ಊರಿಗೆ ಊರೇ ಹಸೆಯಲಿ ಕುಳಿತರೆ...

Update: 2024-10-31 05:43 GMT

ತಾನೇಕೆ ಬರೆಯಬೇಕು ಎಂದು ಚಿಂತಿಸುವುದರ ಬದಲು ತಾನು ಬರೆದದ್ದನ್ನು ಓದಿ ಎಂದು ಕರೆದುಕೂಗುವವರೇ ಹೆಚ್ಚಿದ್ದಾರೆ.

ಈ ಅತಂಕ ಹಿಂದೆಯೂ ಇತ್ತೇನೋ? ಗೊತ್ತಿಲ್ಲ. ಕೆ.ಎಸ್.ಎನ್. ಇದೇ ಅರ್ಥದಲ್ಲಿ ಓದುವವರ ಸಂಖ್ಯೆ ಬೆಳೆಯಬೇಕೆಂದು ಸೂಚಿಸಿದ್ದಾರೆ: ‘ಊರಿಗೆ ಊರೇ ಹಸೆಯಲ್ಲಿ ಕುಳಿತರೆ ಆರತಿ ಬೆಳಗಲು ಜನವೆಲ್ಲಿ?’ ಈ ಆರತಿ ಬೆಳಗುವ ಜನ ಹೆಚ್ಚಾಗಲಿ; ಹಾಗೆಯೇ ಹಸೆಯಲ್ಲಿ ಕೂರುವ ಜನ ಕಡಿಮೆಯಾಗಲಿ.

ಬೆಳಕಿನ ಹಬ್ಬದ ಸಂದರ್ಭದಲ್ಲಿ ಭಾಷೆ ಮತ್ತು ಭಾಷೆಯ ಶಿಶುವಾದ ಸಾಹಿತ್ಯದ ಬೆಳಕು ಹೆಚ್ಚಬೇಕಾದರೆ ಓದಿನ ಬೆಳಕು ಹಚ್ಚಬೇಕು; ಕನ್ನಡದ ಹುಚ್ಚು ಹೆಚ್ಚಾಗಬೇಕು. ಇದು ಸಾಧ್ಯವೇ ಎಂದು ಇಂದಿನ ಬರೆಹಗಾರರು ಹೇಳಬೇಕು.

