ಮೋದಿ 3.0 ಎಂಬ ದತ್ತಾತ್ರೇಯ ಸಂಹಿತೆ

ಒಂದೆರಡು ವರುಷಗಳ ಹಿಂದೆಯಷ್ಟೇ ಪರಸ್ಪರ ಪ್ರವೇಶಿಸದಂತೆ ನಿರ್ಬಂಧಕಾಜ್ಞೆಯನ್ನು ಜಾರಿಮಾಡಿಕೊಂಡ ಪಕ್ಷಗಳನ್ನು ಈಗ ಮೂವರಿಗಾಗಿ ಒಂದು ಎಂಬ ಕುರ್ಚಿಯಷ್ಟೇ ಕಟ್ಟಿಹಾಕಿದೆ; ದೇಶಸೇವೆಯೂ ಅಲ್ಲ; ಸಿದ್ಧಾಂತವೂ ಅಲ್ಲ; ಪರಸ್ಪರ ಪ್ರೀತಿಯೂ ಅಲ್ಲ. ಅಪನಂಬಿಕೆಯನ್ನೇ ಬಳಸಿ ಜೋಡಿಸಿಕೊಂಡ ಈ ಮೂರು ದತ್ತಾತ್ರೇಯ ತಲೆಗಳು ಎಷ್ಟುಕಾಲ ಬಾಳುವವು ಎಂಬುದು ಕಾಲನಿರ್ಣಯ.

Update: 2024-06-13 04:17 GMT

ಚುನಾವಣೆಯ ನೀತಿಸಂಹಿತೆ ಚಾಲ್ತಿಯಲ್ಲಿದ್ದಾಗ ನಡೆದ ಒಂದು ಬೆಳವಣಿಗೆಯನ್ನು ಅನೇಕರು ಗಮನಿಸಿರಬಹುದು. ಕೋವಿಡ್ ವ್ಯಾಕ್ಸಿನ್‌ನ ಸರ್ಟಿಫಿಕೇಟಿನಲ್ಲಿದ್ದ ಮೋದಿಯ ಭಾವಚಿತ್ರವನ್ನು ಅಳಿಸಿಹಾಕಲಾಯಿತು. ಆದರೆ ಈ ಅಳಿಸುವಿಕೆ ನೀತಿಸಂಹಿತೆಯ ಭಾಗವಾಗಿರಲಿಲ್ಲ; ಅಷ್ಟೇ ಆಗಿದ್ದರೆ ನಮ್ಮ ದಯಾಮಯ ಚುನಾವಣಾ ಆಯೋಗವು ಅದಕ್ಕೊಂದು ನೆಪ ಹೇಳಿ ಪಾರಾಗುತ್ತಿತ್ತು. ಬದಲಾಗಿ ವಿಶ್ವದೆಲ್ಲೆಡೆ ಭಾರತದ ಈ ಸಂಜೀವಿನಿ ವ್ಯಾಕ್ಸಿನ್ ಕುರಿತು ಆಕ್ಷೇಪಗಳೆದ್ದು ಅದರ ಕೆಸರು ಮೋದಿಯನ್ನು ವ್ಯಾಪಿಸಿದಾಗ ಅವರ ಭಾವಚಿತ್ರವನ್ನು ಅಳಿಸುವುದು ಅನಿವಾರ್ಯವಾಯಿತು. ಇದಕ್ಕೆ ಮೊದಲೊಮ್ಮೆ ಉತ್ತರಪ್ರದೇಶ, ಪಂಜಾಬ್, ಮಣಿಪುರ ಮುಂತಾದ 5 ರಾಜ್ಯಗಳ ಚುನಾವಣಾ ಸಮಯದಲ್ಲಿ ಅಲ್ಲಿ ಮಾತ್ರ ಮೋದಿ ಭಾವಚಿತ್ರಗಳನ್ನು ಅಳಿಸಲಾಗಿತ್ತು; ಉಳಿದೆಡೆ ಉಳಿಸಲಾಗಿತ್ತು. ಇಷ್ಟೇ ಅಲ್ಲ, ಎಲ್ಲಾ ಪೆಟ್ರೋಲ್ ಬಂಕುಗಳಲ್ಲಿ ಮೋದಿಯ ಭಾವಚಿತ್ರವನ್ನು ಹಾಕಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಇದೇ ರೀತಿ ‘ಮೋದಿ ಪರಿವಾರ’ವೆಂಬ ಘೋಷಣೆಯೊಂದಿಗೆ ಅವರ ಸದ್ಭಕ್ತರೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ತಮ್ಮ ಸ್ಟೇಟಸನ್ನು ಆ ಹೆಸರಿನಲ್ಲೇ ಪ್ರಕಟಿಸಿದ್ದರು. ‘ಭಾಜಪ’ ಎಂಬುದು ಮರೆಯಾಗಿ ‘ಮೋದಿ’ ಎಂಬ ಎರಡಕ್ಷರವಷ್ಟೇ ಉಳಿದಿತ್ತು.

