ಬಾಧಿಸದಿರುವುದು ಕಾಡದು

ನೈಪಾಲ್ ಹೇಳಿದ್ದರಲ್ಲಿ ಅವರ ಸ್ವಾರ್ಥವಿತ್ತು. ಅವರಿಗೆ ಬ್ರಿಟನ್ ಅನ್ನದ ಹಾದಿಯನ್ನು ಮಾಡಿಕೊಟ್ಟು ಆಸರೆ ನೀಡಿದ ದೇಶ. ಆದ್ದರಿಂದ ಅವರಿಗೆ ಬ್ರಿಟನ್ ಎಂದೂ ವಸಾಹತುಶಾಹಿಯಾಗಿ ಕಾಣಲು ಸಾಧ್ಯವಿಲ್ಲ. ಬಹುತೇಕ ಅನಿವಾಸಿ ಭಾರತೀಯರು ನೈಪಾಲ್ ಮನಸ್ಥಿತಿಯವರೇ. ಭಾರತೀಯ ಕೋಮುವಾದವನ್ನು ಬೆಂಬಲಿಸುತ್ತ ರಜಾಸಮಯದಲ್ಲಿ ಭಾರತವನ್ನು ಸ್ವರ್ಗವಾಗಿ ಕಾಣುವವರೇ. ಬಂದಾಗ ಒಂದಷ್ಟು ಮತ್ತು ವಿದೇಶದಲ್ಲಿ ಸಾಕಷ್ಟು ಕೋಮುವಾದವನ್ನು ಬಿತ್ತುವವರೇ. ಆದರೆ ಸ್ವದೇಶದಲ್ಲೇ ಬದುಕಬೇಕಾದ ಅನಿವಾರ್ಯವಿರುವ ಭಾರತೀಯರಿಗೆ?

Update: 2024-12-12 05:42 GMT

ಕೆಲವು ಬಾರಿ ಒಂದು ಹಳೆಯ ಪ್ರಸಂಗಗಳು, ವರದಿಗಳು ಅನೇಕ ಸಂಗತಿಗಳನ್ನು, ವಿಚಾರಗಳನ್ನು ಮೆಲುಕು ಹಾಕುವಂತೆ ಮಾಡುತ್ತವೆ. ಅದನ್ನು ಹಂಚಿಕೊಳ್ಳುವುದರ ಮೂಲಕ ಹೊಸ ಯೋಚನೆಗಳಿಗೆ ಮುನ್ನುಡಿಯನ್ನು ಬರೆಯಬಹುದು.

ವಿ.ಎಸ್. ನೈಪಾಲ್ (1932-2018) ಭಾರತೀಯ ಮೂಲದ ಆದರೆ ಟ್ರಿನಿಡಾಡ್‌ನಲ್ಲಿ ಹುಟ್ಟಿ ಬೆಳೆದು ಬ್ರಿಟನಿಗೆ ವಲಸೆಯಾದ, 2001ರಲ್ಲಿ ತನ್ನ ಹಾಫ್ ಎ ಲೀಫ್ ಎಂಬ ಕಾದಂಬರಿಗೆ ನೊಬೆಲ್ ಪ್ರಶಸ್ತಿ ಪಡೆದರಾದರೂ ಇವರ ಸಾಹಿತ್ಯೇತರ ಕೃತಿಗಳು ಭಾರತಕ್ಕೆ ಹೆಚ್ಚು ಪ್ರಸ್ತುತವಾಗಿವೆ. ‘ಎ ಹೌಸ್ ಫಾರ್ ಮಿ.ಬಿಸ್ವಾಸ್’ (ಬಿಸ್ವಾಸನಿಗೊಂದು ಮನೆ), ‘ಆನ್ ಏರಿಯಾ ಆಫ್ ಡಾರ್ಕ್‌ನೆಸ್’ (ಕತ್ತಲ ಕ್ಷೇತ್ರ), ‘ಇಂಡಿಯಾ: ಎ ವುಂಡೆಡ್ ಸಿವಿಲೈಸೇಷನ್’, (ಭಾರತ: ಒಂದು ಭಗ್ನ ನಾಗರಿಕತೆ), ‘ಇಂಡಿಯಾ: ಮಿಲಿಯನ್ ಮ್ಯುಟಿನೀಸ್ ನೌ’ (ಭಾರತ: ಈಗ ಮಿಲಿಯ ದಂಗೆಗಳು) ಮುಂತಾದ ಕೃತಿಗಳನ್ನು ರಚಿಸಿದ ಈ ಸಾಹಿತಿಗೆ ಭಾರತವೆಂದರೆ ಅಭಿನಂದನೆ ಸ್ವೀಕರಿಸುವ ಅವಕಾಶವೆಂಬುದರ ಹೊರತಾಗಿ ಬೇರೆ ಆಸಕ್ತಿಯಿದ್ದಂತಿಲ್ಲ. ಭಾರತೀಯರ ಮೆಚ್ಚುಗೆಗೆ ವಿಶೇಷವಾಗಿ ಪಾತ್ರನಾಗಿಲ್ಲ. ಆದರೆ ಅವರನ್ನು ಉಲ್ಲೇಖಿಸುವಾಗಲೆಲ್ಲ ಆತನ ಭಾರತೀಯ ಮೂಲವನ್ನು ಹೇಳದೇ ಮುಂದುವರಿಯುವುದಿಲ್ಲ. (ಏಕೆಂದರೆ ಭಾರತೀಯರು ಆತ್ಮಶ್ಲಾಘನೆಗೆ ಪ್ರಸಿದ್ಧರು. ದೊಡ್ಡವರ ಸಂಪರ್ಕವನ್ನು ಒತ್ತಿ ಹೇಳಿಯೇ ತಮ್ಮ ವ್ಯಕ್ತಿತ್ವವನ್ನು, ಘನೆತಯನ್ನು ವಿಸ್ತರಿಸುವವರು. ಹೆಚ್ಚು ಕಡಿಮೆ ಅಡಿಗರ ‘ನನ್ನ ಅವತಾರ’ ಪದ್ಯದ ನಾಯಕರು.)

2002ರಲ್ಲಿ ನೈಪಾಲ್ ಭಾರತಕ್ಕೆ ವಿಶೇಷ ಭೇಟಿ ನೀಡಿದರು. ದಿಲ್ಲಿಯಲ್ಲಿ ಅವರನ್ನು ಸನ್ಮಾನಿಸಲು ನಡೆದ ಒಂದು ಸಂದರ್ಭದಲ್ಲಿ ವಿಕ್ರಮ್ ಸೇಠ್, ರುಚಿರ್ ಜೋಶಿ, ಶಶಿ ದೇಶಪಾಂಡೆ, ನಯನತಾರಾ ಸೇಹ್ಗಾಲ್ ಮುಂತಾದ ಇಲ್ಲಿನ ಜನಪ್ರಿಯ ಅಂತರ್‌ರಾಷ್ಟ್ರೀಯ ಲೇಖಕರು ಭಾಗವಹಿಸಿದ ಸಮಾರಂಭದಲ್ಲಿ ಅವರು ಮಾತನಾಡಿದ್ದರು.

ಮಾತನಾಡುತ್ತ ನೈಪಾಲ್ ‘ಇಲ್ಲಿನ’ (ಆ ಸಮಾರಂಭದಲ್ಲಿ ನಡೆದಿದ್ದ) ಸಾಹಿತ್ಯ ಚರ್ಚೆ ‘ನಿಸ್ಸಾರ’ವಾಗಿದ್ದು ತನಗೆ ಹಿಡಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಆತನ ಈ ಆಕ್ರೋಶಕ್ಕೆ ಕಾರಣವಾದದ್ದು ಇಲ್ಲಿ ನಡೆಯುತ್ತಿದ್ದ, ಮತ್ತು ಈಗಲೂ ನಡೆಯುತ್ತಿರುವ, ಸ್ತ್ರೀವಾದದಂತಹ ಪ್ರಮೇಯಗಳು. ಭಾಗವಹಿಸಿ ನೈಪಾಲ್‌ಗಿಂತ ಮೊದಲು ಮಾತನಾಡಿದ ಶಶಿದೇಶಪಾಂಡೆ, ನಯನತಾರಾ ಸೇಹ್ಗಾಲ್ (ಮುಂತಾದವರು) ತಮ್ಮ ಮಾತಿನಲ್ಲಿ ಮಹಿಳೆಯರು ಪುರುಷ ಸಮಾಜದಲ್ಲಿ ಎದುರಿಸುವ ಶೋಷಣೆಯು ಹೇಗೆ ತಮ್ಮ ಸೃಜನಶೀಲತೆಯನ್ನು