ಇಂದು ದೀಪಾವಳಿ; ಬೆಳಕಿನ ಹಬ್ಬ. ಅಜ್ಞಾನದಿಂದ ಜ್ಞಾನಕ್ಕೆ, ಮೃತ್ಯುವಿನಿಂದ ಅಮರತ್ವಕ್ಕೆ, ಕತ್ತಲಿನಿಂದ ಬೆಳಕಿಗೆ ನಮ್ಮ ನಡಿಗೆ ಎಂಬುದನ್ನು ಸೂಚಿಸುವ ಸಂಭ್ರಮ. ಬೆಳಕಿದ್ದಲ್ಲಿ ಕತ್ತಲಿಲ್ಲ. ಬೆಳಕು ಧನಾತ್ಮಕವಾದದ್ದು. ಬೆಳಕು ಒಳ್ಳೆಯದರ ಸಂಕೇತ. ಕತ್ತಲು ಋಣಾತ್ಮಕವಾದದ್ದು. ಕತ್ತಲು ಎಂಬುದು ಸ್ವತಂತ್ರ ಅಸ್ತಿತ್ವದ ವಿಚಾರವಲ್ಲ. ಬೆಳಕಿಲ್ಲದ್ದು ಕತ್ತಲೆ. ಬೆಳಕಿದ್ದಲ್ಲಿ ಕತ್ತಲೆಯಿಲ್ಲ. ಪ್ರಾಯಃ ಮನುಷ್ಯ ಅಂತಲ್ಲ, ಎಲ್ಲ ಬದುಕೂ ಹೀಗೇ ಬೆಳಕನ್ನು ಉಳಿಸಿಕೊಳ್ಳುವ ಸವಾಲಿನ ವಿಚಾರ. ಅಮರತ್ವವೆಂಬುದಿಲ್ಲ. ಅದೂ ಪೂರಕ ಸಂಕೇತ. ದೀರ್ಘಾಯುವಾಗು ಎಂದಾಗಲೂ ಸಾವಿಲ್ಲ ಎಂದರ್ಥವಲ್ಲ. ಸಾವಿಲ್ಲದ ಮನೆಯಿಲ್ಲ. ಕಿಸಾಗೌತಮಿಗೆ ಬುದ್ಧ ಅರ್ಥಮಾಡಿಕೊಟ್ಟದ್ದು ಇದನ್ನೇ. ಸಾವಿನ ರಹಸ್ಯ ಗೊತ್ತಿಲ್ಲ. ಅದಕ್ಕೆ ವಿಜ್ಞಾನ ಒಂದು ನಿರೂಪಣೆಯನ್ನು ನೀಡಿದರೆ ಜ್ಞಾನ ಇನ್ನೊಂದು ವ್ಯಾಖ್ಯಾನವನ್ನು ನೀಡಿದೆ. ಯಾವುದೂ ಅಂತಿಮ ಸತ್ಯವಲ್ಲ. ನಚೀಕೇತನಿಗೆ ಯಮದರ್ಶನವಾದಮೇಲೂ ಆತ ಮರಳಿದ್ದು ಇದೇ ಚಿಂತನೆಯನ್ನು ಹೊತ್ತು. ಅದಕ್ಕೇ ಆತನ ಯಾನದ ಕೊನೆ ಉಪನಿಷತ್ತಿನಲ್ಲೂ ಇಲ್ಲ. ಅದನ್ನು ಯಮನು ಹೇಳಿದನು ಎಂದಷ್ಟೇ ಹೇಳಿ ಉಪನಿಷತ್ಕಾರರು ಕಥೆಯನ್ನು ಮುಗಿಸಿದ್ದಾರೆ. ಜ್ಞಾನವೆಂಬುದಿದೆ. ಅದಕ್ಕೆ ಮಿತಿಯಿಲ್ಲ. ಅದು ಅಪಾರ. ಆದರೂ ಬದುಕಿನ ಮಿತಿಯಲ್ಲಿ ಅದಕ್ಕೂ ಒಂದು ಮಾಪನವಿದೆ. ಯಾರನ್ನಾದರೂ ಜ್ಞಾನಿಯೆಂಬಾಗ ಆತ ಎಲ್ಲವನ್ನೂ ಬಲ್ಲ ಎಂದರ್ಥವಲ್ಲ. ಯಾವುದೋ ಒಂದು ಕ್ಷೇತ್ರದಲ್ಲಿ ಆತ ಬಲ್ಲ, ಇಲ್ಲವೇ ಆತನನ್ನು ಬಲ್ಲ, ಇತರರಿಗಿಂತ ಹೆಚ್ಚನ್ನು ಬಲ್ಲ ಎಂದಷ್ಟೇ ಅರ್ಥ. ಜ್ಞಾನಪೀಠವೆಂಬ ಪ್ರಶಸ್ತಿ ಹೊತ್ತವರ ಮಿತಿಯೂ ಇದೇ.

ಈ ಬಾರಿ ದೀಪಾವಳಿಯ ನಡುವೆ ಕನ್ನಡ ರಾಜ್ಯೋತ್ಸವವೂ ಬಂದಿದೆ. ಕನ್ನಡಪರ ಚಿಂತನೆಗೊಂದು ಅವಕಾಶ. ನಾವು ಉದ್ಧಾರಕರಾದರೆ ಕನ್ನಡದ ಉದ್ಧಾರಕ್ಕೆ ಸಂಕಲ್ಪಿತರಾಗಲು, ನಾವು ಸೇವಕರಾದರೆ ಕನ್ನಡದ ಸೇವೆಯನ್ನು ಮಾಡಲು, ನಾವು ಶ್ರಮಿಕರಾದರೆ ಕನ್ನಡಕ್ಕಾಗಿ ಶ್ರಮಿಸಲು, ಮತ್ತೊಂದು ಅವಕಾಶ. ಭಾಷೆ ಒಂದು ಸಂಸ್ಕೃತಿಯನ್ನು, ಸಂಸ್ಕಾರದ ನೆಲೆಗಟ್ಟನ್ನು ಬೇರೂರಿಸುವ ನೀರು. ಅದೂ ಒಂದು ನಿತ್ಯವೂ ಆಚರಿಸಬೇಕಾದ, ಆದರೆ ವರ್ಷಕ್ಕೊಂದು ಬಾರಿ ಮಾತ್ರ ಆಚರಿಸುವ ತಿಳಿವಿನ ಬೆಳಕಿನ ಹಬ್ಬ. ಅಳಿವಿನ ಅಂಚಿನಲ್ಲಿರುವವರಿಗೂ ಇನ್ನಷ್ಟು ಬದುಕಬಲ್ಲೆಯೆಂಬ ಭರವಸೆಯನ್ನು ನೀಡಲು ಸಹಕರಿಸುವ ಹಬ್ಬ.

