ನಿಜವಾಗಿಯೂ ಬಿಜೆಪಿಗರಿಗೆ ಆಡಳಿತದ ಅರಿವೇ ಇಲ್ಲ: ಡಾ.ಎಚ್.ಸಿ.ಮಹದೇವಪ್ಪ

Update: 2023-06-17 10:19 GMT

ಮೈಸೂರು: ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಉತ್ತಮ ಆಡಳಿತವನ್ನು ನೀಡುತ್ತಿದ್ದೇವೆ. ನಾವು ಯಾವುದೇ ಧರ್ಮ, ಜಾತಿಗಳನ್ನು ಗುರಿಯಾಗಿಟ್ಟುಕೊಂಡು ಆಡಳಿತ ನಡೆಸುವುದಿಲ್ಲ, ಸಂವಿಧಾನದ ಪ್ರಕಾರ ಎಲ್ಲರನ್ನೂ ಒಳಗೊಂಡು ಆಡಳಿತ ನೀಡುತ್ತೇವೆ. ಹಾಗಾಗಿಯೇ ಸಂವಿಧಾನ ವಿರೋಧಿಯಾದ ಮತಾಂತರ ನಿಷೇಧ, ಎಪಿಎಂಸಿ ಕಾಯ್ದೆಗಳನ್ನು ಹಿಂಪಡೆದಿರುವುದು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಗೋವುಗಳನ್ನು ಸಾಕದೆ ಇರುವವರು, ಗಂಜಲ ಎತ್ತದೆ ಇರುವವರು ಗೋವುಗಳನ್ನು ಸೋಪ್ ಹಾಕಿ ತೊಳೆದುಕೊಂಡು ಬಂದು ಫೋಟೋ ತೆಗೆಸಿಕೊಂಡು ನಾವುಗಳೇ ಗೊ ರಕ್ಷಕರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಸುಗಳ ಮಧ್ಯೆಯೇ ಬೆಳೆದು ಬಂದವರು. ಹಸುಗಳಿಗೆ ವಯಸ್ಸಾದ ಮೇಲೆ ಅವುಗಳನ್ನು ಸಾಕಲು ಸಾಧ್ಯವಿಲ್ಲ, ಹಾಗಾಗಿಯೇ 1964 ರಲ್ಲಿ ಕಾಯ್ದೆಯನ್ನು ಜಾರಿಗೆ ತರಲಾಯಿತು. ಉಪಯೋಗಕ್ಕೆ ಬಾರದ ಹಸುಗಳನ್ನು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಬಲವಂತದ ಮತಾಂತರ ಮಾಡಬಾರದು ಎಂದು ಸಂವಿಧಾನದಲ್ಲೇ ಇದೆ. ಮತ್ತೆ ಮತಾಂತರ ನಿಷೇಧ ಕಾನೂನು ಅಪ್ರಸ್ತುತ. ಹಾಗಾಗಿಯೇ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲಾಯಿತು ಎಂದು ಸಮರ್ಥಿಸಿಕೊಂಡರು.

