ಎಲ್ಲ ಪೌರ ಕಾರ್ಮಿಕರಿಗೂ ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ವಿಸ್ತರಣೆ; ಜಿಲ್ಲಾಧಿಕಾರಿ ಸೂಚನೆ
2023ರ ಎಪ್ರಿಲ್ ನಿಂದ ಈವರೆಗೆ 9 ಕ್ಲೇಮ್ ಗಳು ಈ ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ನಿಂದ ಬಂದಿವೆ. ಓರಿಯೆಂಟಲ್ ಹೆಲ್ತ್ ಇನ್ಸೂರೆನ್ಸ್ ನಡಿ ಈ ಹೆಲ್ತ್ ಕಾರ್ಡ್ ವ್ಯವಸ್ಥೆ ಮಾಡಲಾಗಿದ್ದು, ಪೌರ ಕಾರ್ಮಿಕರೊಬ್ಬರು ಇತ್ತೀಚೆಗೆ ಕಿಡ್ನಿ ವೈಫಲ್ಯ ಸಮಸ್ಯೆಗಾಗಿ ನಗರದ ಆಸ್ಪತ್ರೆಯಲ್ಲಿ 2.40 ಲಕ್ಷ ರೂ. ವೆಚ್ಚದ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಮತ್ತೆ ಅವರಿಗೆ ಪೈಲ್ಸ್ ಚಿಕಿತ್ಸೆಗಾಗಿ ಮತ್ತೆ 40 ಸಾವಿರ ರೂ. ವೆಚ್ಚದ ಚಿಕಿತ್ಸೆ ಪಡೆದಿದ್ದಾರೆ. ನಗರದ ಸ್ವಚ್ಛತೆಯನ್ನು ಕಾಪಾಡುವ ಪೌರ ಕಾರ್ಮಿಕರು ಸಾಕಷ್ಟು ಆರೋಗ್ಯ ಸಮಸ್ಯೆಗಳಿಂದ ಬಳಲುವ ಕಾರಣ ಅವರಿಗೂ ಗಂಭೀರ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ಒದಗಿಸುವ ದೃಷ್ಟಿಯಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. - ಮಾಲಿನಿ ರಾಡ್ರಿಗಸ್, ಸಮುದಾಯ ಸಂಘಟನಾ ಅಧಿಕಾರಿ, ಮನಪಾ.
ಮಂಗಳೂರು, ಜು. 11: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ ಪೌರ ಕಾರ್ಮಿಕರಿಗೆ ಒದಗಿಸಲಾಗಿರುವ ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ಸೌಲಭ್ಯ ಜಿಲ್ಲೆಯ ಇತರ ಸ್ಥಳೀಯಾಡಳಿತಗಳಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೂ ಲಭ್ಯವಾಗಲಿದೆ.
ನಗರದ ಸ್ವಚ್ಛತೆಗಾಗಿ ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟು ದಿನವಿಡೀ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ಈ ಕ್ಯಾಶ್ಲೆಸ್ ಹೆಲ್ತ್ ಕಾರ್ಡ್ ಮೂಲಕ ವಾರ್ಷಿಕ ತಲಾ 3 ಲಕ್ಷ ರೂ.ವರೆಗೆ ನಗರದ ಸುಸಜ್ಜಿತ ಆಸ್ಪತ್ರೆಗಳಲ್ಲಿ ಕಿಡ್ನಿ ವೈಫಲ್ಯ, ಹೃದ್ರೋಗ, ಕಾನ್ಸರ್, ಕಣ್ಣಿನ ಶಸ್ತ್ರ ಚಿಕಿತ್ಸೆ ಸೇರಿದಂತೆ ಇತರ ಎಲ್ಲಾ ರೀತಿಯ ತುರ್ತು ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ.
ಸದ್ಯ ಮಂಗಳೂರು ಮಹಾನಗರ ಪಾಲಿಕೆಯ ಶೇ. 24.10 ಕಾರ್ಯಕ್ರಮದಡಿ ಪೌರ ಕಾರ್ಮಿಕರು ಹಾಗೂ ಅವರ ಕುಟುಂಬದವರು ಕ್ಯಾಶ್ ಲೆಸ್ ಆರೋಗ್ಯ ಕಾರ್ಡ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಈ ವ್ಯವಸ್ಥೆಯನ್ನು ಜಿಲ್ಲೆಯ ಇತರ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಜಾರಿಗೊಳಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿರುವುದರಿಂದ ಜಿಲ್ಲೆಯ ಎಲ್ಲ ಪೌರ ಕಾರ್ಮಿಕರಿಗೆ ಇದರ ಪ್ರಯೋಜನ ದೊರೆಯಲಿದೆ.
2018ರ ಮಾರ್ಚ್ ನಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ಈ ಕ್ಯಾಶ್ ಲೆಸ್ ಆರೋಗ್ಯ ವಿಮಾ ಸೌಲಭ್ಯವನ್ನು ಜಾರಿಗೊಳಿಸಲಾಗಿತ್ತು. ಈ ಕಾರ್ಡ್ ನಡಿ ಪ್ರಸಕ್ತ ಸಾಲಿನಿಂದ 3 ಲಕ್ಷ ರೂ.ವರೆಗಿನ ಚಿಕಿತ್ಸೆಯನ್ನು ಪೌರ ಕಾರ್ಮಿಕರು ಹಾಗೂ ಅವರ ಕುಟುಂಬದವರು ನಗರದ ನೋಂದಾಯಿತ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ.
ಪೌರ ಕಾರ್ಮಿಕರಿಗೆ ನಗರದ ಸುಸಜ್ಜಿತ ಆಸ್ಪತ್ರೆಗಳಲ್ಲಿ ತುರ್ತು ಹಾಗೂ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಸಿಗುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಶೇ. 24.10 ಯೋಜನೆಯಡಿ ಈ ವಿಮಾ ಸೌಲಭ್ಯವನ್ನು ಆರಂಭಿಸಲಾಗಿತ್ತು. ಆರಂಭದಲ್ಲಿ 1 ಲಕ್ಷ ರೂ.ವರೆಗಿದ್ದ ಚಿಕಿತ್ಸಾ ವೆಚ್ಚವನ್ನು 2023ನೇ ಎಪ್ರಿಲ್ ನಿಂದ ವಿಮೆ ನವೀಕರಿಸುವ ವೇಳೆ 3 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 206 ಪೌರ ಕಾರ್ಮಿಕರಿಗೆ ಈ ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ಒದಗಿಸಲಾಗಿದ್ದು, ಅವರ ಕುಟುಂಬದವರು ಸೇರಿ ಒಟ್ಟು 527 ಮಂದಿ ಈ ಸೌಲಭ್ಯದ ಪ್ರಯೋಜನ ಪಡೆಯುತ್ತಿದ್ದಾರೆ.
ಪೌರ ಕಾರ್ಮಿಕರು ತುರ್ತು ಚಿಕಿತ್ಸೆಗಾಗಿ ವಿಮಾ ಸೌಲಭ್ಯದಡಿ ನೋಂದಾಯಿಸಲ್ಪಟ್ಟ ಆಸ್ಪತ್ರೆಗಳಲ್ಲಿ ದಾಖಲಾಗಿ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಂದರ್ಭ ಅವರ ಚಿಕಿತ್ಸಾ ವೆಚ್ಚ ಪಾವತಿಯಾಗುತ್ತದೆ. ಪೌರ ಕಾರ್ಮಿಕರು ಅಥವಾ ಕುಟುಂಬದವರು ಇದಕ್ಕಾಗಿ ಅಲೆದಾಡುವ ವ್ಯವವಸ್ಥೆಯೂ ಇರುವುದಿಲ್ಲ. ಎಲ್ಲವನ್ನೂ ಪಾಲಿಕೆಯ ಮೂಲಕ ನಿರ್ವಹಿಸಲಾಗುತ್ತದೆ.
2022-23ನೆ ಸಾಲಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಈ ಕ್ಯಾಶ್ಲೆಸ್ ಹೆಲ್ತ್ಕಾರ್ಡ್ನಡಿ 41 ಮಂದಿಯಿಂದ ಕ್ಲೇಮ್ ಗಳು ಬಂದಿದ್ದು, 16.06 ಲಕ್ಷ ಮೌಲ್ಯದ ಚಿಕಿತ್ಸೆಯನ್ನು ಪೌರ ಕಾರ್ಮಿಕರು ಪಡೆದುಕೊಂಡಿದ್ದಾರೆ. 2023-24ನೆ ಸಾಲಿನಿಂದ ಚಿಕಿತ್ಸಾ ವೆಚ್ಚವನ್ನು 3 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದ್ದು, 527 ಪೌರ ಕಾರ್ಮಿಕರಿಗೆ ಪ್ರೀಮಿಯಂ ಮೊತ್ತವಾಗಿ 47 ಲಕ್ಷ ರೂ.ಗಳನ್ನು ಇನ್ಸೂರೆನ್ಸ್ ಸಂಸ್ಥೆಗೆ ಪಾವತಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ‘ವಾರ್ತಾಭಾರತಿ’ಗೆ ಮಾಹಿತಿ ನೀಡಿ
ಮಂಗಳೂರು ಮಹಾನಗರ ಪಾಲಿಕೆಗೆ ಮಾತ್ರ ಈಗ ಈ ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ಯೋಜನೆ ಸೀಮಿತವಾಗಿತ್ತು. ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಇದೀಗ ಈ ಅದನ್ನು ಜಿಲ್ಲೆಯ ಇತರ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರಿಗೂ ಅನ್ವಯವಾಗುವಂತೆ ವಿಸ್ತರಿಸಲು ಸೂಚಿಸಿರುವುದು ಉತ್ತಮ ಬೆಳವಣಿಗೆ. ಸಾಮಾನ್ಯವಾಗಿ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುವ ಪೌರ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಇದರಿಂದ ಬಹಳಷ್ಟು ಪ್ರಯೋಜನವಾಗಲಿದೆ.
-ಆನಂದ್ ಎಸ್.ಪಿ., ದಲಿತ ಮುಖಂಡರು.