ಭಾರತದ ಪ್ರತಿಮಾ ಲೋಕ
ಸ್ವಾಮಿ ವಿವೇಕಾನಂದ, ಸರ್ದಾರ್ ವಲ್ಲಭಬಾಯಿ ಪಟೇಲ್ ಮುಂತಾದವರ ಪ್ರತಿಮೆಗಳು ನಿರ್ಮಾಣವಾಗಿವೆಯಾದರೂ ಅವರ ಬದುಕಿನ ಸಂದೇಶಗಳು ಮರೆತುಹೋಗಿವೆ; ಇಲ್ಲವೇ ತಿರುಚಿಕೊಂಡಿವೆ. ಈ ಅರ್ಥದಲ್ಲಿ ಮಹಾರಾಷ್ಟ್ರದಲ್ಲಿ ಕಳೆದ ವರ್ಷ ನಿರ್ಮಾಣವಾಗಿ ಪ್ರಧಾನಿಯಿಂದ ಉದ್ಘಾಟನಾನುಗ್ರಹಿತವಾದ ಶಿವಾಜಿ ವಿಗ್ರಹವು ಮೊನ್ನೆಯಷ್ಟೇ ತಾನೇ ಬಿದ್ದು ಹೋದದ್ದೇ ಒಂದು ಸಂವೇದನಾಶೀಲ ಮಾರ್ಮಿಕ ಪ್ರತಿಮೆ.
ಹಿಂದೂ ರಾಷ್ಟ್ರದ ಸಂಕಲ್ಪ ಇಲ್ಲವೇ ಕಲ್ಪನೆಯೊಂದಿಗೆ ಬಲಪಂಥೀಯ ಹಿಂದೂ ರಾಜಕೀಯ ನಾಯಕರು- (ಹಿಂದೂ ರಾಜಕೀಯ ಏಕೆಂದರೆ ಈ ದೇಶದಲ್ಲಿ ಹಿಂದೂ, ಹಿಂದುತ್ವ ಮತ್ತು ಹಿಂದೂ ರಾಜಕೀಯ ಇವು ಬೇರೆ ಬೇರೆ; ಮತೀಯ ರಾಜಕಾರಣದ ಕುಟಿಲತನವು ಎಲ್ಲ ಮತ-ಧರ್ಮಗಳಲ್ಲಿಯೂ ತನ್ನ ವ್ಯಾಪ್ತಿಯನ್ನು ಬೇರೆಬೇರೆ ರೀತಿಯಲ್ಲಿ ಹಿಗ್ಗಿಸಿಕೊಳ್ಳುತ್ತದೆ.) ಎಲ್ಲೆಡೆ ಮತ-ಧರ್ಮಗಳ ಸಂಕೇತಗಳಾಗಿ ಮೂರ್ತಿ ನಿರ್ಮಾಣದಲ್ಲಿ ತೊಡಗಿದ್ದಾರೆ. ಇವರಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಎಂಬ ಭೇದವಿಲ್ಲ- ಸದಾ ಹಿಂದೂರಾಷ್ಟ್ರದ ಕಲ್ಪನೆಗಳನ್ನು ಇತರರು ದಂಗುಬಡಿಯುುವಂತೆ ಛೂ ಬಿಟ್ಟಿದ್ದಾರೆ. ಒಬ್ಬೊಬ್ಬ ನಾಯಕರೂ ಬಳಸುವ ಭಾಷೆ, ಹೇಳುವ ರೀತಿ (ಮಾಮೂಲಾಗಿ ‘ರೀತಿ’ಯೊಂದಿಗೆ ಬರುವ ಯಮಳ/ಅವಳಿ ಪದವಾದ ‘ನೀತಿ’ ಎಂಬ ಪದಪ್ರಯೋಗ ಸದಾ ವಿಲೋಮಾನುಪಾತದಲ್ಲಿರುತ್ತದೆ. ಕವಿ ‘ಆಪತ್ತೆಸಗಿದಾಗಲೆ ಕೊಲುವುದಿದು ವಸುಮತೀಶರ ನೀತಿ’ ಎನ್ನಲಿಲ್ಲವೇ ಹಾಗೆ!
