ಯತ್ನಾಳ್ ನಡವಳಿಕೆ ಸರಿಪಡಿಸಿಕೊಳ್ಳದಿದ್ದರೆ ಪೊರಕೆ ಚಳವಳಿ : ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ಚರಿಕೆ

Update: 2024-11-05 17:02 GMT

ಚಿಕ್ಕಮಗಳೂರು : ರಾಜ್ಯದಲ್ಲಿ 3 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಆದರೂ ಕೇಂದ್ರದ ವರಿಷ್ಠರು ಯತ್ನಾಳ್ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಯತ್ನಾಳ್ ಅವರು ತಮ್ಮ ವರ್ತನೆ ಸರಿಪಡಿಸಿಕೊಳ್ಳದಿದ್ದಲ್ಲಿ ಪ್ರತೀ ಜಿಲ್ಲೆಗಳಲ್ಲೂ ಅವರ ವಿರುದ್ಧ ‘ಪೊರಕೆ ಚಳವಳಿ’ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮುರುಡಪ್ಪ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದರಿಂದಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದ್ದು, ಇದು ಉಪಚುನಾವಣೆಯ ಫಲಿತಾಂಶದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಬಸನಗೌಡ ಪಾಟೀಲ್ ಅವರ ನಡವಳಿಕೆ ಗಮನಿಸಿದರೆ ಅವರು ಕಾಂಗ್ರೆಸ್ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಂತಿದೆ ಎಂದು ಶಂಕೆ ವ್ಯಕ್ತಪಡಿಸಿದರು.

ಬಸನಗೌಡ ಪಾಟೀಲ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಅಸಮಾಧಾನವಿದ್ದರೆ ಅದನ್ನವರು ಕೇಂದ್ರದ ನಾಯಕರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ, ಯತ್ನಾಳ್ ಅವರು ಈ ಬಗ್ಗೆ ಕೇಂದ್ರದ ನಾಯಕರೊಂದಿಗೆ ಮಾತುಕತೆ ನಡೆಸದೆ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಅವರ ಗೊಂದಲಕಾರಿ ಹೇಳಿಕೆಗಳಿಂದಾಗಿ ಪಕ್ಷದ ಮುಖಂಡರು, ಕಾರ್ಯಕರ್ತರ ಬಲ ಕುಗ್ಗಿಸುತ್ತಿದೆ ಎಂದ ಕಲ್ಮುರುಡಪ್ಪ, ಯತ್ನಾಳ್ ಅವರು ಪದೇ ಪದೇ ಹೊಂದಾಣಿಕೆ ರಾಜಕಾರಣದ ಬಗ್ಗೆ ಪ್ರಸ್ತಾವ ಮಾಡಿ ವಿಜಯೇಂದ್ರ ವಿರುದ್ಧ ಮುಗಿ ಬೀಳುತ್ತಿದ್ದಾರೆ. ಆದರೆ, ಬಿಜಾಪುರ ಜಿಲ್ಲೆಯ ಬಬುಲೇಶ್ವರ ಕ್ಷೇತ್ರದಲ್ಲಿ ಯತ್ನಾಳ್ ಅವರು ನಮ್ಮ ವಿರೋಧಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಅಭ್ಯರ್ಥಿ ವಿಜುಗೌಡ ಅವರ ಸೋಲಿಗೆ ಕಾರಣವಾಗಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ ಎಂಬುದನ್ನು ಮರೆಯಬಾರದು. ವಿಜಯೇಂದ್ರ ಅವರ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯತ್ನಾಳ್ ಅವರು ಬಿಜಾಪುರ ಜಿಲ್ಲೆಯಲ್ಲಿ 14 ಪರ್ಸೆಂಟೇಜ್ ಕಮಿಷನ್ ದಂಧೆ ಆರಂಭಿಸಿ ಕಮಿಷನ್ ಪಡೆದಿರುವುದು ಯಾರೆಂಬುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

ಈ ಹಿಂದೆ ಬಿಜೆಪಿ ಪಕ್ಷ ಯತ್ನಾಳ್ ಅವರಿಗೆ ಎಲ್ಲ ಅಧಿಕಾರವನ್ನೂ ನೀಡಿದೆ. ಕೇಂದ್ರದಲ್ಲಿ ಸಚಿವರನ್ನಾಗಿಯೂ ಮಾಡಿದೆ. ಆದರೂ ಹಿಂದೆ ಅವರು ಪಕ್ಷ ತೊರೆದು, ನಂತರ ಯಡಿಯೂರಪ್ಪ ಅವರ ನೇತೃತ್ವದಲ್ಲೇ ಬಿಜೆಪಿ ಸೇರಿದ್ದಾರೆ ಎಂದ ಅವರು, ಯಡಿಯೂರಪ್ಪ, ವಿಜಯೇಂದ್ರ ಅವರು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ, ಯತ್ನಾಳ್ ಅವರು ಪಕ್ಷದ ಸಂಘಟನೆಗೆ ನೀಡಿರುವ ಕೊಡುಗೆಯಾದರೂ ಏನು? ಎಂದು ಪ್ರಶ್ನಿಸಿದ ಅವರು, ಯತ್ನಾಳ್ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರೂ ಕೇಂದ್ರದ ನಾಯಕರು ಅವರ ವಿರುದ್ಧ ಇನ್ನೂ ಪಕ್ಷದಿಂದ ಉಚ್ಚಾಟನೆ ಮಾಡದಿರುವ ಬಗ್ಗೆಯೂ ಬಿಜೆಪಿ ಮುಖಂಡರು, ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಯತ್ನಾಳ್ ವರ್ತನೆಯನ್ನು ಇನ್ನು ಸಹಿಸಲು ಸಾಧ್ಯವಿಲ್ಲ. ಅವರು ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಪ್ರತೀ ಜಿಲ್ಲೆಗಳಲ್ಲಿ ನಡೆಯುವ ಅವರ ಕಾರ್ಯಕ್ರಮಗಳಲ್ಲಿ ಪೊರಕೆ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಹಿರೇಮಗಳೂರು ಪುಟ್ಟಸ್ವಾಮಿ, ಸಿ.ಎಚ್.ಲೋಕೇಶ್, ಸಚಿನ್ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News