ಶುಭಮನ್ ಗಿಲ್ ಹೆಬ್ಬೆರಳಿಗೆ ಗಾಯ: ಮೊದಲ ಟೆಸ್ಟ್‌ಗೆ ಅಲಭ್ಯ?
ಮೆಲ್ಬರ್ನ್: ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುವ ಟೆಸ್ಟ್ ಸರಣಿಗಿಂತ ಮೊದಲು ಟೀಮ್ ಇಂಡಿಯಾವು ಮತ್ತೊಂದು ಹಿನ್ನಡೆ ಅನುಭವಿಸಿದೆ. ಶನಿವಾರ ಪರ್ತ್‌ನಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆ ಸ್ಲಿಪ್‌ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದಾಗ ಶುಭಮನ್ ಗಿಲ್ ಹೆಬ್ಬೆರಳಿಗೆ ಗಾಯವಾಗಿದೆ.
ಗಿಲ್‌ಗೆ ಗಾಯವಾಗಿರುವುದನ್ನು ಮೂಲಗಳು ದೃಢಪಡಿಸಿವೆ. ಆರಂಭಿಕ ಬ್ಯಾಟರ್ ಗಿಲ್ ಆಸ್ಟ್ರೇಲಿಯದಲ್ಲಿ ಉಳಿದುಕೊಳ್ಳಲಿದ್ದು, ನವೆಂಬರ್ 22ರಂದು ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದ ಆಡುವ 11ರ ಬಳಗಕ್ಕೆ ಅವರನ್ನು ಸೇರಿಸಿಕೊಳ್ಳುವ ಕುರಿತು ಅನುಮಾನ ವ್ಯಕ್ತವಾಗಿದೆ.
ಡಿಸೆಂಬರ್ 6ರಿಂದ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದ ವೇಳೆಗೆ ಗಿಲ್ ಚೇತರಿಸಿಕೊಳ್ಳಬಹುದು ಎಂದು ಟೀಮ್ ಮ್ಯಾನೇಜ್‌ಮೆಂಟ್ ವಿಶ್ವಾಸ ವ್ಯಕ್ತಪಡಿಸಿದೆ.
ಶುಭಮನ್ ಗಿಲ್‌ಗೆ ಗಾಯವಾಗಿದೆ. ಅಭ್ಯಾಸ ಪಂದ್ಯದ ವೇಳೆಗೆ ಫೀಲ್ಡಿಂಗ್ ಮಾಡುವಾಗ ಅವರ ಹೆಬ್ಬೆರಳು ಮುರಿತಕ್ಕೊಳಗಾಗಿದೆ. ವೈದ್ಯಕೀಯ ತಂಡದಿಂದ ಚಿಕಿತ್ಸೆ ಪಡೆದ ನಂತರ ಸ್ಕ್ಯಾನಿಂಗ್‌ಗೆ ಒಳಗಾದರು. ಸ್ಕ್ಯಾನಿಂಗ್‌ನಲ್ಲಿ ಹೆಬ್ಬೆರಳು ಮುರಿದಿರುವುದು ಗೊತ್ತಾಗಿದೆ. ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಅವರು ಆಡುವುದು ಅನುಮಾನ. 2ನೇ ಟೆಸ್ಟ್‌ಗೆ ಲಭ್ಯವಾಗಬಹುದು ಎಂದು ಮೂಲಗಳು ಆಂಗ್ಲಪತ್ರಿಕೆಗೆ ತಿಳಿಸಿವೆ.
ಕೆ.ಎಲ್.ರಾಹುಲ್‌ಗೆ ಶುಕ್ರವಾರ ಮೊಣಕೈಗೆ ಚೆಂಡು ಬಡಿದು ಅಭ್ಯಾಸ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ವಿರಾಟ್ ಕೊಹ್ಲಿ ಕೂಡ ಗಾಯದ ಭೀತಿ ಎದುರಿಸುತ್ತಿದ್ದಾರೆ. ಅವರೀಗ ಚೆನ್ನಾಗಿರುವಂತೆ ಕಂಡುಬಂದಿದ್ದಾರೆ.
ರೋಹಿತ್ ಶರ್ಮಾ ಎರಡನೇ ಮಗುವಿಗೆ ತಂದೆಯಾಗಿರುವ ಕಾರಣ ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಹೀಗಾಗಿ ರಾಹುಲ್ ಅವರು ಯಶಸ್ವಿ ಜೈಸ್ವಾಲ್‌ರೊಂದಿಗೆ ಟೆಸ್ಟ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ರೋಹಿತ್ ಅವರು ಮುಂಬೈನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಟೆಸ್ಟ್ ತಂಡಕ್ಕೆ ಅವರ ಸೇರ್ಪಡೆಯು ಸದ್ಯ ಖಚಿತವಾಗಿಲ್ಲ.