ಪಠ್ಯಪುಸ್ತಕ ವಿಚಾರದಲ್ಲಿ ಬಿಜೆಪಿಯವರು ಇತಿಹಾಸಕಾರರಲ್ಲದವರನ್ನು ಇತಿಹಾಸಕಾರರು ಎಂದು ಬಿಂಬಿಸಿ ಚರಿತ್ರೆಯನ್ನು ಬದಲಾಯಿಸಲು ಹೊರಟಿದ್ದರು. ಹಾಗಾಗಿ ಮಕ್ಕಳು ನೈಜ ಇತಿಹಾಸ ಮತ್ತು ಚರಿತ್ರೆಯನ್ನು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಚುನಾವಣಾ ಪೂರ್ವಭರವಸೆಗಳು, ಗ್ಯಾರಂಟಿ ಯೋಜನೆಗಳು ಸಂವಿಧಾನದ ಹಕ್ಕುಗಳಲ್ಲ. ಆದರೆ ನಾವು ಜನರಿಗೆ ಪ್ರೇರಣೆ ನೀಡುವಂತ ಘೋಷಣೆಗಳು. ಅಧಿಕಾರಕ್ಕೆ ಬಂದ ಮೇಲೆ ಅವುಗಳನ್ನು ಈಡೇರಿಸುವುದು ನಮ್ಮ ಆದ್ಯ ಕರ್ತವ್ಯ ಹಾಗಾಗಿ ಮೊದಲಿಗೆ ನಾವು ಭರವಸೆ ಕೊಟ್ಟಿದ್ದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿದ್ದೇವೆ. ಮೊದಲಿಗೆ ಮಹಿಳೆಯರಿಗೆ ಉಚಿತ ಬಸ್ ಸೇವೆಯಾದ ಶಕ್ತಿಯೋಜನೆ ಜಾರಿಗೆ ತಂದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದೇವೆ ಎಂದು ಹೇಳಿದರು.

ಉಚಿತ 10 ಕೆ.ಜಿ.ಅಕ್ಕಿ ಕೊಡುವ ಸಂಬಂಧ ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎಂದು ರಾಜಕೀಯ ಮಾಡುತ್ತಿದೆ. ಆದರೂ ನಾವು ಕೊಟ್ಟಿರುವ ಭರವಸೆಯನ್ನು ಈಡೇರಿಸಿಯೇ ತೀರುತ್ತೇವೆ. ಈಗಾಗಲೆ ನಮ್ಮ ಸಚಿವರುಗಳು ಪಂಜಾಬ್, ತೆಲಂಗಾಣ ರಾಜ್ಯಗಳನ್ನು ಅಕ್ಕಿ ಖರೀದಿಗಾಗಿ ಸಂಪರ್ಕಿಸುತ್ತಿದ್ದಾರೆ ಎಂದು ಹೇಳಿದರು.

ಹತ್ತು ಕೆ.ಜಿ.ಅಕ್ಕಿ ಕೊಡುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕೇಳಿ ಘೋಷಣೆ ಮಾಡಿದ್ದರಾ ಎಂಬ ಬಿಜೆಪಿ ಹೇಳಿಕೆ ಬುದ್ಧಿಹೀನರು ಹೇಳುವಂತಹುದು. ಅವರಿಗೆ ನಿಜವಾಗಿಯೂ ಆಡಳಿತದ ಅರಿವೇ ಇಲ್ಲ. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕತೆಗೆ ಧಕ್ಕೆ ಬರುತ್ತದೆ ಎನ್ನುವುದಾದರೆ. ಬಿಜೆಪಿ ಆಡಳಿತದ ವೇಳೆ ಆರ್ಥಿಕತೆ ಚೆನ್ನಾಗಿದ್ದರೆ ಏಕೆ ಶಾಲಾ ಕಾಲೇಜು ವಿಧ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡಲಿಲ್ಲ, ಶುಲ್ಕ ಕಟ್ಟಲು ಆಗದೆ ವಿದ್ಯಾರ್ಥಿಗಳು ಏಕೆ ಶಿಕ್ಷಣದಿಂದ ವಂಚಿತರಾದರು ಎಂದು ಪ್ರಶ್ನಿಸಿದರು.

ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೆ 2014 ರಲ್ಲಿ ಕೇಂದ್ರದಲ್ಲಿ ಆಸ್ಕರ್ ಫರ್ನಾಂಡೀಸ್ ಸಚಿವರಾಗಿದ್ದು, ನಾನು ರಾಜ್ಯದಲ್ಲಿ ಲೊಕೋಪಯೋಗಿ ಸಚಿವರಾಗಿದ್ದ ವೇಳೆ ಜಾರಿಯಾಗಿದ್ದು, ಇದಕ್ಕೆ ದಾಖಲೆಗಳಿವೆ. ಅಭಿವೃದ್ದೀಯನ್ನೇ ಮಾಡದೆ ನಾವೆ ಮಾಡಿದ್ದು ಎಂದು ಹೇಳಿಕೊಳ್ಳುವ ಜಾಯಮಾನ ನಮಗಿಲ್ಲ. ನಮಗೆ ಹೊಂದಾಣಿಕೆ ರಾಜಕಾರಣ ಎಂದರೆ ಏನು ಎಂಬುದೇ ಗೊತ್ತಿಲ್ಲ, ಸಿದ್ಧರಾಮಯ್ಯ ಅವರು ಅಧಿಕಾರಕ್ಕಾಗಿ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಂಡವರೇ ಅಲ್ಲ, ವಿರೋಧ ಪಕ್ಷದವರ ಜೊತೆ ಎಂದೂ ಮಾತನಾಡಿದವರಲ್ಲ. ಹೊಂದಾಣಿಕೆ ಏನಾದರೂ ಇದ್ದರೆ ಅದು ಸಂಸದ ಪ್ರತಾಪ್ ಸಿಂಹ ಅವರದೇ ಎಂದು ತಿರುಗೇಟು ನೀಡಿದರು.


"ಮೊಘಲರು ಮನಸ್ಸು ಮಾಡಿದ್ದರೆ ಇಡೀ ಭಾರತವನ್ನೇ ಇಸ್ಲಾಂ ರಾಷ್ಟ್ರ ಮಾಡಬಹುದಿತ್ತು"

ಮೊಘಲರು 800 ವರ್ಷ ಭಾರತ ದೇಶವನ್ನು ಆಳಿದರು. ಅವರು ಮನಸ್ಸು ಮಾಡಿದ್ದರೆ ಇಡೀ ಭಾರತವನ್ನೇ ಇಸ್ಲಾಂ ರಾಷ್ಟ್ರ ಮಾಡಬಹುದಿತ್ತು ಎಂದು ಹಿಂದುತ್ವವಾದಿಗಳಿಗೆ ಸಚಿವ ಮಹದೇವಪ್ಪ ತಿರುಗೇಟು ನೀಡಿದರು.

ಭಾರತ ಒಂದು ಧರ್ಮ ಜಾತಿಗೆ ಸೀಮಿತವಾದ ದೇಶ ಅಲ್ಲ, ಎಲ್ಲರನ್ನೂ ಒಳಗೊಂಡ ವೈವಿದ್ಯತೆಯಿಂದ ಏಕತೆಗೊಂಡ ದೇಶ. ಹಾಗಾಗಿ ಕಾಂಗ್ರೆಸ್ ಸಮೃದ್ಧ ಭಾರತವನ್ನು ಕಟ್ಟುವ ಕಡೆ ಗುರಿ ಹೊಂದಿದೆ ಎಂದು ಹೇಳಿದರು.


ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರ್ಯ ಹೋರಾಟಗಾರ. ಶೃಂಗೇರಿ ಮಠಕ್ಕೆ ಪೇಶ್ವೆಯರು ದಾಳಿಮಾಡಿದಾಗ ರಕ್ಷಣೆ ಮಾಡಿದ ವ್ಯಕ್ತಿ. 150 ರಿಂದ 200 ದೇವಾಲಯಗಳಲ್ಲಿ ಭಾವೈಕ್ಯತೆ ತಂದ ವ್ಯಕ್ತಿ. ವೇಶ್ಯೆ ಪದ್ಧತಿ ನಿಷೇಧ ಮಾಡಿದವರು. ಇಂತಹ ಚರಿತ್ರಕಾರರ ಬಗ್ಗೆ ಸಹಿಸಿಕೊಳ್ಳಲು ಕೆಲವರಿಗೆ ಆಗುವುದಿಲ್ಲ. ಹಾಗಾಗಿಯೇ ಹಿಂದೂ ಹಿಂದೂ ಎಂದು ಹೇಳುತ್ತಿರುತ್ತಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News