ಆರ್ಥಿಕತೆ-ರಾಜಕಾರಣದ ಸರಳ ಕತೆೆ

ದೇಶದಲ್ಲಿರುವ ಆರ್ಥಿಕತೆ ಮತ್ತು ರಾಜಕಾರಣವು ಪ್ರತ್ಯೇಕವಾಗಿಲ್ಲ. ಎರಡೂ ವಿಷವೃತ್ತದಂತಿದೆ; ವಿಷುವವೃತ್ತವೂ ಹೌದು. ಒಂದಕ್ಕೊಂದು ಭಯಾನಕ ಅನ್ಯೋನ್ಯ. ಧರ್ಮವು ಇವೆರಡರಿಂದಲೂ ದೂರವಿರಬೇಕಾಗಿದ್ದರೂ ಅದೂ ಈ ಬಲೆಯಲ್ಲಿ ಹೆಣೆದುಕೊಂಡಿದೆ. ಇವು ಜನಮಾರಕವೆಂದು ಎಲ್ಲಿಯವರೆಗೆ ಸಾಮಾನ್ಯರಿಗೆ ಅರ್ಥವಾಗುವುದಿಲ್ಲವೋ ಅಲ್ಲಿಯವರೆಗೆ ಆರ್ಥಿಕತೆ ಮತ್ತು ರಾಜಕಾರಣವು ತನ್ನ ಅರ್ಥವನ್ನು ಕಳೆದುಕೊಳ್ಳುತ್ತಲೇ ಹೋಗುತ್ತದೆ. 2047ರಲ್ಲಿ ದೇಶವು ಹೇಗಿರುತ್ತದೆ ಮತ್ತು ಹೇಗಿರಬೇಕು ಎಂಬುದನ್ನು ನಮ್ಮ ಉದ್ಯಮಿಗಳು ಮಾತ್ರ ಹೇಳಲು ಶಕ್ತರು. ಅವರೆಷ್ಟು ಎತ್ತರದಲ್ಲಿದ್ದಾರೆಂದರೆ ಅವರಿಗೆ ತಳಮಟ್ಟದ ಜನರ ಕೂಗು ಕೇಳದು.

Update: 2024-06-27 04:28 GMT

21ನೆಯ ಶತಮಾನ ಉದ್ಯಮಿಗಳದ್ದು ಎಂದೊಬ್ಬರು ಬಹಳ ಹಿಂದೆಯೇ ಹೇಳಿದ್ದರು. ದೇಶಗಳ ಮತ್ತು ಒಟ್ಟಾರೆ ವಿಶ್ವದ ರಾಜಕೀಯದ ಆಧಿಪತ್ಯವನ್ನು ವ್ಯಾಪಾರಸ್ಥರ ಆರ್ಥಿಕ ನೀತಿಯೇ ಆಳುತ್ತದೆ ಮತ್ತು ರಾಜಕೀಯ ನಾಯಕರು ಈ ವಿಷವ್ಯೆಹದಲ್ಲಿ ಅವರಿಗೆ ಸಾಥ್ ನೀಡುವ ಪೋಷಕ ಪಾತ್ರಗಳಷ್ಟೇ ಎಂಬುದು ದಿನೇದಿನೇ ನಿಚ್ಚಳವಾಗುತ್ತದೆ.