ಕೆಲವನ್ನು ಪಾಲಿಸದೆ ಗತ್ಯಂತರವಿಲ್ಲದಾದ್ದರಿಂದ ಮೋದಿ ತನ್ನ ‘ಮೋದಿ ಪರಿವಾರ’ ಎಂಬ ನಾಮಫಲಕವನ್ನು ಕಿತ್ತುಹಾಕುವಂತೆ ತಮ್ಮ ಪರಿವಾರಕ್ಕೆ ಸೂಚನೆ ಕೊಟ್ಟರು. ಇಷ್ಟೇ ಅಲ್ಲ, ಈಗ ಮೋದಿ ಇದೇ ಮೊದಲಬಾರಿಗೆ ತನ್ನ ಜೊತೆಗೆ ತನ್ನ ಎನ್‌ಡಿಎ ಗುಂಪಿನ ಸಮೂಹಚಿತ್ರವನ್ನು ಅಧಿಕೃತವಾಗಿ ಪ್ರಕಟಿಸುತ್ತಿದ್ದಾರೆ.

ಹಳೆಯ ಮೋದಿ ಬದಲಾಗುತ್ತಾರೆಯೇ? ಹೊಸ ಮೋದಿ ಸೃಷ್ಟಿಯಾಗಲಿದ್ದಾರೆಯೇ? ಈ ಪ್ರಶ್ನೆ ಈಗ ಮತ್ತೆ ಸುದ್ದಿಯಲ್ಲಿದೆ. ರಾಜಕಾರಣಿಗಳು ನಿತ್ಯ ಬದಲಾಗುವವರು ಎಂಬ ತರ್ಕ ರೂಢಿಯಲ್ಲಿದೆ. ಅವರಿಗೆ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ, ಅವರಿಗಿರುವುದು ಶಾಶ್ವತ ಹಿತಾಸಕ್ತಿ ಮಾತ್ರ ಎಂಬ ಮಾತು ಸತ್ಯ. ರಾಜಕಾರಣವೇ ರೂಪಿಸಿದ ವ್ಯಕ್ತಿಗಳಿಗೆ ಇದು ಅನ್ವಯಿಸಬಹುದು. ಆದರೆ ಮೋದಿ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಮೂಲಕ ಬಂದವರು. ಅವರಿಗೆ ಸಂಘಟನೆಯ ಸಿದ್ಧಾಂತಗಳು, ಆದರ್ಶಗಳು ಅವು ಸರಿಯಿರಲಿ, ತಪ್ಪಿರಲಿ, ಕೈಹಿಡಿದು ನಡೆಸುವ ದೀಪಗಳಾಗಬೇಕು. ನಮ್ಮ ಹಳ್ಳಿಗಳಲ್ಲಿ ಒಂದು ನಂಬಿಕೆಯಿದೆ: ನೀರೊಳ್ಳೆ ಎಂಬ ಸಾಮಾನ್ಯ ಮತ್ತು ನಿರಪಾಯ ಹಾವು ನೀರಿನಿಂದ ನೆಲಕ್ಕೆ ನೆಗೆಯಿತೆಂದರೆ ಅದು (ನಮ್ಮ ಕಡೆ ‘ಕಂದಡಿ ಹಾವು’ ಎಂಬ ಜಾತಿಯ) ವಿಷಪೂರಿತ ಹಾವಾಗುತ್ತದೆ. ಇದು ನಂಬಿಕೆಯಷ್ಟೇ ಇರಲಿಕ್ಕೂ ಸಾಕು. ಆದರೆ ಭಾರತದ ರಾಜಕಾರಣದಲ್ಲಿ ಹೀಗೆ ಸಂಘಟನೆಯ ಮೂಲಕ ಆದರ್ಶಗಳನ್ನು ಅವೆಷ್ಟೇ ಮೂಲಭೂತವಾಗಿರಲಿ, ಬಿಟ್ಟು ಬೆಳೆದ ಮತ್ತು ರಾಷ್ಟ್ರ, ಸಮಾಜ, ಧರ್ಮ ಹೀಗೆ ಮಾತುಗಳ ಜ್ಯೋತಿರ್ಲಿಂಗವನ್ನು ನೆಟ್ಟು ಆನಂತರ ಅವನ್ನೆಸೆದ ರಾಜಕಾರಣಿಗಳೇ ಹೆಚ್ಚು.

