ಆಡಳಿತದ ಹೆಸರಿನ ಲೂಟಿ

Update: 2024-07-04 05:17 GMT

ಸದ್ಯದಲ್ಲೇ ಹೊಸ ಆಯವ್ಯಯ ಮುಂಗಡ ಪತ್ರ ಬರಲಿದೆ. ಸರಕಾರದ ಅದೇ ಅರ್ಥ ಸಚಿವರು ಹಳೇ ವೈನನ್ನು ಹೊಸಬಾಟಲಿಯಲ್ಲಿ ಸುರಿದು ಕೊಡುತ್ತಾರೋ ಅಥವಾ ಬಾಟಲಿಯೂ ಹಳೆಯದ್ದೇ ಎಂದು ಕಾದುನೋಡಬೇಕಾಗಿದೆ. ನಿರೀಕ್ಷೆಗಳು ಯಾವಾಗಲೂ ಪರ್ವತಗಾತ್ರ. ಕೊನೆಗೆ ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸುವ ಭಕ್ತರು ನಮ್ಮ ಜನಗಳು. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಗಾಂಧಿ ನಡೆಸಿದಂತೆ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಇವೆಲ್ಲ ಆಧುನಿಕ ಕಾಲಕ್ಕೆ ಸಮಂಜಸವಲ್ಲ ಎಂಬ ಅಹಿಂಸಾತ್ಮಕ ನಿರ್ಣಯಕ್ಕೆ ಬಂದಿದ್ದೇವೆ. ಹೋರಾಟದ ಛಲ ಹೋಗಲಿ, ಆಶಯವನ್ನೂ ನಾವು ಕಳೆದುಕೊಂಡಿದ್ದೇವೆ. ನೊಗಕ್ಕಾದರೂ ಸರಿಯೆ, ವಧಾಸ್ಥಾನಕ್ಕಾದರೂ ಸರಿಯೆ ಕೊರಳೊಡ್ಡುವುದಷ್ಟೇ ನಮ್ಮ ದುಡಿಮೆ. ಫಲಾಫಲ ಪೂರ್ವನಿರ್ಣಯ.

ನಾನು ಆರ್ಥಿಕ ತಜ್ಞನಲ್ಲ. ಆದರೆ ನಮ್ಮ ರಾಜಕೀಯ, ಆರ್ಥಿಕ ಪರಿಣತರು, ತಂತ್ರಜ್ಞರೆಲ್ಲ ಸೇರಿ ರೂಪಿಸಿದ ಸರಕಾರವು ಜನರ ಮೇಲೆ ಹೇರುವ ಹೊರೆ, ಬೀರುವ ಘೋರ ಪರಿಣಾಮ ಇವನ್ನು ಅನುಭವಿಸಬಲ್ಲೆ. ಆದರೆ ಕೋಳಿಯನ್ನು ಕೇಳಿ ಮಸಾಲೆ ಅರೆಯುವುದಿಲ್ಲ ಎಂಬ ಮಾತು ಗೊತ್ತಿರುವುದರಿಂದ ನಾನೂ ಸೇರಿದಂತೆ ಶ್ರೀಸಾಮಾನ್ಯರು ಪಡುವ ಪಾಡನ್ನು ಸ್ವಲ್ಪ ಅಭಿವ್ಯಕ್ತಿಸಬಲ್ಲೆ. ಸೀದಾ ಸಾದಾ ಸರಳ ಸಮಸ್ಯೆಗಳು ನಮ್ಮೆದುರಿಗಿವೆ. ಆದರೆ ಅವನ್ನು ಹೇಳುತ್ತ, ಹೇಳಲಾಗದೆ ಕೊರಗುತ್ತ ಬದುಕುವ ಅನಿವಾರ್ಯತೆ ಜನರದ್ದು.

