ಗುಜರಾತ್‌ | ಮೊರ್ಬಿ ಸೇತುವೆ ಕುಸಿತ ಪ್ರಕರಣದ ಪ್ರಮುಖ ಆರೋಪಿಗೆ ತುಲಾಭಾರ ನಡೆಸಿ ಸನ್ಮಾನ

Update: 2024-11-16 15:28 GMT

PC : PTI 

ಅಹಮದಾಬಾದ್: ಸುಮಾರು ಎರಡು ವರ್ಷಗಳ ಹಿಂದೆ ನಡೆದಿದ್ದ 135 ಜನರನ್ನು ಬಲಿ ತೆಗೆದುಕೊಂಡ ಮೊರ್ಬಿ ತೂಗು ಸೇತುವೆ ಕುಸಿತ ಪ್ರಕರಣದ ಪ್ರಮುಖ ಆರೋಪಿ ಹಾಗೂ ಉದ್ಯಮಿ ಜಯ್ ಸುಖ್ ಪಟೇಲ್ ಗೆ ಅದ್ದೂರಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮೋದಕ ತುಲಾಭಾರ ನಡೆಸಿ, ಸನ್ಮಾನಿಸಿರುವ ಘಟನೆ ಮೊರ್ಬಿ ಜಿಲ್ಲೆಯಲ್ಲಿ ನಡೆದಿದೆ. ಇದರಿಂದ ಅವರ ಸುತ್ತ ಮತ್ತೊಂದು ಸುತ್ತಿನ ವಿವಾದ ಸೃಷ್ಟಿಯಾಗಿದೆ.

ಅಲಂಕಾರ ಮಾಡಿರುವ ತಕ್ಕಡಿಯ ಒಂದು ಬದಿ ಪಟೇಲ್ ಕುಳಿತಿರುವುದು ಹಾಗೂ ಮತ್ತೊಂದು ಬದಿಯಲ್ಲಿ ಅವರ ತೂಕಕ್ಕೆ ಸಮನಾದ ಮೋದಕಗಳನ್ನು ತುಂಬಿರುವ ಚಿತ್ರ ಹಾಗೂ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. 75 ಕೆಜಿ ತೂಕ ಹೊಂದಿರುವ ಈ ಮೋದಕಗಳನ್ನು ಸುಮಾರು 60,000 ಪಾಟಿದಾರ ಕುಟುಂಬಗಳಿಗೆ ಪ್ರಸಾದವನ್ನಾಗಿ ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಮೋರ್ಬಿ ಜಿಲ್ಲೆಯಲ್ಲಿ ಕಡ್ವಾ ಪಾಟಿದಾರ್ ಕನ್ಯಾ ಕೆಲವಾನಿ ಮಂಡಲ್ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಗಡಿಯಾರ ತಯಾರಿಕಾ ಸಂಸ್ಥೆಯಾದ ಒರೆವಾ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಜಯ್ ಸುಖ್ ಪಟೇಲ್ ಭಾಗವಹಿಸಿದ್ದರು. ಈ ಸಂಘವು ಪಾಟಿದಾರ್ ಸಮೂಹದಲ್ಲೇ ಪ್ರಭಾವಶಾಲಿಯಾದ ಕಡ್ವಾ ಪಾಟಿದಾರ್ ಉಪ ಜಾತಿಯ ಸಂಘಟನೆಯಾಗಿದೆ.