ಮೋದಿ ಮೊದಲ ಒಂದು ದಶಕಕ್ಕೂ ಹೆಚ್ಚು ಗುಜರಾತಿನ ರಾಜಕಾರಣದಲ್ಲಿ ನೆನಪಿಡುವ ಕೆಡುಕನ್ನು ಮಾಡಿದವರು. ಮತೀಯ ಮಸಿಯನ್ನು ಹಚ್ಚಿ ಗುಜರಾತನ್ನು ಬೆಳ್ಳಗಾಗಿಸಿದವರು. ಸಾಮರಸ್ಯದಲ್ಲಿ ಬದುಕುತ್ತಿದ್ದ ಜನರನ್ನು, ಸಮಾಜಗಳನ್ನು ಆಗ ಪ್ರಚಲಿತವಿದ್ದ ‘ರಾಜಧರ್ಮ’ ವೆಂಬ ಒಪ್ಪಿತ ನಂಬಿಕೆಯನ್ನು ಅಲಕ್ಷಿಸಿ ತಮ್ಮ ಹಿತಾಸಕ್ತಿಗಾಗಿ ಒಡೆದವರು. ಆಗ ಅವರಿಗೆ ಅವರ ಪಕ್ಷದ, ಸಂಘಟನೆಗಳ, ಬೆಂಬಲವಿತ್ತು. ಮೋದಿ ಹೊಸ ಮಂತ್ರವನ್ನು ಜಪಿಸುತ್ತಾರೆ ಮತ್ತು ಈ ಮಂತ್ರ ತಮ್ಮನ್ನು ದಿಲ್ಲಿಯ ಸಿಂಹಾಸನಕ್ಕೆ ಒಯ್ಯುತ್ತದೆಯೆಂಬ ವಾತಾವರಣವನ್ನು ಅವರು ಸೃಷ್ಟಿಸಿದರು. 2014ರಲ್ಲಿ ಇದು ನಿಜವಾಯಿತು. ಇದಕ್ಕೆ 1980ರ ದಶಕದಿಂದಲೂ ದುಡಿದವರಿದ್ದರೂ ಅದರ ಶಾಭಾಷ್‌ಗಿರಿಯ ದೃಢೀಕರಣಪತ್ರ ಮೋದಿಗೇ ದಕ್ಕಿತು.

ಈ ರೀತಿಯ ರಾಜಕಾರಣ ಗುಜರಾತಿಗಷ್ಟೇ ಹೊರತು ದೇಶವ್ಯಾಪಕವಾಗಲಾರದು ಎಂಬ ನಂಬಿಕೆಯನ್ನು ಮೋದಿ ಸುಳ್ಳು ಮಾಡಿದರು. ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸುವ ಮೊದಲು ಅದಕ್ಕೆ ನಮಿಸಿದ ಮೋದಿ ಅನಂತರ ಅದನ್ನು ತನ್ನ ದರ್ಪದ ರಾಜಕಾರಣದ ಮೂಲಕ ತುಳಿಯುತ್ತಲೇ ಬಂದರು. ಸಂವಿಧಾನವೆಂಬುದು ತನ್ನ ಅಗತ್ಯಗಳನ್ನು ಪೂರೈಸುವ ಒಂದು ಸಾಧನವೇ ಹೊರತು ತಾನು ಗೌರವದಿಂದ ಕಾಣಬೇಕಾದ ಒಂದು ಮಹತ್ವದ ಗತಿಯೆಂಬುದನ್ನು ಪ್ರಜ್ಞಾಪೂರ್ವಕವಾಗಿ ಮರೆತರು. ನೋಟು ಅಮಾನ್ಯೀಕರಣದಂತಹ ಮಹತ್ವದ ನಿರ್ಧಾರವನ್ನು ಏಕಪಕ್ಷೀಯವಾಗಿ ಕೈಗೊಂಡರು. ದೇಶದ ರಾಜಧಾನಿಯನ್ನು ದಿಲ್ಲಿಯಿಂದ ದೇವಗಿರಿಗೆ ವರ್ಗಾಯಿಸಲಿಲ್ಲವೆಂಬುದೇ ಅವರ ಸಮಾಧಾನದ ನಡತೆ. ಅಮಿತ್ ಶಾ ಎಂಬ ಅವರ ನಿಷ್ಠನನ್ನು ರಾಷ್ಟ್ರೀಯ ರಾಜಕೀಯದಲ್ಲಿ ತೊಡಗಿಸಿಕೊಂಡು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಸರಿಯಿರಬಹುದೆಂದು