ಪ್ರಜ್ಞೆಯಿರುವ ವ್ಯಕ್ತಿಗೆ CPR ನೀಡುತ್ತಿರುವ ರೈಲ್ವೇ ಸಿಬ್ಬಂದಿಯ ಪೋಸ್ಟ್ ಹಂಚಿಕೊಂಡ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

Update: 2024-11-27 09:45 GMT

ಅಶ್ವಿನಿ ವೈಷ್ಣವ್ | PC : PTI 

ಹೊಸದಿಲ್ಲಿ: ರೈಲ್ವೇ ಸಿಬ್ಬಂದಿಯೊಬ್ಬರು ರೈಲು ಪ್ರಯಾಣಿಕರೋರ್ವರಿಗೆ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR) ನೀಡುತ್ತಿರುವ ವೀಡಿಯೊ ಕ್ಲಿಪ್ ಅನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಂಚಿಕೊಂಡಿದ್ದು, ಪ್ರಜ್ಞೆಯಿರುವ ವ್ಯಕ್ತಿಗೆ ಈ ಚಿಕಿತ್ಸಾ ಕ್ರಮ ಪಾಲಿಸಿದ್ದಕ್ಕೆ ವೈದ್ಯರು ಆಘಾತ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಗೆ ಪ್ರತಿಕ್ರಿಯಿಸಿದ ವೈದ್ಯರು ಕನಿಷ್ಠ ವೈದ್ಯಕೀಯ ಜ್ಞಾನವಿಲ್ಲ ಎಂದು ಕೇಳುತ್ತಿದ್ದಂತೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು, ಪೋಸ್ಟ್ ಅಳಿಸಿ ಹಾಕಿದ್ದಾರೆ.

ಅಶ್ವಿನಿ ವೈಷ್ಣವ್ ಅವರು ಎಕ್ಸ್ ನಲ್ಲಿ ರವಿವಾರ ಪೋಸ್ಟ್ ಮಾಡಿದ ವೀಡಿಯೊ ವೈದ್ಯರಿಗೆ ಆಶ್ಚರ್ಯವನ್ನುಂಟು ಮಾಡಿತು. ವೀಡಿಯೊದಲ್ಲಿ ರೈಲ್ವೆ ಅಧಿಕಾರಿಯೊಬ್ಬರು ಪ್ರಜ್ಞೆಯಿರುವ ಮತ್ತು ಸ್ಪಂದಿಸುತ್ತಿರುವ ವ್ಯಕ್ತಿಗೆ ಸಿಪಿಆರ್ ನೀಡುರುತ್ತಿರುವುದು ಸೆರೆಯಾಗಿದೆ. ಪೋಸ್ಟ್ ನಲ್ಲಿ ರೈಲ್ವೇ ಸಚಿವರು ನಮ್ಮ ಸಮರ್ಪಿತ ಭಾರತೀಯ ರೈಲ್ವೆ ತಂಡ ಎಂದು ಬರೆದುಕೊಂಡಿದ್ದರು.

ಸಚಿವರ ಪೋಸ್ಟ್ಗೆ ಪ್ರತಿಕ್ರಿಯಿಸಿದ ವೈದ್ಯರು, ಜಾಗೃತ ವ್ಯಕ್ತಿಗೆ ಸಿಪಿಆರ್ ನೀಡಬಾರದು, ಪೋಸ್ಟ್ ಅನ್ನು ಕೂಡಲೇ ಅಳಿಸುವಂತೆ ಸಚಿವರನ್ನು ಒತ್ತಾಯಿಸಿದರು. ಮಂಗಳವಾರ ಆ ಪೋಸ್ಟ್ ಅಳಿಸಿ ಹಾಕಲಾಗಿದೆ.

