ಶಿರೋಮಣಿ ಅಕಾಲಿ ದಳ ಅಧ್ಯಕ್ಷ ಸ್ಥಾನಕ್ಕೆ ಬಾದಲ್ ರಾಜೀನಾಮೆ

Update: 2024-11-16 14:49 GMT

ಸುಖಬೀರ್ ಸಿಂಗ್ ಬಾದಲ್ | PC : PTI 

ಚಂಡಿಗಡ: ಸುಖಬೀರ್ ಸಿಂಗ್ ಬಾದಲ್ ಅವರು ಶಿರೋಮಣಿ ಅಕಾಲಿ ದಳ(ಎಸ್‌ಎಡಿ)ದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದು, ಪಕ್ಷದ ಕಾರ್ಯಕಾರಿ ಸಮಿತಿಗೆ ತನ್ನ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಆ.30ರಂದು ಅಕಾಲ ತಖ್ತ ಸಾಹಿಬ್ 62ರ ಹರೆಯದ ಸುಖಬೀರ್‌ರನ್ನು ‘ತಂಖೈಯಾ’(ಸಿಖ್ ಧಾರ್ಮಿಕ ನೀತಿ ಸಂಹಿತೆ ಉಲ್ಲಂಘಿಸಿದ ತಪ್ಪಿತಸ್ಥ) ಎಂದು ಘೋಷಿಸಿತ್ತು.

ಎಸ್‌ಎಡಿ ವಕ್ತಾರ ದಲ್ಜೀತ್ ಸಿಂಗ್ ಚೀಮಾ ಅವರು ಸುಖಬೀರ್ ರಾಜೀನಾಮೆಯನ್ನು ದೃಢೀಕರಿಸಿದ್ದಾರೆ.

‘ಎಸ್‌ಎಡಿ ಅಧ್ಯಕ್ಷ ಸುಖಬೀರ ಸಿಂಗ್ ಬಾದಲ್ ಅವರು ನೂತನ ಅಧ್ಯಕ್ಷರ ಆಯ್ಕೆಗೆ ದಾರಿ ಮಾಡಿಕೊಡಲು ಇಂದು ಪಕ್ಷದ ಕಾರ್ಯಕಾರಿ ಸಮಿತಿಗೆ ತನ್ನ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ತನ್ನ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಕ್ಕಾಗಿ ಮತ್ತು ತನ್ನ ಅಧಿಕಾರಾವಧಿಯುದ್ದಕ್ಕೂ ಸಂಪೂರ್ಣ ಬೆಂಬಲ ಹಾಗೂ ಸಹಕಾರವನ್ನು ನೀಡಿದ್ದಕ್ಕಾಗಿ ಪಕ್ಷದ ಎಲ್ಲ ನಾಯಕರು ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ’ ಎಂದು ಚೀಮಾ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಸುಖಬೀರ್ ಆ.29ರಂದು ಬಲ್ವಿಂದರ್ ಸಿಂಗ್ ಭುಂದರ್‌ರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದ್ದರು.

ಮಾಜಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಜನವರಿ 2008ರಲ್ಲಿ ಸುಖಬೀರ್‌ರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಧರ್ಮದ್ರೋಹ ಮತ್ತು ಗುರು ಗ್ರಂಥ ಸಾಹಿಬ್ ಕಳ್ಳತನ ಘಟನೆಗಳ ಬಳಿಕ ಅಕ್ಟೋಬರ್ 2015ರಿಂದ ಪಕ್ಷದೊಳಗೆ ಸುಖಬೀರ್ ವಿರುದ್ಧ ಧ್ವನಿಗಳು ಎದ್ದಿದ್ದವು. 2022ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ನಿರಾಶಾದಾಯಕ ಪ್ರದರ್ಶನದ ಬಳಿಕ ಪಕ್ಷದಲ್ಲಿನ ಬಂಡಾಯಗಾರರು ಸುಖಬೀರ್ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದರು.

ಈ ವರ್ಷದ ಜುಲೈನಲ್ಲಿ ಗುರ್ಪ್ರತಾಪ್ ಸಿಂಗ್ ವಡಾಲಾರ ನೇತೃತ್ವದಲ್ಲಿ ‘ಅಕಾಲಿ ದಳ ಸುಧಾರ್ ಲೆಹರ್ ’ ಹೆಸರಿನಲ್ಲಿ ಅಕಾಲಿ ದಳದ ಪ್ರತ್ಯೇಕ ಗುಂಪೊಂದು ರಚನೆಗೊಂಡಿತ್ತು. ಈ ಗುಂಪಿನ ಭಾಗವಾಗಿರುವ ಹಿರಿಯ ಎಸ್‌ಎಡಿ ನಾಯಕರು ಬಹಳ ಸಮಯದಿಂದ ಸುಖಬೀರ್ ರಾಜೀನಾಮೆಗೆ ಒತ್ತಾಯಿಸುತ್ತಿದ್ದರು.

ಆ.30ರಂದು ಅಕಾಲ ತಖ್ತ ಸುಖಬೀರ್ 2007ರಿಂದ 2017ರವರೆಗೆ ಉಪಮುಖ್ಯಮಂತ್ರಿಯಾಗಿ ಮತ್ತು ಪಕ್ಷದ ಮುಖ್ಯಸ್ಥರಾಗಿ ಮಾಡಿದ್ದ ತಪ್ಪುಗಳಿಗಾಗಿ ಹಾಗೂ ಸಿಖ್ ಪಂಥದ ವರ್ಚಸ್ಸಿಗೆ ಮತ್ತು ಸಿಖ್ ಹಿತಾಸಕ್ತಿಗಳಿಗೆ ತೀವ್ರವಾದ ಹಾನಿಯನ್ನುಂಟು ಮಾಡಿದ್ದ ಅವರ ನಿರ್ಧಾರಗಳಿಗಾಗಿ ಅವರನ್ನು ‘ತಂಖೈಯಾ’ ಎಂದು ಘೋಷಿಸಿತ್ತು. ಆಗಿನಿಂದ ಸುಖಬೀರ್ ರಾಜಕೀಯವಾಗಿ ನಿಷ್ಕ್ರಿಯರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News