ಕೆಲವೇ ಕೆಲವು ವರ್ಷಗಳ, ದಶಕಗಳ (ಅಥವಾ ಶತಕಗಳ ಇರಬಹುದೇನೋ) ಹಿಂದೆ ಶ್ರೀಮಂತಿಕೆಯ ವೈಭವವನ್ನು ಸರ್ವಾಧಿಕಾರಿಗಳ ಅಥವಾ ಇತರ ಜನನಾಯಕರ ಬದುಕಿನ ಶೈಲಿಯಲ್ಲಿ ನೋಡಬಹುದಿತ್ತು. ಕೊಲ್ಲಿ ರಾಷ್ಟ್ರಗಳ, ಫಿಜಿ ಅಥವಾ ಇನ್ಯಾವುದೋ ಪುಟ್ಟ ರಾಷ್ಟ್ರಗಳನ್ನು ಆಳುವವರ ಬದುಕಿನ ರೀತಿ-ನೀತಿಯು ಅಮೆರಿಕದಂತಹ ಶಕ್ತ ರಾಷ್ಟ್ರಗಳ ನಾಯಕರನ್ನು ಮೀರಿಸುವಂತಿತ್ತು. ಇಂತಹ ವೈಭೋಗವನ್ನು ರಾಜಸಾಮ್ರಾಟರ ಜೀವನದೊಂದಿಗೆ ಅಥವಾ 18ನೇ ಶತಮಾನದ ಫ್ರಾನ್ಸ್, 19ನೇ ಶತಮಾನದ ರಶ್ಯಗಳ ಆಳ್ವಿಕೆಗೆ ಮಾತ್ರ ಹೋಲಿಸಬಹುದಿತ್ತು. ಚಿನ್ನದ ಟಾಯ್ಲೆಟ್ ಸೀಟನ್ನು ಮಾಡಿಕೊಂಡ ಸದ್ದಾಮ್ ಹುಸೈನ್ ಕೂಡಾ ಇದರ ಪ್ರತೀಕ.

ಆದರೆ ಇವೆೆಲ್ಲ ಒಂದು ಕ್ರಾಂತಿ, ಒಂದು ಚುನಾವಣೆಯೊಂದಿಗೆ ಬದಲಾಗಬಹುದಿತ್ತು. ಏಕೆಂದರೆ ಜನರು ತಮ್ಮ ಆಡಳಿತವನ್ನು ಸರ್ಪಗಾವಲಿನಲ್ಲೂ ಸದಾ ನೋಡುತ್ತಿರುತ್ತಾರೆ. ಅವಕಾಶ ಸಿಕ್ಕಿದಾಗ ಅದನ್ನು ಕುಟ್ಟಿ ಪುಡಿಪುಡಿ ಮಾಡುತ್ತಾರೆ. ಗಿಲೊಟಿನ್‌ನಲ್ಲಿ ಫ್ರಾನ್ಸ್‌ನ, ರಶ್ಯದ ರಾಜರ ವಧೆ, ಬಾಸ್ಟಿಲ್ ಸೆರೆಮನೆ ಒಂದು ರೂಪಕ ಅಷ್ಟೇ. ರಾಜಕಾರಣ ಮತ್ತು ರಾಜಕಾರಣಿ ಎಂದರೆ ಸಮುದ್ರದ ಅಲೆಗಳ ಹಾಗೆ. ಇನ್ನೊಂದು ಅಲೆ ಬರುವ ವರೆಗೆ ಮಾತ್ರ ಒಂದು ಅಲೆಯ ಅಧಿಕಾರ. ಆ ಇನ್ನೊಂದು ಅಲೆ ಬಂತೋ ಹಳೆಯ ಅಲೆ ಮರೆತುಹೋಗದಿದ್ದರೂ ತನ್ನ ಅಧಿಕಾರದಿಂದ ನಿರ್ಗಮಿಸಿ ಶ್ರೀಸಾಮಾನ್ಯವಾಗುತ್ತದೆ. ಹಳೆಯ ವೈಭವಗಳನ್ನು ನೆನಪಿಸಿಕೊಂಡು ಬಳಲಬೇಕಷ್ಟೇ.