ಕಳೆದ ವಾರ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ತಮ್ಮ ಪತ್ನಿಯ ಸ್ತನ ಕ್ಯಾನ್ಸರ್, ನೈಸರ್ಗಿಕ ವಿಧಾನಗಳ ಚಿಕಿತ್ಸಾ ಪದ್ದತಿ ಅನುಸರಿಸಿದ್ದರಿಂದ ಗುಣಪಡಿಸಲು ಸಹಾಯವಾಯಿತು ಎಂದು ಹೇಳಿಕೊಂಡಿದ್ದ ವೀಡಿಯೊ ವೈರಲ್ ಆಗಿತ್ತು. ಸಿಧು ಅವರ ಹೇಳಿಕೆಗಳ ಉದಾಹರಣೆಯನ್ನು ಉಲ್ಲೇಖಿಸಿ, ಸಾಮಾಜಿಕ ಮಾಧ್ಯಮದ ಮೂಲಕ ಆರೋಗ್ಯದ ತಪ್ಪು ಮಾಹಿತಿಯು ಹೇಗೆ ಹರಡಬಹುದು ಎಂಬುದರ ತಾಜಾ ಉದಾಹರಣೆ ಎಂದು ಸಾಮಾಜಿಕ ಜಾಲತಾಣದ ಹಲವು ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.

ವೈಷ್ಣವ್ ಅವರ ಪೋಸ್ಟ್ ಬಗ್ಗೆ ಕಳವಳ ವ್ಯಕ್ತಪಡಿಸಿದ ವೈದ್ಯರಲ್ಲಿ ಕೇರಳದ ಕೊಟ್ಟಾಯಂನಲ್ಲಿರುವ ಯಕೃತ್ತಿನ ತಜ್ಞ ಸಿರಿಯಾಕ್ ಎಬಿ ಫಿಲಿಪ್ಸ್ ಪ್ರಮುಖರು. ಸಚಿವರು ಹಂಚಿಕೊಂಡಿರುವ ವೀಡಿಯೊ ಕ್ಲಿಪ್ ವೈದ್ಯಕೀಯ ವಿಜ್ಞಾನದ ಸಾಕ್ಷರತೆಯ ಕೊರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ವೈಷ್ಣವ್ ಅವರ ಪೋಸ್ಟ್ಗೆ ಪ್ರತಿಕ್ರಿಯಿಸುತ್ತಾ, "ಇದು ನಿಮ್ಮ ವೈದ್ಯಕೀಯ ವಿಜ್ಞಾನದ ಮಾಹಿತಿ ಕೊರತೆಯನ್ನು ಎತ್ತಿ ತೋರಿಸುತ್ತದೆ. ನಿಮ್ಮ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೈಲ್ವೇ ತಂಡದ ಮೂಲಭೂತ ಆರೋಗ್ಯ ಜ್ಞಾನದ ಸಂಪೂರ್ಣ ಕೊರತೆ ಇಲ್ಲಿ ಎದ್ದು ಕಾಣುತ್ತದೆ. ನಿಮ್ಮ ಈ ಪೋಸ್ಟ್ ಅನ್ನು ಕೂಡಲೇ ಅಳಿಸಿ ಹಾಕಿ”, ಎಂದು ಫಿಲಿಪ್ಸ್ ಎಕ್ಸ್ನಲ್ಲಿ ಬರೆದಿದ್ದರು.

ಅಮೆರಿಕದಲ್ಲಿ ತುರ್ತು ವೈದ್ಯಕೀಯ ತಜ್ಞರಾಗಿರುವ ಸ್ಯಾಮ್ ಘಾಲಿ ಅವರು, "ನಾನು ಇದನ್ನು ನಿಜವಾಗಿ ಹೇಳಬೇಕಾಗಿದ್ದಕ್ಕೆ ನನಗೇ ನಂಬಲಾಗುತ್ತಿಲ್ಲ. ನಿಮ್ಮೊಂದಿಗೆ ಮಾತನಾಡುತ್ತಿರುವ, ಎಚ್ಚರವಾಗಿರುವ ಜನರ ಮೇಲೆ ಬಾಯಿಯಿಂದ ಬಾಯಿಗೆ CPR ಮಾಡಬೇಡಿ," ಎಂದು ಕಮೆಂಟ್ ಮಾಡಿದ್ದರು.