ಕಾಣುವ ನಿರ್ಧಾರಗಳನ್ನು ಕೈಗೊಂಡರು. (ಇವನ್ನು ಮುಂದೆ ನ್ಯಾಯಾಲಯಗಳು ಸಮರ್ಥಿಸಿದವು.) ಅಯೋಧ್ಯೆಯ ವಿವಾದವೂ ಅವರ ಅನುಕೂಲಕ್ಕೆ ತಕ್ಕಂತೆ ಪರಿಹಾರವಾಯಿತು. ಆದರೆ ಈ ಕ್ರಮಗಳನ್ನು ಕೈಗೊಳ್ಳುವಾಗ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಅವರಿಗೆ ಅನ್ನಿಸಲಿಲ್ಲ. ಅಧಿಕಾರ ಬೇರೆ; ಆಡಳಿತ ಬೇರೆ ಎಂಬ ನೀತಿ ಅವರ ರಾಜಕೀಯ ವಿಜ್ಞಾನದಲ್ಲಿರಲೇ ಇಲ್ಲ. ಆದರೂ ಎನ್‌ಡಿಎ ಎಂಬ ಒಕ್ಕೂಟ ವ್ಯವಸ್ಥೆಯನ್ನು ತೋರಿಕೆಗಾದರೂ ಪ್ರದರ್ಶಿಸದೆ ಅವರಿಗೆ ದಾರಿಯಿರಲಿಲ್ಲ. ಆದ್ದರಿಂದ ಇವಕ್ಕೆಲ್ಲ ಎನ್‌ಡಿಎ ಎಂಬ ಹಣೆಪಟ್ಟಿ ಲಭಿಸಿತು. ಬಿಜೆಪಿ ಇದರ ಲಾಭಪಡೆಯಿತು.

ಈ ಹೆಜ್ಜೆ ಮೋದಿಗೆ ಅನುಕೂಲವಾದದ್ದು ವಿಪರ್ಯಾಸ. 2019ರಲ್ಲಿ ಮತ್ತಷ್ಟು ಬಹುಮತದಿಂದ ಚುನಾಯಿತರಾದರು. ಈ ಬಾರಿ ತನ್ನ ಪಕ್ಷವೇ ಬಹುಮತ ಗಳಿಸಿದ್ದರಿಂದ ಮೋದಿಗೆ ತನ್ನ ಅಧಿಕಾರವನ್ನು ಏಕಮುಖಿಯಾಗಿ ಚಲಾಯಿಸಲು ಮತ್ತಷ್ಟು ಅನುಕೂಲವಾಯಿತು. ಈಗ ಎನ್‌ಡಿಎಯ ಹಂಗಿರಲಿಲ್ಲ. ಅವರ ಪಕ್ಷದೊಳಗೆ ಅವರನ್ನು ಎದುರಿಸುವ ನಾಯಕರಿರಲಿಲ್ಲ. ಇದ್ದರೂ ಅವರಿಗೆ ತಾವೆಲ್ಲಿ ಈ ವಿವಾದದ ಬಲಿಪಶುಗಳಾಗುತ್ತೇವೋ ಎಂಬ ಭಯ, ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇವನ್ನೆಲ್ಲ ‘ಹಿಂದೂರಾಷ್ಟ್ರ’ದ ಕಾರ್ಯಸೂಚಿಯಾಗಿಯೇ ಕಂಡಿತು. ಇದರ ಪರಿಣಾಮವೇ ಏಕಪಕ್ಷೀಯವಾಗಿ ಕೋವಿಡ್ ಲಾಕ್‌ಡೌನ್‌ನಂತಹ ಕ್ರಮಗಳು. ರಾಜಧರ್ಮವನ್ನು ಬಹಳ ಹಿಂದೆಯೇ ಮರೆತ ಮೋದಿ ಅಯೋಧ್ಯೆಯ ರಾಮಮಂದಿರವನ್ನು ಭಾಜಪದ ಚುನಾವಣಾ ಕಚೇರಿಯಾಗಿಸಿ, ಧರ್ಮವನ್ನು ಮತಪತ್ರವಾಗಿಸಿ ತಾನು ಏನಾಗಬಹುದಿತ್ತೋ ಅದನ್ನು ಮರೆತು ‘ಸ್ವಯಂಭೂ ಬ್ರಹ್ಮ’ನಾಗುವುದಕ್ಕೆ ಸಿದ್ಧರಾದರು.

