ನಾನು ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದೇನೆ, ಎನ್ ಸಿಪಿಯನ್ನು ಮತ್ತೆ ಕಟ್ಟುತ್ತೇನೆ: ಶರದ್ ಪವಾರ್

Update: 2023-07-03 07:31 GMT

ಶರದ್ ಪವಾರ್, ಫೋಟೋ: PTI

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಹಿರಿಯ ನಾಯಕ ಹಾಗೂ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರು ರಾಜ್ಯದಲ್ಲಿ ಬಿಜೆಪಿ ಸರಕಾರದೊಂದಿಗೆ ಕೈಜೋಡಿಸಿದ ಒಂದು ದಿನದ ನಂತರ,ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಪಕ್ಷವನ್ನು ಪುನರ್ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.

ಸೋಮವಾರ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್, ಈಗ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದೇನೆ. ಅಜಿತ್ ಪವಾರ್ ಹಾಗೂ ಇತರ ಸದಸ್ಯರ ನಡೆಯಿಂದ ನಾನು ವಿಚಲಿತನಾಗಿಲ್ಲ, ಜನರ ಬೆಂಬಲದೊಂದಿಗೆ ಮತ್ತೆ ಪಕ್ಷವನ್ನು ಕಟ್ಟಲು ಮುಂದಾಗುತ್ತೇನೆ ಎಂದು ಹೇಳಿದರು.

ಗುರು ಪೂರ್ಣಿಮೆಯ ದಿನದಂದು ಸತಾರಾ ಜಿಲ್ಲೆಯ ಕರಾಡ್ ನಲ್ಲಿರುವ  ಸ್ಮಾರಕದಲ್ಲಿ ತಮ್ಮ ಗುರು ಹಾಗೂ ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ ಯಶವಂತರಾವ್ ಚವಾಣ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭದಲ್ಲಿ ಪವಾರ್ ಶಕ್ತಿ ಪ್ರದರ್ಶನ ಮಾಡಿದರು. ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿದ ಅವರು, ಬಿಜೆಪಿಯು ಎಲ್ಲಾ ವಿರೋಧ ಪಕ್ಷಗಳನ್ನು "ನಾಶ" ಮಾಡಲು ಪ್ರಯತ್ನಿಸುತ್ತಿದೆ ಹಾಗೂ ಎನ್ಸಿಪಿಯನ್ನು ಪುನರ್ನಿರ್ಮಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದರು.

ಇಂದು ಮಹಾರಾಷ್ಟ್ರ ಮತ್ತು ದೇಶದಲ್ಲಿ ಕೆಲವು ಗುಂಪುಗಳಿಂದ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜದ ನಡುವೆ ಬಿರುಕು ಮೂಡಿಸಲಾಗುತ್ತಿದೆ. ಬಂಡಾಯಗಾರರು ಮರಳಬಹುದು, ಆದರೆ ಇದಕ್ಕೆ ಕಾಲಮಿತಿ ಇದೆ. ಎನ್ ಸಿಪಿ ಒಡೆಯಲು ಯತ್ನಿಸಿದವರಿಗೆ ನಾವು ಅವರ ನಿಜವಾದ ಸ್ಥಾನವನ್ನು ತೋರಿಸುತ್ತೇವೆ ಎಂದು ಪವಾರ್ ಹೇಳಿದರು.

ಕರಾಡ್ ನಲ್ಲಿ ಶರದ್ ಪವಾರ್ ಅವರನ್ನು ಸ್ಥಳೀಯ ಶಾಸಕ ಬಾಳಾಸಾಹೇಬ ಪಾಟೀಲ ಸಾವಿರಾರು ಬೆಂಬಲಿಗರು ಸ್ವಾಗತಿಸಿದರು. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಅಜಿತ್ ಪವಾರ್ ಅವರ ಬಂಗಲೆಗೆ ಆಗಮಿಸಿದ್ದ ಶಾಸಕ ಮಕರಂದ್ ಪಾಟೀಲ್ ಅವರು ಶರದ್ ಪವಾರ್ ಅವರನ್ನು ಕರಾಡಿನಲ್ಲಿ ಸ್ವಾಗತಿಸಿದರು. ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್, ಶರದ್ ಪವಾರ್ ಅವರೊಂದಿಗಿನ ಸಂಬಂಧ ಹದಗೆಟ್ಟಿದ್ದರೂ, ಬಿಕ್ಕಟ್ಟಿನ ಸಂದರ್ಭದಲ್ಲಿ ಏಕತೆ ಪ್ರದರ್ಶಿಸಲು ಅವರೊಂದಿಗೆ ಕಾಣಿಸಿಕೊಂಡರು

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News