ಆದರೆ ಉದ್ಯಮಪತಿಗಳ ಏರುವಿಕೆ ಹೀಗಲ್ಲ. ಅವರು ಸದಾ ತಮ್ಮ ಏಳಿಗೆಗೆ ಬೇಕಾದ ರಾಜಕೀಯವನ್ನು ಬಯಸುತ್ತಾರೆ; ಆದರೆ ತಾವೇ ಸ್ವತಃ ಆಳಬೇಕೆಂಬ ಆಸೆಯನ್ನಿಟ್ಟುಕೊಂಡಿರುವುದಿಲ್ಲ. ಒಂದು ವೇಳೆ ರಾಜಕೀಯಕ್ಕೆ ಇಳಿದರೂ (ರಾಜಕೀಯಕ್ಕೆ ‘ಏರುವ’ ಸಂಸ್ಕೃತಿ ಎಂದೋ ಅಳಿದಿದೆ!) ಅದು ಉದ್ಯಮದ ಲಾಭಕ್ಕೆ ಹೊರತು ಅಧಿಕಾರದ ಮದಕ್ಕಲ್ಲ. ಅವರು ‘ರಾಜನಿರ್ಮಾಪಕ’ (king maker)ರಾಗುತ್ತಾರೆಯೇ ಹೊರತು ರಾಜರಾಗುವುದಿಲ್ಲ. ಅಪರೂಪಕ್ಕೆ ಈ ಹೊಂದಾಣಿಕೆಯ ವಿನ್ಯಾಸ ಅಪವಾದಗಳಂತೆ ಬದಲಾಗಬಹುದು. ಸದ್ಯದ ಭಾರತದಲ್ಲಿ ಅದಾನಿ, ಅಂಬಾನಿಗಳು ನಾಯಕರಾಗಿರುವ ಉದ್ಯಮಪತಿಗಳ ತಂಡ ತಮಗೆ ಬೇಕಾದ ಎಲ್ಲ ಒಪ್ಪಂದಗಳನ್ನು ಸರಕಾರದ ಮೂಲಕ ಮಾಡಿಸುತ್ತಾರೆ. ನೂರು-ಐನೂರು ಮಂದಿಗಳ ಸಮಾರಂಭದತ್ತ ಆದಾಯಕರ ಇಲಾಖೆ ಮಾತ್ರವಲ್ಲ, ಸ್ಥಳೀಯ ಆಡಳಿತಗಳೂ ಹದ್ದಿನ ಕಣ್ಣಿನಿಂದ ನಿಯಂತ್ರಿಸುವ ಕಾನೂನುಗಳಿದ್ದರೂ ಸಾವಿರ ಕೋಟಿ ರೂಪಾಯಿಗಳ ನಿಶ್ಚಿತಾರ್ಥಗಳನ್ನು ಸರಕಾರ ಸಹಿಸುತ್ತದೆ. ದೇಶೀಯ ವಿಮಾನ ನಿಲ್ದಾಣಗಳನ್ನು ಹತ್ತು ದಿನಗಳ ಮಟ್ಟಿಗೆ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಪರಿವರ್ತಿಸುವ ಪವಾಡಕ್ಕೆ ಸಾಕ್ಷಿಯಾಗುತ್ತದೆ. ‘ಹೇಗಾಯಿತೋ ಗೊತ್ತಿಲ್ಲ’ ಎಂಬ ಸಬೂಬನ್ನು ನಗಣ್ಯ ಅಧಿಕಾರಿಯೊಬ್ಬರಿಂದ ಹೇಳಿಸುತ್ತದೆ. ಇದರಿಂದಾಗಿ ಇಂದು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕೆಲವು ಉದ್ಯಮಿಗಳು ಮೊದಲ ಶ್ರೇಣಿಯಲ್ಲಿದ್ದಾರೆಯೇ ವಿನಾ ಯಾವ ರಾಜಕಾರಣಿಯರೂ ಅಲ್ಲ. ರಾಜಕಾರಣಿಗಳು ಅಗ್ರ ಶ್ರೇಯಾಂಕದಲ್ಲಿರುವುದು ಕರ್ಮಕಾಂಡಗಳಲ್ಲಿ, ಇಲ್ಲವೇ ಕಾಮಕಾಂಡಗಳಲ್ಲಿ.