2024ರ ಹೊತ್ತಿಗೆ ಅವರಿಗೆ ಸಂಸತ್ತಿನಲ್ಲಿ ತನಗೆ ತಲೆಬಾಗುವ 400 ಸಂಸದರ ಕನಸು ಕಟ್ಟುತ್ತಿತ್ತು. ಇದನ್ನು ಅವರು ತನ್ನ ಚುನಾವಣಾ ರ್ಯಾಲಿಯಲ್ಲಿ ಸ್ಪಷ್ಟವಾಗಿ ಘೋಷಿಸತೊಡಗಿದರು. ಜೊತೆಗೇ ರಾಜಸತ್ತೆಯ ಹಿಂದೂರಾಷ್ಟ್ರದ ನಿರ್ಮಾಣಕ್ಕೆ ಅಡಿಗಲ್ಲು ಹಾಕತೊಡಗಿದರು. ಅಮಿತ್ ಶಾ ಜೊತೆ ಸೇರಿಕೊಂಡು ಅಲ್ಪಸಂಖ್ಯಾತರ ಕುರಿತು ಪ್ರತ್ಯಕ್ಷ, ಪರೋಕ್ಷ ಟೀಕೆಗಳನ್ನು ಮಾಡತೊಡಗಿದರು. ಹಿಂದೂಯೇತರರ ವಿಶ್ವಾಸ, ಗೌರವವನ್ನು ಗಳಿಸುವ ಮಾರ್ಗೋಪಾಯದ ಬದಲು ಅವರನ್ನು ಭಯಾವಹರಾಗಿಸಿದರು. 2024ರ ಚುನಾವಣೆಯ ಫಲಿತಾಂಶವನ್ನು ಯೋಚಿಸುವ ಬದಲಿಗೆ ಅಶಕ್ಯವಾದ 2047ರ ತನ್ನ ಅಧಿಕಾರದ ಕನಸನ್ನು ಕಂಡರು.

ಮೋದಿಯ ಮನದ ಮಾತು ನಾಲಿಗೆಯಲ್ಲಿ ಬಂದು ನಲಿದಾಗ ಜನ ಬೇರೆ ಯೋಚನೆಯನ್ನು ಮಾಡಿದ್ದರು. ಹಿಂದೂ ಸಮಾಜದ ಒಂದು ದೊಡ್ಡ ವರ್ಗವೇ ಮೋದಿಯ ಕಿಂದರಿಗೆ ತಲೆದೂಗುತ್ತಿದ್ದಾಗ ಇನ್ನೊಂದು ವರ್ಗ ಮೋದಿಯ ರೀತಿನೀತಿಗೆ ಸವಾಲನ್ನೊಡ್ಡಿತು. ಫಲಿತಾಂಶ ಬಂದಾಗ ಮೋದಿಗೆ ತನ್ನ ಪಕ್ಷಕ್ಕೆ ಬಹುಮತ ಬಂದಿಲ್ಲವೆಂಬುದು ಅರಿವಾಯಿತು. 400ರ ಬದಲು 240 ಬಂದಿತ್ತು. ಇತರ ಕೆಲವು ಕಿಚಡಿ ಪಕ್ಷಗಳು ಮತ್ತು ಮುಖ್ಯವಾಗಿ ಟಿಡಿಪಿ ಮತ್ತು ಜೆಡಿಯು ಸೇರಿಕೊಂಡು ಸರಕಾರ ರಚಿಸುವುದು ಅವರಿಗೆ ಕಷ್ಟವಾಗಲಿಲ್ಲ.

