ಸ್ಮೃತಿ-ವಿಸ್ಮೃತಿಗಳ ನಡುವೆ

ಪ್ರತಿಗಾಮಿಯಾಗಿ ಕಾಣುವ ಸಿದ್ಧಾಂತಗಳನ್ನು ಹೇಗಾದರೂ ಸಮರ್ಥಿಸುವ ಉತ್ಸಾಹದಲ್ಲಿ ಸ್ವತಃ ವಿದ್ವಾಂಸರಾಗಿರುವ ಲೇಖಕರು ತಮ್ಮ ವೈಚಾರಿಕ ಮನೋಭಾವವನ್ನು ಬಲಿಕೊಟ್ಟಿದ್ದಾರೇನೋ ಅಥವಾ ಅಯೋಚಿತವಾಗಿ ಮರೆತರೇನೋ ಅನ್ನಿಸುತ್ತದೆ. ಸ್ವತಃ ವಿಚಾರಪರರಾದ ಲೇಖಕರು ಇದನ್ನು ಕ್ರಾಂತಿಕಾರಿ ಮತ್ತು/ಅಥವಾ ವಾಸ್ತವತೆಯ ಹಿನ್ನೆಲೆಯಲ್ಲಿ ನೋಡಿದ್ದಾರೆಯೇ ಎಂದು ವಿಶ್ಲೇಷಿಸಿದರೆ ಇದು ಓದುಗರಿಗೆ ನಿರಾಶೆ ತರುವುದಂತೂ ಖಂಡಿತ. ಕೃತಿಯ ಆರಂಭದಲ್ಲಿ ಅವರು ಹೇಳಿದ ‘ಮನುಸ್ಮತಿಯ ಬಗ್ಗೆ ಪುಸ್ತಕ’ ಎಂಬುದಷ್ಟೇ ನಿಜವಾಗಿದೆ.

Update: 2024-05-16 05:25 GMT

ಉಡುಪಿಯ ಡಾ. ಬಿ. ಭಾಸ್ಕರ ರಾವ್ ‘ಮನುಸ್ಮತಿ: ಒಂದು ವಿಶಿಷ್ಟ ಕೃತಿ’ ಎಂಬ ಕೃತಿಯನ್ನು ಬರೆದಿದ್ದಾರೆ. (ಪ್ರಕಟಣೆ: ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ -ಮೊದಲ ಮುದ್ರಣ: 2023). ಈ ಕೃತಿಯ ಕುರಿತು ಹೇಳುವ ಮೊದಲು ಇದರಲ್ಲಿ ಉಲ್ಲೇಖವಾದ ಕೃತಿ ಮತ್ತು ಅದರ ಪ್ರಸ್ತುತತೆಯ ಕುರಿತು ಕೆಲವು ಮಾತುಗಳನ್ನು ಹೇಳಬೇಕಾದ್ದು ಅಗತ್ಯವೆಂದುಕೊಂಡಿದ್ದೇನೆ.

ಕೆಲವು ವಿಚಾರಗಳು ಆಯಾಯ ಕಾಲಕ್ಕೆ ಸಲ್ಲುತ್ತವೆಯೇ ಹೊರತು ಕಾಲಾತೀತವಾಗಿರುವುದಿಲ್ಲ. ಇದಕ್ಕೆ ಕಾರಣಗಳಿವೆ. ಅವು ಶಾಶ್ವತ ಮೌಲ್ಯಗಳನ್ನು ಹೇಳುವುದಿಲ್ಲ. ಒಂದು ಗೊತ್ತಾದ ಪರಂಪರೆ-ಕಾಲದಲ್ಲಿ ಯಾವ ಶಕ್ತಿ ಯಜಮಾನಿಕೆಯನ್ನು ನಡೆಸುತ್ತದೆಯೋ ಅದು ಹೇಳಿದ್ದೇ ಸರಿಯೆಂದು ಮನ್ನಣೆಗೆ ಪಾತ್ರವಾಗುತ್ತದೆ. ಕೆಟ್ಟ ರಾಜನು ರಾಜ್ಯವಾಳಿದರೆ ಆತನ ಅನ್ಯಾಯಗಳು ಕಾನೂನಾಗುತ್ತವೆ; ಶಾಸ್ತ್ರವಾಗುತ್ತವೆ; ಸಾಮಾಜಿಕ ಕಟ್ಟಳೆಗಳಾಗುತ್ತವೆ; ಶಿಸ್ತಾಗುತ್ತವೆ; ಅವೇ ಬದುಕಿನ ಮೌಲ್ಯಗಳಾಗುತ್ತವೆ.