ದೇಶದ ಆರ್ಥಿಕ ಉನ್ನತಿ ಅಧಿಕಾರಸ್ಥರಿಗೆ ಬೇಡವೇ? ಬೇಡ. ಅವರು ವರ್ತಮಾನದಲ್ಲಿ ಬದುಕುವವರು. ಮುಂದಿನ ಚುನಾವಣೆಯನ್ನು ಗೆಲ್ಲುವುದು ಮತ್ತು ತಮ್ಮ ಅಧಿಕಾರದ ಮೂಲಕ ಜನರನ್ನು ಅವರೆಷ್ಟೇ ದೊಡ್ಡವರಿರಲಿ, ನಿಯಂತ್ರಿಸುವುದು ಮತ್ತು ತಮ್ಮ ಪುಟ್ಟ-ದೊಡ್ಡ ಕುಟುಂಬದ ಪೀಳಿಗೆಯನ್ನು ಅದ್ದೂರಿ ಶಿಕ್ಷಣ, ಉದ್ಯೋಗ, ಉದ್ಯಮಗಳ ಮೂಲಕ ಅಭ್ಯುದಯಗೊಳಿಸುವುದು ಅವರ ಉದ್ದೇಶವಾಗಿರುತ್ತದೆಯೇ ವಿನಾ ತಮಗಾಗಿ ಬಹಳಷ್ಟು ಸಂಪತ್ತನ್ನು ರೂಢಿಸಿಕೊಳ್ಳುವುದಲ್ಲ. ಅಧಿಕಾರಸ್ಥರು ಅಧಿಕಾರವನ್ನು ಹೊಂದುವ ಮತ್ತು ಅದನ್ನು ಉಳಿಸಿಕೊಳ್ಳುವತ್ತ ಹೆಚ್ಚು ಗಮನ ನೀಡುತ್ತಾರೆ; ದೇಶದ, ಸಮಾಜದ ಆರ್ಥಿಕತೆಯ ಉನ್ನತಿಯತ್ತ ಅಲ್ಲ.

ಇದಕ್ಕೆ ಕಾರಣಗಳೂ ಇವೆ. ರಾಜಕಾರಣಿಯೊಬ್ಬನಿಗೆ ಪಾರದರ್ಶಕವಾಗಿ ಸಿಗುವ ಆದಾಯವು ಲೆಕ್ಕದ ಇತಿಮಿತಿಯೊಳಗಿನದ್ದು. ಜನರು ರಾಜಕಾರಣದ ಬದುಕಿನ ರೀತಿ-ನೀತಿಯನ್ನು ಅಷ್ಟಾಗಿ ಚಿಂತಿಸುವುದಿಲ್ಲ. ಏಕಂದರೆ ಅದು ಹಾಗೆಯೇ ಎಂಬ ನಿಶ್ಚಿತ ನಿಲುವನ್ನು ಹೊಂದಿರುತ್ತಾರೆ. ಕೇಡು ಕೂಡಾ ಸಿನೆಮಾ-ನಾಟಕ-ಸಾಹಿತ್ಯದಲ್ಲಿ ನಾಯಕ, ಖಳನಾಯಕರಿರುವಂತೆ, ಬದುಕಿನಲ್ಲಿ, ಸಮಾಜದಲ್ಲಿ ಇರಲೇಬೇಕಾದ ಸಹಜ ಮತ್ತು ಅನಿವಾರ್ಯ ಅಂಗವೆಂದು ಭಾವಿಸುತ್ತಾರೆ. ಇದಕ್ಕೆ ನಮ್ಮ ಚರಿತ್ರೆ ಮತ್ತು ಪುರಾಣವು ಸಾಕಷ್ಟು ಪುಷ್ಟಿಯನ್ನು ನೀಡುತ್ತದೆ. ಕೊನೆಗೂ ಎಲ್ಲವೂ ಸುಖವಾಗಿ ಮುಗಿಯುತ್ತದೆ ಎಂಬ ಆದರ್ಶದ ನಂಬಿಕೆಯೊಂದಿಗೆ ನಮ್ಮ ವಾಸ್ತವ ಜಗತ್ತು ಸುಮ್ಮನಾಗುತ್ತದೆ.

ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಕ್ರೋಡೀಕೃತವಾದಂತೆ ಆಪತ್ತು-ಅದಲ್ಲದಿದ್ದರೆ ಟೀಕೆ-ಎದುರಾಗುತ್ತದೆ. ಸಂಪತ್ತು ವಿಪರೀತ ಕ್ರೋಡೀಕೃತವಾದಾಗ ಜನರು ಎಚ್ಚೆತ್ತುಕೊಳ್ಳುತ್ತಾರೆ. ಇದೆಲ್ಲಿಂದ ಬಂತು ಎಂಬ ಸಾಧಾರಣ ಸಂಶಯವು ನಿಧಾನಕ್ಕೆ ಬೃಹದಾಕಾರಕ್ಕೆ ಬೆಳೆಯುತ್ತದೆ. ಇದೇ ಅಸಂತುಷ್ಟತೆಗೆ, ಅಸಮಾಧಾನಕ್ಕೆ, ಅತೃಪ್ತಿಗೆ ದಾರಿ ಮಾಡುತ್ತದೆ. ಆದ್ದರಿಂದಲೇ ಅತೀ ಹೆಚ್ಚು ಸಂಪತ್ತನ್ನು ಗಳಿಸಿದ ರಾಜಕಾರಣಿಯೊಬ್ಬ ಕಾನೂನಿನ ಬಲೆಗೆ ಸಿಕ್ಕಿದಾಗ ತೋಳ ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಎಂಬಂತೆ ಜನರು ರಾಜಕಾರಣಿಯ ಬಗ್ಗೆ ತೀರಾ ತುಚ್ಛವಾಗಿ ಮಾತನಾಡುತ್ತಾರೆ. ಆತ ಅಧಿಕಾರದಲ್ಲಿಲ್ಲದಿದ್ದರೆ ಮರೆಯಾಗುತ್ತಾನೆ-ಕನಿಷ್ಠ ಮತ್ತೆ ಅಧಿಕಾರಕ್ಕೆ ಮರಳದಿದ್ದರೆ ಮತ್ತು ಮರಳುವ ವರೆಗೆ.

ರಾಜಕಾರಣಿಗಳಲ್ಲಿ ಮೂರು ಬಗೆಯವರಿದ್ದಾರೆ. ಒಂದು-ಅಧಿಕಾರ ಸಿಕ್ಕಿದರೆ ಸಾಕು, ಎಂಬವರು. ಎರಡು-ಅಧಿಕಾರ ಬೇಡ, ಹಣಸಂಚಾರವಾದರೆ ಸಾಕು. ಅವರಿಗೆ ಅಧಿಕಾರ ಬೇಕಿಲ್ಲ. ಹಣ ಏನು ಕೆಲಸ ಮಾಡುತ್ತದೆಂದು ಗೊತ್ತಾಗಬೇಕಾದರೆ ಈ ವರ್ಗ ಒಳ್ಳೆಯ ಉದಾಹರಣೆ.

ಇವೆರಡೂ ಅಲ್ಲದ ಮೂರನೆಯ ವರ್ಗವಿದ್ದರೆ ಅವರು ತೀರ ಪ್ರಾಮಾಣಿಕರೋ ಅಥವಾ ಹೆಡ್ಡರೋ, ಅಥವಾ ಅಸಹಾಯಕರೋ ಆಗಿದ್ದು ಅತ್ತ ಅಧಿಕಾರವನ್ನೂ ಅನುಭವಿಸದೆ, ಇತ್ತ ಸಂಪತ್ತನ್ನೂ, ಶೇಖರಿಸದೆ ಸೀದಾ ಸಾದಾ ಆಗಿ ಕಾಣುವವರು. ಈ ಮೂರನೆಯ ವರ್ಗದವರು ರಾಜಕೀಯ ಹಿನ್ನೆಲೆ, ಪ್ರತಿಷ್ಠಿತ ಕೌಟುಂಬಿಕ ಹಿನ್ನೆಲೆ, ರಾಜಕೀಯ ಪೂರ್ವದಲ್ಲೇ ಸಾಕಷ್ಟು ಸಂಪಾದಿಸಿದವರು ಆಗಿದ್ದು ಕೆಲವು ಕಾರಣಗಳಿಗೆ ರಾಜಕೀಯ ಪಕ್ಷಗಳಿಗೆ ಅನಿವಾರ್ಯವಾಗುತ್ತಾರೆ.