ಈ ಬಾರಿ ಮೋದಿ ಸರಕಾರವಿಲ್ಲ. ಬಿಜೆಪಿ ಸರಕಾರವೂ ಇಲ್ಲ. ಬದಲಾಗಿ ಟಿಡಿಪಿ (ನಾಯ್ಡು) ಮತ್ತು ಜೆಡಿಯು (ನಿತೀಶ್ ಕುಮಾರ್) ‘ಕೃಪಾಪೋಷಿತ’- ಇದು ತೀರ ಅತಿಯಾಯಿತೆಂದರೆ- ‘ಬೆಂಬಲಿತ’ ಎನ್‌ಡಿಎ ಮರಳಿ ಸ್ಥಾಪಿತವಾಯಿತು. ಇದರಿಂದಾಗಿ ‘ನಾನೇ’ ಎಂಬ ಮೋದಿವಾಣಿ ‘ನಾವೇ’ ಎಂದು ಹೇಳಬೇಕಾದ್ದು ಅನಿವಾರ್ಯವಾಯಿತು. ಇದು ನಿಜಕ್ಕೂ ತ್ರಿಮೂರ್ತಿ ಸರಕಾರ. ಸದ್ಯಕ್ಕೆ ಮೋದಿ ತನ್ನಿಷ್ಟ ಬಂದಂತೆ ಅವರನ್ನು ಒಪ್ಪಿಸಿದಂತೆ ಕಂಡರೂ ಅವರಿಬ್ಬರೂ ಮೋದಿಯಷ್ಟೇ ವಯಸ್ಸಾದ ಮತ್ತು ಮೋದಿಯ ಉಡುಗೆತೊಡಿಗೆಗಿಂತಲೂ ಹೆಚ್ಚು ಬಾರಿ ತಮ್ಮ ನಿಷ್ಠೆಯನ್ನು ಬದಲಾಯಿಸಿದವರು. ‘ಮೋದಿ 3’ ಎಂದರೆ ನರೇಂದ್ರಮೋದಿ-ನಾಯ್ಡು-ನಿತೀಶ್‌ಕುಮಾರ್ ಎಂದೇ ಓದಬೇಕು. ಈಗ ಪರಸ್ಪರ ಕೆಟ್ಟದ್ದನ್ನು ಮಾತನಾಡುವುದಿಲ್ಲ, ಪರಸ್ಪರರ ಬಗ್ಗೆ ಕೆಟ್ಟದ್ದನ್ನು ಕೇಳುವುದಿಲ್ಲ ಮತ್ತು ಪರಸ್ಪರರ ತಪ್ಪನ್ನು ನೋಡುವುದಿಲ್ಲ ಎಂಬ ಮೂವರು ಅಧಿಕಾರವನ್ನು ಹಂಚಿಕೊಂಡಂತಹ ವ್ಯವಸ್ಥೆಯಿದೆ.

ಈ ಪರಿವರ್ತನೆ ಮೇಲ್ನೋಟಕ್ಕೆ ಗೋಚರಿಸದಂತೆ ಎಲ್ಲ ಜಾಗ್ರತೆಯನ್ನೂ ಮೋದಿ ತೆಗೆದುಕೊಂಡರು. ತಮ್ಮ ಪಕ್ಷದ ಸಂಸದರ ಮೇಲೆ ಹಿಂದಿನಂತೆಯೇ ಸವಾರಿಯ ಪೋಸ್ ಹಾಕಿದರು. ತಮ್ಮ ಪಕ್ಷಕ್ಕೆ ಬಂದಷ್ಟು ಸ್ಥಾನಗಳು ಪ್ರತಿಪಕ್ಷಗಳಿಗೆ ಒಟ್ಟಾಗಿ ಬರಲಿಲ್ಲವೆಂದು ಟೀಕಿಸಿದರು. ಪ್ರತಿಪಕ್ಷಗಳಿಗೆ ಕಳೆದ ಬಾರಿಗಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚು ಸ್ಥಾನಗಳು ಬಂದಿವೆ; ಮೋದಿಯ ‘ಕಾಂಗ್ರೆಸ್‌ಮುಕ್ತ’ ಭಾರತದ ಕನಸು ಒಡೆದು ಅದೀಗ ಅಧಿಕೃತ ಪ್ರತಿಪಕ್ಷದ ಸ್ಥಾನವನ್ನು ಪಡೆಯಲು ಅರ್ಹವಾಗಿದೆ; ಅಚ್ಚರಿಯೆಂದರೆ ಕಾಂಗ್ರೆಸ್ ಆಧುನಿಕ ಇಚ್ಛಾಮರಣಿ. ಈಗಲೂ ಅದಕ್ಕೆ ಹೊಸ ಜೀವಕೋಶಗಳು ಸೃಷ್ಟಿಯಾಗುತ್ತಿವೆ. ಆದರೆ ಭಾಜಪವು ಈ ಒಂದು ದಶಕದಲ್ಲೇ 63 ಸ್ಥಾನಗಳಷ್ಟು ನಷ್ಟ ಅನುಭವಿಸಿದೆ. ಈ ಅಧಿಕಾರವು ಕೃಪಾಪೋಷಿತವೇ ಹೊರತು ಸ್ವಧರ್ಮದ್ದಲ್ಲ. ಮೋದಿ ಇದನ್ನು ಮರೆತೋ, ತನ್ನ ಭಕ್ತರು ಇವನ್ನೆಲ್ಲ ಗಮನಿಸಲಾರರು ಎಂಬ ವಿಶ್ವಾಸದಿಂದಲೋ ಈ ಖೋತಾವನ್ನು ಅಲಕ್ಷಿಸಿಯೋ ಅಂತೂ ರಾಜಕೀಯದ ಪಲ್ಲಟಗಳನ್ನು ಸುಖಾಂತವಾಗಿಸಿದಂತೆ ನಟಿಸಿದರು. ಅವಕಾಶಕ್ಕಾಗಿ ಕಾಯುತ್ತಿದ್ದ ಭಾಜಪ ಸಂಸದರು ಇದನ್ನು ಒಪ್ಪಿಕೊಂಡರು. ಉಳಿದ ಹಿರಿ-ಕಿರಿ ಕಲಾವಿದರು ತಮ್ಮ ಕಾಲಕ್ಕೆ ಕಾಯುತ್ತಿದ್ದಾರೆ.

ಆದರೆ ಇವನ್ನೆಲ್ಲ ಗಮನಿಸುತ್ತಿರುವ ಹಿಮ್ಮೇಳದ ಒಳಕೋಣೆಯ ಹಿರಿಯಣ್ಣ ರಾಷ್ಟ್ರೀಯ ಸ್ವಯಂಸೇವಕ ಸಂಘವು ಈ ಶೈಥಿಲ್ಯವನ್ನು ದೇಶ-ಸಮಾಜೋನ್ನತಿಗಲ್ಲದಿದ್ದರೂ ತನ್ನ ಉಳಿವಿಗಾಗಿ ಗಮನಿಸಿದಂತಿದೆ. ಬಹಳಕಾಲ ತಪಸ್ಸಿನಲ್ಲಿದ್ದ ಭಾಗವತರು ಕಂಠತ್ರಾಣರಾಗಿದ್ದಾರೆ. ಮೋದಿಗೇ ನಾಟುವಂತೆ ಚುನಾವಣಾ ಪ್ರಚಾರದ ಗುಣಮಟ್ಟವನ್ನು ಟೀಕಿಸಿದ್ದಾರೆ; ಮಣಪುರದ ಬಗ್ಗೆ ತೀರ ತಡವಾಗಿಯಾದರೂ ಆತಂಕ ವ್ಯಕ್ತಪಡಿಸಿದ್ದಾರೆ. ಇವು ಸಂಘಟನೆ, ಪಕ್ಷಕ್ಕಿಂತ ಹಿರಿಯನಾಗಬಯಸುವ ಮೋದಿಗೆ ಕರೆಗಂಟೆಯಾಗಲಿದೆಯೇ ಎಂಬುದನ್ನು ನಿರಕ್ಷಿಸಬೇಕು. ಏಕೆಂದರೆ ಎದ್ದುನಿಲ್ಲಲು ಸಾಧ್ಯವಾಗದ ನಿತ್ರಾಣಿ ಹಿರಿಯನೊಬ್ಬ ಹೇಳಿದಾಗ ಮನೆಯ ವ್ಯವಹಾರಿ ಕಿರಿಯ ಅದನ್ನು ಒಪ್ಪಬೇಕಾದರೆ ಆತನಿಗೂ ಹಿರಿಯರನ್ನು ಗೌರವಿಸುವ ಸಂಸ್ಕಾರ ಬೇಕು. ರಾಮಾಯಣದ ರಾಜನೀತಿ ಮರೆತುಹೋಗುವಷ್ಟು ಹಳತಾಗಿದೆ. ಮಹಾಭಾರತದ ಅಧಿಕಾರವಾಂಛೆ ಮುಂದುವರಿದಿದೆ. ಔರಂಗಜೇಬನು ದಾರಾಶಿಕೋವನ್ನು ಮರ್ದಿಸಿದ ನೀತಿ ಮೊಗಲರಿಗಷ್ಟೇ ಅಲ್ಲ; ಹಿಂದೂರಾಷ್ಟ್ರಕ್ಕೂ ಇದೆಯೆಂಬುದನ್ನು ಮಾರ್ಗದರ್ಶಕ ಮಂಡಲಿ ರಚಿಸಿ ಹಿರಿಯರಿಗೆ ಕಮಂಡಲುವನ್ನು ನೀಡುವಾಗಲೇ ಗೊತ್ತಾಗಿದೆ.

