ಜೋ ಬೈಡನ್ ರಂತೆ ಮೋದಿ ಅವರೂ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ ವ್ಯಂಗ್ಯ
ಅಮರಾವತಿ (ಮಹಾರಾಷ್ಟ್ರ): ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ರಂತೆ ಪ್ರಧಾನಿ ನರೇಂದ್ರ ಮೋದಿ ಕೂಡಾ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ಮಹಾರಾಷ್ಟ್ರದ ಅಮರಾವತಿಯಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾರ್ಯಕ್ರಮವೊಂದರಲ್ಲಿ ಬೈಡನ್ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಂದು ಪರಿಚಯಿಸಿದ್ದರು ಎಂದು ಅವರು ಸ್ಮರಿಸಿದರು.
“ನಾನು ಮೋದಿಯವರ ಭಾಷಣ ಕೇಳಿದೆ ಹಾಗೂ ಆ ಭಾಷಣದಲ್ಲಿ ನಾವೇನು ಹೇಳುತ್ತಿದ್ದೇವೆ ಅದನ್ನೇ ಮೋದಿ ಕೂಡಾ ಇತ್ತೀಚಿನ ದಿನಗಳಲ್ಲಿ ಹೇಳುತ್ತಿದ್ದಾರೆ ಎಂದು ನನ್ನ ಸಹೋದರಿ ನನಗೆ ತಿಳಿಸಿದಳು. ಅಮೆರಿಕದ ಮಾಜಿ ಅಧ್ಯಕ್ಷರು ಮರೆತು ಹೋಗುತ್ತಿದ್ದರು ಹಾಗೂ ಹಿಂದಿನಿಂದ ಅವರಿಗೆ ನೆನಪು ಮಾಡಬೇಕಿತ್ತು. ಉಕ್ರೇನ್ ಅಧ್ಯಕ್ಷರು ಬಂದಾಗ, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಂದಿದ್ದಾರೆ ಎಂದು ಅಮೆರಿಕದ ಮಾಜಿ ಅಧ್ಯಕ್ಷರು ಪರಿಚಯಿಸಿದ್ದರು. ಅವರು ತಮ್ಮ ನೆನಪನ್ನು ಕಳೆದುಕೊಂಡಿದ್ದರು. ಅದೇ ರೀತಿ, ಪ್ರಧಾನಿ ಮೋದಿ ಕೂಡಾ ತಮ್ಮ ನೆನಪು ಕಳೆದುಕೊಳ್ಳುತ್ತಿದ್ದಾರೆ” ಎಂದು ಲೋಕಸಭಾ ವಿರೋಧ ಪಕ್ಷದ ನಾಯಕರೂ ಆದ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ಕಾಂಗ್ರೆಸ್ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಆದರೆ, ಕಳೆದ ಒಂದು ವರ್ಷದಿಂದ ಬಿಜೆಪಿ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ ಎಂದು ನಾನು ನನ್ನ ಭಾಷಣಗಳಲ್ಲಿ ಹೇಳುತ್ತಿದ್ದೇನೆ. ಹೀಗಿದ್ದೂ, ಕಾಂಗ್ರೆಸ್ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಜನರು ಕುಪಿತಗೊಂಡಿದ್ದಾರೆ ಎಂಬುದು ಅವರಿಗೆ ತಿಳಿಯುತ್ತಿದೆ. ಹೀಗಾಗಿ, ನಾನು ಸಂವಿಧಾನದ ಮೇಲೆ ದಾಳಿ ನಡೆಸುತ್ತಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.