ಪ್ರಧಾನಿ ಕಾರ್ಯಾಲಯದ ಸಂಸದೀಯ ಕಾರ್ಯದರ್ಶಿ ಹೆಸರಿನಲ್ಲಿ ಉಡುಪಿ ಶ್ರೀಕೃಷ್ಣಮಠಕ್ಕೆ ವಂಚನೆ: ಪ್ರಕರಣ ದಾಖಲು

Update: 2024-10-12 12:10 GMT

ಉಡುಪಿ ಶ್ರೀಕೃಷ್ಣಮಠ

ಉಡುಪಿ: ಪ್ರಧಾನ ಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿಯ ಹೆಸರಿನಲ್ಲಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಕರೆ ಮಾಡಿ, ವಿಶೇಷ ದರ್ಶನಗೈದ ವ್ಯಕ್ತಿಯ ವಿರುದ್ಧ ಮಠದ ಮ್ಯಾನೇಜರ್ ನಂದನ್ ಎಂಬವರು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉದಯ್ ಎಂಬಾತ ಅ.9ರಂದು ರಾತ್ರಿ 9 ಗಂಟೆಗೆ ಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯರಿಗೆ ಕರೆ ಮಾಡಿದ್ದು, ತಾನು ಪ್ರಧಾನಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸಲಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದರು.

ಅದರಂತೆ ಭಾರತ ಸರಕಾರ ಎಂದು ಬರೆದ ಬಿಳಿ ಬಣ್ಣದ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಅ.10ರ ಬೆಳಗಿನ ಜಾವ ಆಗಮಿಸಿದ ಉದಯ್ ಹಾಗು ಕುಟುಂಬಸ್ಥರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಅ.10ರಂದು ಬೆಳಗ್ಗೆ ವಿಶೇಷ ದರ್ಶನ ಮಾಡಿಸಲಾಗಿತ್ತು.

ಆದರೆ ಅವರ ಚಲನವಲನದಿಂದ ಸಂಶಯಗೊಂಡು ಅವರನ್ನು ವಿಚಾರಿಸಿ ದಾಗ ಸೂಕ್ತ ಉತ್ತರ ನೀಡದೇ ತೆರಳಿದ್ದಾರೆ. ಬಳಿಕ ಪ್ರಧಾನ ಮಂತ್ರಿಗಳ ವೆಬ್‌ಸೈಟ್ ಅನ್ನು ಪರಿಶೀಲಿಸಿದಾಗ ಉದಯ ಎಂಬವರ ಬಗ್ಗೆ ಸಮರ್ಪಕ ವಾದ ಮಾಹಿತಿ ದೊರಕಲಿಲ್ಲ. ಹೀಗಾಗಿ ಕೇಂದ್ರ ಸರಕಾರದ ಅಧಿಕಾರಿ ಎಂಬ ಸೋಗಿನಲ್ಲಿ ಮಠಕ್ಕೆ ಬಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ಮಠದ ನಂದನ್ ಅವರು ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News