ಮಲ್ಪೆ: 7 ಮಂದಿ ಅಕ್ರಮ ಬಾಂಗ್ಲಾ ವಲಸಿಗರು ಪೊಲೀಸ್ ಕಸ್ಟಡಿಗೆ

Update: 2024-10-12 16:44 GMT

ಮಲ್ಪೆ, ಆ.12: ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಹೂಡೆ ಪರಿಸರದಲ್ಲಿ ಶುಕ್ರವಾರ ರಾತ್ರಿ ಏಳು ಮಂದಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ವಾಸವಾಗಿದ್ದರೆಂಬ ಬಗ್ಗೆ ಬಂದ ಮಾಹಿತಿಯಂತೆ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದು ಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ಅರುಣ್ ತಿಳಿಸಿದ್ದಾರೆ.

ಇವರ ಜೊತೆ ವಾಸವಾಗಿದ್ದ ಇನ್ನೊಬ್ಬ ಆರೋಪಿಯಾದ ಮಹಮ್ಮದ್ ಮಾಣಿಕ್ ಎಂಬಾತ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಕಲಿ ಪಾಸ್‌ಪೋರ್ಟ್‌ನಲ್ಲಿ ದುಬೈಗೆ ಹೋಗಲು ಪ್ರಯತ್ನಿಸುತಿದ್ದಾಗ ಇಮಿಗ್ರಷನ್ ಅಧಿಕಾರಿಗಳ ಪರಿಶೀಲನೆ ವೇಳೆ ಸಿಕ್ಕಿಬಿದ್ದಿದ್ದ. ಅಧಿಕಾರಿಗಳು ಆತನನ್ನು ಬಜ್ಪೆ ಪೊಲೀಸರಿಗೊಪ್ಪಿಸಿದ್ದು, ಅಲ್ಲಿ ಕೇಸು ದಾಖಲಿಸಿ ವಿಚಾರಣೆ ನಡೆಸುವ ವೇಳೆ ಆತ ಈ ಮಾಹಿತಿಯನ್ನು ನೀಡಿದ್ದ ಎಂದ ಎಸ್ಪಿ ಅವರು, ಬಜ್ಪೆ ಪೊಲೀಸರು ನೀಡಿದ ಮಾಹಿತಿಯ ಆಧಾರದಲ್ಲಿ ನಾವು ಈ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತಿದ್ದೇವೆ ಎಂದರು.

ಪೊಲೀಸರು ಒಟ್ಟು 9 ಮಂದಿಯನ್ನು ಕಸ್ಟಡಿಗೆ ಪಡೆದು ಅವರ ವಿಚಾರಣೆ ನಡೆಸುತಿದ್ದಾರೆ. ಮಲ್ಪೆ ಪೊಲೀಸರು ವಶಕ್ಕೆ ಪಡೆದವರನ್ನು ಬಾಂಗ್ಲಾದೇಶದ ಹಕೀಂ ಅಲಿ(24), ಸುಜೋನ್ ಯಾನೆ ಫಾರೂಕ್(19), ಇಸ್ಮಾಯಿಲ್ ಎಸ್.ಕೆ. (30), ಕರೀಂ ಎಸ್.ಕೆ.(22), ಸಲಾಂ (28), ರಾಜಿಕುಲ್ (20), ಸೋಜಿಬ್(20), ಉಸ್ಮಾನ್ ಅಲ್ಲದೇ ಸಿಕ್ಕಿಂ ಅಗರ್ತಲಾದ ಕಾಜೋಲ್ ಎಂದು ಗುರುತಿಸಲಾಗಿದೆ.

ಇವರೆಲ್ಲರೂ ಭಾರತ ದೇಶದ ಯಾವುದೇ ಅನುಮತಿ ದಾಖಲೆಗಳನ್ನು ಪಡೆಯದೇ ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ದಾಖಲೆಗಳನ್ನು ಸೃಷ್ಟಿಸಿ ಪಡುತೋನ್ಸೆ ಗ್ರಾಮದ ಹೂಡೆಗೆ ಬಂದು ವಾಸವಾಗಿದ್ದಾರೆ ಎಂದು ಹೇಳಲಾಗಿದೆ.

ಆರೋಪಿಗಳ ಪೈಕಿ ಸಿಕ್ಕಿಂ ಅಗರ್ತಲಾದ ಕಾಜೋಲ್ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದವ ಎಂದು ತಿಳಿದುಬಂದಿದ್ದು, ಆರೋಪಿಗಳ ಪೈಕಿ ಉಸ್ಮಾನ್ ಇವರನ್ನು ಅಕ್ರಮವಾಗಿ ಇಲ್ಲಿಗೆ ಕರೆತಂದು ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 7 ಮಂದಿ ಬಾಂಗ್ಲಾ ವಲಸಿಗರು ಸೇರಿದಂತೆ 9 ಮಂದಿಯನ್ನು ವಶಕ್ಕೆ ಪಡೆದು ಮಲ್ಪೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News