ಬಾಧಿಸಿತು ಎಂಬುದನ್ನು ಪ್ರಸ್ತಾವಿಸಿದರು. ಅಲ್ಲದೆ ಇಂಗ್ಲಿಷ್ ಹೇಗೆ ಭಾರತೀಯ ಸಾಹಿತ್ಯವನ್ನು ಪ್ರಭಾವಿಸಿತು ಎಂಬುದನ್ನೂ ಅಭಿವ್ಯಕ್ತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನೈಪಾಲ್ ಈ ನಿಸ್ಸಾರ ವಿಚಾರಗಳು ತನಗೆ ಕೇಳಿ ಕೇಳಿ ಸಾಕಾಗಿದೆ. ವಸಾಹತುಶಾಹಿ, ಶೋಷಣೆ ಮುಂತಾದವು ಎಷ್ಟು ಕಾಲ ನಮ್ಮ ಬದುಕನ್ನು ಬಾಧಿಸಬಲ್ಲವು? ‘‘ನನ್ನ ಜೀವನ ಕಿರಿದು; ನಿಸ್ಸಾರವನ್ನು ಕೇಳಲಾರೆ’’ ಎಂದು ಮುಂತಾಗಿ ಹೇಳಿದರು. ಮುಂದುವರಿಸಿ ‘‘ಅಸಮಾನತೆ, ಸ್ತ್ರೀಶೋಷಣೆ ಮುಂತಾದವನ್ನು ಹೇಳುತ್ತ ಕುಳಿತರೆ ನೀವು ಏನನ್ನೂ ಬರೆಯಲಾರಿರಿ, ವಸಾಹತುಶಾಹಿ ಅಳಿದ ಅರೆಶತಮಾನ ಕಳೆದ ಮೇಲೂ ನೀವು ವಸಾಹತುಶಾಹಿ ಕುರಿತು ಏನು ಮಾತನಾಡುತ್ತೀರಿ?’’ ಎಂದು ನೇರವಾಗಿಯೇ ಟೀಕಿಸಿದರು.

ನೆರೆದ ಸಭೆ ಅವಾಕ್ಕಾಯಿತು. ರುಚಿರ್‌ಜೋಶಿ ನೈಪಾಲ್ ಆ ದಿನದ ಮುಖ್ಯ ಅತಿಥಿ ಎಂಬುದನ್ನೂ ಲೆಕ್ಕಿಸದೆ (ಇದೂ ಸರಿಯೆನ್ನಿ- ಸಾಹಿತ್ಯ ಚರ್ಚೆಗಳು ಅನೌಪಚಾರಿಕವಾಗಿಯೇ ಇರಬೇಕು!) ‘‘ನೀವು ಉದ್ಧಟತನದಿಂದ ಮಾತನಾಡುತ್ತೀರಿ’’ ಎಂದು ಪ್ರತಿಭಟಿಸಿದರು. ಶಶಿದೇಶಪಾಂಡೆ ಮಾತ್ರ ಸ್ಪಷ್ಟವಾಗಿ ‘‘ಯಾವುದು ಯಾರನ್ನು ಬಾಧಿಸುತ್ತದೆಯೋ ಅದನ್ನು ಅವರು ಬಲ್ಲರು. ಬ್ರಿಟನ್‌ನಲ್ಲಿ ಪರದೇಶಿಯಾಗಿ ಬದುಕುವ ವಿಚಾರವನ್ನು ನೈಪಾಲ್ ವಿವರಿಸಿದಾಗ ಅದು ಆತನ ಆತಂಕದ್ದು ಎಂದು ನಾನು ಸ್ವೀಕರಿಸಿದೆ. ಆದರೆ ನಮ್ಮ ಅಳಲನ್ನು ಆತ ಇದೇ ಮಾನದಂಡದಲ್ಲಿ, ತರಂಗಾಂತರದಲ್ಲಿ ಸ್ವೀಕರಿಸುವ, ಗ್ರಹಿಸುವ ಮನೋಧರ್ಮವನ್ನು ಹೊಂದಿಲ್ಲ’’ ಎಂದು ಕಿಡಿಕಾರಿದರು. ಸಭೆ ಸ್ವಲ್ಪ ಗೊಂದಲಮಯವಾಯಿತು.

