ಉಳ್ಳಾಲ: ಕಮಿಷನರ್ ನೇತೃತ್ವದಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಪರಿಹಾರ ಸಭೆ

Update: 2023-06-24 10:33 GMT

ಉಳ್ಳಾಲ: ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಪರಿಹಾರ ಸಭೆಉಳ್ಳಾಲ ತಾಜ್ ಮಹಲ್ ಹಾಲ್ ನಲ್ಲಿ ಶನಿವಾರ ನಡೆಯಿತು.

ಈ ಸಭೆಯಲ್ಲಿ ಭಾಗವಹಿಸಿದ ಗಡಿನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಕ್ ತಲಪಾಡಿ ಮಾತನಾಡಿ, ಡ್ರಗ್ ಸಮಸ್ಯೆ ಬೆಳೆಯುತ್ತಿದೆ.ನಂಬರ್ ಪ್ಲೇಟ್ ಇಲ್ಲದ ವಾಹನಗಳಲ್ಲಿ ತಲಪಾಡಿ ಗೆ ರಾತ್ರಿ ವೇಳೆ ಸಾಗಾಟ ಆಗುತ್ತಿದೆ. ಅದಕ್ಕೊಂದು ನಿಗೂಢ ಜಾಗ ತಲಪಾಡಿಯಲ್ಲಿದೆ. ಇದನ್ನು ಮಟ್ಟ ಹಾಕುವ ಕೆಲಸ ಮಾಡಬೇಕು ಎಂದು ಗಮನ ಸೆಳೆದರು.

ಜಮಾತೆ ಇಸ್ಲಾಮಿ ಹಿಂದ್ ಉಳ್ಳಾಲ ವಲಯ ಅಧ್ಯಕ್ಷ ಅಬ್ದುಲ್ ಕರೀಂ ಮಾತನಾಡಿ, ಉಳ್ಳಾಲ ನಗರ ತ್ಯಾಜ್ಯದ ಮೂಲಕ ಜನರನ್ನು ಸ್ವಾಗತಿಸುತ್ತದೆ.ಇದಕ್ಕೊಂದು ಸೂಕ್ತ ಪರಿಹಾರ ಆಗಬೇಕು.ತೊಕ್ಕೋಟ್ಟು ಒಳಪೇಟೆಯಲ್ಲಿ ಸಂಚಾರಕ್ಕೆ ಇಕ್ಕಟ್ಟಿನ ಪರಿಸ್ಥಿತಿ ಇದೆ.ತೊಕ್ಕೊಟ್ಟುವಿನಲ್ಲಿ ಸಂಚಾರಿ ಪೊಲೀಸರಿಂದ ಹೆಲ್ಮೆಟ್ ಕೇಸ್ ಮಾತ್ರ ಆಗುತ್ತದೆ.ಸುಗಮ ಸಂಚಾರ ವ್ಯವಸ್ಥೆ ಗೆ ಅವಕಾಶ ಆಗುತ್ತಿಲ್ಲ ಎಂದರು.

ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ ಮಾತನಾಡಿ, ಸೌಹಾರ್ದ ಸಭೆ ಉಳ್ಳಾಲ ದಲ್ಲಿ ಆಗಬೇಕು. ಮಾದಕ ವಸ್ತು ಜಾಲ ಜಾಸ್ತಿ ಇದೆ.ಅದೇ ರೀತಿ ಗಾಂಜಾ ಹಾವಳಿ ಇದೆ.ಈ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಮೆಡಿಕಲ್ ಕಾಲೇಜು ಕಾರ್ಯಾಚರಿಸುತ್ತಿದೆ.ಇಲ್ಲಿಗೆ ಹೊರಗಿನ ವಿದ್ಯಾರ್ಥಿಗಳು ಬರುತ್ತಾರೆ.ಇವರಲ್ಲಿ ಕೆಲವರು ಇಂತಹ ಜಾಲದಲ್ಲಿ ತೊಡಗುತ್ತಾರೆ.ಇವುಗಳಿಗೆ ಕಡಿವಾಣ ಹಾಕಬೇಕು ಎಂದು ವಿನಂತಿಸಿದರು.

ದರ್ಗಾ ಮಾಜಿ ಅಧ್ಯಕ್ಷ ರಶೀದ್ ಹಾಜಿಯವರು, ಗಾಂಜಾ ವ್ಯಸನಿಗಳು ಜಾಸ್ತಿ ಇರುವುದರಿಂದ ಅವರನ್ನು ಕರೆಸಿ ತಿಂಗಳಲ್ಲಿ ಎರಡು ಬಾರಿ ಸಭೆ ನಡೆಸಬೇಕು ಎಂದು ವಿನಂತಿಸಿದರು.

ರಾಜೇಶ್ ಉಚ್ಚಿಲ, ಯಶವಂತ ಅಮೀನ್, ಶೇಖರ್ ಕನೀರ್ ತೋಟ , ಕೌನ್ಸಿಲರ್ ಮುಹಮ್ಮದ್ ಮುಕಚೇರಿ, ಮುಸ್ತಫಾ ಉಳ್ಳಾಲ ಪ್ರಮೋದ್ ಕುಮಾರ್ , ಝಾಕೀರ್,ಆಸೀಫ್ ಮತ್ತಿತರರು ತಮ್ಮ ಸಮಸ್ಯೆಗಳನ್ನು ಕಮಿಷನರ್ ಕುಲದೀಪ್ ಜೈನ್ ಅವರ ಮುಂದೆ ಮಂಡಿಸಿದರು.