ನಿತ್ಯದ ಬದುಕಿನಲ್ಲಿ ಇವೆಲ್ಲ ತಲೆಕೆಡಿಸುವ ಚಿಂತನೆಗಳು. ಅದಕ್ಕೇ ಬಲ್ಲವರು ಇವನ್ನು ತತ್ವಜ್ಞಾನವೆಂದರು. ಎಲ್ಲವೂ ತತ್ವಜ್ಞಾನವೇ. ಅದನ್ನು ದರ್ಶನವೆಂದು ಹೇಳಿದರು. ದಾರ್ಶನಿಕರೆಂದು ಕೆಲವರನ್ನು ಅವರವರ ಕಾಲ ಕರೆಯಿತು. ಎಲ್ಲರ ಬದುಕೂ ಅಥವಾ ಕಲಾಸೃಷ್ಟಿ ದರ್ಶನವಾಗಲು ಸಾಧ್ಯವಿಲ್ಲ. ಉದಾರಚರಿತರು, ಉದಾತ್ತ ಮಹಾನುಭಾವರು ತಮ್ಮ ಮಿತಿಯೊಳಗೆ ಯಾವುದೋ ಒಂದು ಆದರ್ಶದ ಸಾಕ್ಷಾತ್ಕಾರವನ್ನು ಪಡೆಯಲು ಯತ್ನಿಸಿದರು. ಇದು ಎಲ್ಲ ಮತಧರ್ಮಗಳ ಪ್ರವಾದಿಗಳ ಬದುಕಿನಲ್ಲೂ ಕಂಡ, ಕಾಣುವ ಸಂಗತಿ. ನಾವು ಲೌಕಿಕರು ಎನ್ನುವ ಮತ್ತು ವಿರಾಗಿಗಳು, ಅವಧೂತರು ಎನ್ನುವ ಮಂದಿಯ ನಡುವೆ ಬಹಳ ವ್ಯತ್ಯಾಸವಿಲ್ಲ.

ಇವನ್ನೆಲ್ಲ ಕಲೆಯ ಬಲೆಯಲ್ಲಿ ಕಟ್ಟಿಹಾಕಲು ಬರೆಹಗಾರರು, ಶಿಲ್ಪಿಗಳು, ಚಿತ್ರಗಾರರು ಪ್ರಯತ್ನಿಸಿದರು. ಅದಕ್ಕೆ ಬಹಳ ಅಧ್ಯಯನ ಮತ್ತು ಒಳ-, ಹೊರ-, ವಿಕಾಸದೃಷ್ಟಿ ಬೇಕು. ಬದುಕು ಇಂತಹದ್ದಕ್ಕೆ ಮುಡಿಪಾಗಿಟ್ಟಾಗ ಮಾತ್ರ ಇದು ಒಂದು ದರ್ಶನವಾದೀತು. ಉಳಿದದ್ದು ಚೋದ್ಯ. ಕಾಣ್ಕೆ-ಕಣ್ಕಟ್ಟುಗಳ ನಡುವೆ ಗೆರೆ ಬಲು ತೆಳು ಎಂದದ್ದು ಇದಕ್ಕೇ.

ಆದರೆ ಬೆಳಕಿನ ಬದಲು ಸದ್ದು ಹೆಚ್ಚಾದರೆ ಅದು ಬೆಳಕಿನ ಹಬ್ಬವಾಗದು. ಯುದ್ಧ ನಡೆದರೂ ಸದ್ದಿರುತ್ತದೆ. ಅದರೊಂದಿಗೆ ಸಾವು-ನೋವೂ ಇರುತ್ತದೆ. ಅದೇನು ಹಬ್ಬವಾದೀತು? ಈಗ ನಾವು ಬೆಳಕಿನ ಹಬ್ಬವನ್ನು ಆಚರಿಸುವಾಗ ಫೆಲೆಸ್ತೀನ್ನಲ್ಲಿ, ಗಾಝಾದಲ್ಲಿ, ಉಕ್ರೇನ್ನಲ್ಲಿ, -ಹುಡುಕುತ್ತ ಹೋದರೆ ಎಲ್ಲೆಡೆಯಲ್ಲಿ, ಕೊನೆಗೆ ನಮ್ಮ ಮನೆಬಾಗಿಲಲ್ಲೂ ನಡೆಯುವ ಸದ್ದಿನ ಹಬ್ಬವನ್ನು ಅನಿವಾರ್ಯವಾಗಿ ಕೇಳಬೇಕಾಗಿದೆ. ಅಂದರೆ ಬೆಳಕಿನ ಸ್ಥಾನವನ್ನು ಸದ್ದು ಆವರಿಸುತ್ತಿದೆ. ಅದರ ಹೊಗೆ ಎಲ್ಲೆಡೆ ಕವಿಯುತ್ತಿದೆ. ಅದು ಮರುಳುಮಾಡುವ ಮಂಜಲ್ಲ. ಖಾಂಡವವನದಹನದಲ್ಲಿ ಎದ್ದ ಬೆಂಕಿಯ ಹೊಗೆ. ಮುಂದೆ ಕುರುಕ್ಷೇತ್ರದವರೆಗೂ ವ್ಯಾಪಿಸಿದ ಯಾತನೆಯ ಹೊಗೆ.

