ತರಬೇತುದಾರನ ಎದುರಲ್ಲೇ ಶಾಲಾ ಈಜುಕೊಳದಲ್ಲಿ ಮುಳುಗಿದ 14 ವರ್ಷದ ಬಾಲಕ

Update: 2023-06-24 08:13 GMT

ಫೋಟೋ: (ಪಿಟಿಐ)ಸಾಂದರ್ಭಿಕ ಚಿತ್ರ 

ಮುಂಬೈ: ಗೋರೆಗಾಂವ್‌ನಲ್ಲಿರುವ ಶಾಲಾ ಈಜುಕೊಳವೊಂದರಲ್ಲಿ ಮುಳುಗಿ 14 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ ಎಂದು ಶುಕ್ರವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆಯು ಯಶೋಧಂ ಶಾಲೆಯಲ್ಲಿ ಮಧ್ಯಾಹ್ನ 12.30ರ ವೇಳೆ ಸಂಭವಿಸಿದ್ದು, ಮೃತಪಟ್ಟ ಬಾಲಕನನ್ನು ಶಾರ್ದೂಲ್ ಅರೋಲ್ಕರ್ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

"ಶಾರ್ದೂಲ್ ನೀರಿನಲ್ಲಿ ಮುಳುಗುವಾಗ ತರಬೇತುದಾರನೊಬ್ಬ ಸ್ಥಳದಲ್ಲೇ ಹಾಜರಿದ್ದ. ಶಾರ್ದೂಲ್ ಅದೇ ಶಾಲೆಯ ಒಂಬತ್ತನೆ ತರಗತಿಯ ವಿದ್ಯಾರ್ಥಿಯಾಗಿದ್ದ. ಶಾಲೆಯಲ್ಲಿ ನಾಲ್ವರು ತರಬೇತುದಾರರಿದ್ದು, ಬಾಲಕನು ನೀರಿನಲ್ಲಿ ಮುಳುಗುವಾಗ ಮುಖ್ಯ ತರಬೇತುದಾರ ಆತನಿಗೆ ತರಬೇತಿ ನೀಡುತ್ತಿದ್ದ. ಬಾಲಕನು ಕಳೆದ ಆರು ತಿಂಗಳಿನಿಂದ ಈಜು ಕಲಿಯುತ್ತಿದ್ದ" ಎಂದು ಅವರು ಮಾಹಿತಿ ನೀಡಿದ್ದಾರೆ.

"ಆತನನ್ನು ನೀರಿನಿಂದ ಹೊರಗೆಳೆದು ಮೊದಲು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ನಂತರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದಾಗ ಬಾಲಕನು ದಾರಿಮಧ್ಯದಲ್ಲೇ ಅಸು ನೀಗಿದ್ದಾನೆ ಎಂದು ವೈದ್ಯರು ಘೋಷಿಸಿದರು" ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಗೋರೆಗಾಂವ್ ಪೂರ್ವದಲ್ಲಿರುವ ದಿಂಡೋಶಿ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಮರಣ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News