ಕೆಲವು ಉದಾಹರಣೆಗಳು ನಮ್ಮೊಂದಿಗಿವೆ; ಅಥವಾ ನಮ್ಮೆದುರಿಗಿವೆ. ಅವನ್ನು ತಜ್ಞರು ಸಮಸ್ಯೆಗಳೇ ಅಲ್ಲ ಎನ್ನಬಹುದು, ಇಲ್ಲವೇ ಇವೆಲ್ಲ ಸಹಜ ಪರಿಣಾಮಗಳು ಎನ್ನಬಹುದು, ಇಲ್ಲವೇ ಇವುಗಳೊಂದಿಗೆ ಬದುಕುವುದು ಸಾಮಾಜಿಕ ಅನಿವಾರ್ಯತೆ ಎನ್ನಬಹುದು. ನಾವು ಇವುಗಳೊಂದಿಗೇ ಬದುಕುತ್ತಿದ್ದೇವೆ. ಪ್ರಾಯಃ ಹೀಗೆ ಹೇಳುತ್ತಲೇ ಇವುಗಳೊಂದಿಗೇ ಸಾಯುತ್ತೇವೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಹಣದ ಬೆಲೆ ಎಷ್ಟಿತ್ತು ಮತ್ತು ಈ ಏಳೆಂಟು ದಶಕಗಳಲ್ಲಿ (ಎಂಟು ಇಲ್ಲ, ಏಳೇ-ಪೂರ್ಣವಾದದ್ದಷ್ಟೇ ನಮ್ಮಲ್ಲಿ ಲೆಕ್ಕ!) ಅದು ಏರಿ ಏರಿ ಈಗಾಗಲೇ ಮೌಂಟ್ ಎವರೆಸ್ಟ್ ಏರಿ ಆಕಾಶದತ್ತ ದೃಷ್ಟಿಯನ್ನು ನೆಟ್ಟಿದೆ ಎಂಬ ಅರಿವು ಸಾಮಾನ್ಯರಲ್ಲೂ ಇದೆ. ಆದರೆ ದಿನಾ ತೈಲದಿಂದ ಹಿಡಿದು ಚಿನ್ನ-ಬೆಳ್ಳಿಯವರೆಗೆ, ನಿತ್ಯದ ಅನ್ನದಿಂದ ಹಿಡಿದು ಪಾವತಿಸುವ ತೆರಿಗೆ, ಕೊಳ್ಳುವ ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚುತ್ತಲೇ ಇದೆ. ಆದರೆ ಉಪವಾಸ ಕುಳಿತರೂ ಸರಿ, ದೇವರು, ಧರ್ಮ, ಸಂಪ್ರದಾಯ, ಆಚರಣೆ ಇವಕ್ಕೆ ವೆಚ್ಚ ಮಾಡಲು ತೀರ ಬಡವನಲ್ಲೂ ಹಣವಿದೆ. ಆದ್ಯತೆಗಳು ಯಾವುವು ಎಂಬುದಷ್ಟೇ ಯೋಚಿಸಬೇಕಾದದ್ದು. ಈ ಗುಟ್ಟು ನಮ್ಮನ್ನಾಳುವವರಿಗೆ ಗೊತ್ತಿದೆ. ಹಾಗೆಂದೇ ಅವರು ಯಾವುದಾದರೂ ರೀತಿಯಲ್ಲಿ ಪ್ರತ್ಯಕ್ಷ-ಪರೋಕ್ಷ ತೆರಿಗೆಯ ಮೂಲಕ ಸರಕಾರದ ಬೊಕ್ಕಸದ ಹೆಸರಿನಲ್ಲಿ ತಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಾರೆ.

ಯಾವನೇ ವಾಹನದ ಮಾಲಕ ತಾನು ವಾಹನವನ್ನು ಖರೀದಿಸುವಾಗ ರಸ್ತೆ ತೆರಿಗೆ ಕಟ್ಟುತ್ತಾನೆ. ಇದರಲ್ಲಿ ಖಾಸಗಿ, ಸಾರ್ವಜನಿಕ, ಸರಕಾರಿ ಎಂಬ ವ್ಯತ್ಯಾಸಗಳಿಲ್ಲ. ಇಷ್ಟನ್ನು ಕಟ್ಟಿ ತಾನಿನ್ನು ಸುಖವಾಗಿರಬಹುದೆಂದು ಆತ ತಿಳಿಯುವಂತಿಲ್ಲ. ನಮ್ಮ ರಾಷ್ಟ್ರೀಯ ಹೆದ್ದಾರಿಗಳಲ್ಲಿ ‘ಟೋಲ್ ’ಎಂಬ ಸಂಗ್ರಹ ವಿಧಾನವಿದೆ. ಹೆದ್ದಾರಿಗಳಲ್ಲಿ ಹೋಗಬೇಕಾದರೆ ಹೀಗೆ ತೆರಿಗೆ ಪಾವತಿಸಿದ ವಾಹನಗಳು ಹೊಸದಾದ ‘ಟೋಲ್’ ಎಂಬ ತೆರಿಗೆಯನ್ನು ಕಟ್ಟಬೇಕು. ಇದು ಯಾಕೆಂದು ಕೇಳಿದರೆ, ಸದ್ರಿ ರಸ್ತೆಯನ್ನು ನಿರ್ಮಿಸಲು ಸರಕಾರ ಗುತ್ತಿಗೆದಾರರ ಮೂಲಕ ಬಹಳ ಮೊತ್ತವನ್ನು ವೆಚ್ಚಮಾಡಿದೆ, ಅದನ್ನು ತುಂಬಿಕೊಳ್ಳಬೇಕಾದರೆ ಈ ಸಂಗ್ರಹ ಅನಿವಾರ್ಯ ಎನ್ನುವ ಸಿದ್ಧ ವಿವರಣೆಯನ್ನು ನೀಡುತ್ತದೆ. ನಮ್ಮ ಬಹುತೇಕ ಜನರು ಇದನ್ನು ಒಪ್ಪಿಕೊಳ್ಳುತ್ತಾರೆ; ಅಥವಾ ಸಹಿಸುತ್ತಾರೆ. ಒಂದು ಚಿಕ್ಕ ಸಂಶಯವನ್ನು ಯೋಚಿಸೋಣ: ಸರಕಾರ ಯಾರ ಹಣವನ್ನು ಈ ಹೆದ್ದಾರಿಗಳಿಗೆ ವೆಚ್ಚಮಾಡಿದೆ? ಅದು ಜನರ ತೆರಿಗೆ ಹಣವೇ. ಮುಂಗಡಪತ್ರದಲ್ಲಿ ರಸ್ತೆಗಳ ನಿರ್ಮಾಣವೆಂಬ ಶೀರ್ಷಿಕೆಯಡಿ ಇದಕ್ಕೆ ಯೋಜನೆ ಸಿದ್ಧವಾಗುತ್ತದೆ. ಮುಂದೆ ಬರುವ ‘ಟೋಲ್’ನ್ನು ಅಂದಾಜು ಮಾಡಿ ಹೆದ್ದಾರಿಗಳನ್ನು ನಿರ್ಮಿಸುವುದಾದರೆ ಈಗಾಗಲೇ ತೆರಿಗೆ ನೀಡಿದ ಜನರಿಗೆ ‘ಟೋಲ್’ ಪಾವತಿಸುವ ಅಥವಾ ಪಾವತಿಸದೇ ಇರುವ ಆಯ್ಕೆಯ ಸ್ವಾತಂತ್ರ್ಯ ನೀಡಬೇಕಲ್ಲವೇ? ಅಥವಾ ಆ ಬಗ್ಗೆ ಜನಾಭಿಪ್ರಾಯ ಗಣಿಸಬೇಕಲ್ಲವೇ? ಅಭಿವೃದ್ಧಿಯ ಹೆಸರಿನಲ್ಲಿ ಜನರನ್ನು ಇಂತಹ ದಂಡಪ್ರಕ್ರಿಯೆಗೆ ಒಳಪಡಿಸುವ ಮೊದಲು ಈ ಬಗ್ಗೆ ಪ್ರಜಾಪ್ರಭುತ್ವದಡಿ ಯಾವ ಜನಾಭಿಪ್ರಾಯ ಸಂಗ್ರಹವಾಗುತ್ತದೆ? ಇಷ್ಟೇ ಅಲ್ಲ, ಈಚೆಗೆ ‘ಟೋಲ್’ ಸಂಗ್ರಹಕ್ಕೆ ನಗದು ವ್ಯವಹಾರದ ಬದಲಿಗೆ ಹಣವನ್ನು ವಾಹನದ ಹಣೆಬರಹದಂತೆ ಸಂಗ್ರಹಿಸಿ ಇಟ್ಟುಕೊಂಡು ‘ಫಾಸ್ಟಾಗ್’ನಂತಹ ಸ್ವಯಂಚಾಲಿತ ಪ್ರಕ್ರಿಯೆಗಳ ಮೂಲಕ ವಸೂಲು ಮಾಡುವ ತಂತ್ರಜ್ಞಾನವು ಒದಗಿ ಬಂದಿದೆ. ಇದರಿಂದಾಗಿ ಪ್ರತೀ ವಾಹನವೂ ಕನಿಷ್ಠ ಕೆಲವು ನೂರು ರೂಪಾಯಿಗಳಷ್ಟಾದರೂ ಮೊತ್ತವನ್ನು ಠೇವಣಿಯಾಗಿ ಈ ‘ಫಾಸ್ಟಾಗ್’ನಲ್ಲಿ ಇಟ್ಟುಕೊಂಡಿರಬೇಕು. ಈಗ ಊಹಿಸಿಕೊಳ್ಳಿ: ಒಂದು ವಾಹನವು ಹೀಗೆ ಕನಿಷ್ಠ ಐನೂರು ರೂಪಾಯಿಗಳ ಮೊತ್ತವನ್ನು ಇಟ್ಟುಕೊಂಡರೆ ದೇಶಾದ್ಯಂತ ಇರುವ ಮಿಲಿಯಗಟ್ಟಲೆ ವಾಹನಗಳ ಸಂಗ್ರಹಣೆಯ ಒಟ್ಟು ಮೊತ್ತ ಎಷ್ಟಿರಬಹುದು? ಇದಕ್ಕೆ ಬಡ್ಡಿಯಿಲ್ಲ. ಜೀವವಿಮೆಯ ಹಾಗೆ ಬರುವ ಆತಂಕಕ್ಕಿದಿರಾಗಿ ಇದನ್ನು ಅನುಭವಿಸಬೇಕು. ಇದರ ಫಲಾನುಭವಿ ಸರಕಾರವೇ.

ಇಂತಹ ಯೋಜನೆಗಳು ಬೇಕಷ್ಟಿವೆ. ನೇರ ತೆರಿಗೆ ಪಾವತಿಸುವವರಲ್ಲದೆ ಪರೋಕ್ಷ ತೆರಿಗೆ ನಾವು ಕೊಳ್ಳುವ ಪ್ರತೀ ವಸ್ತುವಿನಲ್ಲೂ ಇದೆ. ಈ ಬಗ್ಗೆ ತಜ್ಞರು ಜನರನ್ನು ಜಾಗೃತಿಗೊಳಿಸುವುದು ಅಗತ್ಯ ಜಿಎಸ್ಟಿ ಎಂಬ ಅವಮಾನಕಾರೀ ತೆರಿಗೆಯು ಮಕ್ಕಳು ಬಳಸುವ ಸ್ಲೇಟ್, ಪೆನ್ಸಿಲ್, ರಬ್ಬರ್, ಮಹಿಳೆಯರು ಬಳಸುವ ಅನಿವಾರ್ಯ ವಸ್ತುಗಳನ್ನೂ ಬಿಟ್ಟಿಲ್ಲ. ಹಾಗೆಂದು ಬಂಗಾರದ ತೆರಿಗೆ ಕಡಿಮೆ. ಇದಕ್ಕೆ ಯಾವ ವೈಜ್ಞಾನಿಕ ಸಮರ್ಥನೆಯೂ ಇಲ್ಲ. ನಾಲ್ಕಾರು ಮಂದಿ ರಾಜಕಾರಣಿಗಳೂ ರಾಜಕಾರಣದ ಅರ್ಥಶಾಸ್ತ್ರಜ್ಞರೂ ಸೇರಿ ತಯಾರಿಸುವ ಕಲ್ಮಶ ಇದು. ಬೆಲೆಯೇರಿಕೆಯಲ್ಲಿ ಇದರ ಕೊಡುಗೆ ಅಪಾರ. ಈ ಬಗ್ಗೆ ನಿರೀಕ್ಷಿತ ಮತ್ತು ಅಪೇಕ್ಷಿತ ಚರ್ಚೆ ಆಗುತ್ತಿಲ್ಲವೇಕೆ?