ಮೂರ್ತಿಯೆಂದರೆ ನಮ್ಮ ಕಣ್ಣಿಗೆ ಕಾಣುವ ಕೆತ್ತನೆಯ ಶಿಲ್ಪ ಮಾತ್ರವಲ್ಲ, ಚಿತ್ರಿಸಿ, ಮುದ್ರಿಸಿ ಹಂಚುವ ಪ್ರತಿಕೃತಿಗಳು ಮಾತ್ರವಲ್ಲ, ವ್ಯಕ್ತಿತ್ವದ ಹೆಸರಿನಲ್ಲಿ ‘ಆದರ್ಶ’ವನ್ನು ತಮಗೆ ಬೇಕಾದ ಹಾಗೆ ಒಗ್ಗಿಸಿ, ಬಗ್ಗಿಸಿ, ಜನರಿಗೆ-ಅರ್ಥಾತ್ ಸಮಾಜಕ್ಕೆ ಉಣಬಡಿಸುವ ಪ್ರಕ್ರಿಯೆಯೂ ಸೇರಿದೆ. ಮೂರ್ತವಾದ ನಿರ್ಮಾಣದ ಹಿಂದೆ ಅಮೂರ್ತವಾದ ಕಲ್ಪನೆಯ ಕಡೆಯುವಿಕೆ ಬೇಕಷ್ಟಿದೆ. ವ್ಯಕ್ತಿತ್ವಕ್ಕೆ ಶ್ರೀರಾಮ, ಮಹಾಭಾರತದಲ್ಲಿ ಪಂಪ ವಿವರಿಸುವ ನನ್ನಿ, ಛಲ, ಅತ್ಯುನ್ನತಿ ಮುಂತಾದ ಆದರ್ಶಗಳಿಗೆ ಆಕಾರಕೊಟ್ಟು ಸಾಕಾರಗೊಳಿಸುವುದೂ ಇಂತಹ ನಿರ್ಮಾಣವೇ. ಆಧುನಿಕ ಯುಗದಲ್ಲಿ ಹಿಟ್ಲರ್ ಕೂಡಾ ಇಂತಹ ಒಂದು ಪ್ರತಿಮೆಯೇ. ಆತನೊಂದಿಗೆ ಸ್ಪರ್ಧಿಸುವ ನೇತಾರರನೇಕರು ನಮ್ಮ ಕಣ್ಣಮುಂದಿದ್ದಾರೆ.
ಇವೆಲ್ಲದರ ನಡುವೆ ಸಮಾಜವನ್ನು ‘ನಮ್ಮ ಸಂಸ್ಕೃತಿ’ಯ ಹೆಸರಿನಲ್ಲಿ ನಮ್ಮ ದಿವ್ಯ-ಭವ್ಯ ಪರಂಪರೆಯೆಂಬ ಮುಂದುವರಿದ ಪ್ರತಿಮಾನಿರ್ಮಾಣದ ಕೆಲಸ ಮುಂದುವರಿಯುತ್ತಲೇ ಇದೆ. ದೇಶದೆಲ್ಲೆಡೆ ಒಂದಲ್ಲ ಒಂದು ಮೂರ್ತಿ ನಿತ್ಯ ನಿರ್ಮಾಣಗೊಳ್ಳುತ್ತಲೇ ಇದೆ. ನಿರಾಕಾರನಾದ ಭಗವಂತನಿಗೆ ನಮಗಿಷ್ಟವಾದ, ನಮ್ಮಿಷ್ಟದ ರೂಪಗಳನ್ನು ಸೃಷ್ಟಿಸಿ ಅದಕ್ಕೆ ನುಡಿಗಟ್ಟಿನಲ್ಲಿ ಹೇಳುವ ‘ಕೈ-ಕಾಲುಗಳನ್ನು’ ಜೋಡಿಸಿ ಸಾತ್ವಿಕ, ರಾಜಸ, ತಾಮಸ ರೂಪಸುಮನೋಹರವಾಗಿಸಿದ್ದು ಗತ. ಅದನ್ನು ವರ್ತಮಾನಕ್ಕೆ ಎಳೆದು ತಂದು ಮತ್ತಷ್ಟು ವರ್ಣರಂಜಿತವಾಗಿಸಿದ್ದು ಆಧುನಿಕ ವಿದ್ಯಮಾನ, ಘಟನೆ ಮತ್ತು ಕೆಲವೊಮ್ಮೆ ನಟನೆಯೂ ಹೌದು. ಇದರ ಇತಿಹಾಸವು ಪುರಾಣಾಧಾರಿತ ನಿರಂಕುಶರಾಜಸತ್ತೆಯಲ್ಲಿದ್ದರೆ ಭವಿಷ್ಯವು ಮನುಷ್ಯನ ಅವಿವೇಕಿತನದಲ್ಲಿದೆ.