ನಾವಿದನ್ನು ಅರ್ಥಮಾಡಿಕೊಳ್ಳಬೇಕು. ಅರ್ಥವಾಗಬೇಕಾದರೆ ಬಹಳಷ್ಟು ಅಧ್ಯಯನ ಬೇಕು. ಈ ಅಧ್ಯಯನ ನಿರಂತರವಾಗಿರಬೇಕು. ಇವಕ್ಕೆ ತಾತ್ಕಾಲಿಕವಾಗಿ ಮತ್ತು ಸೀಮಿತ ವರ್ತುಲದಲ್ಲಿ ಸಿಗುವ ಪ್ರಶಸ್ತಿ, ಬಹುಮಾನ, ಪುರಸ್ಕಾರ, ಗೌರವಗಳು ಅಡ್ಡಿಯಾಗಬಾರದು.

ಇಷ್ಟೊಂದು ವಿಶಾಲವಾಗಿ ಯೋಚಿಸುತ್ತ ಹೋದಂತೆ ನಮ್ಮ ಹತ್ತಿರದ ಬರೆಹದ ಪ್ರಪಂಚ ಧುತ್ತೆಂದು ಕಣ್ಣೆದುರು ಕಾಡುತ್ತದೆ. ಅದೂ ಬದುಕಿನ ಒಂದು ಭಾಗವಷ್ಟೇ! ಕನ್ನಡದ ಬರೆಹಪ್ರಪಂಚ ನಮಗೆ ಗೊತ್ತಿದ್ದಂತೆ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದು. ಆದರೆ ನಿತ್ಯನೂತನ. ಭಾಷೆಯ ಬೆಳಕನ್ನು ಇನ್ನಷ್ಟು ಬೆಳಗಲು, ಈಗಿರುವ ಬೆಳಕು ಮಂದವಾಗದಂತೆ ಪೋಷಿಸಲು ರಾಜ್ಯೋತ್ಸವದ ಸಮಯ ಒಂದು ಸುಮುಹೂರ್ತ.

ಇಂದಿನ ಕನ್ನಡ ಬರೆಹ ಪ್ರಪಂಚದ ಕಡೆಗೆ ದೃಷ್ಟಿಹಾಯಿಸಿದಾಗ ಮೊನ್ನೆ ಗೆಳೆಯರೊಬ್ಬರು ಹೇಳಿದ ‘‘ಓದಬೇಕಾದ ಬಹಳಷ್ಟು ಜನರಿದ್ದಾರೆ; ಆದರೆ ಅವರು ಬರೆಯುತ್ತಿದ್ದಾರೆ’’ (There are many people who should read but they write) ಎಂಬ ಒಂದು ಕವಿವಾಕ್ಯವನ್ನು ಉಲ್ಲೇಖಿಸಿದರು. ಹೀಗೆ ಹೇಳಿದವರೂ ಬರೆದೇ ಹೇಳಿದರು. ನಾನೂ ಇದನ್ನು ಬರೆದೇ ಹೇಳುತ್ತಿದ್ದೇನೆ. ಬರೆಹ ಈ ಮಾತಿಗೆ ಒಂದು ಮಾಧ್ಯಮವಾಗುತ್ತಿದೆಯೇ ಹೊರತು ಅಪವಾದವಾಗುವುದಿಲ್ಲ.