ನೈಪಾಲ್‌ರನ್ನು ಭಾರತೀಯರು ಕ್ಷಮಿಸಿದಂತಿಲ್ಲ. ಏಕೆಂದರೆ ಆತ ಅವಕಾಶ ಸಿಕ್ಕಿದಲ್ಲೆಲ್ಲ ವಸಾಹತುಶಾಹಿಯ ಪ್ರಭಾವವನ್ನು ಅವಗಣಿಸಿ ಭಾರತದ ನೆಲೆ-ಬೆಲೆಗಳನ್ನು ಅಪಮೌಲ್ಯಗೊಳಿಸುವಂತೆ ಬರೆದರು; ಮಾತನಾಡಿದರು. ಉದಾಹರಣೆಗೆ ಆತನ ವಿವೇಚನೆಯು ಇಂದಿನ ಭಾರತದ ಯೋಚನಾಕ್ರಮಕ್ಕೆ ಹೊಂದುವಂತಿದೆ. ಬ್ರಿಟಿಷರು ಈ ದೇಶಕ್ಕೆ ಮಾಡಿದ ಹಾನಿಗಿಂತ ಹೆಚ್ಚು ಹಾನಿಯನ್ನು ಇಸ್ಲಾಮ್ ಆಕ್ರಮಣ, ಆಡಳಿತ ಮಾಡಿದೆ ಎನ್ನುತ್ತಾರೆ ನೈಪಾಲ್. ಅವರ ಪ್ರಕಾರ ಇಸ್ಲಾಮ್ ಭಾರತವನ್ನು ನಾಶ ಮಾಡಿತು. ಭಾರತೀಯರು ಬ್ರಿಟಿಷ್ ವಸಾಹತುಶಾಹಿಯು 2-3 ಶತಮಾನಗಳ ಕಿರು ಅವಧಿ(?)ಯಲ್ಲಿ ಭಾರತವನ್ನು ನಾಶಮಾಡಿತು ಎಂದು ತಿಳಿಯುವುದು ತಪ್ಪು. ಕಹಿಸತ್ಯವೆಂದರೆ ಇಸ್ಲಾಮಿನ ಸಂಘಟಿತ ಸೇನಾಶಕ್ತಿಯ ಎದುರು ಹೋರಾಡುವ ಸಾಮರ್ಥ್ಯವನ್ನು ಹೊಂದಿರಲಿಲ್ಲ ಮತ್ತು ಇದರಿಂದಾಗಿ ಭಾರತೀಯರು ನಾಶವಾದರು. ಭಾರತದ ಬೌದ್ಧಿಕ ಬದುಕು ಅಂದರೆ ಸಂಸ್ಕೃತ ಸಂಸ್ಕೃತಿಯೆಂದು ನೈಪಾಲ್ ಅರ್ಥವಿಸುತ್ತಾರೆ. ಅವರ ಚಿಂತನೆಯಂತೆ ‘ಸಂಸ್ಕೃತ ಸಂಸ್ಕೃತಿಯು ಕ್ರಿಸ್ತಶಕ 1000ದೊಂದಿಗೆ ಮುಗಿಯಿತು. ಆನಂತರ ಭಾರತದ ಮೇಲೆ ಇಸ್ಲಾಮಿನ ಕರಿನೆರಳು ಬಿದ್ದಿತು. ಈಗ ಭಾರತೀಯರು ಇಸ್ಲಾಮ್ ದೊರೆಗಳು ಮಾತ್ರ ಸ್ಮಾರಕಗಳನ್ನು, ಕೋಟೆಕೊತ್ತಳಗಳನ್ನು ನಿರ್ಮಿಸಿದರೆಂದು ತಿಳಿಯುತ್ತಾರೆ. ಆದರೆ ಅವರು ನಿರ್ಮಾಣ ಮಾಡಿದ ಗುಲಾಮ ಸಂಸ್ಕೃತಿಯನ್ನು ಮರೆಯುತ್ತಾರೆ. ಈಗಿನ ವರೆಗೂ ಅದು ಮುಂದುವರಿದಿದೆ. ನೀವು ಮುಸ್ಲಿಮರಾಗಬೇಕಾದರೆ ನಿಮ್ಮ ಚರಿತ್ರೆಯನ್ನು ನಾಶಮಾಡಬೇಕು; ಮತ್ತು ನಿಮ್ಮ ಸಂಸ್ಕೃತಿಯ ಮುದ್ರೆಯನ್ನು ಒತ್ತಬೇಕು. ಎಲ್ಲದಕ್ಕೂ ಅರೇಬಿಯನ್ ಮೂಲವನ್ನು ಹುಡುಕಬೇಕು. ಇದು ವಸಾಹತುಶಾಹಿಯು ಭಾರತಕ್ಕೆ ಮಾಡಿದ ಹಾನಿಗಿಂತ ಬಹುಪಾಲು ತೀವ್ರವಾದದ್ದು’ ಎನ್ನುತ್ತಾರೆ ಆತ.