ನಿತ್ಯ ಅನುಭವಿಸುವ ಬ್ಯಾಂಕ್ ವ್ಯವಹಾರವನ್ನು ಗಮನಿಸಿ: ಶೂನ್ಯ ಠೇವಣಿಯ ಕೆಲವೇ ಕೆಲವು ಖಾತಾ ಯೋಜನೆಗಳ ಹೊರತು ಇನ್ನೆಲ್ಲದರಲ್ಲೂ ಕನಿಷ್ಠ ಠೇವಣಿಯ ನಿಯಮಗಳಿವೆ. ಇವು ಯಾವುದೇ ಅಗತ್ಯ, ಅನಿವಾರ್ಯಗಳ ಸಂದರ್ಭದಲ್ಲೂ ಖಾತೆಗಳಲ್ಲಿ ಮುಂದುವರಿಯುತ್ತದೆ; ಖಾತೆಗಳನ್ನು ಮುಚ್ಚದ ಹೊರತು. ಈ ಹಣ ಬಳಕೆಯಾಗದ ತಪ್ಪಿಗೆ ಬ್ಯಾಂಕುಗಳು ನೀಡುವ ಕನಿಷ್ಠ ಬಡ್ಡಿಯನ್ನೂ ಇದೇ ಹಣವನ್ನು ಸಾಲವಾಗಿ ಪಡೆಯುವ ಗ್ರಾಹಕನಿಗೆ ಅವರು ವಿಧಿಸುವ ಬಡ್ಡಿಯನ್ನೂ ಹೋಲಿಸಿ. ನಿಗದಿ ಠೇವಣಿಯಿಂದ ಸ್ವಲ್ಪ ಹಣವನ್ನು ಅಗತ್ಯ ಸಂದರ್ಭಗಳಲ್ಲಿ ಪಡೆಯಬೇಕಾದಾಗ ಅದಕ್ಕೆ ವಿಧಿಸುವ ಬಡ್ಡಿಯೂ ಕನಿಷ್ಠ ಎರಡು ಶೇಕಡಾ ಹೆಚ್ಚಿರುತ್ತದೆ. ಇರಲಿ: ಇದು ಅರ್ಥಶಾಸ್ತ್ರದ ಹಣಕಾಸಿನ ವ್ಯವಹಾರವೆಂಬಂತೆ ಪರಿಗಣಿಸಲಾಗುತ್ತದೆ. ಆದರೆ ಇದರಿಂದ ಬ್ಯಾಂಕುಗಳು ಪಡೆಯುವ ಲಾಭದಲ್ಲಿ ಗ್ರಾಹಕನಿಗೇನು ಲಾಭವಿದೆ? ನಿಜಾರ್ಥದಲ್ಲಿ ಗ್ರಾಹಕರೇ ಬ್ಯಾಂಕುಗಳ ಪಾಲುದಾರರು. ಅವರಿಗೆ ನಿವ್ವಳ ಲಾಭದಲ್ಲಿ ಮೊದಲ ಪಾಲು ಸಿಗಬೇಕೇ ಹೊರತು ಸರಕಾರಕ್ಕೂ ಅಲ್ಲ, ಪಾಲುಬಂಡವಾಳಶಾಹಿಗಳಿಗೂ ಅಲ್ಲ.

ಇದೇ ಬ್ಯಾಂಕ್ ವ್ಯವಹಾರದಲ್ಲಿ ಗ್ರಾಹಕನು ಎದುರಿಸುವ ಕೆಲವು ಸಮಸ್ಯೆಗಳು ಅಪರಿಹಾರ್ಯ. ಯಾವುದೇ ವ್ಯವಹಾರವನ್ನು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ‘ಎಸ್ಎಮ್ಎಸ್’ ಸಂದೇಶದ ಮೂಲಕ ತಲುಪಿಸುತ್ತವೆ. ಇವು ಯಾವುದೇ ವ್ಯವಹಾರ ಸಂಸ್ಥೆಯು ನೀಡಬಹುದಾದ ಸೇವೆ. ಆದರೆ ಈ ಸೇವೆಗೆ ಬ್ಯಾಂಕುಗಳು ನಿಗದಿತ ಶುಲ್ಕ ವಿಧಿಸುತ್ತವೆ. ಇಂತಹ ಸೇವೆಯನ್ನು ನೀಡುವ ಅಗತ್ಯವೇನಿದೆ? ಬೇಕಾದವರಿಗೆ ಮಾತ್ರ ಇರಬೇಕಾದ ಸೇವೆಯು ಸಾರ್ವಜನಿಕ ‘ಶೇವ್’ ಆಗಿ ಪರಿಣಮಿಸಿದೆ.

ನಿಮ್ಮ ಸಾಲವನ್ನು ನೀವು ನಗದಾಗಿ ಪಾವತಿಸಲು ಸೀಮಿತ ಅವಕಾಶಗಳಿವೆ. ಆದರೆ ಬಹುಮಟ್ಟಿಗೆ ಅದೂ ದೊಡ್ಡ ಮೊತ್ತವನ್ನು ಬ್ಯಾಂಕುಗಳು ನಗದಾಗಿ ಹೊಂದಿಸಿಕೊಳ್ಳುವುದಿಲ್ಲ. ಬದಲಿಗೆ ಗ್ರಾಹಕನ ಉಳಿತಾಯ ಖಾತೆಯೋ ಇನ್ನೊಂದು ರೀತಿಯ ಠೇವಣಿ ಖಾತೆಯೋ ಅದಕ್ಕೆ ಜಮಾ ಮಾಡಿ ಅಲ್ಲಿಂದ ಸಾಲಕ್ಕೆ ಹೊಂದಿಸಿಕೊಳ್ಳುತ್ತವೆ. ಈ ಪ್ರಕ್ರಿಯೆಯಲ್ಲಿ ಕೆಲವು ಬ್ಯಾಂಕುಗಳು ಮತ್ತೆ ನಿಯಮಿತ ಶುಲ್ಕಗಳನ್ನು ಪಡೆಯುತ್ತವೆ.

ಈ ನಿಯಮಗಳು ದೇಶಾದ್ಯಂತ ಎಲ್ಲ ಸರಕಾರಿ ಮತ್ತು ಅರೆ ಸರಕಾರಿ ಸಂಸ್ಥೆಗಳಿಗೆ ಒಂದೇ ಆದರೆ ಅದಾದರೂ ಸಹನೀಯ. ‘ಒಂದು ದೇಶ’ಕ್ಕೆ ಪರ್ಯಾಯವಾಗಿ ‘ಒಂದು ಆಧಾರ’ ‘ಒಂದು ಚುನಾವಣೆ’ಯಿಂದ ಮೊದಲ್ಗೊಂಡು ಎಲ್ಲವನ್ನೂ ಅದ್ವೈತಗೊಳಿಸುವ ‘ರಾಷ್ಟ್ರೀಯ ಪ್ರಜ್ಞೆ’ಯಡಿ ಕೆಲವು ಬ್ಯಾಂಕುಗಳನ್ನು ಸಂಗಮಿಸಲಾಯಿತು. ಬಹುತೇಕ ನಷ್ಟದಲ್ಲಿರುವ ಎಂದು ಹೆಸರಿಸಲಾದ ಬ್ಯಾಂಕುಗಳ ಜೊತೆಗೆ ಕೆಲವು ಲಾಭದಲ್ಲಿರುವ ಬ್ಯಾಂಕುಗಳನ್ನೂ ಸೇರಿಸಲಾಯಿತು. ಆದರೆ ಈ ಗಂಗಾ-ಯಮುನಾ-ಸರಸ್ವತಿ ಸಂಗಮದಿಂದ ಗ್ರಾಹಕರಿಗೇನೂ ಅನುಕೂಲವಾಗಿಲ್ಲ. ವೈವಿಧ್ಯತೆಯಲ್ಲಿ ಏಕತೆಯ ಈ ದೇಶದಲ್ಲಿ ಇಂತಹ ವ್ಯಾವಹಾರಿಕ ತಂತ್ರಗಳ ಮೂಲಕ ನಡೆಯುವ ಜೋಡಣೆ ಭಾರತವನ್ನು ಜೋಡಿಸುವುದಿಲ್ಲ. ಹಾಗೆಯೇ ಗ್ರಾಹಕರ್ಯಾರೂ ಇನ್ನೂ ಕೇಳದಿರುವ ಪ್ರಶ್ನೆಯೆಂದರೆ- ‘ಒಂದು ದೇಶ, ಒಂದು ಬ್ಯಾಂಕು’ ಯಾಕಿಲ್ಲ?