ಭಾರತೀಯ ಚರಿತ್ರೆಯಲ್ಲಿ ಪರಂಪರೆಯ ಹೆಸರಿನಲ್ಲಿ ಸಾಂಪ್ರದಾಯಿಕ ಆಚಾರ-ವಿಚಾರಗಳೇ ಸರಿಯೆಂದು ವಾದಿಸುವ ಒಂದು ತಂಡವಿದೆ. ಅದಕ್ಕೆ ಮೂಲಸಮರ್ಥನೆಯೆಂದರೆ ಅದನ್ನು ಯಾರೋ ಯಾವುದೋ ಕಾಲದಲ್ಲಿ ಯಾರೋ ಹೇಳಿದ್ದಾರೆಂಬುದೇ ಆಗಿರುತ್ತದೆ. ವೇದಗಳು, ಉಪನಿಷತ್ತುಗಳು, ಗೀತೆ, ಪುರಾಣಗಳು ಹೀಗೆ ಹೇಳಿವೆ ಅಥವಾ ಈ ಮಹಾನುಭಾವರು ಹೀಗೆ ಹೇಳಿದ್ದಾರೆ ಆದ್ದರಿಂದ ಇದು/ಇವು ಸತ್ಯ. ಇವು ಯಾಕೆ ಸರಿ ಎಂದು ಪ್ರಶ್ನಿಸಿದರೆ ಅದೆಲ್ಲ ಯಾಕೆ? ಅದು ಹೀಗೆ ಹೇಳಲ್ಪಟ್ಟಿವೆ, ಒಪ್ಪಿಕೊಳ್ಳುವುದು ನಿಮ್ಮ ಕರ್ತವ್ಯ ಎಂದು ಹೇಳುವ, ಪ್ರಶ್ನಿಸುವ ಹಕ್ಕನ್ನೇ ಕಿತ್ತುಕೊಳ್ಳುವ, ಇಂತಹ ತತ್ವಸಿದ್ಧಾಂತಗಳು ಸಮಾಜದ ಹರಿವಿಗೆ ಅಪಾಯಕಾರಿ.

ಕೆಟ್ಟಮಗ ಹುಟ್ಟಬಹುದು, ಕೆಟ್ಟತಾಯಿ ಹುಟ್ಟಲಾರಳು ಎಂಬ ಶಂಕರಾಚಾರ್ಯರ ಮಾತನ್ನು ಎಲ್ಲೆಡೆ ಹೇಳಲಾಗುತ್ತದೆ. ಅತ್ತೆ ಸೊಸೆಗೆ ನೀಡುವ ಹಿಂಸೆ, ತಾಯಿ ಮಗನನ್ನು ಕೊಂದ ಪ್ರಸಂಗ, ಹೆತ್ತ ಮಗುವನ್ನು ಗಂಗೆಯಲ್ಲೆಸೆದ ಕುಂತಿ ಇವೆಲ್ಲ ಇಂತಹ ವಾದದಡಿ ಗೌಣವಾಗುತ್ತವೆ. ಹೇಳಿದರೆ ಹೌದು, ಆದರೂ ಎಂದು ನುಣುಚಿಕೊಳ್ಳುವ ಪಂಡಿತರೇ ಹೆಚ್ಚು. ಇನ್ನೂ ವಾದಿಸಿದರೆ ‘‘ನಿಮ್ಮಂಥವರಿಂದಲೇ ನಮ್ಮ ಸಮಾಜ ಇಷ್ಟು ಕೆಟ್ಟಿರುವುದು’’ ಎಂಬ ಶಾಸನಬದ್ಧ ಬೆದರಿಕೆ ಬೇರೆ. ವಚನಗಳು ಸ್ವಲ್ಪ ಮಟ್ಟಿಗೆ ಇಂತಹ ಪಾರಂಪರಿಕ ಮೌಢ್ಯಗಳನ್ನು ಖಂಡಿಸಿವೆ. ಆದರೆ ಸಮಾಜದ ಬೇರುಗಳಲ್ಲಿರುವ ಮೌಢ್ಯಗಳು ಇನ್ನೂ ಸಡಿಲವಾಗಿಲ್ಲ. ಶ್ರೀರಾಮಚಂದ್ರನಂತಹ ವ್ಯಕ್ತಿತ್ವವನ್ನು ಅಳೆಯುವ ಸಂದರ್ಭದಲ್ಲಿ ಆತನ ಲೋಪ-ದೋಷಗಳು, ಕೊರತೆಗಳು ಕಂಡಾಗೆಲ್ಲ ಅಥವಾ ಅಸಮರ್ಥನೀಯವೆಂಬಾಗೆಲ್ಲ, ಅವು ಲೀಲಾನಾಟಕಗಳಾಗಿಬಿಡುತ್ತವೆ. ಭಗವಂತನ ದೋಷಗಳು ದೋಷಗಳೇ ಅಲ್ಲ ಎಂಬ ವಿನಾಯಿತಿಪತ್ರ ಅಥವಾ ಮುಕ್ತಿಪತ್ರ ಸಿದ್ಧವಾಗುತ್ತದೆ. (ರಾಷ್ಟ್ರಪತಿಗಳೇ ಮುಂತಾದ ಸಾಂವಿಧಾನಿಕ ಹುದ್ದೆಯವರಿಗೆ ದೋಷಾರೋಪಣೆಯಿಂದ ಇಂತಹ ವಿನಾಯಿತಿಯಿದೆ!) ಇಂತಹ ಧರ್ಮಗಳು ‘ಸನಾತನ’ವೆನಿಸುತ್ತವೆ.