ನೈಪಾಲ್‌ನ ಪೂರ್ವಜರು ಮುಸ್ಲಿಮ್ ಆಳ್ವಿಕೆಯಿದ್ದಾಗ ಭಾರತದಿಂದ ವಲಸೆಹೋಗಲಿಲ್ಲ, ಬದಲಾಗಿ ಬ್ರಿಟಿಷ್ ವಸಾಹತುಶಾಹಿಯ ಗುಲಾಮಗಿರಿಯಲ್ಲಿ ವೆಸ್ಟ್‌ಇಂಡೀಸ್‌ನ ರಬ್ಬರ್ ತೋಟದಲ್ಲಿ ವಲಸೆಹೋದರು ಎಂಬುದನ್ನು ಮರೆಯಬಾರದು. ಒಂದು ವೇಳೆ ಅವರ ಪೂರ್ವಜರು ಗುಲಾಮರಾಗಿ ಬ್ರಿಟಿಷರಿಂದ ಬಲಾತ್ಕಾರವಾಗಿ ವಲಸೆಹೋದರೆಂದುಕೊಂಡರೂ ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂದ ಸಂಸ್ಕೃತ ಸಂಸ್ಕೃತಿಯನ್ನು ಆನಂತರದವರು, ಹೋಗಲಿ, ನೈಪಾಲ್ ಕೂಡಾ ತನ್ನ ತಲೆಮಾರಿನಲ್ಲೂ ಪಾಲಿಸಲಿಲ್ಲ. ಅವರ ಕೊನೆಯ ವರ್ಷಗಳಲ್ಲಿ ಭಾರತದಲ್ಲಿ ಅವರು ಇಚ್ಛಿಸಿದಂತಹ ‘ಸಂಸ್ಕೃತ ಸಂಸ್ಕೃತಿ’ಯ ರಾಜಕೀಯ ಸ್ವರೂಪವು ಅಧಿಕಾರ ಪಡೆದಿತ್ತು. ನೈಪಾಲ್ ನೋಬೆಲ್ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಭಾರತದಲ್ಲಿ ವಾಜಪೇಯಿ ಸರಕಾರವಿತ್ತು. ಮುಖಕ್ಕೆ ತಕ್ಕಹಾಗೆ ಅಭಿನಂದನಾ ಭಾಷಣವನ್ನು ಮಾಡುವುದು ಲೇಖಕರಿಗೆ ಹೊಸತಲ್ಲ. ಬಹುತೇಕ ಸೃಜನಶೀಲರು, ವಿಮರ್ಶಕರು ಗಾಳಿಕೋಳಿಗಳು. ನೈಪಾಲ್ ಇದಕ್ಕೆ ಹೊರತಲ್ಲ. ಭಾರತದಲ್ಲಿ ಕೋಮುವಾದಿ ಆಡಳಿತ ಬಂದಾಗ ನೈಪಾಲ್ ಸಂತೋಷಪಟ್ಟಿದ್ದರು. ಭಾರತವು ಆತ್ಮನಿರ್ಭರವಾಗಿದೆ ಎಂಬುದನ್ನು ಮೋದಿಗಿಂತಲೂ ಮೊದಲು ಹೇಳಿದವರು ನೈಪಾಲ್. (ನೈಪಾಲ್ ಆತ್ಮಜಾಗೃತಿ ಎಂಬುದಕ್ಕೆ ಸಮಾನವಾದ seಟಜಿ-ಚಿತಿಚಿಡಿeಟಿess ಎಂಬ ಪದವನ್ನು ಬಳಸಿದ್ದರು) ಅವರ ಅಭಿಪ್ರಾಯದಲ್ಲಿ ‘ಭಾರತವು ಹೊಸ ಬೌದ್ಧಿಕ ಬದುಕನ್ನು ಆರಂಭಿಸುತ್ತಿದೆ’.