ಇದನ್ನೇ ವಿಸ್ತರಿಸಿ ಹೇಳಬೇಕಾದರೆ ಇಂದಿನ ಬರೆಹದ ಪ್ರಪಂಚವನ್ನು-ಸದ್ಯಕ್ಕೆ ನಮ್ಮ ಪಂಪನ ಬನವಾಸಿಯಂತಹ ಕನ್ನಡ ಪ್ರಪಂಚವನ್ನು ನೋಡಬಹುದು. ಕಳೆದ ಎರಡು ಸಹಸ್ರಮಾನಗಳ ಅವಧಿಯಲ್ಲಿ ಬಂದ ಒಟ್ಟೂ ಬರೆಹಗಳನ್ನು ಅಳೆದರೆ, ಕಳೆದ ಒಂದು ಶತಮಾನಗಳಲ್ಲಿ ಪ್ರಕಟವಾದಷ್ಟು ಬರೆಹ ಹಿಂದೆ ಬಂದಿಲ್ಲವೆನ್ನಬಹುದು. ಸುಲಭವಾದ ಮತ್ತು ಅನುಕೂಲವಾದ ವಿವರಣೆಯೆಂದರೆ ಹಿಂದೆ ಪ್ರಕಟಣೆ ಇಷ್ಟು ಸುಲಭವಿರಲಿಲ್ಲ; ಹಿಂದೆ ಈಗಿನಷ್ಟು ಜನರಿರಲಿಲ್ಲ; ಅಧ್ಯಯನ, ವಿದ್ಯಾಭ್ಯಾಸಕ್ಕೆ ಈಗಿನಷ್ಟು ಸೌಕರ್ಯಗಳು, ಅವಕಾಶಗಳಿರಲಿಲ್ಲ; ವಿಜ್ಞಾನ ಈಗಿನಷ್ಟು ಮುಂದುವರಿದಿರಲಿಲ್ಲ; ಮನುಷ್ಯ ಸಂಪ್ರದಾಯಸ್ಥನಾಗಿದ್ದ; ಆಧುನಿಕನಾಗಿರಲಿಲ್ಲ; ಹೀಗೆಷ್ಟೋ. ಆದರೆ ಆಗಲೂ ಜ್ಞಾನಮಾಧ್ಯಮ ಜನರೆದುರು ತೆರೆದುಕೊಂಡಿತ್ತು. ಇತರ ಪ್ರಾಣಿಜೀವಗಳಿಗೆ ಈ ಕಾಲಮಾನ, ವಿಕಾಸವೆಂದು ನಾವು ಕರೆಯುವ ಬದಲಾವಣೆ ಯಾವ ಅನುಕೂಲವನ್ನೂ ಮಾಡಿರಲಿಲ್ಲವೆಂದು ಅನುಭವವಾಗುತ್ತದೆ. ಅವು ಹೇಗಿವೆಯೋ ಹಾಗೆಯೇ ಇವೆ. ಇಲ್ಲದಿರುವುದು ಅವುಗಳಿಗೆ ಲಭ್ಯವಿದ್ದ ಪ್ರಾಕೃತಿಕ ಸವಲತ್ತುಗಳು. ಹರಿವ ನೀರು, ಸಸ್ಯಶ್ಯಾಮಲೆ, ಕಾಡು ಪಾಡು.