ವರ್ಣಾಶ್ರಮಧರ್ಮವು ಒಂದು ಪಳೆಯುಳಿಕೆಯೆಂದು ಒಪ್ಪಲೇಬೇಕಾದ ಸಂಗತಿ. ಇದನ್ನು ಸಮರ್ಥಿಸುವವರು ಮನುಷ್ಯತ್ವ್ವವನ್ನು ಕಳೆದುಕೊಂಡವರು ಮಾತ್ರ. ಹುಟ್ಟೇ ಕಾರಣವಾಗಿ ಮೇಲುಕೀಳಾಗುವವರು ಸಾಮಾಜಿಕ ವಿಷಮತೆಯ ಸೂಚಕಗಳು. ಯಾವುದೋ ಕಾಲದಲ್ಲಿ ಸಿದ್ಧಗೊಂಡ ಈ ವ್ಯವಸ್ಥೆಗೆ ಮುಂದುವರಿಯುವ ಹಕ್ಕಿಲ್ಲದಿದ್ದರೂ ಕೆಲವರ ಅಂಧಶ್ರದ್ಧೆಯಿಂದಾಗಿ, ಯಜಮಾನಿಕೆಯ ಹಕ್ಕಿನಿಂದಾಗಿ, ತೆವಳುತ್ತ ಬಂದಿದೆ. ಇದು ಮುಂದುವರಿಯಬಾರದೆಂಬ ವಾದವನ್ನು ವ್ಯವಸ್ಥೆಯ ರಕ್ಷಕರು ಒಪ್ಪದೆ ಮೌನವಾಗಿರುತ್ತಾರೆ; ಕಣ್ಣುಮುಚ್ಚಿ ಕುಳಿತಿರುತ್ತಾರೆ. ವ್ಯವಸ್ಥೆಯ ರಕ್ಷಕರೆಂದರೆ ಅದನ್ನು ಪ್ರತಿಪಾದಿಸುವವರು ಮಾತ್ರವಲ್ಲ; ಅದು ಮುಂದುವರಿಯುವುದಕ್ಕೆ ಪರೋಕ್ಷ ಬೆಂಬಲವನ್ನು ತಮ್ಮ ಪ್ರಭಾವಿ ಮೌನದಿಂದ ನೀಡುವವರೂ ಸೇರುತ್ತಾರೆ. ಒಂದರ್ಥದಲ್ಲಿ ‘ವರ್ಗಾಶ್ರಮ’ ಧರ್ಮವೂ ಹೀಗೆಯೇ. ಸಮಾಜದ ಸಂಪತ್ತು ಕೆಲವೇ ಮಂದಿಯಲ್ಲಿ ಕ್ರೋಡೀಕೃತವಾಗುವುದು ಸಾಮಾಜಿಕ ತಲ್ಲಣದ ಬದಲು ಅಸಮತೋಲನವನ್ನು ಸೃಷ್ಟಿಸುತ್ತದೆ. ಪ್ರಾಯಃ ಇಂತಹ ಚಿಂತನೆಗಳ ಕುರಿತು ಕಾಲಾಂತರದಲ್ಲಿ ಉಂಟಾದ ಪ್ರೌಢ ವಿಶ್ಲೇಷಣೆಗಳೇ ಇವನ್ನು ಸಾಪಾಟುಗೊಳಿಸುವ ‘ಮೀಸಲಾತಿ’ ಮತ್ತು ಇತರ ಸಾಮಾಜಿಕ ಸುಧಾರಣೆಗಳಿಗೆ ಅಂದರೆ ಬಾಲ್ಯವಿವಾಹ, ಸತಿಪದ್ಧತಿ, ಅಸ್ಪಶ್ಯತಾ ನಿವಾರಣೆ ಮುಂತಾದವುಗಳನ್ನು ನಿಷೇಧಿಸುವ ಕ್ರಮಗಳಿಗೆ ಕಾರಣವಾಯಿತೆಂದು ಕಾಣುತ್ತದೆ. ದೇವಾಲಯಗಳಿಗೆ ದಲಿತರ ಪ್ರವೇಶಕ್ಕೆ ಅವಕಾಶಕೊಡುವುದು ಸುಧಾರಣೆಯೆನ್ನಿಸದೆ ಒಂದು ನಂಬಿಕೆಯನ್ನು ಎಲ್ಲರಲ್ಲೂ ಹಬ್ಬಿಸುವ ಕ್ರಮವಾಯಿತೇನೋ ಎಂಬ ಸಂಶಯ ಬರುತ್ತದೆಯಾದರೂ ಅಸಮತೋಲನದಲ್ಲೂ ಸಮಾನತೆಯ ವ್ಯವಸ್ಥೆಯಂತೆ ಕಾಣಿಸುತ್ತದೆ.

