ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅನಗತ್ಯ ವಿವಾದ
ಕನ್ನಡ ಸಾಹಿತ್ಯ ಪರಿಷತ್ತಿನ ಇತ್ತೀಚಿನ ಸಂಪ್ರದಾಯದಂತೆ ಸಾಹಿತ್ಯೇತರ ಅಧ್ಯಕ್ಷರಾದ ಮಹೇಶಜೋಷಿಯವರು ಅಧ್ಯಕ್ಷಗಿರಿಗೆ ಯಾರಾದರೇನಂತೆ? ಎಂಬ ಅಧಿಕಾರ ಧೋರಣೆಯಿಂದ ವರ್ತಿಸುವಂತಿದೆ. ಈಗ ಈ ಆಯ್ಕೆ ಕಸಾಪದ ಅಧ್ಯಕ್ಷರಿಗೆ ಪ್ರಿಯರಾದ, ಯಾವುದೇ ಕ್ಷೇತ್ರದವರೇ ಆಗಿರಲಿ, ಕನ್ನಡಿಗರಾದರೆ ಸಾಕು ಎಂಬ ಸೂತ್ರದನ್ವಯ ಕೂರಿಸುವ ಸ್ಥಾನವಾಗುವ ಗಜಪಯಣವಾಗುತ್ತಿದೆ.
ವಿವಾದವಿಲ್ಲದ ಯಾವ ವಿಚಾರವೂ ಶ್ರೇಷ್ಠವೆನಿಸಿಕೊಳ್ಳುವುದಿಲ್ಲ. ಅಥವಾ ಶ್ರೇಷ್ಠ ವಿಚಾರವೆನಿಸಿಕೊಳ್ಳಬೇಕಾದರೆ ಚರ್ಚೆಯಾದರೆ ಸಾಲದು; ವಿವಾದವೂ ಆಗಬೇಕು. 109 ವರ್ಷಗಳ ಇತಿಹಾಸ ಹೊಂದಿದ ಕನ್ನಡ ಸಾಹಿತ್ಯ ಪರಿಷತ್ತಿನ ಸುಯೋಗದಿಂದ ಈ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೂ ಅದರ ಅಧ್ಯಕ್ಷ ಸ್ಥಾನದ ಕಾರಣದಿಂದ ಹೊಸ ಶ್ರೇಷ್ಠವಲ್ಲದ ವಿವಾದಕ್ಕೆ ಸಾಕ್ಷಿಯಾಗಿದೆ. ಈ ಕುರಿತು ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಪ್ರಾಯಗಳು ಮೂಡಿಬಂದಿವೆ. ಇವುಗಳಲ್ಲಿ ಪರ-ವಿರೋಧದಿಂದಾಗಿ ಸಮ್ಮೇಳನದಲ್ಲಿ ಭಾಗವಹಿಸುವ ಅರ್ಹತೆಯಿರುವ ಮತ್ತು ಭಾಗವಹಿಸಲು ಆಯ್ಕೆಯಾಗುವ ಅಥವಾ ಆಯ್ಕೆಯಾಗಬೇಕಾದ ಕೆಲವೊಂದು ಮಂದಿ ತಮ್ಮ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಇವೆಲ್ಲವುಗಳ ನಡುವೆ ನೆಹರೂ ಭಾರತದ ಅಲಿಪ್ತ ಚಳವಳಿಯ ನೇಕಾರರು ತಮ್ಮ ಉಡುಪುತೊಡುಪುಗಳನ್ನು ಇಸ್ತ್ರಿ ಮಾಡಿ(ಸಿ), ಬ್ಯಾಗುಗಳನ್ನು ಸಿದ್ಧಗೊಳಿಸಿ ಅವಕಾಶಕ್ಕಾಗಿ ತಾವು ಮಾಡಬೇಕಾದ ನೇಪಥ್ಯ/ಚೌಕಿಯ ಕೆಲಸವನ್ನು ಮುಗಿಸಿ ಇಂಗ್ಲಿಷಿನಲ್ಲಿ ‘ಮೌತ್‌ಫ್ರೆಶ್‌ನರ್’ ಎಂದು ಕರೆಯುವ ಸಂಜೀವಿನಿಯನ್ನು ಬಾಯೊಳಗಿಟ್ಟು ಆಖಾಡ ಇಲ್ಲವೇ ರಂಗಸ್ಥಳದಂತಹ ಸಮ್ಮೇಳನಾ ವೇದಿಕೆಗೇರಲು ಮೌನವಾಗಿ ಸಮಯ ಕಾಯುತ್ತಿದ್ದಾರೆ.
ವಿಚಾರ ಚಿಕ್ಕದು: ಸಮ್ಮೇಳನದ ಅಧ್ಯಕ್ಷರು (ಕೆಲವು ವರ್ಷಗಳಿಂದ ‘ಸರ್ವಾಧ್ಯಕ್ಷರು’!) ಯಾರಾಗಬೇಕು?