ಭಾರತದ ನಾಡಿಬಡಿತವನ್ನು ಅನುಭವಿಸುವವರಿಗೆ ಶಶಿದೇಶಪಾಂಡೆ, ನಯನತಾರಾ ಸೇಹ್ಗಾಲ್ ಹೇಳುವ ಮಾತು ಇಷ್ಟವಾಗುತ್ತದೆ. ಮಹಿಳೆಯರು ಲಿಂಗತಾರತಮ್ಯವನ್ನು ಅನುಭವಿಸುವುದು, ‘ಕೆಳಜಾತಿ’ಯೆಂದು ವರ್ಗೀಕರಣ ಹೊಂದಿದವರು ಶೋಷಣೆಯನ್ನು ಅನುಭವಿಸುವುದು ಹೊಸದೇನಲ್ಲ. ಅದೊಂದೇ ಈ ದೇಶದಲ್ಲಿ ಪಾರಂಪರಿಕವಾಗಿ ಮುಂದುವರಿದ ಅಂಧಸತ್ಯ. ಬ್ರಿಟಿಷ್ ವಸಾಹತುಶಾಹಿ ಆಡಳಿತದಲ್ಲಿ ಸತಿಸಹಗಮನ, ಬಾಲ್ಯವಿವಾಹ ಮುಂತಾದ ಗೊಡ್ಡು ಸಂಪ್ರದಾಯಗಳಿಗೆ ಕಡಿವಾಣ ಹಾಕಿದರೂ ಉಳಿದಂತೆ ಇಲ್ಲಿನ ‘ಮನುಸ್ಮತಿ’ಯನ್ನು ದಹಿಸಲು ಅಂಬೇಡ್ಕರ್ ಅವರೇ ಬರಬೇಕಾಯಿತು. ಪುಸ್ತಕಗಳು ದಹನವಾದವೇ ಹೊರತು ಅವುಗಳ ಯೋಚನೆ ದಹಿಸಲಿಲ್ಲ. ಅವು ಹೋದವೆಂದು ದಾಖಲೆಗೊಂಡರೆ ಗವಾಕ್ಷಿಯಿದೆಯಲ್ಲ! ಆ ಮೂಲಕ ಬೇರೆ ರೂಪದಲ್ಲಿ ಪ್ರವೇಶಿಸಿವೆ. ಇಂದಿಗೂ ಮರ್ಯಾದಾ ಹತ್ಯೆಯಂತಹ ವಿರೂಪವಿದೆ. ಸೇನೆಯಂತಹ ಎಲ್ಲವನ್ನೂ ಮೀರಿರಬೇಕಾದ ವ್ಯವಸ್ಥೆಯಲ್ಲೂ ಎಲ್ಲ ಬಗೆಯ ಶೋಷಣೆಯು ನಡೆಯುತ್ತಿದೆಯೆಂದು ನಮ್ಮ ನ್ಯಾಯಾಲಯಗಳು ಮತ್ತೆ ಮತ್ತೆ ಹೇಳುತ್ತಿವೆ. (ಮಾಧ್ಯಮಗಳು ಇಂದಿನ ಕೋಮು ವ್ಯವಸ್ಥೆಗೆ ಅಪವಾದವಾಗಬಲ್ಲ ಯಾವ ಟೀಕೆಯನ್ನೂ ಪ್ರಸಾರ/ಪ್ರಚಾರ ಮಾಡವು.)