ಮೊದಲನೆಯ ವರ್ಗದಲ್ಲಿ ಹಣದ ದಾಹಕ್ಕಿಂತ ಹೆಚ್ಚಾಗಿ ಅಧಿಕಾರ ದಾಹ ಮತ್ತು ಪ್ರಚಾರ, ಪ್ರತಿಷ್ಠೆ, ಪ್ರಸಿದ್ಧಿ ಮುಂತಾದ ಆತ್ಮರತಿ ಸಾಕಷ್ಟಿರುತ್ತದೆ. ಇವರು ಒಳ್ಳೆಯವರೆಂದೇನಿಲ್ಲ. ಕುಟುಂಬದ ಶೋಕಿಯಿರುವವರು ತಮ್ಮ ಮಕ್ಕಳು, ಮೊಮ್ಮಕ್ಕಳು ಹೀಗೆ ಸ್ವಂತ ಕುಟುಂಬವನ್ನು ಪೋಷಿಸುತ್ತ ಅದನ್ನೇ ಅಮಾಯಕ ಹಿಂಬಾಲಕರೆದುರು ವಿಶ್ವಕುಟುಂಬದಂತೆ ಪ್ರದರ್ಶಿಸುತ್ತಾರೆ. ಇದೇ ರೀತಿ ಯಾವ ಮತ್ತು ಯಾರ ಹಂಗೂ ಇಲ್ಲದೆ ಒಬ್ಬರೇ ಇರುವವರೂ ಇದ್ದಾರೆ. ‘ಶೋಲೆ’ ಎಂಬ 70ರ ದಶಕದ ಹಿಂದಿ ಸಿನೆಮಾದ ಗಬ್ಬರ್‌ಸಿಂಗ್‌ನ ಹಾಗೆ ಒಬ್ಬನೇ ಇರುವವರೂ ಸಾಮಾಜಿಕ ಕಂಟಕಪ್ರಾಯರಾಗಿರಬಾರದೆಂದೇನಿಲ್ಲ. ದೇಶದ ಹೊಣೆ ಹೊರಬೇಕಾದ ಇಂಥವರು ಎಲ್ಲ ದೇಶಗಳಲ್ಲೂ ಇರುತ್ತಾರೆ.

ಎರಡನೆಯ ವರ್ಗದಲ್ಲಿ ಅಧಿಕಾರವಿಲ್ಲದೆಯೂ ರಾಜಕಾರಣದ ಒಳಹೊರಗಿದ್ದುಕೊಂಡು ಆಪ್ತೇಷ್ಟ ರಾಜಕಾರಣಿಗಳ ವರ್ಚಸ್ಸು, ಪ್ರಭಾವದಿಂದ ಹಣವಿರುವ ಸಂದೂಕದ ಕೀಲಿಕೈ ಹಿಡಿಯುವವರಿರುತ್ತಾರೆ.

ಅದಾನಿ, ಅಂಬಾನಿ ಸಹಿತ ಅನೇಕರು ಈ ವರ್ಗ. ಇನ್ನೊಂದು ಒಳ್ಳೆಯ ಉದಾಹರಣೆಯೆಂದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ. ಕ್ರಿಕೆಟ್ ಮಂಡಳಿಯನ್ನು ನಡೆಸಬೇಕಾದರೆ ಕ್ರಿಕೆಟ್ ಗೊತ್ತಿರಬೇಕಿಲ್ಲ. ಅದರ ನಿಧಿಯ ಒಡೆತನವಿದ್ದರೆ ಸಾಕು; ಒಳ್ಳೆಯ ರೀತಿಯಲ್ಲೋ ಕೆಟ್ಟ ರೀತಿಯಲ್ಲೋ, ಬಳಸುವ ಸಾಮರ್ಥ್ಯ ಬೇಕು. ಆಟಗಾರರು ತಮಗೆ ಸಿಗುವ ಹಣದಿಂದಾಗಿ ಇವನ್ನೆಲ್ಲ ಸಹಿಸಿಕೊಳ್ಳುತ್ತಾರೆ. ಇಷ್ಟಕ್ಕೂ ಸಾವಿರಾರು ಕೋಟಿ ರೂಪಾಯಿ ಆದಾಯವಿರುವ ಈ ಮಂಡಳಿಗೆ ಸರಕಾರ ತೆರಿಗೆ ವಿಧಿಸುತ್ತಿಲ್ಲ. ಆದ್ದರಿಂದ ಇವರೆಲ್ಲ ಉಂಡ, ಉಣ್ಣುವ ಜಾಣರು. ಇವರಿಗೆ ಸಂವಿಧಾನ, ಅದರಡಿಯ ಕಾನೂನು ಇವ್ಯಾವುದರ ಹಂಗೂ ಇಲ್ಲ.