ಮನುಸ್ಮತಿ ಇಂತಹ ಒಂದು ಕೃತಿ. ಒಂದು ಕಾಲಕ್ಕೆ ಅದೇ ಕಾನೂನಾಗಿತ್ತು. ಕಾನೂನಿನ ಸ್ಥಾನದಿಂದ ಅದು ಅಳಿದುಹೋದರೂ ನ್ಯಾಯಪರಂಪರೆಯಲ್ಲಿ ಅದರ ಸ್ಥಾನ ಇನ್ನೂ ಉಳಿದಿರುವುದು ವರ್ತಮಾನದ ದುರದೃಷ್ಟ. ನಮ್ಮ ಕೆಲವೊಂದು ನ್ಯಾಯಾಲಯಗಳಲ್ಲಿ ಮನುವಿನ ಮೂರ್ತಿ ಪ್ರತಿಷ್ಠಾಪಿಸಲ್ಪಟ್ಟಿದೆ. ಯಾವುದೋ ಕಾಲದಲ್ಲಿ ಅದರದ್ದೇ ಕಾರಣಗಳಿಗಾಗಿ ಸೃಷ್ಟಿಯಾದ, ಪಾಲನೆಯಾದ ನಿಯಮಗಳು ಲಯವಾಗಿಹೋಗಬೇಕಾದ ಬದಲು ಆಗಾಗ ಅದನ್ನು ಚಿಗುರಿಸುವ ಯತ್ನಗಳು ನಡೆಯುತ್ತಲೇ ಇರುತ್ತವೆ. ನಮಗೆ ಮರೆತಿರುವ ಅಂಶವೆಂದರೆ ಮನುಸ್ಮತಿಯು ಒಂದು ಸೃಜನಶೀಲ ಕೃತಿಯಲ್ಲ. ಸೃಜನಶೀಲಕೃತಿಯಾದರೋ ಅದು ಹೇಗಿದೆಯೋ ಹಾಗೆ ಅದನ್ನು ನೋಡಬೇಕೇ ಹೊರತು ಅದರ ತರ್ಕ, ಸಿದ್ಧಾಂತಗಳಿಗಲ್ಲ. ರಾವಣನನ್ನೇ ಅಥವಾ ಕೌರವನನ್ನೇ ನಾಯಕನಾಗಿಸಿ ಬರೆದ ರಾಮಾಯಣ-ಭಾರತಗಳೂ (ಹಾಗೊಂದು ವೇಳೆ ಬರೆದಿದ್ದರೆ) ಸ್ವೀಕಾರಕ್ಕೆ ಅರ್ಹವೇ. ಹೇಗಿದೆಯೋ ಹಾಗೆ ಸ್ವೀಕಾರವಾಗುವುದು ಒಂದು ಸೃಜನಶೀಲ ಕೃತಿಯ ಅರ್ಹತೆ. ಅದಲ್ಲದಿದ್ದರೆ ಸಾಫೋಕ್ಲಿಸ್, ಶೇಕ್ಸ್‌ಪಿಯರ್ ಅವರ (ಕೆಲವಾದರೂ) ನಾಟಕಗಳು ಓದುಗರ ಮನ್ನಣೆಗೆ ಪಾತ್ರವಾಗುತ್ತಿರಲಿಲ್ಲ. ಆದ್ದರಿಂದ ಮನುಸ್ಮತಿಯನ್ನು ಸೃಜನಶೀಲ ಕೃತಿಗಳ ಮೌಲ್ಯಮಾಪನಾದಂಡದಿಂದ ಅಳೆಯುವಂತಿಲ್ಲ.

ಲೇಖಕರು ಯಾವ ದೃಷ್ಟಿಯಿಂದ ಈ ಕೃತಿಯನ್ನು ಬರೆದರು ಎಂಬುದು ಅವರ ‘ಎರಡು ಮಾತು’ಗಳಿಂದ ಸ್ಪಷ್ಟವಾಗುವುದಿಲ್ಲ. ಅವರ ವಿವರಣೆಯಲ್ಲಿ ನೀಡಿದ ಮನುಸ್ಮತಿ, ಪ್ಲೆಟೋವಿನ ರಿಪಬ್ಲಿಕ್, ಗರುಡ ಪುರಾಣ, ಬೆಕರ್‌ನ ದಿ ಡಿನಾಯಲ್ ಆಫ್ ಡೆತ್, ಚಾಣಕ್ಯನ ಅರ್ಥಶಾಸ್ತ್ರ ಇವುಗಳ ಘೋಷಿತ ‘ತುಲನಾತ್ಮಕ ಅಧ್ಯಯನ’ವು ಅವರ ಕೃತಿಯ ನೆರವಿಗೆ ಬಂದಂತಿಲ್ಲ.

ಮನುಸ್ಮತಿಯ ಕುರಿತು ಅವರು ಹೊಂದಿರುವ ಇತ್ಯಾತ್ಮಕ ದೃಷ್ಟಿಕೋನವು ಕೃತಿಯ ಶೀರ್ಷಿಕೆಯಲ್ಲೇ ಸಾಕಾರಗೊಳ್ಳುತ್ತದೆ. ಲೇಖಕರ ಮುಖಪುಟದ ದೃಷ್ಟಿಯಲ್ಲೇ ಮನುಸ್ಮತಿ ಒಂದು ವಿಶಿಷ್ಟ ಕೃತಿ. ಒಂದು ಕೃತಿ ‘ವಿಶಿಷ್ಟ’ವೆನಿಸುವುದು ಅದರ ಬರಿಯ ಅಸ್ತಿತ್ವದಿಂದಲ್ಲ. ಅದು ಕೊಡುವ, ಕೊಡಬಲ್ಲ ‘ಕಾಣ್ಕೆ’ಯಿಂದ. ಈ ಅಂಶಗಳು ಕೃತಿಯಲ್ಲಿ ಅಂದರೆ ಮೂಲ ಮನುಸ್ಮತಿಯಲ್ಲಿ ಅಥವಾ ಲೇಖಕರು ಅದರ ಕುರಿತು ಬರೆದದ್ದರಲ್ಲಿ ಕಾಣದಿದ್ದರೆ ಅದು ಅತ್ತ ವಿಮರ್ಶೆಯೂ ಆಗದೇ ಇತ್ತ ಸಾರಾಂಶವೂ ಆಗದೇ (ಈ ಪರಿಯ ಕೃತಿಗಳು ಕನ್ನಡದಲ್ಲಿ ಹೇರಳವಿವೆ!) ಮೊಗಸಾಲೆಯವರು ಲೇಖಕರಿಗೆ ಹೇಳಿದ ಹಾಗೆ ‘ಪುಸ್ತಕವೊಂದನ್ನು ಬರೆದುಕೊಟ್ಟಲ್ಲಿ ಅದರ ಪ್ರಕಾಶನದ ವ್ಯವಸ್ಥೆ ಪೂರೈಸುತ್ತದೆ’, ಅಷ್ಟೇ.

ಅಷ್ಟೇ ಅಲ್ಲ- ಅವರು ಸೂತ್ರವಾಕ್ಯಗಳಂತೆ ಮುಖಪುಟದಲ್ಲಿ ಬಳಸಿದ ಮತ್ತು ಮುಂದೆ ಪ್ರಸ್ತಾವನೆಯಲ್ಲಿಯೂ ಬಳಸುವ ಈ ಶ್ಲೋಕ/ಮಂತ್ರ ಆಗಿನ ಅಂದರೆ ಆಗ ಇದ್ದ ಮತ್ತು ಈಗ ಸಂಪ್ರದಾಯವಾದಿಗಳು ಅಪೇಕ್ಷಿಸುವ ‘ಸನಾತನ’ವಾದದ ಸಮರ್ಥನೆಯಂತಿರುವ ‘‘ಸತ್ಯಂ ಬ್ರೂಯಾತ್ಪ್ರಿಯಂ ಬ್ರೂಯಾತ್ಸತ್ಯಮಪ್ರಿಯಂ| ಪ್ರಿಯಂ ಚ ನಾನೃತಂ ಬ್ರೂಯಾದೇಷ ಧರ್ಮಃ ಸನಾತನ॥ (ಪ್ರಿಯವಾದ ಸತ್ಯವನ್ನೇ ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಬಾರದು, ಪ್ರಿಯವಾಗಿದೆ ಎಂದು ಸುಳ್ಳನ್ನೂ ಹೇಳಬಾರದು. ಇದೇ ಸನಾತನ ಧರ್ಮ.) ಎಂಬ ಮಾತುಗಳು ಕೃತಿಯ ಕನ್ನಡಿಯಂತಿವೆ.