ಪುರಾಣಗಳು ಮನುಷ್ಯನ ನಂಬಿಕೆ ಮತ್ತು ಭಕ್ತಿಯನ್ನು ಆಧರಿಸಿದ ದೇವರ ಕಲ್ಪಿತ ಆಕೃತಿ ಮತ್ತು ಅದನ್ನಾಧರಿಸಿದ ಮನುಷ್ಯಕಲ್ಪನೆಯ ಬದುಕಿನ ಆವರಣದ ಅನಾವರಣವೇ ಆಗಿದೆ. ಅಲ್ಲಿ ತರ್ಕಗಳಿಗೆ ಬೆಲೆಯಿಲ್ಲ. ತರ್ಕವಿರೋಧಿಗಳಿಗೆ ಇಂದಿನಂತೆ ಅಂದೂ ಮಾನ್ಯತೆಯಿರಲಿಲ್ಲ. ನಾವು ಯಾವುದನ್ನು ಪೌರಾಣಿಕ ಆದರ್ಶವೆಂದು ಹೇಳುತ್ತೇವೆಯೋ ಅವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅವು ಸ್ವಘೋಷಿತ ಮತ್ತು ಸ್ಥಾಪಿತ ಹಿತಾಸಕ್ತಿಯ ಸಮಾಜಘಾತುಕ ಸತ್ಯಗಳು. ಸನಾತನ, ವರ್ಣಾಶ್ರಮ ಇತ್ಯಾದಿಗಳು ಈ ತಿರುಚಿದ ಸತ್ಯದ ಶಿಶುಗಳು.
ಎಲ್ಲಾ ಕಾಲದಲ್ಲೂ ಆಳುವ ಮತ್ತು ಆಳಿಸಿಕೊಳ್ಳುವ (ಅಳುವ!) ಪ್ರತ್ಯೇಕ ಸಮುದಾಯಗಳಿದ್ದವು, ಹಾಗೆಯೇ ಶೋಷಿಸುವ ಮತ್ತು ಶೋಷಿಸಿಕೊಳ್ಳುವ ಅಥವಾ ಶೋಷಣೆಗೊಳಗಾಗುವ ಸಮುದಾಯಗಳಿದ್ದವು. ಇವುಗಳ ಪೈಕಿ ಸಂಸ್ಕೃತಿ ಎಂದು ನಾವು ಕರೆಯುವ ಬಹುಪಾಲು ಚಿಂತನೆಗಳು ಆಳುವ ಮತ್ತು ಶೋಷಿಸುವ ವರ್ಗದ ವರದಿಗಳಾಗಿದ್ದವು. ಶಿಲ್ಪಾಕಲಾ ವೈಭವದ ದೇವಾಲಯಗಳನ್ನು, ಅರಮನೆಗಳನ್ನು ನಮ್ಮ ಸಂಸ್ಕೃತಿಯ ಮಂದಿರಗಳಾಗಿಸಿ ದ್ಯೋತಕಗಳೆಂದು ಹೇಳುವಾಗ ಅದರಡಿಯಲ್ಲಿ ಮಣ್ಣಾದ ಜೀವನಗಳನ್ನು, ಜೀವಿಗಳನ್ನು, ಇತಿಹಾಸದ ವರದಿಯಲ್ಲಿ ಕಾಣಿಸುವುದಿಲ್ಲ. ಎರಡು ಮುಖಗಳಿರುವ ಸತ್ಯದಲ್ಲಿ ಮತ್ತು ವಾಸ್ತವದಲ್ಲಿ ಒಂದು ಮುಖವಷ್ಟೇ ಪ್ರದರ್ಶನಗೊಳ್ಳುತ್ತವೆ.
ಪ್ರತಿಯೊಂದು ಆಕಾರಕ್ಕೂ ಒಂದು ನೆರಳಿರುತ್ತದೆ. ಆದರೆ ಆ ನೆರಳು ಗೋಚರಿಸದಂತೆ ಬೆಳಕನ್ನು ಮರೆಮಾಚಲಾಗುತ್ತದೆ. ಆ ಇನ್ನೊಂದು ಮುಖವನ್ನು ಸಂವೇದನಾಶೀಲ ಕಲಾವಿದರು ಬರಹದ ಮೂಲಕವೋ, ಚಿತ್ರದ ಮೂಲಕವೋ, ಶಿಲ್ಪದ ಮೂಲಕವೋ ಭವಿಷ್ಯದ ಮುಂದಿಡಬಹುದಿತ್ತು. ಆದರೆ ರಾಜಸತ್ತೆಯು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ರಾಮಾಯಣ, ಮಹಾಭಾರತಗಳು ಕಿರೀಟ ಧರಿಸಿದ ರಾಜರುಗಳ ಇಲ್ಲವೇ ಮಂತ್ರ ಮುಖೇನ ಹುಟ್ಟಿದ ಸಂತತಿಯ ಅಥವಾ ಇವುಗಳಿಗೆ ಸಾಥ್ ಕೊಟ್ಟು ಗೌರವ ಸಂಪಾದಿಸಿಕೊಂಡ ಋಷಿಮುನಿಗಳ ವೈಭವದ ಕತೆಯಾಯಿತೇ ವಿನಾ ಸಾಮಾನ್ಯ ಸರಳ ಜೀವಿಗಳ ಕಥಾನಕಗಳಾಗಲಿಲ್ಲ ಮತ್ತು ಇಂತಹ ಚಿತ್ರಣಗಳನ್ನು ಇದೇ ಸರಿ ಎಂಬ ಹಾಗೇ ವಿವರಿಸಿಕೊಂಡು ಬಂದದ್ದರಿಂದ ಜನರು ಅದನ್ನೇ ರಾಜಬೀದಿಯೆಂದು ಸ್ವೀಕರಿಸಿದರು, ರಾಜಬೀದಿಯಲ್ಲಿ ನಡೆದರಷ್ಟೇ ಆಳುವವರ ಭೇಟಿ. ಅದೃಷ್ಟ ಇದ್ದರೆ ಕೃಪೆ, ಮನ್ನಣೆ, ಉಚಿತವಾಗಿರ ಬೇಕಾದ ಬೆಳಕು-ಬೆಳದಿಂಗಳು ಕಾಡುಹಾದಿಯಲ್ಲಿ ಸ್ಪರ್ಶಿಸಲು ಕೂಡಾ ಅಳುಕುತ್ತದೆ. ಇದರಿಂದಾಗಿ ಶಂಭೂಕನ ಸಾವು ರಾಮಾಣಯಕ್ಕೆ, ಶ್ರೀರಾಮನ ಚರಿತೆಗೆ ಅಪವಾದವಾಗಲಿಲ್ಲ. ವಾಲ್ಮೀಕಿಗೆ ರಾಮನ ಬದುಕೇ ಲೋಕಾದರ್ಶವಾದ್ದರಿಂದ ಆ ಆಯನದಲ್ಲಿ ಶೂರ್ಪನಖಾ ಮಾನಭಂಗ ವಾಗಲೀ, ವಾಲಿ ವಧೆಯಾಗಲೀ ರಾಮನ ವ್ಯಕ್ತಿತ್ವಕ್ಕೆ ತೊಡಕಾಗಲಿಲ್ಲ. (ಇಂದಿನ ರಾಜಕಾರಣಿಗಳ ಹಗರಣದ ವಿರುದ್ಧದ ಪ್ರಕರಣಗಳಂತೆ!)
ಮಹಾಭಾರತದಲ್ಲೂ ಇದೇ ತಾತ್ವಿಕತೆ ಕಂಡುಬರುತ್ತದೆ. ಅಧಿಕಾರಕ್ಕಾಗಿ ಒಂದು ಕುಟುಂಬದ ದಾಯಾದಿಗಳ ನಡುವೆ ನಡೆದ ವಿವಾದವು ಯುದ್ಧದಲ್ಲಿ ಪರ್ಯಾವಸಾನಗೊಂಡು ಕೊನೆಗೆ ಯಾರಿಗೂ ಏನು ಇಲ್ಲದಾಗಿ ಮುಗಿದ ಕತೆ ಮಹಾಭಾರತ. ಗೆದ್ದವನು ಸೋತ ಸೋತವನು ಸತ್ತ ಎಂಬ ಮಾತುಗಳಿಗೆ ಮಹಾಭಾರತ ಉತ್ತಮ ನಿದರ್ಶನ. ಈ ಎಲ್ಲಾ ಘಟನೆಗಳ ರೂವಾರಿಗಳನ್ನು ಸಾರ್ವಕಾಲಿಕ ಸಾಕ್ಷಿಗಳಾಗಿ ಕಾಣುವುದಕ್ಕೆ ಲಿಖಿತ ಸಾಹಿತ್ಯ ಹೇಗೆ ಕಾರಣವಾಯಿತೋ ಹಾಗೇಯೇ ಕಟ್ಟಡ, ಪ್ರತಿಮೆ ಇವುಗಳ ನಿರ್ಮಾಣವೂ ಕಾರಣವಾಯಿತು. ಮಹಾಭಾರತದ ದುರಂತ ಅದನ್ನು ಬರೆದ ವ್ಯಾಸರ ವೈಯಕ್ತಿಕ ದುರಂತವಾಗಿ ಪರಿಣಮಿಸಿದರೂ ಅದಕ್ಕೆ ಸುವರ್ಣ ಚೌಕಟ್ಟು ಹಾಕಿ ಸುಖೀಭವವಾಗಿಸುವುದರಲ್ಲಿ ವ್ಯಾಸರು ಯಶಸ್ಸು ಕಂಡರು. ಮಹಾಭಾರತದ ಓದಿನಲ್ಲಿ ಪಾಂಡವರ ದುರಂತದ ವರೆಗೆ ಓದುಗರು ಮುಂದುವರಿದಿದ್ದು ಕಡಿಮೆ. ಪಾಂಡವರಲ್ಲಿ ಯಾರಾದರೂ ಒಬ್ಬರ ಪಟ್ಟಾಭಿಷೇಕವೇ ಆ ಯುಗದ ಮತ್ತು ಮುಂದೆ ಬರುವ ಧರ್ಮಾಧಿಕಾರದ ಶಾಶ್ವತ ಪ್ರತಿಷ್ಠಾಪನೆಯೆಂದು ಜನ ನಂಬಿದರು ಅಥವಾ ಜನರನ್ನು ನಂಬಿಸಲಾಯಿತು. ಮಹಾಭಾರತದ ಅನೇಕ ರೂಪಗಳು ಆನಂತರ ಬಂದವಾದರೂ ಪ್ರತಿಯೊಬ್ಬರೂ ರಾಜಸತ್ತೆಯ ಹಿರಿಮೆಯನ್ನು ಕೊಂಡಾಡುತ್ತಲೇ ಬಂದರು. ಪ್ರತಿಭೆ ಮತ್ತು ಪಾಂಡಿತ್ಯ ಹೇಗೆ ಅಧಿಕಾರದ ಎದುರು ಶರಣಾಗುತ್ತದೆಂದು ಎಲ್ಲಾ ಕಾಲದಲ್ಲೂ ಕಂಡು ಬಂದಿದೆ. ಮಹಾಭಾರತವನ್ನು ಬರೆಯುವ ಪಂಪನಿಗೆ ಅರಿಕೇಸರಿಯನ್ನು ಅರ್ಜುನನ್ನಾಗಿಸುವ ಅನಿವಾರ್ಯತೆ ಬಂದದ್ದು ಈ ಅಧಿಕಾರಕ್ಕೆ ತಲೆತಗ್ಗಿಸುವ ದಾಸಾನುದಾಸ ಪರಿಕಲ್ಪನೆಯಿಂದಲೇ. ಕುಮಾರವ್ಯಾಸನು ಕೃಷ್ಣನನ್ನೇ ನಾಯಕನನ್ನಾಗಿಸಿ ತನ್ನ ಭಕ್ತಿಯನ್ನು ಕಾವ್ಯದಲ್ಲಿ ಮೂಡಿಸಿದನು. ಮನುಷ್ಯತ್ವದ ಹೊಳವುಗಳು ಪಂಪನಿಂದ ಕುಮಾರವ್ಯಾಸನನ್ನು ದಾಟಿ ಬಂದಿದ್ದರೂ ಅನೇಕ ಇತರ ಉದಾತ್ತ ಪಾತ್ರಗಳು ಕೇಂದ್ರ ಮುಖ್ಯ ಪಾತ್ರವನ್ನು ನಿರ್ವಹಿಸುವಲ್ಲಿ ವಿಫಲವಾಗಿ ಪೋಷಕವಾಗಿಯಷ್ಟೇ ಉಳಿದವು. ಕರ್ಣನಂತಹ ಪಾತ್ರಗಳನ್ನು ಗಮನಿಸಿದರೆ ಇದು ಗೋಚರಿಸುತ್ತದೆ.
ಈ ವಿವರಣೆ ಯಾಕೆ ಅಗತ್ಯವಾಯಿತೆಂದರೆ ವಾಲಿಯಂತಹ, ಕರ್ಣನಂತಹ ಪಾತ್ರಗಳಿಗೆ ಯಾರೂ ಗೋರಿಕಟ್ಟಲಿಲ್ಲ, ಪ್ರತಿಮೆ ನಿರ್ಮಿಸಲಿಲ್ಲ, ಮಂದಿರವಂತೂ ಇಲ್ಲವೇ ಇಲ್ಲ. ಆದರೆ ರಾಮಕೃಷ್ಣರಿಗೆ, ಸೀತೆಗೆ, ವಾಲ್ಮೀಕಿ, ವ್ಯಾಸರಿಗೂ ಪುನರುತ್ಥಾನದ, ಇಲ್ಲವೇ ಮೂರ್ತ ಆದರ್ಶದ ಅದೃಷ್ಟ ಸಿಕ್ಕಿತು. ಇನ್ನೂ ಕೆಲವು ಸಾತ್ವಿಕವೆಂದು ನಮೂದಿಸಲಾದ ಪಾತ್ರಗಳಿಗೂ ಉಳಿಯಬಲ್ಲ, ಸಂಕೇತಗಳಾಗಬಲ್ಲ ಅದೃಷ್ಟ ಲಭಿಸಿತ್ತು. ಹಾಗೆಂದು ಹತ್ತುತಲೆಯ ರಾವಣನ ವೇದವಿದ್ವತ್ತಿಗೆ, ಪ್ರವೃತ್ತಿಯ ಅರಿವಿದ್ದ ಛಲದಂಕಮಲ್ಲ ದುರ್ಯೋಧನನಿಗಾಗಲೀ ಈ ಪ್ರತಿಮಾನಿರ್ಮಾಣದ ನಾಯಕನಾಗುವ ಸೌಭಾಗ್ಯ ದೊರಕಲಿಲ್ಲ. ಸಾಂದರ್ಭಿಕವಾಗಿ ಉಲ್ಲೇಖವಾಗುವ ವೈಭವವಷ್ಟೇ ಅವರಿಗೆ ಸಿಕ್ಕಿದ್ದು.