ಹೌದು. ಇದು ಸಹಜ ಮತ್ತು ಅಗತ್ಯ ಪ್ರಶ್ನೆ. ವಿದ್ವಾಂಸರುಗಳ ನಡುವೆ ಮೆರೆಯುವ ಒಬ್ಬ ಕೇಂದ್ರ ವ್ಯಕ್ತಿಯ ಆಯ್ಕೆ ಸುಲಭದ್ದಲ್ಲ. ಮಂತ್ರಿ ಸ್ಥಾನಕ್ಕೂ ಮೀರಿದ ಸ್ಪರ್ಧೆ ಈಗ ಕೆಲವು ವರ್ಷಗಳಿಂದ ನಡೆಯುತ್ತಿದೆ. ಈ ಬಾರಿ ಸ್ಪರ್ಧೆ ಆಟದ ಮೈದಾನದ ಹೊರಗೆ ನಡೆಯುವಂತಿದೆ.
ಕನ್ನಡ ಸಾಹಿತ್ಯ ಪರಿಷತ್ತು ಒಂದು ಸ್ವತಂತ್ರ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿದೆ/ತ್ತು. ಅದು ತನ್ನ ಪಾಡಿಗೆ ತಾನು ಕನ್ನಡದ ಕೆಲಸವನ್ನು ಮಾಡಿಕೊಂಡು ಹೋಗುವ ಉದ್ದೇಶವನ್ನಿಟ್ಟುಕೊಂಡಿರುವುದರಿಂದ ಮತ್ತು ಆಗಿನ ಮೈಸೂರು ಮಹಾರಾಜ ಹಾಗೂ ಕಲಾಭಿಮಾನಿ ಪ್ರತಿಷ್ಠಿತ ನಾಲ್ವಡಿ ಕೃಷ್ಣರಾಜ ಒಡೆಯರ್ ಇದರ ಪೋಷಕರಾದ್ದರಿಂದ ಇದಕ್ಕೆ ಸಹಜವಾಗಿಯೇ ರಾಜಾಶ್ರಯ ಸಿಕ್ಕಿತು ಮತ್ತು ಇದು ಸರಕಾರದ ಅನಧಿಕೃತ ಪ್ರಾತಿನಿಧಿಕ ಸಂಸ್ಥೆಯಾಗಿ ಜನಪ್ರಿಯವಾಯಿತು. ಇತ್ತೀಚಿನ ದಶಕಗಳವರೆಗೂ ಇದು ಸಾಹಿತ್ಯಕ್ಕಷ್ಟೇ ತನ್ನ ಚಟುವಟಿಕೆಗಳನ್ನು ಮಿತಿಗೊಳಿಸಿತ್ತು. ಸದಸ್ಯರ ಸಂಖ್ಯೆಯೂ ಅಷ್ಟಕ್ಕಷ್ಟೇ ಆಗಿತ್ತು. ಸಮ್ಮೇಳನದಲ್ಲಿ ಭಾಗಿಯಾಗುವ ಬಹುತೇಕ ಸಾಹಿತಿಗಳು ಮತ್ತಿತರ ಕನ್ನಡಿಗರು (ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವವರನ್ನು ‘ಕನ್ನಡಿಗರು’ ಎಂದು ಹೇಳುವುದು ವಾಡಿಕೆ!) ಪರಿಷತ್ತಿನ ಸದಸ್ಯರಾಗಿರಲಿಲ್ಲ. ಆದರೆ ಯಾವಾಗ ಸರಕಾರ ಕಸಾಪದ ಅಧ್ಯಕ್ಷರಿಗೆ ರಾಜ್ಯದ ಸಚಿವರಿಗೆ ಸರಿಸಮನಾದ ‘ಸ್ಥಾನ-ಮಾನ’ ಒದಗಿಸಿತೋ ಮತ್ತು ಇದರಿಂದಾಗಿ ರಾಜಸನ್ಮಾನ ಲಭ್ಯವಾಯಿತೋ ಆಗ ಸ್ಪರ್ಧೆ ತುರುಸಾಯಿತು; ತೀವ್ರವಾಯಿತು. ಸಹಜವಾಗಿಯೇ ಕಸಾಪ ಅಧ್ಯಕ್ಷರೂ ಮಂತ್ರಿಗಳಂತಾದರು. ಚಟುವಟಿಕೆಗಳು ಹೆಚ್ಚಾದವೋ ಹೇಳಲಾಗದು; ಆದರೆ ಸ್ಥಾನಗಳು ಯಾವ ಯಾವ ಸ್ವರೂಪದ ಪಂಥಾಹ್ವಾನಗಳನ್ನು ಪಡೆಯಬಹುದೋ ಅಷ್ಟನ್ನೂ ಪಡೆದವು. ಜಾತಿ, ಪ್ರಾದೇಶಿಕ ಹಿನ್ನೆಲೆ, ಪ್ರಭಾವ ಇವು ಮುಖ್ಯವಾಗಿ ಸಾಹಿತ್ಯದ ಪರಿಣತಿ, ಶ್ರೇಷ್ಠತೆ ಇವು ಹಿಂದೆ ಸರಿದವು. ಈ ಸ್ಪರ್ಧೆ ಎಷ್ಟು ತೀವ್ರವಾಯಿತೆಂದರೆ ಆಯ್ಕೆಗಾಗಿಯೇ ಸದಸ್ಯಸಂಗ್ರಹ ಅಭಿಯಾನ ಆರಂಭವಾಯಿತು. ಸಾಹಿತಿಗಳ ಕೈಯಲ್ಲಿ ಖರ್ಚು ಮಾಡಬಹುದಾದ ಹಣಕ್ಕಿಂತ ಹೆಚ್ಚು ಸಾಹಿತ್ಯದ ಉದ್ಯಮಿಗಳಲ್ಲಿ, ಸಾಹಿತ್ಯಾಸಕ್ತ ನಿವೃತ್ತ ಅಧಿಕಾರಿಗಳಲ್ಲಿ, ಸಾಹಿತ್ಯವನ್ನು ಪ್ರಭಾವಿಸಬಲ್ಲ ರಾಜಕಾರಣಿಗಳಲ್ಲಿ ಇರುವುದು ಸಹಜವಾದ್ದರಿಂದ ಸಾಹಿತ್ಯಲಕ್ಷ್ಮಿ ಮುನ್ನೆಲೆಗೆ ಬಂದು ಸಾಹಿತ್ಯಸರಸ್ವತಿ ಹಿನ್ನೆಲೆಗೆ ಸರಿದಳು.
ಕಸಾಪ ವರ್ಷಕ್ಕೊಂದು ಸಮ್ಮೇಳನವನ್ನು ನಡೆಸುತ್ತದೆ. ಈ ಅವಧಿ ಹೆಚ್ಚುಕಡಿಮೆಯಾಗಬಹುದು. ಆದರೆ ಇದೊಂದು ತ್ಯಾಗರಾಜೋತ್ಸವವೇ. ಸರಕಾರವೇ ನೇರವಾಗಿ ಭಾಗಿಯಾಗುವುದರಿಂದ ರಾಜಕಾರಣ ಮತ್ತು ಅಧಿಕಾರಶಾಹಿ ಸಾಹಿತ್ಯವಲಯಕ್ಕಿಂತ ಹೆಚ್ಚು ಹೊಣೆ ಹೊರುತ್ತದೆ.
ಇದರ ಫಲಶ್ರುತಿಯೆಂಬಂತೆ ಉಸಿರಾಡಬಹುದಾದ ಸಮ್ಮೇಳನದ ಭಾಗಿಗಳ ಸಂಖ್ಯೆ ಈಗ ಜನನಿಬಿಡವೆನ್ನುವಷ್ಟು ಬೆಳೆಯಿತು. ಉದ್ಘಾಟನೆಗೆ ರಾಜಕಾರಣಿಯೇ ಬರಬೇಕೆಂದು ಈ ರಾಜನಿಷ್ಠರು ಪ್ರತಿಪಾದಿಸಿ ಯಶಸ್ವಿಯಾದರು. ಇದರ ಪರಿಣಾಮವೆಂದರೆ ಸಮ್ಮೇಳನದ ವೇದಿಕೆಗೆ ಬಂದರೆ ರಾಜಮನ್ನಣೆ ಮತ್ತು ಪಂಚತಾರಾ ವೈಭೋಗ ಮತ್ತು ಅವಕಾಶಗಳು ತಾನೇತಾನಾಗಿ ಒದಗಿಬಂದವು. ಭಾಗವಹಿಸುವ ಅನೇಕ ಸಾಹಿತಿಗಳಿಗೆ ತಮ್ಮ ಪರಸ್ಪರ ಚಿಂತನೆ ಮತ್ತು ಚರ್ಚೆಗಿಂತ ಸಮ್ಮೇಳನ ನೀಡಬಲ್ಲ ಪ್ರತಿಷ್ಠೆ ಮತ್ತು ಭೌತಿಕ ಸೌಕರ್ಯ ಇವೇ ಮುಖ್ಯವಾದವು.
ಕಸಾಪದ ಜಿಲ್ಲಾ ಮತ್ತು ತಾಲೂಕು ಶಾಖೆಗಳು ಕೇಂದ್ರ ಕಸಾಪದ ‘ಮಿನಿಯೇಚರ್’ ಅಥವಾ ಸಣ್ಣ ಆಕಾರದ ‘ರೆಪ್ಲಿಕಾ’ ಅಥವಾ ಚಿತ್ರವಾದವು. ಅದರ ಅಧ್ಯಕ್ಷತೆ ಮತ್ತು ಸಮಿತಿಯ ಸ್ಥಾನಗಳಿಗೂ ಇದೇ ರೀತಿಯ ಸ್ಪರ್ಧೆ ನಡೆದವು. ಸಾಹಿತಿಯೆನ್ನುವುದು ಪದನಿಮಿತ್ತ ಸ್ಥಾನಗೌರವವಾಗುವುದರ ವರೆಗೂ ಈ ಗೀಳು ಬೆಳೆಯಿತು. ಇವೀಗ ವಿಕೇಂದ್ರೀಕರಣಕ್ಕೆ ತುತ್ತಾಗಿ ಹೋಬಳಿ ಮಟ್ಟಕ್ಕೂ ಇಳಿದಿವೆ. ಪಂಚಾಯತ್ ಮಟ್ಟಕ್ಕೆ ಯಾವಾಗ ಇಳಿಯುತ್ತದೆಂದು ಗೊತ್ತಿಲ್ಲ.