ಈ ಎಲ್ಲವನ್ನೂ ದಾಟಿ ತಾಜಾ ಓದಿಗೆ ಮುಂದುವರಿದು ಗಮನಿಸಿದರೆ ಕೃತಿಯ ತಿರುಳು 102 ಪುಟಗಳಿಗೆ ವಿಸ್ತರಿಸಿದೆ. ಪ್ರಸ್ತಾವನೆಯಲ್ಲಿ ಈ ಉಕ್ತಿಗಳನ್ನು ಬಳಸಿ ಇದು ಸಂಪ್ರದಾಯವಾದದ ಪೊಳ್ಳುತನವನ್ನು ಟೊಳ್ಳನ್ನೂ ತೋರಿಸುತ್ತದೆಯೆಂದು ಹೇಳುತ್ತಾರೆಂದು ನಿರೀಕ್ಷಿಸಿದರೆ ತಪ್ಪಾಗುತ್ತದೆ. ಒಂದು ಕೃತಿ ವಿವಾದಕ್ಕೊಳಗಾಗುವುದು ಅಸಹಜವೇನಲ್ಲ. ಎಲ್ಲ ಶ್ರೇಷ್ಠ ಕೃತಿಗಳೂ ವಿವಾದಕ್ಕಲ್ಲದಿದ್ದರೂ ಚರ್ಚೆಗೆಡೆಮಾಡಿಕೊಟ್ಟಿವೆ. ಆದರೆ ಲೇಖಕರು ಅಂಬೇಡ್ಕರ್ 25.12.1925ರಂದು ಮನುಸ್ಮತಿಯನ್ನು ಸುಟ್ಟ ಐತಿಹ್ಯವನ್ನು ಹೇಳುತ್ತ ‘‘ಭಾರತದಲ್ಲಿ ದಲಿತ ಚಳವಳಿ ಬಲಿಷ್ಠಗೊಂಡ ನಂತರ ಕಳೆದ ಮೂರು ದಶಕಗಳಲ್ಲಿ ಪ್ರಾಯಶಃ ಅತ್ಯಂತ ಹೆಚ್ಚು ವಾಗ್ದಾಳಿಗೊಳಗಾದ ಒಂದು ಗ್ರಂಥ’’ ಎನ್ನುತ್ತಾರೆ. ಶತಮಾನಗಳಿಂದಲೂ ಮನುಸ್ಮತಿಯು ವಿವಾದಕ್ಕೊಳಗಾದ ಗ್ರಂಥವೇ. ಆದರೆ ಸಮಾಜದ ಶೋಷಿತ ಸಮುದಾಯಕ್ಕೆ ಮಾತಿಲ್ಲದಾಗ ಮನುಸ್ಮತಿಯ ಘೋಷಣೆಯಷ್ಟೇ ಕೇಳಿಸಿದ್ದು. ಚೋಮನ ದುಡಿಯ ಸದ್ದು ಕೇಳಿಸಲಾರಂಭಿಸಿದ್ದು ಕಳೆದ ಒಂದೆರಡು ಶತಮಾನಗಳಿಂದ ಸಾಮಾಜಿಕ ಸುಧಾರಣೆಗಳೊಂದಿಗೆ ಆಧುನಿಕತೆಗೆ ಜಗತ್ತು ತೆರೆದುಕೊಳ್ಳಲಾರಂಭಿಸಿದ ಮೇಲೆ. ಪಶ್ಚಿಮದ ಜಗತ್ತಿನಲ್ಲಿ ಸಾಕ್ರೆಟಿಸ್, ಆನಂತರ ಕೊಪರ್ನಿಕಸ್, ಗೆಲಿಲಿಯೋ ಗೆಲೀಲಿ ಮುಂತಾದವರು ವ್ಯವಸ್ಥೆಯ ಕತ್ತಲೆಗೆ ಸೆಡ್ಡು ಹೊಡೆದಿದ್ದಾರಾದರೂ ಅದು ಭಾರತಕ್ಕೆ ಬಹು ಬಳಿಕ ಪ್ರವೇಶವಾಯಿತು. ವಸಾಹತುಶಾಹಿ ಆಡಳಿತ ಈ ನಿಟ್ಟಿನಲ್ಲಿ ನೆರವಾಯಿತು. ಇದು ಸಹಜವಾಗಿಯೇ ಮನುಸ್ಮತಿಯಂತಹ ಕೃತಿಗಳನ್ನೂ ಬಾಧಿಸಿತು. ಆದರೆ ಲೇಖಕರು ‘‘ಮನುಸ್ಮತಿಯನ್ನು ಮನುವಾದಿಗಳನ್ನು ಖಂಡಿಸುವಷ್ಟೇ ತೀವ್ರವಾಗಿ ಖಂಡಿಸಲಾಗಿರುವ ಈ ಗ್ರಂಥದಲ್ಲಿ ಹತ್ತು ಹಲವು ವೈದೃಶ್ಯಗಳಿವೆ, ವಿರೋಧಾಭಾಸಗಳಿವೆ, ಸಾರ್ವಕಾಲಿಕ ಸತ್ಯಗಳಿವೆ. ಸಮಾಜದ ಸಂರಚನೆ, ಮನುಷ್ಯ ಸ್ವಭಾವದ ಸಾತತ್ಯ, ಅಸಾಂಗತ್ಯ, ಮನುಷ್ಯನ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬುದರ ಒಳಸುಳಿಗಳು, ಅದ್ಭುತ ಸಾಹಿತ್ಯಕ ಪ್ರತಿಮೆಗಳು ಮತ್ತು ಗಂಭೀರವಾದ ತಾತ್ವಿಕ ಪ್ರಶ್ನೆಗಳಿವೆ.’’ ಎಂದು ಮುಂತಾಗಿ ಕಂಡಿದ್ದಾರೆ. ಇವುಗಳು ಎಲ್ಲೆಲ್ಲಿವೆ ಎಂಬುದನ್ನು ಶೋಧಿಸಲು ಪರಿಶ್ರಮ ಪಟ್ಟಂತಿಲ್ಲ. ಸಾರ್ವಕಾಲಿಕ ಸತ್ಯಗಳು ಸಾಯವು. ಇವು ಯಾವುವು ಎಂಬುದನ್ನು ವಿಷದಪಡಿಸಿಲ್ಲ. ಸತ್ಯ ಮತ್ತು ಸುಳ್ಳಿನ ನಡುವಣ ಪರದೆಯನ್ನು ಸ್ಪಷ್ಟಪಡಿಸುವ ಬದಲು ಮನುಸ್ಮತಿ ಸನಾತನ ಧರ್ಮದ ನೆಪದಲ್ಲಿ ಇವನ್ನು ಮೇಲೆ ಹೇಳಿದ ಸೂತ್ರಮಂತ್ರಗಳ ಮೂಲಕ ಬೇಲಿಯಲ್ಲಿ ಕೂರಿಸಿದೆ. ಮಹಾಭಾರತದ ದ್ರೌಪದಿ ವಸ್ತ್ರಾಪಹಾರ ಯತ್ನದಲ್ಲಿ ಬೀಷ್ಮ-ದ್ರೋಣಾದಿಗಳು ಮಾಡಿದ್ದೂ ಇದನ್ನೇ. ಅದು ಕಾವ್ಯಸತ್ಯ. ವಿಮರ್ಶೆ ಬೇಡ. ಆದರೆ ಶಾಸ್ತ್ರಗ್ರಂಥದಲ್ಲಿ ಬಂದ ಇಂತಹ ಅನುಕೂಲ ಸಿದ್ಧಾಂತ ಬೇರೊಂದು ಕಾಣುವುದಿಲ್ಲ. (‘‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’’ ನೆನಪಾಗುತ್ತದೆ!) ಆದರೆ ಮನುಸ್ಮತಿಯ ಕೆಲವೊಂದು ಅಂಶಗಳು ಲೇಖಕರಿಗೆ ‘‘ಇಂದಿನ ಸಮಾಜಕ್ಕೆ ರಾಜಕೀಯವಾಗಿ ಸರಿಯಲ್ಲ (Politically incorrect) ಅನ್ನಿಸಬಹುದಾದ ರೀತಿ-ರಿವಾಜುಗಳು, ನೀತಿ-ನಿಯಮಗಳೂ ಇವೆ.’’ ಅನ್ನಿಸುತ್ತದೆ. ಇವು ಇಂದಿನ ಕಾಲಕ್ಕೆ ಮಾತ್ರವಲ್ಲ, ಅಂದಂದಿನ ಕಾಲಕ್ಕೂ ಸರಿಯಿರಲಿಲ್ಲ ಎಂಬುದನ್ನು ನಾವು ತಿಳಿಹೇಳಬೇಕು. ಅಂಬೇಡ್ಕರ್ ಮಾಡಿದ್ದು ಇದನ್ನೇ. ಮುಂದೆ ಲೇಖಕರು ಈ ಕೃತಿಯ ವಿಶಿಷ್ಟ ಧ್ವನಿಯನ್ನು ಗುರುತಿಸುವ ಸಲುವಾಗಿ ಸಾಕಷ್ಟು ವಿಶೇಷಣಗಳನ್ನು (ವಿಚಿತ್ರ ವಿಶ್ವಕೋಶ, ಪ್ರಾಕ್ತನ ಕೈಪಿಡಿ, ಸಾಮಾಜಿಕ ಸಂಹಿತೆ ಇತ್ಯಾದಿ) ಬಳಸುತ್ತಾರೆ ಮತ್ತು ಕೃತಿಯನ್ನು ‘‘ಧಾರ್ಮಿಕ- ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಹಾಗೂ ಕೌಟುಂಬಿಕ-ಆರ್ಥಿಕ ಅಭಿಜಾತ (classical) ಕೃತಿ..’’ ಎನ್ನುತ್ತಾರೆ. (‘ಕ್ಲಾಸಿಕಲ್’ ಅಂದರೇನು ಎಂಬುದನ್ನು ಈ ಹಿನ್ನೆಲೆಯಲ್ಲಿ ಮತ್ತೆ ಚರ್ಚಿಸಬೇಕಾದೀತು.)