ಇತಿಹಾಸಕ್ಕೆ ಬಂದರೆ ರಾಜರು ತಾವು ಶಾಶ್ವತವೆಂದು ಬಗೆದು ತಮ್ಮ ಶೀಲವನ್ನು ಹೊಗಳುವ ಶಿಲಾಶಾಸನಗಳನ್ನು ಕೆತ್ತಿಸಿದರು. ಸೂರ್ಯಚಂದ್ರರಿರುವವರೆಗೆ ತಾವು ಮತ್ತು ತಾವು ದಾನವಾಗಿ ನೀಡಿದ ಫಲಾನುಭವಿಗಳು ಶಾಶ್ವತವೆಂದು ಬಗೆಯುವ ಶಾಸನಗಳು ಅನೇಕವಿವೆ. ಹಾಗೆಯೇ ಆಳುವವರನ್ನು ಕೀರ್ತಿಸುವ ಅರಮನೆಗಳು, ಧಾರ್ಮಿಕ ಕೇಂದ್ರಗಳು, ಮೂರ್ತಿಗಳು, ಪ್ರತಿಕೃತಿಗಳು, ಸಾಂಕೇತಿಕ ಶಿಲ್ಪಗಳು ರಚನೆಗೊಂಡವು. (ಇದು ಜಗತ್ತಿನ ಎಲ್ಲೆಡೆ ನಡೆದಿವೆಯಾದರೂ ಪ್ರಸಕ್ತ ಭಾರತಕ್ಕೆ ಸಂಬಂಧಿಸಿದ ಸಂಗತಿಗಳನ್ನಷ್ಟೇ ಇಲ್ಲಿ ವಿಚಾರಿಸಲಾಗಿದೆ) ಇದರಿಂದಾಗಿ ಎಲ್ಲೆಡೆ ದೇವಸ್ಥಾನಗಳು, ಶಿಲ್ಪಕಲಾ ವೈಭವಗಳು, ವಿನ್ಯಾಸಗಳು, ಸೃಷ್ಟಿಯಾದವು. ಅವೇ ನಮ್ಮ ಸಮಾಜದ ಮುಖ್ಯವಾಹಿನಿ ಮತ್ತು ಪುರೋಭಿವೃದ್ಧಿಯೆಂಬ ರೀತಿಯಲ್ಲಿ ಪ್ರಸಿದ್ಧಗೊಂಡವು. ಇವಲ್ಲದೆ ಬದುಕೇ ಇಲ್ಲ ಎಂಬಂತೆ ಸಮಾಜ ಪ್ರತಿಕ್ರಿಯಿಸಿತು. ಇದಕ್ಕೆ ಕಾರಣವೆಂದರೆ ಇದಲ್ಲದೆ ಬೇರೊಂದು ಬದುಕಿದೆ, ಜಗತ್ತಿದೆ ಎಂಬ ವಿವರಣೆಯು ಪುರಾಣದಲ್ಲಾಗಲೀ ಅಥವಾ ಇತಿಹಾಸದಲ್ಲಾಗಲೀ ಸಿಗದಿರುವುದು. ನಮಗೆ ಕಾಣದ ಜಗತ್ತನ್ನು ನಾವು ನಂಬಬೇಕಾದರೆ ಅದಕ್ಕೂ ಸೂಕ್ತ ಪ್ರಚಾರ ಬೇಕಲ್ಲವೇ? ಆದರೆ ಅದು ಸಿಗಲೇ ಇಲ್ಲ. ಆದ್ದರಿಂದ ಆ ಇನ್ನೊಂದು ಬದುಕು ಕತ್ತಲಖಂಡವಾಗಿ ಉಳಿಯಿತು.