ಇವೆಲ್ಲವುಗಳಲ್ಲಿ ಪ್ರಮಾದಮಯ ಬೆಳವಣಿಗೆಯೆಂದರೆ ಕಸಾಪ ಈ ಜಿಲ್ಲಾ ಮತ್ತು ತಾಲೂಕು ಶಾಖೆಗಳಲ್ಲಿ ತನ್ನ ಅನುಸರಣೆ, ಅನುಕರಣೆಗೆ ಅವಕಾಶಮಾಡಿಕೊಟ್ಟದ್ದು. ಅವು ಸಾಹಿತ್ಯದ ಜನಪ್ರಿಯತೆಗೆ, ಸಂಸ್ಕೃತೀಕರಣಕ್ಕೆ ಒದಗುವ ಬದಲು ಪ್ರಚಾರಾಂದೋಲನಕ್ಕೂ, ಪ್ರತಿಷ್ಠಾಪ್ರಸಾರಕ್ಕೂ ಒದಗಿ ಬಂದವು. ಇತ್ತೀಚೆಗಿನ ವರ್ಷಗಳಲ್ಲಿ ಅಖಿಲ ಭಾರತ ಸಮ್ಮೇಳನದ ಗೋಷ್ಠಿಗಳಲ್ಲಿ ಭಾಗವಹಿಸುವವರನ್ನು ಜಿಲ್ಲಾವಾರು ಆಯ್ಕೆಮಾಡುವ ಪದ್ಧತಿಗೆ ಗುರಿಮಾಡಿ ಅಂತಹ ಆಯ್ಕೆಗೆ ಈ ಜಿಲ್ಲಾ ಶಾಖೆಗಳಿಗೆ ಅಧಿಕಾರ ಕೊಟ್ಟದ್ದು. ಇದರಿಂದಾಗಿ ಸಮ್ಮೇಳನದ ಗೋಷ್ಠಿಗಳೆಂದರೆ ಹೀಗೆ ಆಯ್ಕೆಯಾದವರ ಸಮ್ಮೇಳನವಾಗಿ ಆಯ್ಕೆಗೂ ಮತದಾನವಾಗುವ ಸಾಧ್ಯತೆಯನ್ನು ತೆರೆದದ್ದು. ಇದರಿಂದಾಗಿ ಜಿಲ್ಲಾ ಮಟ್ಟದಲ್ಲೂ ವಶೀಲಿ ಸಹಜವಾಗಿಯೇ ಬೆಳೆಯಿತು.
ಇವುಗಳ ಅಂತಿಮ ಪರಿಣಾಮವೆಂದರೆ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಹೊಸ ಆಕರ್ಷಣೆ. ಅದೀಗ ರಾಜ್ಯೋತ್ಸವ, ಅಕಾಡಮಿ ಮತ್ತಿತರ ಪ್ರಶಸ್ತಿಗಳಂತೆ ಹೇಗಾದರೂ ಸೇರುವ ಅಂತಿಮ ತಾಣ. ಈಚೆಗೆ ಸಮ್ಮೇಳನಾಧ್ಯಕ್ಷರಿಗೆ ಭಾರೀ ನಿಧಿಯನ್ನು ಸಂಭಾವನೆಯಾಗಿ ಸಮರ್ಪಿಸುವ ಹೊಸ ವಿಧಾನ ಸೃಷ್ಟಿಯಾಗಿ ಅದು ಹೊಸ ನೂಕುನುಗ್ಗಲುಗಳನ್ನು ತಂದಿಟ್ಟಿದೆ. ಕಾಂಚಾಣ ಯಾರಿಗೆ ಬೇಡ?
