ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ತಡೆಯಲು ಮಾರ್ಗಸೂಚಿ ಪ್ರಕಟಿಸಿದ ಹೈಕೋರ್ಟ್

Update: 2024-02-05 12:59 GMT

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅನುಮೋದನೆ ಪಡೆದ ಯೋಜನೆಯನ್ನು ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳನ್ನು ತಡೆಯಲು ಬಿಬಿಎಂಪಿಗೆ ಹೈಕೋರ್ಟ್ ಹಲವು ಮಾರ್ಗಸೂಚಿಗಳನ್ನು ನೀಡಿದೆ.

ಶಶಿಕುಮಾರ್ ಎಂಬುವರು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನೆಯ ಮಂಜೂರಾತಿ ಪಡೆದಿಲ್ಲ. ಜೊತೆಗೆ ನಿಯಮಗಳನ್ನು ಉಲ್ಲಂಘಿಸಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕುಶಾಲ್ ರಾಮರೆಡ್ಡಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ನೇತೃತ್ವದ ವಿಭಾಗೀಯ ಪೀಠ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಬಿಬಿಎಂಪಿಗೆ ಹೈಕೋರ್ಟ್ ನೀಡಿರುವ ಮಾರ್ಗಸೂಚಿಗಳು:

►ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳ ಅನುಮೋದನೆ ಮಂಜೂರು ಮಾಡುವುದಕ್ಕೂ ಮುನ್ನ ಕಟ್ಟಡದ ಮಾಲೀಕರು, ಆಕಿಟೆಕ್‌ಗಳು, ಕಟ್ಟಡಗಳ ನಿರ್ಮಾಣ ಮೇಲ್ವಿಚಾರ ಸಂಪೂರ್ಣ ಮಾಹಿತಿ, ವಿಳಾಸವನ್ನು ಪಡೆದುಕೊಳ್ಳಬೇಕು. ಜೊತೆಗೆ ಇ-ಮೇಲ್ ವಿಳಾಸ, ವಾಟ್ಸಪ್ ಮತ್ತು ಟೆಲಿಗ್ರಾಫ್ ಸಂಖ್ಯೆಗಳನ್ನು ಪಡೆಯಬೇಕು.

►ಕಟ್ಟಡ ನಿರ್ಮಾಣ ಸಂಬಂಧ ಯೋಜನೆಗಳನ್ನು ಮಂಜೂರು ಮಾಡಿದ ಬಳಿಕ ಪ್ರತಿ ತಿಂಗಳು ಮಾಹಿತಿ ದಾಖಲಿಸಿಕೊಳ್ಳಬೇಕು. ಕಟ್ಟಡ ನಿರ್ಮಾಣದ ವಿವಿಧ ಹಂತಗಳಲ್ಲಿ ಮಾಲೀಕರು ಬಿಬಿಎಂಪಿಗೆ ಮಾಹಿತಿ ನೀಡಬೇಕು

► ಮಾಲೀಕರು, ಆರ್ಕಿಟೆಕ್ ಮತ್ತು ಮೇಲ್ವಿಚಾರಕರು ಕಟ್ಟಡದ ಅಡಿಪಾಯ ಪ್ರಾರಂಭವಾದ ದಿನದಿಂದ ಪೂರ್ಣಗೊಳ್ಳುವವರೆಗೂ ಅಂದರೆ, ಪಿಲ್ಲರ್‌ಗಳ ನಿರ್ಮಾಣ ಮತ್ತು ಪ್ರತಿ ಮಹಡಿಯ ಛಾವಣಿ ಪೂರ್ಣಗೊಳ್ಳುತ್ತಿವ ಪ್ರತಿ ಹಂತದಲ್ಲಿಯೂ ಪಾಲಿಕೆಗೆ ಪ್ರಮಾಣ ಪತ್ರಗಳನ್ನು ಸಲ್ಲಿಸುತ್ತಿರಬೇಕು.

►ಕಟ್ಟಡ ಯಾವ ಹಂತದಲ್ಲಿದೆ ಎಂಬುದಕ್ಕೆ ಸಂಬಂಧಿಸಿದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಮಾಣ ಪತ್ರ ಸಲ್ಲಿಸಬೇಕು.

►ನಿಯತಕಾಲಿಕವಾಗಿ ತಪಾಸಣೆ ನಡೆಸಿ ಸಂಬಂಧ ಪಟ್ಟ ವಾರ್ಡ್ ಅಧಿಕಾರಿ 30 ದಿನಗಳಿಗೊಮ್ಮೆ ತಪಸಾಣೆ ನಡೆಸಬೇಕು. ಈ ಸಂದರ್ಭದಲ್ಲಿ ಯೋಜನೆ ಉಲ್ಲಂಘನೆಯಾಗಿರುವ ಕುರಿತಂತೆ ವಿವರಣೆಯನ್ನು ದಾಖಲಿಸಿ ವರದಿಯನ್ನು ಸಿದ್ದಪಡಿಸಿ ಸಲ್ಲಿಸಬೇಕು.

►ಕಟ್ಟಡ ನಿರ್ಮಾಣದಲ್ಲಿ ಅನುಮೋದನೆ ಪಡೆದಿರುವ ಸಂಬಂಧದ ಯೋಜನೆ ಉಲ್ಲಂಘನೆ ಕಂಡು ಬಂದಲ್ಲಿ ತಕ್ಷಣ ಬಿಬಿಎಂಪಿ ಕಟ್ಟಡದ ಮಾಲೀಕರು ಅಥಾವ ಬಿಲ್ಡರ್‌ಗಳಿಗೆ ನೋಟಿಸ್ ನೀಡಬೇಕು. ಆಗಿರುವ ಉಲ್ಲಂಘನೆಯನ್ನು ಮನವರಿಕೆ ಮಾಡಬೇಕು. ಬಳಿಕ ಉಲ್ಲಂಘಿತ ಭಾಗವನ್ನು ತೆರವುಗೊಳಿಸಬೇಕು.

► ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯೊಂದಿಗೆ ದತ್ತಾಂಶವನ್ನು ಕ್ರೂಢಿಕರಿಸಬೇಕು. ಅಂತಹ ಕಟ್ಟಡಕ್ಕೆ ವಿದ್ಯುತ್ ಮತ್ತು ನೀರು ಸರಬರಾಜಿಗೆ ಅನುಮತಿ ಇದಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು, ಇದಕ್ಕಾಗಿ ಜಲಮಂಡಳಿ ಮತ್ತು ಬೆಸ್ಕಾಂ ಬಿಬಿಎಂಪಿಗೆ ಮಾಹಿತಿಯನ್ನು ಒದಗಿಸಬೇಕು.

►ನೀರು ಸರಬರಾಜು, ವಿದ್ಯುತ್ ಸಂಪರ್ಕಕ್ಕೆ ಸಂಬಂಧ ಉಲ್ಲಂಘನೆಗಳ ಕುರಿತಂತೆ ಜಾರಿ ಮಾಡಿರುವ ನೋಟಿಸ್‌ಗಳು, ಈ ಸಂಬಂಧ ತೆಗೆದುಕೊಂಡ ಕ್ರಮಗಳ ಕುರಿತಂತೆ ಬಿಬಿಎಂಪಿ ತನ್ನ ವೆಬ್ಸೈಟ್‌ನಲ್ಲಿ ದಾಖಲಿಸಬೇಕು. ಈ ಸಂಬಂಧ ಎಲ್ಲ ದಾಖಲೆಗಳನ್ನು ಎಲ್ಲ ಅಧಿಕಾರಿಗಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News