ಮೂರನೆಯ ವರ್ಗದಲ್ಲಿ ಕೆಲವು ಹೆಸರು ಬಯಸದ, ಅಪರಿಚಿತ ಹೆಸರುಗಳಿರುತ್ತವೆ. ಅವರು ಸದ್ಯದ ಆರ್ಥಿಕ-ರಾಜಕೀಯ ಪರಿಸ್ಥಿತಿಯಲ್ಲಿ ಅಪ್ರಸ್ತುತ.

ನಮ್ಮ ವಿಮಾನ ನಿಲ್ದಾಣಗಳ ಪಾಲನೆಗೆ ಹರಾಜು ಹಾಕುವಾಗ, ನಮ್ಮ ಸರಕಾರಿ ಸಂಸ್ಥೆಗಳನ್ನು ಮಾರಾಟಮಾಡುವಾಗ ಈ ಆರ್ಥಿಕ ಸಬಲರಿಗೆ ಮೊದಲ ಮಣೆ. ಅವರು ತಮ್ಮ ಹಣವನ್ನು ಹೂಡುತ್ತಾರೆಂದೇನಿಲ್ಲ. ಸರಕಾರವೇ ತನ್ನ ಬ್ಯಾಂಕುಗಳಿಂದ ಅವರಿಗೆ ಸಾಲ ಒದಗಿಸುತ್ತದೆ. ಉಳಿದಂತೆ ಬೇರೆ ಬೇರೆ ಮೂಲಗಳಿಂದ ಅವರಿಗೆ ಸುಪ್ತ ಬಂಡವಾಳ ಹರಿದು ಬರುತ್ತದೆ. ಚುನಾವಣಾ ಬಾಂಡುಗಳ ಮೂಲಕ ಹೀಗೆ ಸರಕಾರ ನೀಡಿದ ಹಣವನ್ನು ಪಕ್ಷಕ್ಕೆ ನೀಡುವ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಪುಣ್ಯ ಸಂಪಾದಿಸುವ ಶ್ರೀಮಂತರು ದೇಶ ಹೇಗೆ, ಎಲ್ಲಿ ಮತ್ತು ಎಲ್ಲಿಗೆ ಮುನ್ನಡೆಯಬೇಕೆಂಬುದನ್ನು ನಿರ್ಧರಿಸುತ್ತಾರೆ. ದೇಶದ ಅರ್ಥ ವ್ಯವಸ್ಥೆಯ ಅದೃಶ್ಯ ಸೂತ್ರಧಾರರು. ಅಕಸ್ಮಾತ್ತಾಗಿ ನಷ್ಟವಾಯಿತು, ಅವರಿಗೆ ಪಾರಾಗುವ ಎಲ್ಲ ನೆರವನ್ನೂ ಸರಕಾರ ನೀಡುತ್ತದೆ. ಇದೊಂದು ಪರಸ್ಪರ ಕೊಡುಕೊಳ್ಳುವ ವೈಖರಿ. ಪ್ರಧಾನಿಯ ಹೆಸರು ರಾರಾಜಿಸುವುದಕ್ಕಿಂತಲೂ ಇವರ ಹೆಸರೇ ದೇಶದೆಲ್ಲೆಡೆ ಜಾರಿ.