ಈ ಬಾರಿ ಕಸಾಪ ಅಧ್ಯಕ್ಷರು ಹೊಸ ಸವಾಲನ್ನೆಸೆದರು. ಸಾಹಿತಿಯೇ ಅಧ್ಯಕ್ಷರಾಗಬೇಕೆಂದಿಲ್ಲ; ಯಾರು ಬೇಕಾದರೂ ಸಮ್ಮೇಳನಾ(ಸರ್ವಾ)ಧ್ಯಕ್ಷ ರಾಗಬಹುದೆಂದರು. ತಾವೇ ಸಾಹಿತಿಯಲ್ಲದೆಯೂ ಕಸಾಪದ ಅಧ್ಯಕ್ಷರಾಗಿರುವಾಗ ಸಮ್ಮೇಳನಾಧ್ಯಕ್ಷರು ಸಾಹಿತಿಯಾಗಬೇಕೆಂಬ ಧಾವಂತವೇಕೆ? ಹೌದು. ಹಿಂದೆ ಕೆಲವು ಸಾಹಿತ್ಯೇತರರು ಕಸಾಪದ ಅಧ್ಯಕ್ಷರಾಗಿ ಆಯ್ಕೆಯಾದರು. ಅವರು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಹಿರಿಯ ಸಾಹಿತಿಯೊಬ್ಬರನ್ನು ಆಯ್ಕೆಮಾಡುವಲ್ಲಿ ಯಶಸ್ವಿಯಾದರು. ವಿಶೇಷವೆಂದರೆ ಕನ್ನಡ ಸಾಹಿತ್ಯ ಪರಿಷತ್ತಿನ ಇತ್ತೀಚಿನ ಸಂಪ್ರದಾಯದಂತೆ ಸಾಹಿತ್ಯೇತರ ಅಧ್ಯಕ್ಷರಾದ ಮಹೇಶಜೋಷಿಯವರು ಅಧ್ಯಕ್ಷಗಿರಿಗೆ ಯಾರಾದರೇನಂತೆ? ಎಂಬ ಅಧಿಕಾರ ಧೋರಣೆಯಿಂದ ವರ್ತಿಸುವಂತಿದೆ. ಈಗ ಈ ಆಯ್ಕೆ ಕಸಾಪದ ಅಧ್ಯಕ್ಷರಿಗೆ ಪ್ರಿಯರಾದ, ಯಾವುದೇ ಕ್ಷೇತ್ರದವರೇ ಆಗಿರಲಿ, ಕನ್ನಡಿಗರಾದರೆ ಸಾಕು ಎಂಬ ಸೂತ್ರದನ್ವಯ ಕೂರಿಸುವ ಸ್ಥಾನವಾಗುವ ಗಜಪಯಣವಾಗುತ್ತಿದೆ.
ಹಲವಾರು ಹೆಸರುಗಳು ಪ್ರಚಲಿತವಾಗಿವೆ. ತಮಾಷೆಯೆಂದರೆ ಹಲವು ಸಾಹಿತಿಗಳ ಹೆಸರು ಚಲಾವಣೆಯಲ್ಲಿದ್ದು ಅವುಗಳಲ್ಲೊಂದು ಅದೆಷ್ಟೇ ಅಸಮಾಧಾನಕರವಾದ್ದಿರಲಿ, ಆಯ್ಕೆಯಾದರೆ ಸಾಹಿತ್ಯದ ಪರಮಾನ್ನ ಬೆಂದೀತು. ಆದರೆ ಈಗ ಚಲಾವಣೆಯಲ್ಲಿರುವ ಹೆಸರುಗಳು ಸಾಹಿತ್ಯಕ್ಕೆ ಸಂಬಂಧಿಸದೇ ಇರುವವರದ್ದು. ಕನ್ನಡ ನೆಲ, ಜಲ, ಜಾತಿ-ಮತ-ಧರ್ಮ, ಸಂಸ್ಕೃತಿ, ರಾಜಕೀಯ, ಗಡಿ-ಬಿಡಿ, ಇವೆಲ್ಲವನ್ನೂ ಸಮ್ಮೇಳನವು ಒಳಗೊಳ್ಳಬೇಕೆಂಬ ಇರಾದೆಯಿಂದ ನಮ್ಮ ಸಾಹಿತಿ ಸಮ್ಮೇಳನಾಧ್ಯಕ್ಷರು ತಮ್ಮ ಕಳಕಳಿ, ಕಾಳಜಿಯನ್ನು ವ್ಯಕ್ತಪಡಿಸಲು, ವಿಶ್ವಕ್ಕೆ ಕರೆಕೊಡಲು ಆರಂಭಿಸಿದಾಗ ಮತ್ತು ಅದರಿಂದ ಚಪ್ಪಾಳೆಗಿಟ್ಟಿಸಿ ಹೆಚ್ಚು ಸಂವೇದನಾಶೀಲರಾಗಲು ಆರಂಭಿಸಿದಂದಿನಿಂದಲೇ ಇದು ಮುನ್ನೆಲೆಗೆ ಬಂದಿದೆ. ಸಮ್ಮೇಳನಾಧ್ಯಕ್ಷರು ಒಂದು ವರ್ಷ ಪೂರ್ತಿ ನಾಡಿನಾದ್ಯಂತ ಸಂಚರಿಸಿ ಜನರಲ್ಲಿ ಸಂಚಲನವನ್ನು ಮೂಡಿಸಬೇಕೆಂಬುದು ವಾಡಿಕೆ.