ಆದರೂ ಈ ಹಿಂದೆ ಬಂದ ಜ್ಞಾನಗಂಗೆ ಇಂದು ಮಲಿನವಾಗಿದೆಯೆಂಬುದನ್ನು ಒಪ್ಪದಿರಲು ಸಾಧ್ಯವೇ? ಕಾರಣವೆಂದರೆ ಹರಿದು ಬಂದ ಗಂಗೆಯ ಸ್ವಚ್ಛ ಹರಿವನ್ನು ನಾವು ಮರಳಿ ನೋಡುವುದಿಲ್ಲ. ಸರಳವಾಗಿ ಹೇಳುವುದಾದರೆ ಅವನ್ನು ನಾವು ಓದುವುದು ಕಡಿಮೆಯಾಗಿದೆ. ಅದಕ್ಕೂ ವಿವರಣೆಯಿದೆ: ಹಳೆಗನ್ನಡ ಕಬ್ಬಿಣದ ಕಡಲೆ; ಅರ್ಥವಾಗದು. ಅವು ಹೊಸಗನ್ನಡದಲ್ಲಿ ‘ಭಾಷಾಂತರ’(!)ಗೊಂಡರೂ ಓದುವವರ ಸಂಖ್ಯೆ ತೀರ ಕಡಿಮೆಯಾಗಿದೆ. ಪರಿಣಾಮವಾಗಿ ನಾವಿಂದು ಅವನ್ನೂ ಓದುವುದಿಲ್ಲ; ನಮ್ಮ ಸುತ್ತ ಇರುವ ಕೆಲವೇ ಕೆಲವು ಒಳ್ಳೆಯ ಬರೆಹಗಳನ್ನೂ ಓದುವುದಿಲ್ಲ. ಇವೆಲ್ಲವನ್ನೂ ಜೀರ್ಣಿಸಿಕೊಂಡವರಂತೆ ನಾವು ಓದುವುದನ್ನು ಕೈಬಿಟ್ಟು ಬರೆಯುತ್ತಲೇ ಇರುತ್ತೇವೆ. ಎಷ್ಟು ಬರೆಯುತ್ತೇವೆಂದರೆ ಓದುವುದಕ್ಕೆ ಬಿಡುವೇ ಇಲ್ಲದವರಂತೆ. ಇದು ತಮಾಷೆಯಲ್ಲ; ಓದಿನ ನಡುವೆ ಬರೆಯಲು ವೇಳೆ ಸಿಗುವುದಿಲ್ಲ ಎಂಬುದಕ್ಕೆ ಬದಲಾಗಿ ಈ ಬರೆಹದಿಂದಾಗಿ ಓದುವುದಕ್ಕೆ ವೇಳೆಯೇ ಸಿಗುವುದಿಲ್ಲ ಎನ್ನುವವರು ಬೇಕಷ್ಟು ಜನ ಸಿಗುತ್ತಾರೆ. ಇತರರ ಬರೆಹ ಹೋಗಲಿ, ಪರಿಸ್ಥಿತಿಯನ್ನು ಗಮನಿಸಿದರೆ ತಾವು ಬರೆದದ್ದನ್ನೇ ಮತ್ತೆ ಓದುತ್ತಾರೋ ಇಲ್ಲವೋ ಎಂಬ ಸಂಶಯ ಬರುವಂತಿದೆ. ಇನ್ನೊಂದು ಪಂಥದವರಿದ್ದಾರೆ: ಅದನ್ನೆಲ್ಲ ಯಾಕೆ ಓದಬೇಕು? ನಮ್ಮ ಅನುಭವವನ್ನು ಚಿತ್ರಿಸುವಷ್ಟು ಬರೆಹ ನನಗಿದೆ. ಸಾಕಲ್ಲ? ಅನುಭವ ಮತ್ತು ಜ್ಞಾನ ಮುಖಾಮುಖಿಯಾದಾಗ ಅನುಭವ ಗೆಲ್ಲಬೇಕು; ಜ್ಞಾನ ಸೋಲಬೇಕು; ಇದು ತರ್ಕ. ಆದರೆ ನಾವು ಹಳೆಯದೆಂದು ಹೇಳುವ (ದೂಷಿಸುವ?) ಸಾಹಿತ್ಯವೂ ಅನುಭವದಿಂದಲೇ ಮೂಡಿಬಂದದ್ದು ಎಂಬುದನ್ನು ನಾವು ಅಂದರೆ ನಮ್ಮಲ್ಲಿನ ಬಹಳಷ್ಟು ಬರೆಹಗಾರರು ಮರೆಯುತ್ತೇವೆ. ಪಂಪ ಚಿತ್ರಿಸಿದ ಬನವಾಸಿ ಪ್ರತಿಯೊಬ್ಬನ ಮನೆಯ ಬನವಾಸಿ. ಅದು ಸಂವೇದನೆಯಿಂದಷ್ಟೇ ಹುಟ್ಟಲು ಸಾಧ್ಯ. ಆ ಸಂವೇದನೆಗೆ ಬೇಕಾದ ನೀರು-ಗೊಬ್ಬರ ಎಲ್ಲಕಡೆ ಪಡೆಯುವಂತಿರಬೇಕು. ಅದರ ತೊಟ್ಟಿಲಲ್ಲಿ ಬೆಳೆದ ಸಾಹಿತ್ಯವು ಎಲ್ಲರ ಹಿತ್ತಲಲ್ಲಿ ಉದ್ಯಾನವಾಗಿ ಬೆಳೆಯಬೇಕು. ಆಗಲೇ ಮತ್ತೊಬ್ಬ ಪಂಪ ಹುಟ್ಟಿಬರಲು ಸಾಧ್ಯ. ವಚನಕಾರರು ಈಗಿಲ್ಲ. ಅವರ ವಚನಗಳು ತಾವೇ ತಾವಾಗಿ ಸೃಷ್ಟಿಯಾಗಲಿಲ್ಲ. ಅಲ್ಲೂ ಒಂದು ಅನುಭವ ಮಂಟಪವಿತ್ತು. ಅದೂ ಸ್ವಯಂಭೂ ಸೃಷ್ಟಿಯಲ್ಲ. ಬದುಕಿನ ಏರುಪೇರುಗಳಲ್ಲಿ, ಸಾಮಾಜಿಕ ತಾರತಮ್ಯ-ವೈದೃಶ್ಯಗಳಲ್ಲಿ, ರಾಜಸತ್ತೆಯ ಪಾಳೇಗಾರಿಕೆಯ ಕೌರ್ಯದಲ್ಲಿ ಮಿಂದು ಬಂದ ಅನುಭವಗಳ ವಚನಗಳು. ಎಲ್ಲವೂ ಒಳ್ಳೆಯದಾಗಬೇಕೆಂಬ ಹಂಬಲದಲ್ಲಿ ಮಾಡಿದ ಆರ್ತನಾದಗಳು. ಹಳೆ-, ನಡು-, ಹೊಸ- ಗನ್ನಡದ ಎಲ್ಲ ಉತ್ತಮ ಸಾಹಿತ್ಯಗಳೂ ಈ ಅಗ್ನಿದಿವ್ಯವನ್ನು ದಾಟಿಯೇ ಬಂದವುಗಳು. ಆದರೆ ಅವೆಲ್ಲ ಒಟ್ಟಾದರೂ ಇಂದು ಒಂದು ವರ್ಷದಲ್ಲಿ ಬರುವ ಬರೆಹದ ಬೆಳೆಯಷ್ಟು ಆಗಲಾರದು. ಇಂದು ಇರುವ ಮಧ್ಯಮಗಳಲ್ಲಿ ಯಾರೂ ಕುಣಿಯಬಹುದು. ಆದ್ದರಿಂದ ಎಲ್ಲರೂ ಬರೆಹಗಾರರೇ. ಹೀಗೆ ಬರೆಯುವವರನ್ನು ಬೆಂಬಲಿಸುವ ಒಂದು ಆಪ್ತ ನಿರುದ್ಯೋಗ ಪ್ರಪಂಚವೇ ಇದೆ. ಇದು ಎಷ್ಟು ಪರಿಣಾಮಕಾರಿಯಾಗಿದೆಯೆಂದರೆ ಯಾವುದೂ ಕೆಟ್ಟದ್ದಲ್ಲ. ಯಾವುದೂ ನಿಷ್ಪ್ರಯೋಜಕವಲ್ಲ. ಪ್ರತಿಯೊಬ್ಬನೂ ‘ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಬರೆಯುತ್ತಾನೆ/ಳೆ’ ಎಂಬ ಮೆಚ್ಚುಗೆ ಬೇರೆ. ಇದರಿಂದಾಗಿ ಹುಟ್ಟಿಗೆ ತಡೆಯೊಡ್ಡುವವರಿಲ್ಲ; ಅದರ ಶೈಶವ ಮೆಚ್ಚುಗೆಗೆ ಬೇಕಷ್ಟು ಪೊರೆಯುವ ನೆರೆಹೊರೆಗಳಿದ್ದಾರೆ. ಚೆನ್ನಾಗಿಲ್ಲವೆಂದು ಹೇಳುವ ಅಂಗಾರಾಮ್ಲ ಮನುಷ್ಯರಿಂದ ಬಾರದು. ಏಕೆಂದರೆ ಎಲ್ಲರೂ ಹಿತಚಿಂತಕರೇ. ಇವೆಲ್ಲದರ ಫಲಿತಾಂಶವೆಂದರೆ ಸಸ್ಯಗಳಿಂದಷ್ಟೇ ಬರುವ ಸ್ವಚ್ಛಗಾಳಿ ಇಲ್ಲಿ ಮಲಿನವಾಗಿದೆ. ಅವನ್ನು ನಾವು ಶುದ್ಧೀಕರಿಸಲಾರೆವು. ಸಸ್ಯಗಳಿಗೆ ಮಾತಿಲ್ಲ. ಎಲ್ಲವೂ ಕಾಲದ ಗಾಳಿಯಲ್ಲಿ ಲೀನವಾಗಬೇಕು. ಎಲ್ಲ ಕಮ್ಮಟಗಳೂ ಯಾವೊಬ್ಬನ ಬರೆಹದ ಬಗ್ಗೆ ಇರುತ್ತದೆಯೇ ಹೊರತು ನಮ್ಮ ಸಾರಸ್ವತ ಪ್ರಪಂಚವನ್ನು ಹಿಗ್ಗಿಸದ ಪೂರ್ವಸೂರಿಗಳ ಕುರಿತು ಇರುವುದಿಲ್ಲ.