ಆದ್ದರಿಂದ ಈಗ ಸದ್ಯ ರಾಜಕೀಯ ಹವಾಮಾನ ಇಲಾಖೆಯು ಯಾವ ಹಳದಿ, ಕೆಂಪು ಎಚ್ಚರಿಕೆಯನ್ನೂ ನೀಡಿಲ್ಲವಾದರೂ ಒಂದಷ್ಟು ಸಮಯದಲ್ಲಿ ಅಧಿಕಾರದಾಹದ ಘಾಟು ದ್ವೇಷಪೂರಿತ ಮತ್ತು ಅವಕಾಶವಾದಿ ಮನಸ್ಸುಗಳನ್ನು ಬೆಸೆಯಲಾರದೆ ವಿಸ್ತರಿಸುವುದು ಅನಿವಾರ್ಯ. ಈಗಷ್ಟೇ ಬೃಹತ್ ಸಚಿವಸಂಪುಟ ರಚನೆಯಾಗಿದೆ. ಇದರಲ್ಲಿ ಅನೇಕರು ಇನ್ನಷ್ಟೇ ಯಾವುದಾದರೂ ಒಂದು ಮನೆಗೆ ಆಯ್ಕೆಯಾಗಬೇಕಾಗಿದೆ. ಆದ್ದರಿಂದ ಸದ್ಯ ಸಚಿವರು ಮತ್ತು ಸಂಸದರ ಸಂಖ್ಯೆಯು ಸಂಸತ್ತುಗಳ ಸದಸ್ಯ ಸಂಖ್ಯೆಗಿಂತ ಹೆಚ್ಚಿದೆ. ಇವನ್ನು ಸರಿಪಡಿಸುವ ಸವಾಲೂ ಇದೆ. ವಿಶ್ವಾಸಮತ, ಲೋಕಸಭೆಯ ಸಭಾಪತಿ ಹುದ್ದೆ, ಮೋದಿಯ ಅತ್ತಿತ್ತ ಇರುವ ಎರಡು ಮುಖಗಳಿಗೆ ವಿಶೇಷ ಸ್ಥಾನಮಾನ, ಇತ್ಯಾದಿಗಳು ಬಾಧಿಸದೇ ಇರವು. ಒಂದೆರಡು ವರುಷಗಳ ಹಿಂದೆಯಷ್ಟೇ ಪರಸ್ಪರ ಪ್ರವೇಶಿಸದಂತೆ ನಿರ್ಬಂಧಕಾಜ್ಞೆಯನ್ನು ಜಾರಿಮಾಡಿಕೊಂಡ ಪಕ್ಷಗಳನ್ನು ಈಗ ಮೂವರಿಗಾಗಿ ಒಂದು ಎಂಬ ಕುರ್ಚಿಯಷ್ಟೇ ಕಟ್ಟಿಹಾಕಿದೆ; ದೇಶಸೇವೆಯೂ ಅಲ್ಲ; ಸಿದ್ಧಾಂತವೂ ಅಲ್ಲ; ಪರಸ್ಪರ ಪ್ರೀತಿಯೂ ಅಲ್ಲ. ಅಪನಂಬಿಕೆಯನ್ನೇ ಬಳಸಿ ಜೋಡಿಸಿಕೊಂಡ ಈ ಮೂರು ದತ್ತಾತ್ರೇಯ ತಲೆಗಳು ಎಷ್ಟುಕಾಲ ಬಾಳುವವು ಎಂಬುದು ಕಾಲನಿರ್ಣಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News