ಆ ಕಮೆಂಟ್ ನ ಏಳು ಗಂಟೆಗಳ ನಂತರವೂ ಪೋಸ್ಟ್ ಡಿಲೀಟ್ ಮಾಡದಿರುವುದನ್ನು ಗಮನಿಸಿದ ಅವರು " ಈ ಟ್ವೀಟ್ ಅನ್ನು ಇನ್ನೂ ಅಳಿಸಲಾಗಿಲ್ಲ. ಆಘಾತಕಾರಿ", ಎಂದು ಮತ್ತೆ ಪೋಸ್ಟ್ ಮಾಡಿದ್ದರು.

“ರೈಲ್ವೆ ಸಿಬ್ಬಂದಿಯು ರೋಗಿಗೆ ಹಾನಿ ಮಾಡುತ್ತಿದ್ದಾರೆ. ಇದರಿಂದ ರೋಗಿಯ ಸ್ವಾಭಾವಿಕ ಉಸಿರಾಟದ ಸಾಧ್ಯತೆಗಳು ದುರ್ಬಲವಾಗಬಹುದು. ಮುರಿತಗಳು ಸಂಭವಿಸಿ ಎದೆಯ ಆಘಾತದ ಅಪಾಯ ಹೆಚ್ಚಾಗಬಹುದು" ಎಂದು ಫಿಲಿಪ್ಸ್ ತಮ್ಮ ಪೋಸ್ಟ್ನಲ್ಲಿ ಬರೆದಿದ್ದರು.

ತನ್ನ ಪತ್ನಿಯ ಸ್ತನ ಕ್ಯಾನ್ಸರ್ ಅನ್ನು ಗುಣಪಡಿಸಲು ನೈಸರ್ಗಿಕ ಉತ್ಪನ್ನಗಳು ಮತ್ತು ಆಹಾರಕ್ರಮದ ಬದಲಾವಣೆಗಳು ಹೇಗೆ ಸಹಾಯ ಮಾಡಿದೆ ಎಂಬುದರ ಕುರಿತು ಸಿಧು ಅವರ ಹೇಳಿಕೆಗಳು, ಮತ್ತು ರೈಲ್ವೇ ಸಚಿವರ CPR ಕುರಿತ ಪೋಸ್ಟ್ ಅನ್ನು ಆರೋಗ್ಯದ ತಪ್ಪು ಮಾಹಿತಿ ಎಂದು ಉಲ್ಲೇಖಿಸಬಹುದು ಎಂದು ಫಿಲಿಪ್ಸ್ ತಿಳಿಸಿದ್ದಾರೆ.

ನಿಂಬೆ ರಸ, ಬೇವು, ಅರಿಶಿನ, ದಾಲ್ಚಿನ್ನಿ ಮತ್ತು ಇತರ ನೈಸರ್ಗಿಕ ಆಹಾರವನ್ನು ಬಳಸಿದ್ದರಿಂದ ತಮ್ಮ ಪತ್ನಿಯ ಸ್ತನ ಕ್ಯಾನ್ಸರ್ ಅನ್ನು ಗುಣಪಡಿಸಲು ಸಹಾಯ ಮಾಡಿದೆ ಎಂದು ಸಿಧು ಹೇಳಿಕೊಂಡಿದ್ದರು. ನಂತರ ಭಾರತದ ಪ್ರಮುಖ ಕ್ಯಾನ್ಸರ್ ಕೇಂದ್ರವಾದ ಮುಂಬೈನಲ್ಲಿರುವ ಟಾಟಾ ಮೆಮೋರಿಯಲ್ ಸೆಂಟರ್ ಕಳೆದ ವಾರ, ಇದನ್ನು ವೈಜ್ಞಾನಿಕವಾಗಿ ಸಾಬೀತಾಗಾದ ಪರಿಹಾರ ಕ್ರಮ. ಇದನ್ನು ನಂಬಬೇಡಿ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News