ಸಾಹಿತ್ಯದ ಪಾತ್ರವನ್ನು ಕುಗ್ಗಿಸಿ ಇತರ ಅಂಶಗಳನ್ನು ಹಿಗ್ಗಿಸುವುದು ಸಮ್ಮೇಳನದ ಕೆಲಸವಲ್ಲ. ಕಸಾಪ ತನ್ನ ನಿತ್ಯದ ಕೆಲಸದಲ್ಲಿ ಇವನ್ನು ಎಷ್ಟು ಮಾಡಿದೆಯೆಂಬುದರ ಆಧಾರದಲ್ಲಿ ಈ ಸಂವೇದನೆ ಕ್ರಿಯಾಶೀಲವಾಗಬೇಕು. ಆಗ ಅದಕ್ಕೊಂದು ಅರ್ಥ. ಇಡೀ ವರ್ಷ ಪುಸ್ತಕ ಪ್ರಕಟಣೆ, ಕೀರ್ತಿಶೇಷರ ಸ್ಮತಿ, ಶ್ರದ್ಧಾಂಜಲಿ, ಇತರ ಹಿರಿಯರ ಹುಟ್ಟುಹಬ್ಬ, ಸನ್ಮಾನ, ಸ್ಮಾರಕೋಪನ್ಯಾಸ ಇವನ್ನೇ ಕೇಂದ್ರ ಕಚೆೇರಿಯಲ್ಲಿ ನಡೆಸುವುದರಿಂದ ಬೆಂಗಳೂರಿನಲ್ಲೇ ಕನ್ನಡದ ಪರಿಸ್ಥಿತಿ ಸುಧಾರಿಸಿಲ್ಲ; ಇನ್ನು ಕನ್ನಡನಾಡಿನ ಸಂದರ್ಭ ಹೇಗೆ ಹಿತವಾಗಬೇಕು? ಜಿಲ್ಲಾ ಕಸಾಪಗಳಂತೂ ಮಾಡುವ ಸ್ಮಾರಕೋಪನ್ಯಾಸಗಳ ಕ್ರಮ ಹೇಳತೀರದು; ಯಾರ ಬಗ್ಗೆಯಾದರೂ ಯವುದಾದರೂ ಶಾಲೆಯಲ್ಲಿ ಕಾರ್ಯಕ್ರಮವನ್ನು ವ್ಯವಸ್ಥೆಮಾಡಿ ಅಲ್ಲಿನ ವಿದ್ಯಾರ್ಥಿಗಳನ್ನೇ ಪ್ರೇಕ್ಷಕಗಡಣವಾಗಿಸಿ, ಆ ಶಾಲೆಯ ಒಬ್ಬ ಅಧ್ಯಾಪಕರಿಂದ ಉಪನ್ಯಾಸ ಮಾಡಿಸಿ, ಕಸಾಪ ಸಮಿತಿಯವರೇ ವೇದಿಕೆಯಲ್ಲಿ ಶೋಭಿಸಿ, ಈ ಬಗ್ಗೆ ಮುಡಿಪಾಗಿಟ್ಟ ಮೊತ್ತವನ್ನು (ಅಥವಾ ಅದರ ನಿಗದಿತ ಬಡ್ಡಿಯನ್ನು) ಮುಗಿಸಿ ಅದರ ಲೆಕ್ಕಾಚಾರವನ್ನು ಕಾಟಾಚಾರದಂತೆ ಕೇಂದ್ರಕ್ಕೆ ಒಪ್ಪಿಸಿ ಕನ್ನಡವನ್ನು ಉದ್ಧರಿಸುವ ಕಾಯಕದಿಂದ ಕನ್ನಡಿಗರಿಗೆ ಸದ್ಯಕ್ಕೆ ಮುಕ್ತಿಯಿಲ್ಲ. ಅನೇಕ ಬಾರಿ ಗ್ರಾಮಪಂಚಾಯತ್‌ನ ಆಶ್ರಯದಲ್ಲಿ ಮಾಡುವ ಕಾರ್ಯಕ್ರಮಗಳಂತೂ ಜನಪ್ರತಿನಿಧಿಗಳ ಗ್ರಾಮಸಭೆಯಂತೆ ಸಾಹಿತ್ಯದಿಂದ ಮೈಲುದ್ದ ದೂರ ಸರಿಯುತ್ತವೆ. ಇವನ್ನೆಲ್ಲ ಸಹನಾಶೀಲರಾಗಿ ಕ್ಷಮಿಸುವುದರಲ್ಲಿ ಕನ್ನಡಿಗರು ಭೂಮಿಯನ್ನು ಮೀರುತ್ತಾರೆ. ದೂರದೂರುಗಳಿಂದ ಸಮ್ಮೇಳನಕ್ಕೋ, ಇತರ ‘ವಿಶೇಷ’ ಸಂದರ್ಭಕ್ಕೋ ಯಾರನ್ನಾದರೂ ಕರೆಸಿ ಪುರಸ್ಕರಿಸುವುದರಿಂದ ಬಂದವರಿಗೆ ಪ್ರಚಾರ ಹೆಚ್ಚಾಗಬಹುದೇ ಹೊರತು ಕನ್ನಡಕ್ಕಲ್ಲ; ಕನ್ನಡಿಗರಿಗೂ ಅಲ್ಲ. ಆದರೆ ಕಸಾಪವು ಇತರ ಲೋಹದ ಪಾತ್ರಗಳಿಗೆ ಬಂಗಾರದ ಗಿಲಿಟು ಹಾಕಿ ಶೋಭಾಯಮಾನವಾಗಿಸಿದಂತೆ ತನ್ನ ನಿತ್ಯದ ವೈಫಲ್ಯವನ್ನು ಮುಚ್ಚುವಂತೆ ಇಂತಹ ಕೆಲವು ಕಾರ್ಯಕ್ರಮಗಳನ್ನು ಮತ್ತು ಇವಕ್ಕೆಲ್ಲ ಕಲಶವಿಟ್ಟಂತೆ ಅಖಿಲ ಭಾರತ ಸಮ್ಮೇಳನವನ್ನು ಮಾಡುವುದರಲ್ಲಿ ಈಗ ವಿಶ್ವಮಾನ್ಯವಾಗಿದೆ.