ಕೃತಿಯುದ್ದಕ್ಕೂ ಅಧ್ಯಯನದ ಬದಲು ಕೃತಿಯನ್ನು ವೈಭವೀಕರಿಸುವತ್ತ ಚಾಚಿಕೊಂಡ ಕೆಲವೇ ಉದಾಹರಣೆಗಳು ಇವೆ. ಮನುಸ್ಮತಿಯಲ್ಲಿರುವ ‘ತಿಳುವಳಿಕೆ’ ಎಂದು ಲೇಖಕರು ಹೇಳುತ್ತಾರಾದರೂ ಅದರ ಗರ್ಭದಲ್ಲಿ ಹೊತ್ತ ಅಪಾಯಗಳ ಬಗ್ಗೆ ಮೃದು ಧೋರಣೆ ತಾಳಿದಂತಿದೆ. ಕೃತಿಯ ಕುರಿತು ‘‘ಇವರ ಪಾಲಿಗೆ ‘ಮನುಸ್ಮತಿ’ ಒಂದು ಕತ್ತಲ ಖಂಡ, ಇದರೊಳಗೆ ಏನೇನಿದೆ ಎಂದು ತಿಳಿಯದೆ ಜನ ಆವೇಶಕ್ಕೊಳಗಾಗುತ್ತಾರೆ ಮತ್ತು ಒಂದು ವರ್ಗದ ಜನ ಆವೇಶಪೂರಿತವಾಗಿ ಮಾತನಾಡತೊಡಗುತ್ತಾರೆ.’’ ಮುಂತಾಗಿ ವಿವರಿಸುತ್ತಾರೆ. ಇಡೀ ಕೃತಿಯಲ್ಲಿ ಶ್ಲೋಕಗಳೂ ಅವುಗಳ ಕನ್ನಡಾವತರಣಿಕೆಗಳೂ ಸಿಂಹಪಾಲು ಪಡೆದಿರುವುದರಿಂದ ವಿಶ್ಲೇಷಣೆಗೆ ತೊಡಕಾಗಿದೆ. ಸ್ತ್ರೀಸ್ವಾತಂತ್ರ್ಯದ ಅಭಾವದ, ಹಾಗೆಯೇ ಮಧ್ಯಕಾಲೀನ ಯುರೋಪಿನ ವ್ಯವಸ್ಥೆಯನ್ನು ಹೋಲಬಲ್ಲ ಆ ಕಾಲದ ಅತ್ಯಂತ ಕ್ರೂರ ಶಿಕ್ಷಾ ವ್ಯವಸ್ಥೆಯ, ಬ್ರಾಹ್ಮಣರ ಬಗ್ಗೆ ಉದಾರವಾದಿ ಧೋರಣೆಯನ್ನು ತಳೆದ, ಒಟ್ಟಾರೆ ಸಾಮಾಜಿಕ ವ್ಯತ್ಯಸ್ತತೆಯ ಬಗ್ಗೆ ಅತ್ಯಂತ ಪರಿಣಾಮಕಾರಿಯಾಗಿ ಬರೆಯಬಹುದಾಗಿದ್ದ ಅವಕಾಶವನ್ನು ಲೇಖಕರು ಕೈಚೆಲ್ಲಿದ್ದಾರೆ.

ಇವೆಲ್ಲ ಕೃತಿಯ ಉದ್ದೇಶ, ಗುರಿ ಯಾವ ದಿಕ್ಕಿಗಿದೆ ಎಂಬುದನ್ನು ತೋರಿಸುತ್ತವೆ. ಪ್ರತಿಗಾಮಿಯಾಗಿ ಕಾಣುವ ಸಿದ್ಧಾಂತಗಳನ್ನು ಹೇಗಾದರೂ ಸಮರ್ಥಿಸುವ ಉತ್ಸಾಹದಲ್ಲಿ ಸ್ವತಃ ವಿದ್ವಾಂಸರಾಗಿರುವ ಲೇಖಕರು ತಮ್ಮ ವೈಚಾರಿಕ ಮನೋಭಾವವನ್ನು ಬಲಿಕೊಟ್ಟಿದ್ದಾರೇನೋ ಅಥವಾ ಅಯೋಚಿತವಾಗಿ ಮರೆತರೇನೋ ಅನ್ನಿಸುತ್ತದೆ. ಸ್ವತಃ ವಿಚಾರಪರರಾದ ಲೇಖಕರು ಇದನ್ನು ಕ್ರಾಂತಿಕಾರಿ ಮತ್ತು/ಅಥವಾ ವಾಸ್ತವತೆಯ ಹಿನ್ನೆಲೆಯಲ್ಲಿ ನೋಡಿದ್ದಾರೆಯೇ ಎಂದು ವಿಶ್ಲೇಷಿಸಿದರೆ ಇದು ಓದುಗರಿಗೆ ನಿರಾಶೆ ತರುವುದಂತೂ ಖಂಡಿತ. ಕೃತಿಯ ಆರಂಭದಲ್ಲಿ ಅವರು ಹೇಳಿದ ‘ಮನುಸ್ಮತಿಯ ಬಗ್ಗೆ ಪುಸ್ತಕ’ ಎಂಬುದಷ್ಟೇ ನಿಜವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News