ಜಗತ್ತಿನ ಅದ್ಭುತಗಳೆಂದು ಪ್ರಸಿದ್ಧಿ ಪಡೆದ ಎಲ್ಲವೂ ಇಂತಹ ಭಯಾನಕ ನೆರಳನ್ನು ಹೊಂದಿದ ಮೂರ್ತಿಗಳು. ಇದು ಇತಿಹಾಸದುದ್ದಕ್ಕೂ ಬೆಳೆದು ಬಂತು. ಇಂತಹ ಪ್ರತಿಮೆಗಳ ಭಗ್ನವಾಶೇಷಗಳು ನಮಗೆ ಅಳಿದ ಸಂಸ್ಕೃತಿ ಯೊಂದರ ಕುರುಹುಗಳು ಎಂದು ಪ್ರತಿಬಿಂಬಿತವಾದವೇ ಹೊರತು ಅವು ಕತ್ತಲನ್ನು ಹೆಚ್ಚಿಸಿದವು ಹಾಗೂ ಅದರ ಜಾಡು ಹಿಡಿದು ಹೋದರೆ ಹೊಸ ಜಗತ್ತು ಗೋಚರಿಸೀತು ಎಂದು ಅನ್ನಿಸಲೇ ಇಲ್ಲ. ಕಪ್ಪಿನೆದುರು ಬಿಳಿತನದ ಶ್ರೇಷ್ಠತೆಯು ಮೈಬಣ್ಣ, ಕೂದಲುಗಳಿಗೆ ಸೀಮಿತವಾಯಿತು; ಕಣ್ಣಿಗಲ್ಲ.
ರಾಜಸತ್ತೆ ಅಳಿದು ಪ್ರಜಾಸತ್ತೆ ಬಂದಾಗ ಇವಕ್ಕೆಲ್ಲ ಕೊನೆಕಂಡಿತು ಎಂದೆನಿಸಿದರೂ ಅದು ನಿಜವಾಗಲಿಲ್ಲ. ಆಳುವ ಮತ್ತು ಆಳಿಸಿಕೊಳ್ಳುವವರ ಎರಡು ವಿಭಾಗಗಳು ಸೃಷ್ಟಿಯಾದದ್ದು ಮಾತ್ರವಲ್ಲ ಅವು ಶೋಷಿತರ ಮತ್ತು ಶೋಷಕರ ಎರಡು ಬಿಳಿ-ಕಪ್ಪು ಪ್ರಪಂಚಗಳಾಗಿ ಮುಂದುವರಿದವು. ಶಿವಶರಣರ ಕಾಲದಲ್ಲಿ ಧಾರ್ಮಿಕತೆಗಿಂತ ಆಧ್ಯಾತ್ಮಿಕತೆ ಹೆಚ್ಚಾದರೂ, ಸಮಾಜದ ಹಿನ್ನೆಲೆಯಲ್ಲಿರುವ ಜನರನ್ನು ಸಮಾನತೆಯ ವೇದಿಕೆಗೆ ತರುವ ಪ್ರಯತ್ನ ನಡೆಸಿದರು. ಅದು ಕೂಡಾ ರಾಜವೈಭದ ಅಡಿ ಸವೆದು ಬಸವಣ್ಣನಂಥವರು ದುರಂತ ಅಂತ್ಯವನ್ನು ಕಾಣಬೇಕಾಯಿತು. ಇಂದು ನಾವು ನೋಡುವ ಕುದುರೆಯ ಮೇಲೇರಿ ಕುಳಿತ ಕಿರೀಟಧಾರಿ ಬಸವಣ್ಣ ನಿಜದ ಬಸವಣ್ಣನಲ್ಲ. ಹೀಗಿರುವ ಮೂರ್ತಿಗಳು ಆಳುವವರ, ಶೋಷಕರ ಪ್ರತಿಮೆಗಳು. ಅಂಬೇಡ್ಕರ್‌ರಂಥವರು ಈ ಪ್ರತಿಮಾರೂಪಗಳನ್ನು ಒಡೆಯಲು ಎಷ್ಟೇ ಪ್ರಯತ್ನಿಸಿದರೂ ಅದಿನ್ನೂ ಯಶಸ್ಸನ್ನು ಕಂಡಿಲ್ಲ. ಅಂಬೇಡ್ಕರ್ ಅವರ ಹೆಸರಿನಲ್ಲಿ ಹೊಸ ಪ್ರತಿಮೆಗಳು ಹುಟ್ಟುತ್ತಿವೆಯೇ ಹೊರತು ಅವು ಅರ್ಥಪೂರ್ಣವಾಗಿಲ್ಲ. ಇಂದು ನಾಯಕರು ತಮ್ಮದೇ ಪ್ರತಿಮೆಗಳನ್ನು ಸ್ಥಾಪಿಸುವ ಹುಮ್ಮಸ್ಸಿನಲ್ಲಿದ್ದಾರೆಯೇ ಹೊರತು ಪ್ರಜೆಗಳಿಗೆ ಒಪ್ಪತ್ತು ಊಟದ ಗತಿಯನ್ನಾದರೂ ತೋರಿಸುವ ಆಸಕ್ತಿಯನ್ನು ತೋರಿಸುತ್ತಿಲ್ಲ. ಶೋಷಿತರ ಪ್ರತಿನಿಧಿಯೆಂಬ ಕಾಳಜಿಯ ಮಾಯಾವತಿ ಕೂಡಾ ತನ್ನ ಪಕ್ಷದ ಸಂಕೇತಗಳನ್ನು ಮೂರ್ತೀಕರಿಸಿ ತಮದ ಮಾಯೆಯಾದರೇ ಹೊರತು ಧ್ಯೇಯಧೋರಣೆಗಳ ಸಾಕಾರವಾಗಲಿಲ್ಲ. ಈಗಂತೂ ಮತಧರ್ಮೀಯರನ್ನು ಒಗ್ಗೂಡಿಸುವ ರಾಜಕೀಯ ಕಾಯಕದಲ್ಲಿ ಜನಪ್ರತಿನಿಧಿಗಳೆಂಬ ನೆಪದಲ್ಲಿ ಹೆಸರಾದ ಹಿರಿಕಿರಿಯ ರಾಜಕೀಯ, ಮತೀಯ ನಾಯಕರುಗಳ ಪ್ರತಿಮೆಗಳನ್ನು ಎಲ್ಲೆಂದರಲ್ಲಿ ಕೋಟ್ಯಾನುಗಟ್ಟಲೆ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ಉತ್ಸಾಹ ಜಾರಿಯಲ್ಲಿದೆ. ಈ ಮೂರ್ತಿಗಳ ವಾಸ್ತವ ಸಂಕೇತ ಸಂದೇಶಗಳನ್ನು ನಿರ್ಮಾಪಕರು ಮತ್ತು ವಿಗ್ರಹಾರಾಧಕರು ಅಥವಾ ಪ್ರಜೆಗಳು ಗಮನಿಸುವುದಿಲ್ಲ ಅದನ್ನೊಮ್ಮೆ ನೋಡಬೇಕು ಎಂಬ ಉತ್ಸಾಹ ಅದನ್ನು ತಿಳಿಯಬೇಕು ಎಂಬುದರಲ್ಲಿಲ್ಲ. ಈ ಕಾರಣದಿಂದಲೇ ಅಯೋಧ್ಯೆಯ ರಾಮಮಂದಿರವು ಅಪಾರ ವೆಚ್ಚದಿಂದ ಸ್ಥಾಪನೆಯಾಗಿ ರಾಜಕೀಯ ಲಾಭಕ್ಕೆ ನೆರವಾಯಿತೇ ಹೊರತು ಅಲ್ಲಿನ ಸಾಮಾನ್ಯರ ಕಷ್ಟ ಕೋಟಲೆಗಳಿಗೆ ಪ್ರತಿಸ್ಪಂದಿಸಲಿಲ್ಲ. ಸ್ವಾಮಿ ವಿವೇಕಾನಂದ, ಸರ್ದಾರ್ ವಲ್ಲಭಬಾಯಿ ಪಟೇಲ್ ಮುಂತಾದವರ ಪ್ರತಿಮೆಗಳು ನಿರ್ಮಾಣವಾಗಿವೆಯಾದರೂ ಅವರ ಬದುಕಿನ ಸಂದೇಶಗಳು ಮರೆತುಹೋಗಿವೆ; ಇಲ್ಲವೇ ತಿರುಚಿಕೊಂಡಿವೆ. ಈ ಅರ್ಥದಲ್ಲಿ ಮಹಾರಾಷ್ಟ್ರದಲ್ಲಿ ಕಳೆದ ವರ್ಷ ನಿರ್ಮಾಣವಾಗಿ ಪ್ರಧಾನಿಯಿಂದ ಉದ್ಘಾಟನಾನುಗ್ರಹಿತವಾದ ಶಿವಾಜಿ ವಿಗ್ರಹವು ಮೊನ್ನೆಯಷ್ಟೇ ತಾನೇ ಬಿದ್ದು ಹೋದದ್ದೇ ಒಂದು ಸಂವೇದನಾಶೀಲ ಮಾರ್ಮಿಕ ಪ್ರತಿಮೆ. ಸಾಮಾಜಿಕ ಅನ್ಯಾಯದ ವಿರುದ್ಧ ಕನ್ನಗಿಯಂಥವರು ಹೆಚ್ಚು ಹೆಚ್ಚು ಅವತರಿಸಿದರೆ ಇಂತಹ ಪ್ರತಿಮೆಗಳು ಭಗ್ನವಾದಾವೇನೋ?