ಈಗ ಗ್ರಾಹಕರಿಗೆ ಬೀಳುವ ಇನ್ನೊಂದು ಹೊಡೆತವೆಂದರೆ (ಇದು ಎಲ್ಲ ಬ್ಯಾಂಕುಗಳಲ್ಲಿ ಇದೆಯೇನೋ ಗೊತ್ತಿಲ್ಲ!) ನಿಮ್ಮ ಖಾತೆಗೆ ನೀವು ಜಮಾಮಾಡುವ ಹಣಕ್ಕೆ ‘ನಗದು ವಿಲೇವಾರಿ ಶುಲ್ಕ’ (ಕ್ಯಾಶ್ ಹ್ಯಾಂಡ್ಲಿಂಗ್ ಚಾರ್ಜ್ ವಿಧಿಸಲಾಗುತ್ತದೆ. ನೀವು ಜಮೆಮಾಡಿದ ತಕ್ಷಣ ಈ ಶುಲ್ಕ ಅದರಿಂದ ವಜಾ ಆಗುತ್ತದೆ. ಒಂದು ಲಕ್ಷ ರೂಪಾಯಿಗಳಿಗೆ ನೂರಾಹದಿನೆಂಟು ರೂಪಾಯಿಗಳನ್ನು ವಿಧಿಸಿದ್ದು ಅನುಭವಕ್ಕೆ ಬಂದಿದೆ.

ಎಟಿಎಮ್ ಎಂಬ ಕ್ರಾಂತಿಕಾರಕ ಬದಲಾವಣೆಯನ್ನು ಸರಕಾರ ತಂದಿತು. ಇದು ಗಣಕೀಕೃತ ವಿನ್ಯಾಸವನ್ನು ಹೊಂದಿ ಜನಾನುಕೂಲ ವ್ಯವಹಾರವೆಂದು ಶ್ಲಾಘಿಸಲಾಯಿತು. ಮೊಬೈಲ್ ಬ್ಯಾಂಕಿಂಗೂ ಬಂದಿತು. ಆದರೆ ಇವೆಲ್ಲವನ್ನೂ ಉಚಿತವಾಗಿ ಪಡೆಯುವಂತಿಲ್ಲ. ಎಲ್ಲದಕ್ಕೂ ಶುಲ್ಕ.