ಆಗಲೂ ಈಗಿನಷ್ಟೇ ಬರೆದಿರಬಹುದು ಎಂದರೊಬ್ಬರು. ಉಳಿದದ್ದು ಇಷ್ಟೇ. ಹೌದು ಅದೂ ನಮಗೆ ಪಾಠವಾಗಬೇಕು. ಸಾವಿರ ಸಾವಿರ ಸಾಲುಗಳು ಹುಟ್ಟಿದರೂ ಕೊನೆಗೆ ಉಳಿದ ಸಾಲುಗಳೆಷ್ಟು ಎಂಬುದೇ ಮುಖ್ಯ. ಎಷ್ಟು ಹನಿ ಸುರಿದರೂ ಚಿಪ್ಪಿನೊಳಗೆ ಮುತ್ತಾಗುವ ಭಾಗ್ಯ ಪಡೆದ ಹನಿಯಷ್ಟೇ ಮಳಿಗೆಗಳಲ್ಲಿ ಲಭ್ಯ. ಸಾರ್ವಕಾಲಿಕವಾಗಿ (ಅದೂ ಮಿತಿಯುಳ್ಳದ್ದು!) ಉಳಿಯುವಂಥದ್ದು. ಜೀವಜಾಲದ ಸೃಷ್ಟಿಯೂ ಇದೇ ಪ್ರಮೇಯದ್ದು. ಸಂಯೋಗದ ಭಾಗ್ಯಕಂಡ ಯಾವುದೋ ಒಂದು ಅಣು ಮಾತ್ರ ಜೀವಪಡೆಯುತ್ತದೆ. ಇದರ ಅರಿವಿದ್ದರೆ ನಾವು ಬರೆಯುವ ಒಂದೊಂದು ಸಾಲಿಗೂ ಹಿನ್ನೆಲೆಯಾಗಿ ಓದಿದ ಸಾವಿರಸಾಲುಗಳಿರಬೇಕೆಂಬುದು ಅರ್ಥವಾದೀತು. ಆಗ ಬರೆಯುವ ಸಾಲುಗಳಿಗಿಂತ ಬರೆಯದ ಸಾಲುಗಳು ಹೆಚ್ಚಾದಾವು. ಸಾಮಾಜಿಕ ಜಾಲತಾಣ ಬಂದ ಮೇಲಂತೂ ಬರೆಹದ ಸಮುದ್ರಕಿನಾರೆಯಲ್ಲಿ ಓಡಾಡುವ ಅರೆನಗ್ನ ಜನ ಹೆಚ್ಚಿದ್ದಾರೆ. ತಾನೇಕೆ ಬರೆಯಬೇಕು ಎಂದು ಚಿಂತಿಸುವುದರ ಬದಲು ತಾನು ಬರೆದದ್ದನ್ನು ಓದಿ ಎಂದು ಕರೆದುಕೂಗುವವರೇ ಹೆಚ್ಚಿದ್ದಾರೆ.

