ದುಡಿಯುವ ವರ್ಗದ ಮಹಿಳೆಯರಿಗೆ ʼಗ್ಯಾರಂಟಿ ʼ ಪ್ರಯೋಜನ ಸಿಗುತ್ತಿದೆ : ಸಚಿವ ಕೃಷ್ಣ ಬೈರೇಗೌಡ‌

Update: 2024-04-14 14:30 GMT

ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿಗಳಿಂದ ಬಡವರಿಗೆ, ಗಾರ್ಮೆಂಟ್ಸ್ ಕೆಲಸ ಮಾಡುವ, ಬೀದಿ ಬದಿ ತರಕಾರಿ ಮಾರುವ, ಮನೆಗೆಲಸ ಮಾಡುವ, ಹೊಲದಲ್ಲಿ ಕೆಲಸ ಮಾಡುವ ರೈತ ಮಹಿಳೆಗೆ ಪ್ರಯೋಜನ ಸಿಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ರವಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಲ‌ಬ್ ಗೆ ಹೋಗುವ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿಲ್ಲ. ದುಡಿಯುವ ಮಹಿಳೆಯರಿಗೆ ನೀಡುತ್ತಿದ್ದೇವೆ. ದುಡಿಯುವ ವರ್ಗದ ಮಹಿಳೆಯರನ್ನು ದಾರಿ ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಹೇಳಿರುವುದು ಖಂಡನೀಯ ಎಂದರು.

ಕಳೆದ 10 ವರ್ಷದಿಂದ ಬಿಜೆಪಿ ಆಡಳಿತದಲ್ಲಿ ಆರ್ಥಿಕ ವ್ಯವಸ್ಥೆ ಬದಲಾಗಿ ಹೋಗಿದೆ. ಸ್ವಾತಂತ್ರ್ಯ ಹೋರಾಟಕ್ಕೂ ಮುಂಚಿತವಾಗಿ ಬ್ರಿಟಿಷ್ ರಾಜ್ ವ್ಯವಸ್ಥೆ ಇತ್ತು, ಈಗಿನ ಬಿಜೆಪಿ ಆಡಳಿತದಲ್ಲಿ ಬಿಲಿಯನೇರ್ ರಾಜ್ ಅಥವಾ ಕುಬೇರರ ರಾಜ್ ಆಗಿದೆ. ಬಿಜೆಪಿ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದೆ. ಉದ್ಯಮಿಗಳ 20 ಲಕ್ಷ ಕೋಟಿ ಸಾಲಮನ್ನಾ ಮಾಡಲಾಗಿದೆ ಎಂದು ಅವರು ಹೇಳಿದರು.

10 ಲಕ್ಷ ಕೋಟಿಯಷ್ಟು ಶ್ರೀಮಂತರ ತೆರಿಗೆ ಕಡಿಮೆ ಮಾಡಲಾಗಿದೆ. ಇದರಿಂದ ಅಸಮಾನತೆ ಹೆಚ್ಚಾಗಿದೆ. ಈ ಭಾರವನ್ನು ಜನರ ಮೇಲೆ ಹಾಕಲಾಗಿದೆ. ಉದ್ಯೋಗ ಸಿಗದೆ ಯುವ ಜನತೆ ಪರದಾಡುತ್ತಿದೆ. ಶೇ.70ರಷ್ಟು ಬಡವರು, ರೈತರು, ಜನ ಸಾಮಾನ್ಯರ ಜನರ ಜೀವನ ಬೆಲೆ ಏರಿಕೆ ಸೇರಿದಂತೆ ಅನೇಕ ಆರ್ಥಿಕ ಸಂಕಷ್ಟಗಳಿಗೆ ಸಿಲುಕಿ ಕೊಂಡಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಈ ಅಸಮಾನತೆ ತೊಲಗಲು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತು. ಇದರಿಂದ 5 ಕೋಟಿ ಕನ್ನಡಿಗರಿಗೆ ಇದರ ಪ್ರಯೋಜನ ತಲುಪಿದೆ. 1.40 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಿದೆ. ಶಕ್ತಿ ಯೋಜನೆಯಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ಟ ಮಹಿಳೆ ದಾರಿ ತಪ್ಪಿದ್ದಾರೆಯೇ? ಎಂದು ಅವರು ಪ್ರಶ್ನಿಸಿದರು.

ತವರು ಮನೆಗೆ ಹೋಗಲು, ಮಗಳನ್ನು ನೋಡಲು ಹೋಗುವವರು ದಾರಿ ತಪ್ಪಿದ್ದಾರೆಯೇ? ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವೇದಾಂತನ ತಾಯಿ ಈತನ ಶಾಲಾ ಶುಲ್ಕ ಕಟ್ಟಿ ಓದಿಸಿದ್ದಾರೆ, ಇವರು ದಾರಿ ತಪ್ಪಿದ್ದಾರೆಯೇ? ಇಂತಹವರಿಗೆ ನೆರವಾಗಿದ್ದು ಗ್ಯಾರಂಟಿ ಯೋಜನೆಗಳು. ಮಾಡಬಾರದ್ದೆಲ್ಲಾ ಮಾಡಿ ಮೇಲಿನ ಸ್ಥಾನದಲ್ಲಿ ಕುಳಿತು ದುಡಿಯುವ ವರ್ಗದ ಮಹಿಳೆಯರನ್ನು ಅವಮಾನ ಮಾಡುವುದು ಯಾವ ಸಂಸ್ಕೃತಿ ಎಂದು ಅವರು ಕಿಡಿಗಾರಿದರು.

