ಮಾನಹಾನಿ ಪ್ರಕರಣ: ಶಿಕ್ಷೆ ಅಮಾನತುಗೊಳಿಸುವಂತೆ ರಾಹುಲ್ ಗಾಂಧಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್

Update: 2023-07-07 06:17 GMT

ಹೊಸದಿಲ್ಲಿ: ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು NDTV ವರದಿ ಮಾಡಿದೆ.

ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಅವರು ಎಪ್ರಿಲ್ ಮತ್ತು ಮೇನಲ್ಲಿ ಅರ್ಜಿಯನ್ನು ಆಲಿಸಿದ್ದರು ಹಾಗೂ ಮೇ 2 ರಂದು ವಾದವನ್ನು ಮುಕ್ತಾಯಗೊಳಿಸಲಾಯಿತು.

ರಾಹುಲ್ ಗಾಂಧಿ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, , ಕ್ರಿಮಿನಲ್ ಮಾನನಷ್ಟದ ಆರೋಪದ ಪ್ರಕರಣದಲ್ಲಿ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದರು.

2019 ರ ಮೋದಿ ಉಪನಾಮದ ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಯನ್ನು ತಡೆಹಿಡಿಯಲು ಗುಜರಾತ್ ಹೈಕೋರ್ಟ್ ಗೆ ಮಾಡಿದ ಮನವಿಯನ್ನು ಇಂದು ತಿರಸ್ಕರಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಲೋಕಸಭಾ ಸಂಸದರಾಗಿ ಅನರ್ಹರಾಗಿ ಮುಂದುವರಿಯಲಿದ್ದಾರೆ. ಇದೀಗ ಅವರು ತಮ್ಮ ಮನವಿಯೊಂದಿಗೆ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗುವ ಸಾಧ್ಯತೆಯಿದೆ

2024ರ ರಾಷ್ಟ್ರೀಯ ಚುನಾವಣೆ ಸೇರಿದಂತೆ ಮುಂಬರುವ ಚುನಾವಣೆಗಳ ಸರಣಿಗೆ ಕಾರ್ಯತಂತ್ರ ರೂಪಿಸುತ್ತಿರುವ ಕಾಂಗ್ರೆಸ್ಗೆ ಹೈಕೋರ್ಟ್ ತೀರ್ಪು ಭಾರೀ ಹಿನ್ನಡೆಯಾಗಿದೆ ಎನ್ನಲಾಗಿದೆ.

ಆದರೆ ಈ ಹಿಂದೆ ನ್ಯಾಯಾಲಯವು ಎರಡು ವರ್ಷಗಳ ಶಿಕ್ಷೆಯನ್ನು ತಡೆಹಿಡಿದಿದ್ದರಿಂದ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೈಲಿಗೆ ಹೋಗುವುದರಿಂದ ಬಚಾವಾಗಿದ್ದಾರೆ.

ಒಂದು ವೇಳೆ ಹೈಕೋರ್ಟ್ ರಾಹುಲ್ ಗಾಂಧಿ ಅವರ ಶಿಕ್ಷೆಗೆ ತಡೆಯಾಜ್ಞೆ ನೀಡಿದ್ದರೆ, ಅವರ ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸಲಾಗುತ್ತಿತ್ತು.

2019 ರ ಲೋಕಸಭಾ ಪ್ರಚಾರದ ವೇಳೆ ಮಾಡಿದ ಭಾಷಣಕ್ಕಾಗಿ 52ರ ಹರೆಯದ ರಾಹುಲ್ ಗಾಂಧಿ ಅವರನ್ನು ಮಾರ್ಚ್ 23 ರಂದು ಗುಜರಾತ್ ನಲ್ಲಿ ನ್ಯಾಯಾಲಯವು ದೋಷಿ ಎಂದು ಘೋಷಿಸಿತು ಹಾಗೂ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಬಿಜೆಪಿ ಶಾಸಕ ಹಾಗೂ ಗುಜರಾತ್ ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದರು

ಕೇರಳದ ವಯನಾಡಿನ ಲೋಕಸಭಾ ಸಂಸದರಾಗಿದ್ದ ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ ಅವರನ್ನು ತಕ್ಷಣವೇ ಅನರ್ಹಗೊಳಿಸಲಾಯಿತು.


Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News