ಈ ಅತಂಕ ಹಿಂದೆಯೂ ಇತ್ತೇನೋ? ಗೊತ್ತಿಲ್ಲ. ಕೆ.ಎಸ್.ಎನ್. ಇದೇ ಅರ್ಥದಲ್ಲಿ ಓದುವವರ ಸಂಖ್ಯೆ ಬೆಳೆಯಬೇಕೆಂದು ಸೂಚಿಸಿದ್ದಾರೆ: ‘ಊರಿಗೆ ಊರೇ ಹಸೆಯಲ್ಲಿ ಕುಳಿತರೆ ಆರತಿ ಬೆಳಗಲು ಜನವೆಲ್ಲಿ?’ ಈ ಆರತಿ ಬೆಳಗುವ ಜನ ಹೆಚ್ಚಾಗಲಿ; ಹಾಗೆಯೇ ಹಸೆಯಲ್ಲಿ ಕೂರುವ ಜನ ಕಡಿಮೆಯಾಗಲಿ.

ಬೆಳಕಿನ ಹಬ್ಬದ ಸಂದರ್ಭದಲ್ಲಿ ಭಾಷೆ ಮತ್ತು ಭಾಷೆಯ ಶಿಶುವಾದ ಸಾಹಿತ್ಯದ ಬೆಳಕು ಹೆಚ್ಚಬೇಕಾದರೆ ಓದಿನ ಬೆಳಕು ಹಚ್ಚಬೇಕು; ಕನ್ನಡದ ಹುಚ್ಚು ಹೆಚ್ಚಾಗಬೇಕು. ಇದು ಸಾಧ್ಯವೇ ಎಂದು ಇಂದಿನ ಬರೆಹಗಾರರು ಹೇಳಬೇಕು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಬಾಲಸುಬ್ರಮಣ್ಯ ಕಂಜರ್ಪಣೆ

contributor

Similar News