ಮಹಿಳೆಯರ ದುಡಿಮೆಗೆ ಮೌಲ್ಯವಿಲ್ಲವೇ? ಮಹಿಳೆ ದುಡಿಯದೆ ಹೋದರೆ ನಾನು, ನೀವು ಯಾರೂ ಉನ್ನತಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲ. ಎಲೆಮರೆಕಾಯಿಯಂತೆ ಇದ್ದ ಅಸಂಖ್ಯಾತ ಮಹಿಳೆಯರು ಈಗ ಮುಂದೆ ಬರುತ್ತಿದ್ದಾರೆ. ಗಂಡಸರು ಮಾಡಬಾರದ ಕೆಲಸ ಮಾಡಿ ಹೆಂಗಸರನ್ನು ದಾರಿ ತಪ್ಪಿದ್ದಾರೆ ಎನ್ನುವುದು ಕೆಟ್ಟ ಮನಸ್ಥಿತಿ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಇದೇ ಕುಮಾರಸ್ವಾಮಿ ಅವರು ದಾರಿ ತಪ್ಪಿದ ಮಗ ಎಂದು ಸದನದಲ್ಲಿ ಹೇಳಿದ್ದರು. ಅವರು ಮಾಡಿರುವುದನ್ನು ಅವರೇ ಹೇಳಿಕೊಂಡು ಮಹಿಳೆಯರಿಗೆ ಅವಮಾನ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷದ ಗುರುತು ಮಹಿಳೆ. ಆ ಮಹಿಳೆಗೆ ಈಗ ಕಮಲ ಎಂದು ಹೆಸರು ಕೊಟ್ಟಿದ್ದಾರೆ. ಜನತಾದಳದವರು ಮಹಿಳೆಯರ ಕೈಯಲ್ಲಿ ಕೇವಲ ದುಡಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಮಹಿಳೆಯ ಗ್ಯಾರಂಟಿಯನ್ನು ಗುರುತಿಸಿ ಸಂಬಳ ಕೊಡುತ್ತಿದ್ದೇವೆ ಎಂದು ಅವರು ಹೇಳಿದರು.

ಹೆಸರಿಗೆ ಪ್ರಾದೇಶಿಕ ಪಕ್ಷ ಆದರೆ ಬಿಜೆಪಿಯ ತುತ್ತೂರಿ ಊದುತ್ತಿದ್ದಾರೆ. ಹೆಸರಿನಲ್ಲಿ ಮಾತ್ರ ಜಾತ್ಯತೀತವಿದೆ ಆದರೆ ಕೋಮುವಾದಿಗಳ ಜೊತೆ ಸೇರಿಕೊಂಡಿದ್ದಾರೆ. ಮಹಿಳೆಯರನ್ನು ಅವಮಾನಿಸುವುದನ್ನು ಕಾಂಗ್ರೆಸ್ ಖಡಾಖಂಡಿತವಾಗಿ ಖಂಡಿಸುತ್ತದೆ. ಇದು ಮಾನವೀಯ ಸಮಾಜಕ್ಕೆ ಅಪಮಾನ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಮೋದಿ ಮಾತಿಗೆ ಮರುಳಾಗಬೇಡಿ, ಆರೆಸ್ಸೆಸ್ ಅವರು ಈ ದೇಶದ ವಿರೋಧಿಗಳು ಎಂದು ಕುಮಾರಸ್ವಾಮಿ ಹೇಳುತ್ತಿದ್ದರು. ಯಾರದೋ ಮೇಲಿನ ಸಿಟ್ಟನ್ನು ಮಹಿಳೆಯರ ಮೇಲೆ ಕಾರುತ್ತಿದ್ದಾರೆ. ಅವರಿಗೆ ಬಿಜೆಪಿ ಸೇರಿ ಏನೂ ಮಾತನಾಡಬೇಕು, ಯಾರನ್ನು ವಿರೋಧಿಸಬೇಕು ಎಂದು ತಿಳಿಯುತ್ತಿಲ್ಲ ಎಂದು ಕಷ್ಣ ಬೈರೇಗೌಡ ಹೇಳಿದರು.

ಗ್ಯಾರಂಟಿ ಯೋಜನೆಗಳ ಹಣ ದುಡಿಯುವ ವರ್ಗದ ಜನರಿಂದ ಬಂದಿರುವುದು. ಇದೆಲ್ಲ ಸಾಮಾನ್ಯ ಜನರ ತೆರಿಗೆ ಹಣದದಿಂದ ಕೊಡುತ್ತಿರುವ ಹಣ. ಬಿಜೆಪಿ ಶ್ರೀಮಂತರ ತೆರಿಗೆ ಕಡಿಮೆ ಮಾಡಿದೆ, ಅದಕ್ಕೆ ವಿರುದ್ಧವಾಗಿ ನಾವು ಜನರ ಹಣವನ್ನು ಜನರಿಗೆ ನೀಡುತ್ತಿದ್ದೇವೆ ಎಂದು ಕೃಷ್ಣ ಬೈರಗೌಡ ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮತ್ತು ಸಾಮಾಜಿಕ ಜಾಲತಾಣದ ಸಹ ಅಧ್ಯಕ್ಷ ವಿಜಯ್ ಮತ್ತಿಕಟ್ಟಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News