ಈ ಎಲ್ಲ ವಾದಗಳನ್ನು ಅಲ್ಲಗಳೆಯುವ ಅರ್ಥಶಾಸ್ತ್ರಜ್ಞರು ಎಲ್ಲಕಡೆ ಇರುತ್ತಾರೆ. ಅವರು ನೀಡುವ ಅಂಕೆ-ಸಂಖ್ಯೆ ರಾಜಕೀಯವಾಗಿ ಅವರೇ ಒಪ್ಪುವುದಿಲ್ಲವಾದರೂ ಇತರರನ್ನು ಅವರು ಒಪ್ಪಿಸಬಲ್ಲರು. ಈಚೆಗೆ ತೈಲ ಬೆಲೆ ರೂ.50ರಿಂದ ನೂರಕ್ಕೆ ಜಿಗಿದಾಗ ಅದೆಷ್ಟೇ ಏರಲಿ ನಾವು ದೇಶಸೇವಕರು, ದೇಶಭಕ್ತರು ಎಂದೆಲ್ಲ ಘೋಷಿಸಿಕೊಂಡವರು ಮೊನ್ನೆ ಕರ್ನಾಟಕ ಸರಕಾರ ರೂ.3ರಷ್ಟು ಏರಿಸಿದಾಗ ಆಕಾಶವೇ ತಲೆಗೆ ಬಿದ್ದಂತೆ ಪ್ರತಿಭಟಿಸಿದರು; ಇನ್ನೂ ಪ್ರತಿಭಟಿಸುತ್ತಿದ್ದಾರೆ. ಏರಿಕೆಯ ನಂತರವೂ ಬಹಳಷ್ಟು ನೆರೆಯ ರಾಜ್ಯಗಳಿಗಿಂತ ಈ ದರ ಕಡಿಮೆಯಿದ್ದರೂ ಇದು ಆರ್ಥಿಕತೆಯಲ್ಲ, ರಾಜಕಾರಣ ಮತ್ತು ಇದನ್ನು ಆರ್ಥಿಕ ರಾಜಕಾರಣದ ಅಥವಾ ರಾಜಕೀಯ ಆರ್ಥಿಕತೆ ಎಂದು ಹೇಳಬಹುದೇನೋ? ಹಾಲಿನ ದರವನ್ನು ರೂ.44ಕ್ಕೆ ಏರಿಸಿ 50 ಮಿಲಿ ಲೀಟರ್ ಜಾಸ್ತಿ ಹಾಲು ಸರಬರಾಜಾಗುವಾಗ ಅದನ್ನೂ ಪ್ರತಿಭಟಸಲಾಗುತ್ತಿದೆ. ಸುಲಭ ಗಣಿತವನ್ನು ನೆನೆದರೂ ಈ ಹೆಚ್ಚಳದಲ್ಲಿ ದರ ಹೆಚ್ಚಳವಿಲ್ಲ. ಹಾಗಾದರೆ ಇದರ ಹಿಂದಿನ ರಹಸ್ಯವೇನು? ಸುಲಭ ರಾಜಕಾರಣ. ಮುಗ್ಧರನ್ನು ಬಳಲಿಸಲು ಇದಕ್ಕಿಂತ ಸುಲಭೋಪಾಯವಿಲ್ಲ.

ದೇಶದಲ್ಲಿರುವ ಆರ್ಥಿಕತೆ ಮತ್ತು ರಾಜಕಾರಣವು ಪ್ರತ್ಯೇಕವಾಗಿಲ್ಲ. ಎರಡೂ ವಿಷವೃತ್ತದಂತಿದೆ; ವಿಷುವವೃತ್ತವೂ ಹೌದು. ಒಂದಕ್ಕೊಂದು ಭಯಾನಕ ಅನ್ಯೋನ್ಯ. ಧರ್ಮವು ಇವೆರಡರಿಂದಲೂ ದೂರವಿರಬೇಕಾಗಿದ್ದರೂ ಅದೂ ಈ ಬಲೆಯಲ್ಲಿ ಹೆಣೆದುಕೊಂಡಿದೆ. ಇವು ಜನಮಾರಕವೆಂದು ಎಲ್ಲಿಯವರೆಗೆ ಸಾಮಾನ್ಯರಿಗೆ ಅರ್ಥವಾಗುವುದಿಲ್ಲವೋ ಅಲ್ಲಿಯವರೆಗೆ ಆರ್ಥಿಕತೆ ಮತ್ತ್ತು ರಾಜಕಾರಣವು ತನ್ನ ಅರ್ಥವನ್ನು ಕಳೆದುಕೊಳ್ಳುತ್ತಲೇ ಹೋಗುತ್ತದೆ. 2047ರಲ್ಲಿ ದೇಶವು ಹೇಗಿರುತ್ತದೆ ಮತ್ತು ಹೇಗಿರಬೇಕು ಎಂಬುದನ್ನು ನಮ್ಮ ಉದ್ಯಮಿಗಳು ಮಾತ್ರ ಹೇಳಲು ಶಕ್ತರು. ಅವರೆಷ್ಟು ಎತ್ತರದಲ್ಲಿದ್ದಾರೆಂದರೆ ಅವರಿಗೆ ತಳಮಟ್ಟದ ಜನರ ಕೂಗು ಕೇಳದು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News