ಇಂತಹ ಸಂದರ್ಭದಲ್ಲಿ ಸಮ್ಮೇಳನಕ್ಕೆ ಯಾರು ಅಧ್ಯಕ್ಷರಾದರೂ ಒಂದೇ. ಆದರೂ ‘ಸಾಹಿತ್ಯ’ಕ್ಕೊಂದು ಸಂವೇದನೆ, ಶೀಲ, ಮಾನ್ಯತೆಯಿದೆಯಲ್ಲ! ಇತರ ವಿಚಾರಗಳನ್ನು ಉಳಿಸುವ ಗೌಜಿಯಲ್ಲಿ ಸಾಹಿತ್ಯ ಕಳೆದುಹೋಗಬಾರದಲ್ಲ! ವಿಜ್ಞಾನಿಗಳೂ ತಿಳಿದವರೇ-ಆದರೆ ಅವರ ಕ್ಷೇತ್ರದಲ್ಲಿ ಅವರು ಜ್ಞಾನಿಗಳು. ಸಾಹಿತ್ಯಜ್ಞಾನವಿರಬಾರದೆಂದಿಲ್ಲ. ಏಕೆಂದರೆ ಸಾಹಿತ್ಯಕ್ಕೆ ತನ್ನದೇ ಆದ ಕ್ಷೇತ್ರಜ್ಞಾನವೆಂಬುದಿಲ್ಲ. ಅದು ಯಾರನ್ನೂ ಆವರಿಸಬಹುದು. ಅದಕ್ಕೆ ಪಠ್ಯಜ್ಞಾನದ ಇಲ್ಲವೇ ಶಾಸ್ತ್ರಜ್ಞಾನದ ಬಾಧಕವಿಲ್ಲ. ನಮ್ಮ ಜಾನಪದರು ಯಾವ ಡಿಗ್ರಿಯನ್ನೂ ಹೊಂದಿರಲಿಲ್ಲ. ಶಿವರಾಮ ಕಾರಂತರು ವಿಜ್ಞಾನದ ಬಗ್ಗೆ ಪುಸ್ತಕ ಬರೆದರೂ ಅದಕ್ಕೂ ಶಾಸ್ತ್ರವಿಜ್ಞಾನಕ್ಕೂ ಅಂತರವಿದೆ. ಆದರೆ ವಿಜ್ಞಾನ ಸಮ್ಮೇಳನದಲ್ಲಿ ಸಾಹಿತಿಯನ್ನು ಅಧ್ಯಕ್ಷರಾಗಿಸಿದ ಉದಾಹರಣೆಯಿಲ್ಲ. ಇದೇ ರೀತಿ ಕ್ರೀಡೆ, ಸಂಗೀತ, ಸಿನೆಮಾ, ಜ್ಯೋತಿಶ್ಶಾಸ್ತ್ರ ಅಥವಾ ಇತರ ಯಾವುದೇ ಕ್ಷೇತ್ರವನ್ನೂ ಸಾಹಿತ್ಯ ಆವರಿಸಬಹುದೇ ಹೊರತು ಆ ಕ್ಷೇತ್ರದ ಜ್ಞಾನ ಅಥವಾ ಹಿರಿತನವು ಸಾಹಿತ್ಯದ ಹಿರಿತನವಾಗಲು ಸಾಧ್ಯವಿಲ್ಲ ಅಥವಾ ಸಾಹಿತ್ಯದ ಹಿರಿತನವು ಇತರ ಕ್ಷೇತ್ರಗಳ ಹಿರಿತನವಾಗಲು ಸಾಧ್ಯವಿಲ್ಲ. ಎಷ್ಟೇ ದೊಡ್ಡ ವೈದ್ಯನಾದರೂ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದರೂ ರಾಜಕೀಯದಲ್ಲಿ ಹಿರಿತನ ಪಡೆಯಬೇಕಾದರೆ ಅವರಿಗೆ ಅಲ್ಲಿನ ಹಿರಿತನ (ಅಥವಾ ಜಾಣ್ಮೆ, ಕೌಟಿಲ್ಯ, ಕೃತ್ರಿಮಗಳಲ್ಲಿ ದಕ್ಷತೆ!) ಇರಬೇಕು. ಅದಕ್ಕೇ ಈಗ ಲೋಕಸಭೆಯಲ್ಲಿ, ರಾಜ್ಯಸಭೆಯಲ್ಲಿರುವ ಇಂತಹ ಹಿರಿಯರು ಪ್ರಧಾನಿ ಬಿಡಿ, ಸಚಿವರೂ ಆಗಲಿಲ್ಲ.