ಕುಸಿತಗೊಂಡಿದ್ದ ಸೇತುವೆಯ ಸ್ಥಳದಿಂದ ಕೇವಲ ಅರ್ಧ ಗಂಟೆಯಷ್ಟು ದೂರ ಕ್ರಮಿಸಬೇಕಾದ ಲಾಜಯ್ ಬಳಿ ನಿರ್ಮಿಸಲಾಗಿರುವ ಉಮಾ ರಂಗ್ ಭವನ್, ಉಮಾ ವಿವಾಹ ಸಭಾಂಗಣ ಉದ್ಘಾಟನೆ ಹಾಗೂ ಉಮಿಯ ಮಾತಾಜಿ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಜಯ್ ಸುಖ್ ಪಟೇಲ್ ರನ್ನು ಸಂಘಟಕರು ಆಹ್ವಾನಿಸಿದ್ದರು. ಈ ಸಮಾರಂಭವು ನವೆಂಬರ್ 13ರಿಂದ ನವೆಂಬರ್ 15ರ ನಡುವೆ ನಡೆದಿತ್ತು. ಪ್ರಖ್ಯಾತ ಅಜಂತಾ ಸಮೂಹವನ್ನು ಸ್ಥಾಪಿಸಿದ್ದ ದಾನಿ ದಿ. ಒ.ಆರ್.ಪಟೇಲ್ ಅವರ ಪುತ್ರ ಎಂಬ ಕಾರಣಕ್ಕೆ ಜಯ್ ಸುಖ್ ಪಟೇಲ್ ರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು ಎಂದು ಸಂಘಟಕರು ಸಮರ್ಥಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ, ನಾನು ಸಂಘಟನೆಯ ಟ್ರಸ್ಟಿಗಳ ಪೈಕಿ ಓರ್ವನಾಗಿರುವುದರಿಂದ, ನವೆಂಬರ್ 13ರಿಂದ ನವೆಂಬರ್ 15 ನಡುವೆ ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಮೊರ್ಬಿ ಜಿಲ್ಲೆಯನ್ನು ಪ್ರವೇಶಿಸಲು ಅನುಮತಿ ನೀಡಬೇಕೆಂದು ಜಯ್ ಸುಖ್ ಪಟೇಲ್ ಸ್ಥಳೀಯ ನ್ಯಾಯಾಲಯವೊಂದರ ಮೊರೆ ಹೋಗಿದ್ದರು. ಜಯ್ ಸುಖ್ ಪಟೇಲ್ ಗೆ ಸಾಮಾನ್ಯ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಲಯವು, ಮೊರ್ಬಿ ಜಿಲ್ಲೆಯ ವ್ಯಾಪ್ತಿಯನ್ನು ಪ್ರವೇಶಿಸದಂತೆ ಅವರಿಗೆ ನಿರ್ಬಂಧ ವಿಧಿಸಿತ್ತು.

ಆದರೆ, ಜಯ್ ಸುಖ್ ಪಟೇಲ್ ಗೆ ಜಾಮೀನು ಮಂಜೂರು ಮಾಡುವುದನ್ನು ರಾಜ್ಯ ಸರಕಾರ ಆಕ್ಷೇಪಿಸಿತ್ತು. ಜಯ್ ಸುಖ್ ಪಟೇಲ್ ಸದರಿ ಸಂಘಟನೆಯ ಅಧ್ಯಕ್ಷ ಅಥವಾ ಮುಖ್ಯಸ್ಥ ಅಲ್ಲದೆ ಇರುವುದರಿಂದ, ಸಮಾರಂಭದಲ್ಲಿ ಅವರ ಉಪಸ್ಥಿತಿಯ ಅಗತ್ಯವಿಲ್ಲವೆಂದು ವಾದಿಸಿತ್ತು.

ಆದರೆ, ಜಯ್ ಸುಖ್ ಪಟೇಲ್ ರ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಸೆಷನ್ಸ್ ನ್ಯಾಯಾಧೀಶ ದಿಲೀಪ್ ಮಹಿದ, ಮೊರ್ಬಿ ಜಿಲ್ಲೆಯಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾತ್ರ ಅನುಮತಿ ನೀಡಿ, ಜಾಮೀನು ಮಂಜೂರು ಮಾಡಿದ್ದರು. ಜಯ್ ಸುಖ್ ವಿರುದ್ಧ ಪ್ರತಿಕೂಲ ಆರೋಪಗಳು ಇಲ್ಲದೆ ಇರುವುದರಿಂದ, ಅವರು ಜಾಮೀನು ಷರತ್ತುಗಳನ್ನು ಪಾಲಿಸುತ್ತಾರೆ ಎಂಬ ವಾದವನ್ನು ನ್ಯಾಯಾಲಯ ಪರಿಗಣಿಸಿತ್ತು.

ಅಕ್ಟೋಬರ್ 30, 2022ರಂದು ಮೊರ್ಬಿಯಲ್ಲಿನ ಪಾದಚಾರಿ ತೂಗು ಸೇತುವೆ ಕುಸಿದು ಬಿದ್ದು, 135 ಮಂದಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News