ಈ ದೇಶದಲ್ಲಿ ಇಸ್ಲಾಮ್ ಒಂದು ಸಂಸ್ಕೃತಿಯನ್ನು ಬೇರೂರಿಸಿದ್ದು ನಿಜ. ಆದರೆ ಧಾರ್ಮಿಕ ಆಚರಣೆಯ ಹೊರತಾಗಿ ಬೇರೆಲ್ಲೂ ಅವು ಪ್ರತ್ಯೇಕ ಭಾರತವನ್ನು ನಿರ್ಮಿಸಲಿಲ್ಲ. ಯಾವ ಗ್ರಾಮಕ್ಕೆ ಹೋದರೂ ಅಲ್ಲಿ ಜನರು ಜಾತಿ-ಮತ-ಧರ್ಮವನ್ನು ಮರೆತು ಸಮನ್ವಯದಿಂದ ಬದುಕಲು ಸಾಧ್ಯವಿದೆ. ಮನುಷ್ಯತ್ವವೇ ಮುಖ್ಯವೆಂದು ತಿಳಿಯುವುದಕ್ಕೆ ಶಿಕ್ಷಣವು ಬೇಡ; ಜಾತಿ-ಮತ-ಧರ್ಮಗಳ ಅಗತ್ಯವಿಲ್ಲ. ತಾಜ್‌ಮಹಲಿನಂತಹ ಭವ್ಯ ಮಾದರಿಯನ್ನು ಸ್ಮಾರಕವೆನ್ನೋಣ, ‘ತೇಜೋಮಹಾಲಯ’ ಎನ್ನೋಣ, ಆದರೆ ನೈಜ ಶಿಲ್ಪಿಗೆ, ಕಲಾವಿದನಿಗೆ ಅವಕ್ಕೂ ಅಜಂತಾ-ಎಲ್ಲೋರಾದ, ಬೇಲೂರು-ಹಳೇಬೀಡಿನ ಶಿಲ್ಪಗಳಿಗೂ ಕಲೆಯ ಹೊರತಾಗಿ ಬೇರೇನೂ ಕಾಣದು. ಆದರೆ ಈಗ ನಾವು ನೈಪಾಲ್ ಗುರುತಿಸಿದ ‘ಸಂಸ್ಕೃತ ಸಂಸ್ಕೃತಿ’ಯನ್ನು ಉಳಿಸಲು ಕಲಾಸ್ಮಾರಕಗಳನ್ನು, ಅವುಗಳ ಅವಶೇಷಗಳನ್ನು ಅಗೆಯುವ ಅಗತ್ಯವಿದೆಯೇ?

ಒಣ, ಸಂಕುಚಿತ ಮನಸ್ಸುಗಳಿಗೆ ಈ ವಾದ ಹಿಡಿಸದು. ಅಧಿಕಾರದ ರುಚಿ ಹಿಡಿದವರಿಗೆ ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ಏನನ್ನು ಬೇಕಾದರೂ ಮಾಡಲು ಸಿದ್ಧರಿರುವವರಿಗೆ ನೈಪಾಲ್ ಸರಳ ರಾಷ್ಟ್ರೀಯ ಸು‘ಸಂಸ್ಕೃತ’ ಮಾರ್ಗದರ್ಶಿಯಾಗಬಲ್ಲರು. ಬ್ರಿಟಿಷರು ಭಾರತಕ್ಕೆ ಮಾಡಿದ ಅನ್ಯಾಯವನ್ನು ಈ ಸು‘ಸಂಸ್ಕೃತ’ರು ಮರೆಯುತ್ತಾರೆ. ಬ್ರಿಟಿಷರು ತಾವೆಸಗಿದ ಪ್ರಮಾದಗಳಿಗೆ, ಅಪರಾಧಗಳಿಗೆ ಕ್ಷಮೆ ಕೆಳಬೇಕೆಂದು ಸಂಸದ ಶಶಿತರೂರ್ ಆಗ್ರಹಿಸಿದರು. ಆದರೆ ಅವರಿಗೆ ಈ ಭಾರತೀಯ ‘ಸುಸಂಸ್ಕೃತ’ರ ಬೆಂಬಲ ಸಿಗಲಿಲ್ಲ. ಅವರ ಬೆಂಬಲ ಏನಿದ್ದರೂ ನೈಪಾಲ್ ಪ್ರಮೇಯಕ್ಕೆ. ಮೆಕಾಲೆಯನ್ನು ಟೀಕಿಸುತ್ತಲೇ ಇಂದಿಗೂ ನಮ್ಮ ಗಡಿಯಾರದಲ್ಲಿ, ವ್ಯವಹಾರದಲ್ಲಿ ಇಂಗ್ಲಿಷ್ ಕ್ಯಾಲೆಂಡರಿಗೆ ಪರ್ಯಾಯವಿಲ್ಲದಿರುವಾಗ, ಅಚ್ಚ ಭಾರತೀಯತೆಯನ್ನೂ ‘ಎಕ್ಸ್’ ಎಂಬ ಟ್ವಿಟರಿನ ಮೂಲಕವೇ ಹೊರಗೆಡಹಬೇಕಾದಾಗ, ಇ-ಮೇಲನ್ನು