ಕುಂದಾಪುರ: ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಧರಣಿ
ಕುಂದಾಪುರ, ಜು.23: ಮುದೂರು ಹಾಗೂ ಕೆರಾಡಿ ಭಾಗದ ವಿದ್ಯಾರ್ಥಿ ಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿ ಗಳು ಶನಿವಾರ ಕುಂದಾಪುರ ಕೆಎಸ್ಆರ್ಟಿಸಿ ಡಿಪೋ ಎದುರು ಧರಣಿ ನಡೆಸಿದರು.
ಕೊಲ್ಲೂರು ಪರಿಸರದ ಮಲೆನಾಡಿನ ತೀರಾ ಗ್ರಾಮೀಣ ಭಾಗದಿಂದ ವಿದ್ಯಾರ್ಜನೆಗಾಗಿ ಹೆಣ್ಣು ಮಕ್ಕಳು ಸೇರಿದಂತೆ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಸರಕಾರಿ ಬಸ್ಗಳಲ್ಲಿ ಕುಂದಾಪುರಕ್ಕೆ ಬರುತ್ತಿದ್ದಾರೆ. ಬಸ್ಸಿನ ವೇಳಾಪಟ್ಟಿಯಲ್ಲಿ ಆಗ್ಗಾಗ್ಗೆ ಆಗುವ ವ್ಯತ್ಯಯದಿಂದಾಗಿ ಕತ್ತಲಾದರೂ ವಿದ್ಯಾರ್ಥಿಗಳು ಮನೆಗೆ ಸೇರಲಾಗುತ್ತಿಲ್ಲ. ಬಸ್ಸು ಇಳಿದು 2-3 ಕಿ.ಮೀ ದೂರವನ್ನು ಕಾಡು ಪ್ರದೇಶ, ಕಾಲು ಸಂಕ, ನದಿ, ತೋಡು ದಾಟಿ ತೆರಳಬೇಕಾದ ಅನಿವಾರ್ಯತೆ ಇದೆ ಎಂದು ಧರಣಿನಿರತ ವಿದ್ಯಾರ್ಥಿಗಳು ದೂರಿದರು.
‘ಮುದೂರು ಮತ್ತು ಕೆರಾಡಿ ಭಾಗಕ್ಕೆ ಸಂಜೆ 4:30ಕ್ಕೆ ಇದ್ದ ಬಸ್ಸಿನ ವೇಳಾ ಪಟ್ಟಿಯನ್ನು 5.15ಕ್ಕೆ ಮಾಡಿರುವುದರಿಂದ ಸಮಸ್ಯೆ ಉದ್ಭವಿಸಿದೆ. ಬಸ್ಸಿನಲ್ಲಿ ಬರುವ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಪಡೆದುಕೊಳ್ಳದೆ ಏಕಾಏಕಿ ಬಸ್ಸಿನ ವೇಳಾಪಟ್ಟಿ ಬದಲಾಯಿಸುವ ಅಗತ್ಯವಿರಲಿಲ್ಲ. ಕತ್ತಲೆಯಲ್ಲಿ ಕಾಡಿನ ದಾರಿಯಲ್ಲಿ ಸಾಗುವ ವಿದ್ಯಾರ್ಥಿನಿಯರಿಗೆ ಅನೇಕ ಸಮಸ್ಯೆಗಳಿರುತ್ತದೆ. 5 ದಿನಗಳ ಒಳಗೆ ಸಮಸ್ಯೆ ಪರಿಹರಿಸಬೇಕು’ ಎಂದು ವಿದ್ಯಾರ್ಥಿನಿ ಕವಿತಾ ಆಚಾರ್ಯ ಒತ್ತಾಯಿಸಿದರು.
ಬಳಿಕ ಧರಣಿನಿರತರು ಈ ಭಾಗದ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸುವಂತೆ ಕೆಎಸ್ಆರ್ಟಿಸಿ ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಈ ಸಮಸ್ಯೆಗಳ ಬಗ್ಗೆ ಅರಿವಿದೆ. ಆದರೆ ಸಾರಿಗೆ ಪ್ರಾಧಿಕಾರದ ಅನುಮತಿಯಂತೆ ನಾವು ಬಸ್ ಓಡಾಟ ನಡೆಸಬೇಕಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಾತ್ಕಾಲಿಕ ಪರ್ಮಿಟ್ಗೆ ಮನವಿ ಮಾಡಿದ್ದರೂ ಇನ್ನೂ ಅನುಮತಿ ದೊರಕಿಲ್ಲ. ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ದೊರಕಿಸಲು ಪ್ರಯತ್ನ ಮಾಡುತ್ತೇನೆ ಹಾಗೂ ನಿಮ್ಮೊಂದಿಗೆ ಇರುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.