ರಾಹುಲ್ ಗಾಂಧಿ, ಅಮಿತ್ ಶಾ ಭಾಷಣ ವಿವಾದ: ಕಾಂಗ್ರೆಸ್ ಮತ್ತು ಬಿಜೆಪಿಗೆ ಚುನಾವಣಾ ಆಯೋಗದ ನೋಟಿಸ್
ಹೊಸದಿಲ್ಲಿ: ಕಾಂಗ್ರೆಸ್ ಮತ್ತು ಬಿಜೆಪಿಯ ತಾರಾ ಪ್ರಚಾರಕರಾದ ರಾಹುಲ್ ಗಾಂಧಿ ಹಾಗೂ ಅಮಿತ್ ಶಾ, ತಮ್ಮ ಚುನಾವಣಾ ಭಾಷಣಗಳಲ್ಲಿ ನೀಡಿರುವ ಹೇಳಿಕೆಗಳ ಕುರಿತು ವಿವರಣೆ ನೀಡುವಂತೆ ಕಾಂಗ್ರೆಸ್ ಮತ್ತು ಬಿಜೆಪಿಯ ಅಧ್ಯಕ್ಷರಿಗೆ ಶನಿವಾರ ಚುನಾವಣಾ ಆಯೋಗ ನೋಟಿಸ್ ಜಾರಿಗಳಿಸಿದೆ. ಅವರ ಹೇಳಿಕೆಗಳು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿವೆ ಎಂದು ಆರೋಪಿಸಲಾಗಿದೆ.
ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆಯ ಎರಡನೆ ಹಂತದ ಚುನಾವಣೆ ಮುಗಿಯುವುದಕ್ಕೆ ಎರಡು ದಿನ ಬಾಕಿ ಇರುವಂತೆ, ಸೋಮವಾರ ಮಧ್ಯಾಹ್ನ 1 ಗಂಟೆಯೊಳಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಪ್ರತಿಕ್ರಿಯೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಿದೆ.
ನವೆಂಬರ್ 6ರಂದು ಮುಂಬೈನಲ್ಲಿ ಮಾಡಿದ್ದ ಭಾಷಣದಲ್ಲಿ ಮಹಾರಾಷ್ಟ್ರ ರಾಜ್ಯದ ಅವಕಾಶಗಳನ್ನು ಇನ್ನಿತರ ರಾಜ್ಯಗಳು ಕದಿಯುತ್ತಿವೆ ಮತ್ತು ಕಸಿಯುತ್ತಿವೆ ಎಂದು ಕಾಂಗ್ರೆಸ್ ನಾಯಕ ತಪ್ಪಾಗಿ ಆರೋಪಿಸಿದ್ದರು ಎಂದು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ.
ಅದಕ್ಕೆ ಪ್ರತಿಯಾಗಿ, ನವೆಂಬರ್ 12ರಂದು ಧನಬಾದ್ ನಲ್ಲಿ ನಡೆದಿದ್ದ ಚುನಾವಣಾ ಸಮಾವೇಶವೊಂದರಲ್ಲಿ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಸುಳ್ಳು, ವಿಭಜನಕಾರಿ, ಅವಹೇಳನಕಾರಿ ಹಾಗೂ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಪ್ರತಿ ದೂರು ದಾಖಲಿಸಿತ್ತು.