ಮಹಾರಾಷ್ಟ್ರ ಚುನಾವಣೆ: ರಾಹುಲ್ ಗಾಂಧಿ ಬ್ಯಾಗ್ ಶೋಧಿಸಿದ ಚುನಾವಣಾ ಆಯೋಗದ ಅಧಿಕಾರಿಗಳು

Update: 2024-11-16 15:41 GMT

ರಾಹುಲ್ ಗಾಂಧಿ | PTI

ಅಮರಾವತಿ: ನ.20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಪ್ರಚಾರಕ್ಕೆಂದು ಶನಿವಾರ ಇಲ್ಲಿ ಆಗಮಿಸಿದ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಬ್ಯಾಗ್‌ ಅನ್ನು ಚುನಾವಣಾ ಆಯೋಗದ ಅಧಿಕಾರಿಗಳು ತಪಾಸಣೆಗೊಳಪಡಿಸಿದರು.

ಅಮರಾವತಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಧಾಮಣಗಾಂವ್ ರೈಲ್ವೆಯ ಹೆಲಿಪ್ಯಾಡ್‌ನಲ್ಲಿ ರಾಹುಲ್ ಹೆಲಿಕಾಪ್ಟರ್ ಇಳಿದ ಬಳಿಕ ಕಾದು ನಿಂತಿದ್ದ ಅಧಿಕಾರಿಗಳು ಅವರ ಬ್ಯಾಗ್‌ ಅನ್ನು ಪರೀಕ್ಷಿಸಿದರು.

ಅಧಿಕಾರಿಗಳ ಕ್ರಮಕ್ಕೆ ಕಾಂಗ್ರೆಸ್ ತೀವ್ರವಾಗಿ ಪ್ರತಿಕ್ರಿಯಿಸಿದೆ.

‘ಅವರೇಕೆ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಬ್ಯಾಗ್‌ಗಳನ್ನು ಪರೀಕ್ಷಿಸುವುದಿಲ್ಲ?’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರದ ಮಾಜಿ ಸಚಿವೆ ಹಾಗೂ ಕಾಂಗ್ರೆಸ್‌ನ ತಿವಸಾ ಶಾಸಕಿ ಯಶೋಮತಿ ಠಾಕೂರ್ ಪ್ರಶ್ನಿಸಿದರು.

ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಗೆ ರಾಜಕಾರಣಿಗಳ ಬ್ಯಾಗ್‌ಗಳ ತಪಾಸಣೆಯನ್ನು ಚುನಾವಣಾ ಆಯೋಗವು ಕಡ್ಡಾಯಗೊಳಿಸಿದೆ. ಇದು ವಾಡಿಕೆಯ ಕ್ರಮವಾಗಿದ್ದರೂ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ ಠಾಕ್ರೆ ಅವರ ಆಕ್ರೋಶಕ್ಕೆ ತುತ್ತಾಗಿದೆ.

ಸೋಮವಾರ ಯವತ್ಮಾಲ್‌ನಲ್ಲಿ ಮತ್ತು ಮರುದಿನ ಲಾತೂರಿನಲ್ಲಿ ಚುನಾವಣಾ ಅಧಿಕಾರಿಗಳು ಠಾಕ್ರೆಯವರ ಬ್ಯಾಗ್‌ಗಳನ್ನು ತಪಾಸಣೆಗೊಳಪಡಿಸಿದ್ದರು. ಬಿಜೆಪಿ,ಶಿವಸೇನೆ ಮತ್ತುಎನ್‌ಸಿಪಿ ಮೈತ್ರಿಕೂಟ ಆಡಳಿತಾರೂಢ ಮಹಾಯುತಿಯ ನಾಯಕರನ್ನು ಚುನಾವಣಾ ಆಯೋಗವು ಇಂತಹ ತಪಾಸಣೆಗೆ ಒಳಪಡಿಸುವುದಿಲ್ಲ ಎಂದು ಶಿವಸೇನೆ (ಯುಬಿಟಿ) ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News