ಶ್ರದ್ಧೆ, ಪ್ರಾಮಾಣಿಕತೆ, ಸತತ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು: ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ

Update: 2024-10-12 13:11 GMT

ಉಡುಪಿ, ಅ.12: ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಸತತ ಪ್ರಯತ್ನಗಳಿಂದ ಜೀವನದಲ್ಲಿ ಯಶಸ್ಸಿನ ಸಾಧನೆಗಳ ಮೆಟ್ಟಿಲೇರಲು ಸಾಧ್ಯ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೇ ಉತ್ತಮವಾಗಿ ಓದಿ ಸಾಧನೆ ತೋರಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಗುಣ ಬೆಳೆಸಿಕೊಂಡು ಜೀವನದಲ್ಲಿ ಸದಾ ಮುಂಚೂಣಿಯಲ್ಲಿರಬೇಕು ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಅನಿವಾಸಿ ಭಾರತೀಯ ಹಾಗೂ ‘ವಿಶನ್ ಕೊಂಕಣಿ’ ಪ್ರವರ್ತಕ ಮೈಕಲ್ ಡಿಸೋಜಾ ಕುಟುಂಬದಿಂದ ಉಡುಪಿ ಧರ್ಮ ಪ್ರಾಂತದ ಸಾಮಾಜಿಕ ಹಾಗೂ ಸೇವಾ ಸಂಘಟನೆ ಸಂಪದ ನೇತೃತ್ವದಲ್ಲಿ ಸ್ಥಾಪಿಸಲ್ಪಟ್ಟ ‘ಎಜುಕೇರ್ ಎಂಡೋಮೆಂಟ್ ಫಂಡ್’ಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ರೂಪದ ನೆರವನ್ನು ಹಸ್ತಾಂತರಿಸುವ ಮೂಲಕ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

‘ನಮ್ಮ ಓದಿಗೆ ಸಹಾಯ ಮಾಡಿದವರನ್ನು ಮರೆಯದೆ ನಾವು ಒಳ್ಳೆಯ ಸ್ಥಾನಕ್ಕೆ ಬಂದಾಗ ಕಷ್ಟದಲ್ಲಿರುವ ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಋಣ ತೀರಿಸಬೇಕು. ನೆರವು ಪಡೆದ ವಿದ್ಯಾರ್ಥಿಗಳು ತಮಗೆ ಉದ್ಯೋಗ ದೊರಕಿದ ಬಳಿಕ ಅದನ್ನು ಮರುಪಾವತಿಸುವ ಮೂಲಕ ಸಮಾಜದ ಇನ್ನಷ್ಟು ವಿದ್ಯಾರ್ಥಿಗಳಿಗೆ ನೆರವು ನೀಡುವ ಈ ಯೋಜನೆ ಪ್ರೇರಣದಾಯಿ ಎಂದರು.

ಸಾಂಕೇತಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಬಡ್ಡಿ ರಹಿತ ಸಾಲ ರೂಪದ ನೆರವನ್ನು ಹಸ್ತಾಂತರಿಸಿ ಮಾತನಾಡಿದ ಉದ್ಯಮಿ ಹಾಗೂ ದಾನಿ ಮೈಕಲ್ ಡಿಸೋಜಾ, ಶಿಕ್ಷಣ ಮಾನವನ ಆರ್ಥಿಕ ವ್ಯವಸ್ಥೆಯನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರ್ಥಿಕ ಅಡಚಣೆಯಿಂದಾಗಿ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಬಡ ಮಕ್ಕಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಕಾರ್ಯವನ್ನು ಮಾಡಲಾಗುತ್ತಿದೆ. ದೇವರು ನಮಗೆ ನೀಡಿರುವ ಸಂಪತ್ತನ್ನು ಅಗತ್ಯವಿದ್ದವರೊಂದಿಗೆ ಹಂಚಿಕೊಂಡಾಗ ಸಿಗುವ ತೃಪ್ತಿ ಬೇರೆ ಎಲ್ಲಿಯೂ ಕೂಡ ಸಿಗುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಎಜುಕೇರ್ ಎಂಡೋಮೆಂಟ್ ಫಂಡ್‌ನ ಸಲಹೆಗಾರ ರಾದ ವಂ.ವಲೇರಿಯನ್ ಡಿಸೋಜಾ, ಸದಸ್ಯರು ಗಳಾದ ಸ್ಟೀಫನ್ ಪಿಂಟೊ, ಓಸ್ವಲ್ಡ್ ರೊಡ್ರಿಗಸ್, ಪ್ರೊ. ಲೈನಲ್ ಆರಾನ್ಹಾ, ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಸಿಒಡಿಪಿ ಸಂಸ್ಥೆಯ ವಂ.ಲಾರೆನ್ಸ್ ಕುಟಿನ್ಹಾ, ಸಂಪದ ಸಂಸ್ಥೆಯ ಡಾ.ಎವ್ಜಿನ್ ಡಿಸೋಜಾ, ಡಾ.ಗ್ರೈನಲ್ ಡಿಮೆಲ್ಲೊ ಉಪಸ್ಥಿತರಿದ್ದರು.

ಧರ್ಮಪ್ರಾಂತದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿ, ಸಂಪದ ಸಂಸ್ಥೆಯ ಸದಸ್ಯರಾದ ಜಾನೆಟ್ ಬಾರ್ಬೊಜಾ ವಂದಿಸಿದರು. ನಿರ್ದೇಶಕರಾದ ವಂ. ರೆಜಿನಾಲ್ಡ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

12 ವರ್ಷಗಳಲ್ಲಿ 5.60 ಕೋಟಿ ರೂ. ನೆರವು

ಕಳೆದ 12 ವರ್ಷಗಳಲ್ಲಿ ಉಡುಪಿ ಧರ್ಮಪ್ರಾಂತದ 1157 ಅಶಕ್ತ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಒಟ್ಟು 5,60,39,500 ರೂ. ನೆರವನ್ನು ಸಾಲ ರೂಪದಲ್ಲಿ ಪಡೆದಿದ್ದಾರೆ. ಶುಕ್ರವಾರದ ಸಮಾರಂಭದಲ್ಲಿ 49 ವಿದ್ಯಾರ್ಥಿಗಳು 41,05,500 ರೂ. ನೆರವನ್ನು ಸ್ವೀಕರಿಸಿದರು. 2024ನೇ ಸಾಲಿನಲ್ಲಿ 18 ಇಂಜಿನಿಯರಿಂಗ್, 10 ಅಲೈಡ್ ಹೆಲ್ತ್ ಸೈಯನ್ಸ್, 8 ನರ್ಸಿಂಗ್, 7 ಪದವಿ, 3 ಸ್ನಾತಕೋತ್ತರ ಪದವಿ, 2 ಎಂಬಿಬಿಎಸ್, ಒಬ್ಬರು ಮಾಸ್ಟರ್ಸ್ ಇನ್ ಫಾರ್ಮಸಿ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲಾಯಿತು.

ನೆರವು ಪಡೆಯುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಒಂದೂವರೆ ವರ್ಷದಲ್ಲಿ ನೆರವನ್ನು ಹಿಂತಿರು ಗಿಸುವ ವಾಗ್ದಾನದೊಂದಿಗೆ ನೆರವನ್ನು ನೀಡಲಾಗುತ್ತದೆ. ಈ ಮೂಲಕ ಸಮಾಜದ ಇನ್ನಷ್ಟು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ವಿನೂತನ ಯೋಜನೆ ಇದಾಗಿದೆ.






Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News