ಸಣ್ಣ ಪುಟ್ಟ ತಪ್ಪು ಗಳನ್ನು ಹಿಡಿದು ಬೇಕಾಬಿಟ್ಟಿ ಕೇಸು ಹಾಕಿಸುವ, ರಾಜಕೀಯ ನಾಯಕರ ಪ್ರಭಾವ ದಿಂದ ಕೇಸು ಕಡಿಮೆಗೊಳಿಸುವುದು, ಅಮಾಯಕ ಜನರ ಮೇಲೆ ಸುಮ್ಮನೆ ಕೇಸು ಫಿಕ್ಸ್ ಮಾಡುವುದು ನಡೆಯುತ್ತದೆ.ಇದಕ್ಕೆ ಅವಕಾಶ ನೀಡಬಾರದು ಎಂಬ ಬೇಡಿಕೆ ಕೂಡ ಈ ಸಭೆಯಲ್ಲಿ ಪ್ರಸ್ತಾಪ ಆಯಿತು.

ಸಭೆಯಲ್ಲಿ ಸಾರ್ವಜನಿಕರ ದೂರು, ಬೇಡಿಕೆ ಗಳನ್ನು ಆಲಿಸಿದ ಬಳಿಕ ಮಾತನಾಡಿದ ಕಮಿಷನರ್ ಕುಲದೀಪ್ ಜೈನ್ ಅವರು, ಸಭೆಯಲ್ಲಿ ಪ್ರಸ್ತಾಪ ಗೊಂಡ ಸಮಸ್ಯೆ ಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಗಳಿಗೆ ಪತ್ರ ಮೂಲಕ ಗಮನ ಹರಿಸಲಾಗುವುದು.ದಾರಿದೀಪ, ಡ್ರೈನೇಜ್ ಮುಂತಾದ ಸಮಸ್ಯೆ ಗಳಿಗೆ ಸಂಬಂಧ ಪಟ್ಟ ಇಲಾಖೆ ಮೂಲಕ ಪರಿಹಾರ ನೀಡಲಾಗುವುದು.ಕೋಟೆಕಾರ್,ಕೊಲ್ಯ, ಬೀರಿ, ತಲಪಾಡಿ ಮುಂತಾದ ಕಡೆಗಳಲ್ಲಿ ಇರುವ ಟ್ರಾಫಿಕ್ ಸಮಸ್ಯೆ ಗಳಿಗೆ ಟ್ರಾಫಿಕ್ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಕಾನೂನು ಉಲ್ಲಂಘಿಸಿ ನಡೆಸುವ ಸಂಚಾರ ದ ವಿರುದ್ಧ ಈ ಹಿಂದೆ ಕೂಡ ಕ್ರಮ ಕೈಗೊಳ್ಳಲಾಗಿದೆ.ಮುಂದೆಯೂ ಕ್ರಮ ನಡೆಯುತ್ತದೆ.ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಟ್ರಾಫಿಕ್ ನಿಯಂತ್ರಣ ಮಾಡಲು ನಾಲ್ಕು ಕಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಿದೆ.ಪ್ರತಿ ಠಾಣೆಗೆ ಎರಡು ಜೀಪು ಮತ್ತು ಬೈಕ್ ನೀಡಲಾಗಿದೆ. ಗಾಂಜಾ, ಡ್ರಗ್ ಮಾಫಿಯಾ ಮುಂತಾದವು ಗಳನ್ನು ಹತ್ತಿಕ್ಕಲು ಒಂದು ಪೊಲೀಸರ ಒಂದು ಟೀಂ ಕೆಲಸ ಮಾಡುತ್ತಿದೆ. ಪ್ರಕರಣ ದುರುದ್ದೇಶ ಪೂರಿತವಾಗಿ ಯಾರ ಮೇಲೂ ಫಿಕ್ಸ್ ಮಾಡಲು ಆಗುವುದಿಲ್ಲ.ಅದಕ್ಕೆ ಅವಕಾಶ ಇಲ್ಲ.ಒಂದು ವೇಳೆ ಆ ರೀತಿ ಆಗಿದೆ ಎಂದು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಂಜೆ ಶಾಲೆ ಬಿಡುವ ವೇಳೆ ಟ್ರಾಫಿಕ್ ನಿಯಂತ್ರಣ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಎಸಿಪಿ ಧನ್ಯ ಮಾತನಾಡಿ, ಸಮಸ್ಯೆ ಗಳಿಗೆ ಪರಿಹಾರ ಠಾಣೆಯಲ್ಲೇ ಆಗುತ್ತದೆ.ಒಂದು ವೇಳೆ ಅನ್ಯಾಯ ಆದಲ್ಲಿ ನನ್ನನ್ನು ಸಂಪರ್ಕಿಸಬಹುದು ಎಂದರು.

ಇನ್ಸ್ ಪೆಕ್ಟರ್ ಸಂದೀಪ್ ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News