ಸೆಂಥಿಲ್ ಬಾಲಾಜಿರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ ವಿವಾದಾತ್ಮಕ ಆದೇಶ ಹಿಂಪಡೆದ ತಮಿಳುನಾಡು ರಾಜ್ಯಪಾಲ ರವಿ
''ರಾಜ್ಯಪಾಲರಿಗೆ ಹಾಲಿ ಸಚಿವರನ್ನು ವಜಾ ಮಾಡುವ ಹಕ್ಕಿಲ್ಲ ಮತ್ತು ನಾವು ಇದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ" ಎಂದು ಸ್ಟಾಲಿನ್ ಹೇಳಿದ್ದಾರೆ
ಚೆನ್ನೈ: ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಸಂಪರ್ಕಿಸದೆ ಸಚಿವ ವಿ. ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿರುವುದಾಗಿ ಘೋಷಿಸಿದ್ದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಗುರುವಾರ ವಿವಾದಾತ್ಮಕ ಆದೇಶವನ್ನು ಹಿಂಪಡೆದಿದ್ದಾರೆ.
ಡಿಎಂಕೆ ಸರಕಾರದೊಂದಿಗೆ ಘರ್ಷಣೆಯಲ್ಲಿ ತೊಡಗಿರುವ ರಾಜ್ಯಪಾಲರು ಇತ್ತೀಚೆಗಿನ ದಿನಗಳಲ್ಲಿ ಇದೇ ಮೊದಲ ಬಾರಿ ಈ ಹೆಜ್ಜೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎರಡು ವಾರಗಳ ಹಿಂದೆ ಬಂಧಿಸಲ್ಪಟ್ಟು, ಉದ್ಯೋಗಕ್ಕಾಗಿ ನಗದು ಹಗರಣದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ನಡುವೆ ಜೈಲಿನಲ್ಲಿರುವ ಬಾಲಾಜಿ ಅವರನ್ನು ಸ್ಟಾಲಿನ್ ಅವರು ಸಚಿವ ಖಾತೆ ಇಲ್ಲದೆ ಮಂತ್ರಿಯಾಗಿ ಉಳಿಸಿಕೊಂಡಿದ್ದರು. ರಾಜ್ಯಪಾಲ ರವಿ ಅವರು ಏಕಪಕ್ಷೀಯವಾಗಿ ರದ್ದುಪಡಿಸಲು ನಿರ್ಧರಿಸಿದ್ದಾರೆ.
ರಾಜಭವನವು ಅಧಿಕೃತ ಹೇಳಿಕೆಯಲ್ಲಿ ಬಾಲಾಜಿ "ಉದ್ಯೋಗಕ್ಕಾಗಿ ನಗದು ತೆಗೆದುಕೊಳ್ಳುವುದು ಹಾಗೂ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು, ಸೆಂಥಿಲ್ ಬಾಲಾಜಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ " ಎಂದು ಹೇಳಿದೆ
ಅವರು ತಡರಾತ್ರಿ ಈ ವಿಷಯದ ಬಗ್ಗೆ ಅಟಾರ್ನಿ ಜನರಲ್ ಅವರೊಂದಿಗೆ ಸಮಾಲೋಚಿಸುತ್ತಿದ್ದಾರೆ ಹಾಗೂ ನಿರ್ಧಾರವನ್ನು ತಡೆಹಿಡಿಯಲಾಗಿದೆ ಎಂದು ರಾಜ್ಯಪಾಲರ ಕಚೇರಿಯ ಮೂಲಗಳು ತಿಳಿಸಿವೆ. ಬಾಲಾಜಿ ಸದ್ಯಕ್ಕೆ ಸಚಿವರಾಗಿ ಉಳಿಯುತ್ತಾರೆ ಎಂದು ಮೂಲಗಳು ತಿಳಿಸಿವೆ.
ಮೂಲ ಆದೇಶವನ್ನು ಕಡೆಗಣಿಸಿದ್ದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ತಮಿಳುನಾಡು ಸರಕಾರ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದರು, “ಸಚಿವರನ್ನು ವಜಾ ಮಾಡುವ ಹಕ್ಕು ಅವರಿಗೆ ಇಲ್ಲ ಹಾಗೂ ತಮ್ಮ ಸರಕಾರವು ಈ ವಿಷಯದಲ್ಲಿ ಕಾನೂನುಬದ್ಧವಾಗಿ ಮುಂದುವರಿಯುತ್ತದೆ ಎಂದು ಹೇಳಿದರು.
"ರಾಜ್ಯಪಾಲರಿಗೆ ಹಾಲಿ ಸಚಿವರನ್ನು ವಜಾ ಮಾಡುವ ಹಕ್ಕಿಲ್ಲ ಮತ್ತು ನಾವು ಇದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ" ಎಂದು ಸ್ಟಾಲಿನ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಡಿಎಂಕೆ ನಾಯಕ ಎ ಸರವಣನ್ ಅವರು ರಾಜ್ಯಪಾಲರು ಸಂವಿಧಾನವನ್ನು ದುರ್ಬಲಗೊಳಿಸಿದ್ದಾರೆ ಎಂದು ಆರೋಪಿಸಿದರು.