ಪದೇ ಪದೇ ವಿದೇಶ ಯಾತ್ರೆ ಕೈಗೊಳ್ಳುವ ಮೋದಿ ಮಣಿಪುರ ಭೇಟಿಗೆ ಯಾಕೆ ನಿರಾಕರಿಸುತ್ತಿದ್ದಾರೆ?: ಜೈರಾಮ್ ರಮೇಶ್ ಪ್ರಶ್ನೆ

Update: 2024-11-16 15:03 GMT

ಜೈರಾಮ್ ರಮೇಶ್ | PC : PTI 

ಹೊಸದಿಲ್ಲಿ: ಪದೇ ಪದೇ ವಿದೇಶ ಪ್ರವಾಸಗಳನ್ನು ಕೈಗೊಳ್ಳುತ್ತಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಶನಿವಾರ ಟೀಕಾಪ್ರಹಾರ ನಡೆಸಿದ್ದಾರೆ. ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರಕ್ಕೆ ಭೇಟಿ ನೀಡಲು ಪ್ರಧಾನಿಯವರು ಯಾಕೆ ಸತತವಾಗಿ ನಿರಾಕರಿಸುತ್ತಿದ್ದಾರೆ ಎಂದವರು ಪ್ರಶ್ನಿಸಿದ್ದಾರೆ.

ಶನಿವಾರದಿಂದ ಮೋದಿಯವರು ತ್ರಿರಾಷ್ಟ್ರ ಪ್ರವಾಸವನ್ನು ಕೈಗೊಂಡಿದ್ದು, ಬ್ರೆಝಿಲ್‌ನಲ್ಲಿ ನಡೆಯಲಿರುವ ವಾರ್ಷಿಕ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಬ್ರೆಝಿಲ್‌ಗೆ ತೆರಳಲಿದ್ದಾರೆ. ನೈಜೀರಿಯಾ ಹಾಗೂ ಗಯಾನಾ ದೇಶಗಳಿಗೂ ಅವರು ಭೇಟಿ ನೀಡಲಿದ್ದಾರೆ.

‘‘ಮುಂದಿನ ಮೂರು ದಿನಗಳ ಕಾಲ ನಾವು ಅಜೈವಿಕ ಪ್ರಧಾನಿಯವರ ಸುಳ್ಳುಗಳಿಂದ ತುಂಬಿದ ಹಾಗೂ ಘನತೆರಹಿತ ಚುನಾವಣಾ ಪ್ರಚಾರದಿಂದ ಪಾರಾಗಲಿದ್ದೇವೆ" ಎಂದು ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ.

‘‘ಪ್ರಧಾನಿಯವರು ತನ್ನ ಕಾಲಾವಧಿಯ ವಿದೇಶ ಯಾತ್ರೆಯಲ್ಲಿದ್ದಾರೆ. ಅಲ್ಲಿ ಅವರು ಯಾವುದೇ ರಾಜತಾಂತ್ರಿಕ ಮುತ್ಸದ್ದಿತನವನ್ನು ಪ್ರದರ್ಶಿಸುವ ಬದಲು ದೇಶಿಯ ರಾಜಕೀಯ ಲಾಭವನ್ನು ಪಡೆಯಲು ಪ್ರಯತ್ನಗಳನ್ನು ನಡೆಸುತ್ತಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

‘‘2023ರ ಮೇ ತಿಂಗಳಿನಿಂದೀಚೆಗೆ ದುರಂತಮಯವಾಗಿ ವಿಭಜಿತವಾಗಿರುವ ಸಂಕಷ್ಚಪೀಡಿತ ಮಣಿಪುರಕ್ಕೆ ಭೇಟಿ ನೀಡಲು ಸತತವಾಗಿ ಯಾಕೆ ನಿರಾಕರಿಸುತ್ತಿದ್ದಾರೆ?’’ ಎಂದು ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಟ್ವೀಟ್ ಮಾಡಿದ್ದಾರೆ.

ಮಣಿಪುರಕ್ಕೆ ಭೇಟಿ ನೀಡಲು ಪ್ರಧಾನಿಯವರ ನಿರಾಕರಣೆಯು ಯಾವುದೇ ತಿಳುವಳಿಕೆಗೂ ಮೀರಿದ್ದಾಗಿದೆ ಎಂದವರು ಹೇಳಿದ್ದಾರೆ. ಪ್ರತಿದಿನವೂ ಯಾತನೆ ಹಾಗೂ ಪೀಡನೆಯನ್ನು ಅನುಭವಿಸುತ್ತಿರುವ ಮಣಿಪುರದ ಜನತೆಯನ್ನು ಖಂಡಿತವಾಗಿಯೂ ಪ್ರಧಾನಿಯವರು ಭೇಟಿ ಮಾಡಲೇ ಬೇಕಾಗಿದೆ ಎಂದು ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.

ಮಣಿಪುರದಲ್ಲಿ ಕಳೆದ ವರ್ಷ ಮೇ ತಿಂಗಳಿನಿಂದ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಮೈತೆಯಿ ಹಾಗೂ ಕುಕಿ ಸಮುದಾಯಗಳ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಇಷ್ಟಾದರೂ ಹಿಂಸಾಪೀಡಿತ ಮಣಿಪುರಕ್ಕೆ ಒಂದು ಸಲವಾದರೂ ಭೇಟಿ ನೀಡದೆ ಇರುವುದಕ್ಕಾಗಿ ಕಾಂಗೆಸ್ ಪಕ್ಷವು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.ಅಲ್ಲದೆ ರಾಜ್ಯದಲ್ಲಿನ ಪರಿಸ್ಥಿತಿ ನಿರ್ವಹಿಸಲು ಕೇಂದ್ರ ಸರಕಾರ ವಿಫಲವಾಗಿದೆಯೆಂದು ಆಪಾದಿಸುತ್ತಿದೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News