ಇಂಗ್ಲಿಷಿನಲ್ಲೇ ಬರೆಯಬೇಕಾದಾಗ, ಭಾರತದಲ್ಲಿರುವ ‘ನಾವು’ ಎಂದರೆ ಇಲ್ಲಿರುವ ಸರ್ವಜನಾಂಗದ ಶಾಂತಿಯ ತೋಟದ ಹೂಗಿಡಗಳು ಬ್ರಿಟಿಷ್ ಬಲೆಯೊಳಗೆ ಇನ್ನೂ ಇದ್ದೇವೆಂಬುದನ್ನು ಮರೆಯದಿದ್ದರೆ ಭಾರತ ಕ್ಷೇಮವಿದ್ದೀತು. ಅಲ್ಲದೆ ಹೋದರೆ ಬ್ರಿಟಿಷರು ಪರಮಪಾವನ ದೇವತೆಗಳಾಗಿ ಕಾಣಬಹುದು. ನೈಪಾಲ್ ಹೇಳಿದ್ದರಲ್ಲಿ ಅವರ ಸ್ವಾರ್ಥವಿತ್ತು. ಅವರಿಗೆ ಬ್ರಿಟನ್ ಅನ್ನದ ಹಾದಿಯನ್ನು ಮಾಡಿಕೊಟ್ಟು ಆಸರೆ ನೀಡಿದ ದೇಶ. ಆದ್ದರಿಂದ ಅವರಿಗೆ ಬ್ರಿಟನ್ ಎಂದೂ ವಸಾಹತುಶಾಹಿಯಾಗಿ ಕಾಣಲು ಸಾಧ್ಯವಿಲ್ಲ. ಬಹುತೇಕ ಅನಿವಾಸಿ ಭಾರತೀಯರು ನೈಪಾಲ್ ಮನಸ್ಥಿತಿಯವರೇ. ಭಾರತೀಯ ಕೋಮುವಾದವನ್ನು ಬೆಂಬಲಿಸುತ್ತ ರಜಾಸಮಯದಲ್ಲಿ ಭಾರತವನ್ನು ಸ್ವರ್ಗವಾಗಿ ಕಾಣುವವರೇ. ಬಂದಾಗ ಒಂದಷ್ಟು ಮತ್ತು ವಿದೇಶದಲ್ಲಿ ಸಾಕಷ್ಟು ಕೋಮುವಾದವನ್ನು ಬಿತ್ತುವವರೇ. ಆದರೆ ಸ್ವದೇಶದಲ್ಲೇ ಬದುಕಬೇಕಾದ ಅನಿವಾರ್ಯವಿರುವ ಭಾರತೀಯರಿಗೆ?

ನೈಪಾಲ್ ಒಳ್ಳೆಯ ಲೇಖಕ. ಅವರ ಪ್ರತಿಭೆ, ಪಾಂಡಿತ್ಯವನ್ನು ಕಲೆಯೊಳಗೆ ಹುಡುಕಬೇಕು. ಆದರೆ ಮನ್ನಣೆಯ ಶಿಖರದಲ್ಲಿ ನಿಂತು ಆಳದಲ್ಲಿ ಬಿದ್ದ ಮಾಂಸದ ತುಂಡಿಗೆ ಅರಸುವ ಮನಸ್ಸನ್ನು ಖಂಡಿಸಬೇಕು. ಭಾರತೀಯರು ಶತಶತಮಾನಗಳಲ್ಲಿ ‘ಖಂಡವಿದೆಕೋ ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ’ ಎಂದು ಪರದೇಶೀ ಆಕ್ರಮಣಕೋರರಿಗೆ ಹೇಳಿದರು. ಈತ ಗುಲಾಮ ಎಂದು ಮಾಲಕನಿಗೆ ಅನ್ನಿಸಿದರೆ ತಪ್ಪಿಲ್ಲವಂತೆ. ಆದರೆ ಗುಲಾಮನಿಗೆ ತಾನು ಗುಲಾಮ ಎಂದು ಅನ್ನಿಸಿದಾಗ ಆತ ಗುಲಾಮನಾಗುತ್ತಾನಂತೆ. ಈಗ ಬಹುತೇಕರಿಗೆ ನಮ್ಮೊಳಗೇ ಇತರರ ಖಂಡ, ಮಾಂಸಗಳನ್ನು, ಗುಂಡಿಗೆಯ ಬಿಸಿರಕ್ತವನ್ನು ಹೀರುವುದು ಸುಸಂಸ್ಕೃತ-ಸುಖ ವೆನ್ನಿಸುತ್ತದೆಯೋ ಎಂದು ವಿಶ್ಲೇಷಿಸುವ ಕಾಲ ಬಂದಿದೆ.

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News