ ಎಂದು ಕೇಳಿದ್ದೇನೆ. ಎರಡು ವರ್ಷದಿಂದ ಇದಕ್ಕಾಗಿ ಓಡಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಕೋಟಿ ಚನ್ನಯ್ಯ ಥೀಮ್ ಪಾರ್ಕ್‍ಗೆ 5ಕೋಟಿ ರೂ.ಕೊಟ್ಟಿದ್ದೇವೆ ಎಂದಿದ್ದಾರೆ. ಅದು ಎಲ್ಲಿ ಇದೆ ಎಂದು ನನಗೆ ಗೊತ್ತಿಲ್ಲ. ಮುಂದಿನ ಸಾಲಿನ ಜನವರಿಯಲ್ಲಿ ಮತ್ತೊಂದು ಸಮಾವೇಶ ಮಾಡಬೇಕು ಎಂದು ನಮ್ಮ ಸಮಾಜದವರು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಅದರ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ನಾನು ಹಿಂದೆಯೂ ಸರಿದಿಲ್ಲ ಮುಂದೆಯೂ ಹೋಗಿಲ್ಲ ಎಂದು ಹರಿಪ್ರಸಾದ್ ತಿಳಿಸಿದರು.

ನಾನು ಸಮಾವೇಶ ಮಾಡಿದ ಮೇಲೆ ಇನ್ನೊಂದು ಸಮಾವೇಶ ಆಯಿತು. ಸರದಿ ಲೆಕ್ಕದಲ್ಲಿ ಸಮಾವೇಶ ನಡೆಯುತ್ತಿರುವುದು ಒಳ್ಳೆಯದು. ಬೆಂಗಳೂರಿನಲ್ಲಿ ನಡೆದ ಸಮಾವೇಶವು, ನಾನು ಮಾಡಿದ ಸಮಾವೇಶಕ್ಕೆ ಪರ್ಯಾಯ ಎಂದು ಹೇಳುವುದಿಲ್ಲ. ಸಮಾವೇಶಗಳು ನಡೆಯಲಿ, ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಲಿ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News