ಕಸಾಪಕ್ಕೆ ಸಂಘಟನೆಯ ಹೊಣೆಯಿದೆ. ಆದರೆ ಸಾಹಿತ್ಯಸಮ್ಮೇಳನಕ್ಕೆ ‘ಸಂಘ’ ಬೇಡ. ಅದು ‘ಸಾಹಿತ್ಯಸಂಗ’ವನ್ನಷ್ಟೇ ಬೇಡುತ್ತದೆ. ಸಾಹಿತ್ಯಾಸಕ್ತರೆಲ್ಲರೂ ಸಾಹಿತಿಗಳಲ್ಲ. (ಇಂದಿನ ಸಾಮಾಜಿಕ ಜಾಲತಾಣೋದ್ಯಮ ಅದನ್ನೂ ಸಾಧಿಸುವತ್ತ ಹೆಜ್ಜೆ ಹಾಕಿದೆ.) ಆದರೆ ಸದ್ಯಕ್ಕೆ ಇತರ ಎಲ್ಲ ಕ್ಷೇತ್ರಗಳ ಕೃತಕ ಬುದ್ಧಿಮತ್ತೆಗಿಂತ ಸಾಹಿತ್ಯದ ಹಿರಿತನ ಮಾತ್ರವಲ್ಲ, ಅದರ ಮೌಢ್ಯವೂ ಹೆಚ್ಚು ಎಂದನ್ನಿಸುವುದು ಒಳ್ಳೆಯದು. ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಅವರ ಆಟ ಸೊಗಸು. ನಾನು ಅವರ ಅಭಿಮಾನಿ. ಅವರನ್ನು ಬೇಕಾದರೆ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಮಾಡೋಣ. ಹಾಗೆಂದು ಆದರೆ ಅವರು ಸಮ್ಮೇಳನಾಧ್ಯಕ್ಷತೆಯ ಅರ್ಹತೆ ಹೊಂದಿಲ್ಲ. ಸಿ.ಎನ್.ಆರ್. ರಾವ್ ಅಥವಾ ಮಂಡ್ಯದ ಸಂಸದ ಎಚ್.ಡಿ.ಕುಮಾರಸ್ವಾಮಿ, ಇವರನ್ನು ಆದರಿಸೋಣ. ಸ್ವಯಂಕೃತಾಪರಾಧಗಳು ಸಾಕಷ್ಟಿವೆ; ಬದುಕಿನ ಬಹುಪಾಲು ಕ್ಷೇತ್ರಗಳಲ್ಲಿ ಅವು ರಾಷ್ಟ್ರೀಯವಾಗಿ ಸುಭದ್ರ ಸ್ಥಿತಿ ತಲುಪಿವೆ. ಆದರೆ ಸಾಹಿತ್ಯದಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸುವುದು ಬೇಡ; ಹೆಚ್ಚಿಸಿದರೂ ಅವುಗಳ ಇನ್ನಷ್ಟು ಹರಿವು ಬೇಡ.
ಹೀನೋಪಮೆಯೆನ್ನಿಸಿದರೂ ಒಂದು ವಿಚಾರವನ್ನು ಕಸಾಪ ಅರಿತರೆ ಒಳ್ಳೆಯದು: ಮನುಷ್ಯರಿಗಿಂತ ಹೆಚ್ಚು ಮನುಷ್ಯತ್ವ, ಮಾನವೀಯತೆಯನ್ನು ಹೊಂದಿರುವ ಮೃಗಾಲಯದಲ್ಲಿ ವ್ಯವಸ್ಥೆಗೆ, ಕೆಲಸಕ್ಕೆ ಮನುಷ್ಯರನ್ನು ನೇಮಿಸೋಣ. ಪ್ರಾಣಿಗಳನ್ನಲ್ಲ. ಆದರೆ ಪ್ರಾಣಿಗಳ ಸಂತಾನೋತ್ಪತ್ತಿಗೆ ಪ್ರಾಣಿಗಳೇ ಮನುಷ್ಯರ ಸಂತಾನೋತ್ಪತ್ತಿಗೆ ಮನುಷ್ಯರೇ ಇದ್ದರೆ ಅದು ಸಹಜವೆನಿಸುತ್ತದೆಯಲ್ಲವೇ?