ಈ ಪರಿಪಾಟಲನ್ನು ಅನುಭವಿಸುವ ಗಾಯಕ್ಕೆ ಉಪ್ಪನ್ನು ಹಚ್ಚುವಂತಹ ಇನ್ನಷ್ಟು ಸರಕಾರಿ ಯೋಜನೆಗಳಿವೆ: ಸಣ್ಣ ಉದಾಹರಣೆಯೊಂದಿಗೆ ನನ್ನ ಟಿಪ್ಪಣಿಯನ್ನು ಮುಗಿಸಬೇಕಾಗಿದೆ. ಜಂಟಿ ಖಾತೆಯಲ್ಲಿ ಇಬ್ಬರ ಹೆಸರಿರುತ್ತದೆ ಎಂದುಕೊಳ್ಳಿ. ಒಬ್ಬರ ಹೆಸರನ್ನು ತೆಗೆಯಬೇಕಾದರೆ ಅವರೂ ಸೇರಿ ಜಂಟಿ ಖಾತೆದಾರರು ಪತ್ರ/ಅರ್ಜಿ ನೀಡಬೇಕು. ಇದನ್ನು ಬ್ಯಾಂಕಿನವರು ಮಾಡಿಕೊಡುತ್ತಾರೆ. ಈಗ ಒಬ್ಬನೇ ಖಾತೆದಾರನ ಹೆಸರು. ಆದರೆ ಈ ಬದಲಾವಣೆಗೂ ನೂರಾಹದಿನೆಂಟು ರೂಪಾಯಿಗಳನ್ನು ವಿಧಿಸಲಾಗುತ್ತದೆ.

ಇಂತಹ ನೂರಾರು ಒಳದಾರಿಗಳಲ್ಲಿರುವ ಒಳಸುಳಿಗಳು ಬಡಗ್ರಾಹಕರಿಗೆ ಗೊತ್ತಿರುವುದಿಲ್ಲ. ಹಿಂದೆ ಒಬ್ಬ ಬ್ಯಾಂಕಿನ ಅಧ್ಯಕ್ಷ/ಆಡಳಿತ ನಿರ್ದೇಶಕರು ಒಂದು ಶಾಖೆಗೆ ಭೇಟಿ ನೀಡಿದರು. ಪ್ರತಿಷ್ಠಿತ ಗ್ರಾಹಕರಿಗೆ ಆಹ್ವಾನವಿತ್ತು. ಇದನ್ನೊಂದು ಪ್ರತಿಷ್ಠೆಯೆಂಬಂತೆ ಬಹಳಷ್ಟು ಮಾನ್ಯರು ಆಗಮಿಸಿದರು. ಸಮಾರಂಭವೂ ನಡೆಯಿತು. ಮುಖ್ಯಾತಿಮುಖ್ಯ ಗ್ರಾಹಕರನ್ನು ಈ ಬ್ಯಾಂಕಿನ ಅಧ್ಯಕ್ಷ/ಆಡಳಿತ ನಿರ್ದೇಶಕರಿಗೆ ಪರಿಚಯಿಸಲಾಯಿತು. ಅಂತಹ ಪ್ರತಿಯೊಬ್ಬರ ಜೊತೆಯಲ್ಲಿ ಪ್ರತ್ಯೇಕ ಫೋಟೊ ತೆಗೆಯಲಾಯಿತು. ಆನಂತರದಲ್ಲಿ ಈ ಫೋಟೊಗಳನ್ನು ಆಯಾಯ ಗ್ರಾಹಕರಿಗೆ ಪ್ರತ್ಯೇಕವಾಗಿ ನೀಡಲಾಯಿತು. ಗ್ರಾಹಕರಿಗೆ ಸಂತೋಷ, ಹೆಮ್ಮೆ. ಅದಾದ ಬಳಿಕ ಅವರ ಪೈಕಿ ಕೆಲವರಿಗಾದರೂ ಗೊತ್ತಾದ ವಿಚಾರವೆಂದರೆ ಈ ಫೋಟೊಗಳ ವೆಚ್ಚವನ್ನು ಅವರವರ ಖಾತೆಯಿಂದ ವಜಾಮಾಡಲಾಗಿತ್ತು.

ಇಡೀ ದೇಶದ ಆಡಳಿತ ನಡೆಯುವುದೇ ಹೀಗೆ. ಮೂಲೆಯಲ್ಲಿ ಕುಳಿತು ಮುಲುಕುವ ಹಣೆಬರಹ ಪ್ರಜೆಗಳಿಗೆ ಅನಿವಾರ್ಯ ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಬಾಲಸುಬ್ರಮಣ್ಯ ಕಂಜರ್ಪಣೆ

contributor

Similar News