ಗೌತಮ್ ಅದಾನಿ, ಸಾಗರ್ ಅದಾನಿ ವಿರುದ್ಧ ಲಂಚದ ದೋಷಾರೋಪ ಹೊರಿಸಲಾಗಿಲ್ಲ ; ವಂಚನೆ ಪ್ರಕರಣವಿದೆ : ಅದಾನಿ ಗ್ರೀನ್ಸ್ ಸ್ಪಷ್ಟನೆ
ಹೊಸದಿಲ್ಲಿ: ಅಮೆರಿಕ ತನಿಖಾ ಸಂಸ್ಥೆಗಳು ಲಂಚ ಪ್ರಕರಣದಲ್ಲಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಅಮೆರಿಕ ವಿದೇಶಿ ಭ್ರಷ್ಟಾಚಾರ ರೂಢಿ ಕಾಯ್ದೆ (FCPA) ಉಲ್ಲಂಘನೆಯ ಆರೋಪವನ್ನು ಗೌತಮ್ ಅದಾನಿ ಹಾಗೂ ಸಹೋದರನ ಪುತ್ರ ಸಾಗರ್ ಅದಾನಿ ವಿರುದ್ಧ ಹೊರಿಸಲಾಗಿಲ್ಲ ಎಂದು ಬುಧವಾರ ಅದಾನಿ ಸಮೂಹ ಸಂಸ್ಥೆ ಸ್ಪಷ್ಟನೆ ನೀಡಿದೆ.
20 ವರ್ಷಗಳ ಅವಧಿಯಲ್ಲಿ ರೂ. 16,868 ಕೋಟಿ ಲಾಭ ತರುವ ಸಾಧ್ಯತೆ ಇದ್ದ ಸೌರ ವಿದ್ಯುತ್ ಸರಬರಾಜು ಯೋಜನೆಯ ಗುತ್ತಿಗೆಯನ್ನು ಪಡೆಯಲು ಅದಾನಿ ಸಮೂಹದ ಸಂಸ್ಥಾಪಕ ಅಧ್ಯಕ್ಷ ಗೌತಮ್ ಅದಾನಿ, ಅವರ ಸಹೋದರನ ಪುತ್ರ ಸಾಗರ್ ಅದಾನಿ ಹಾಗೂ ಮತ್ತೊಬ್ಬ ಪ್ರಮುಖ ಅಧಿಕಾರಿ ವಿನೀತ್ ಜೈನ್ ಭಾರತೀಯ ಅಧಿಕಾರಿಗಳಿಗೆ ರೂ. 2,235 ಕೋಟಿ ಮೊತ್ತದ ಲಂಚ ನೀಡಿದ್ದರು ಎಂದು ಅಮೆರಿಕ ನ್ಯಾಯಾಂಗ ಇಲಾಖೆಯು ದೋಷಾರೋಪ ಹೊರಿಸಿದೆ.
ಲಂಚ ಆರೋಪದ ಕೇಂದ್ರ ಬಿಂದುವಾದ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಈ ಕುರಿತು ಷೇರು ಮಾರುಕಟ್ಟೆಗೆ ಮಾಹಿತಿ ಸಲ್ಲಿಸಿದ್ದು, ಗೌತಮ್ ಅದಾನಿ, ಸಾಗರ್ ಅದಾನಿ ಹಾಗೂ ವಿನೀತ್ ಜೈನ್ ವಿರುದ್ಧ ಅಮೆರಿಕ ವಿದೇಶಿ ಭ್ರಷ್ಟಾಚಾರ ರೂಢಿ ಕಾಯ್ದೆಯನ್ನು ಉಲ್ಲಂಘಿಸಿದ ದೋಷಾರೋಪ ಹೊರಿಸಲಾಗಿದೆ ಎಂಬ ವರದಿಗಳು ತಪ್ಪಾಗಿವೆ ಎಂದು ಪ್ರತಿಪಾದಿಸಿದೆ. ಬದಲಿಗೆ, ಅವರ ವಿರುದ್ಧ ನಗದು ದಂಡದ ಶಿಕ್ಷೆ ವಿಧಿಸಬಹುದಾದ ಆರೋಪಗಳನ್ನು ಹೊರಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದೆ.
“ಅಮೆರಿಕ ನ್ಯಾಯಾಂಗ ಇಲಾಖೆ ಸಲ್ಲಿಸಿರುವ ದೋಷಾರೋಪ ಪಟ್ಟಿ ಅಥವಾ ಅಮೆರಿಕ ಭದ್ರತೆಗಳು ಮತ್ತು ವಿನಿಮಯ ಆಯೋಗ ಸಲ್ಲಿಸಿರುವ ಸಿವಿಲ್ ದೂರಿನಲ್ಲಿ ಗೌತಮ್ ಅದಾನಿ, ಸಾಗರ್ ಅದಾನಿ ಹಾಗೂ ವಿನೀತ್ ಜೈನ್ ವಿರುದ್ಧ ಅಮೆರಿಕ ವಿದೇಶಿ ಭ್ರಷ್ಟಾಚಾರ ರೂಢಿ ಕಾಯ್ದೆ ಉಲ್ಲಂಘನೆಯ ದೋಷಾರೋಪವನ್ನು ಹೊರಿಸಲಾಗಿಲ್ಲ. ಈ ನಿರ್ದೇಶಕರ ವಿರುದ್ಧ ಭದ್ರತೆಗಳ ವಂಚನೆ ಪಿತೂರಿ ಆರೋಪ ಹಾಗೂ ಭದ್ರತೆಗಳ ವಂಚನೆ ಆರೋಪಗಳನ್ನು ಹೊರಿಸಲಾಗಿದೆ” ಎಂದು ಅದಾನಿ ಸಮೂಹ ಮಾಹಿತಿ ನೀಡಿದೆ.
ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿರುವ ಅದಾನಿ ಸಮೂಹ, ತನ್ನನ್ನು ಸಮರ್ಥಿಸಿಕೊಳ್ಳಲು ಅಗತ್ಯವಿರುವ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಗೌತಮ್ ಅದಾನಿ, ಸಾಗರ್ ಅದಾನಿ ಹಾಗೂ ವಿನೀತ್ ಜೈನ್ ವಿರುದ್ಧ ಅಮೆರಿಕ ಪ್ರಕರಣವೊಂದರಲ್ಲಿ ಅಮೆರಿಕ ನ್ಯಾಯಾಂಗ ಇಲಾಖೆಯು ಪೂರ್ವ ನ್ಯೂಯಾರ್ಕ್ ನ ಜಿಲ್ಲಾ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
“ದೋಷಾರೋಪ ಪಟ್ಟಿಯಲ್ಲಿ ಯಾವುದೇ ನಿರ್ದಿಷ್ಟ ಪ್ರಮಾಣದ ದಂಡವನ್ನು ನಮೂದಿಸಲಾಗಿಲ್ಲ” ಎಂದೂ ಅದಾನಿ ಸಮೂಹ ಹೇಳಿದೆ.
ಅದಾನಿ ಸಮೂಹದ ಈ ಅಧಿಕಾರಿಗಳು ಭದ್ರತೆಗಳ ಕಾಯ್ದೆ 1933 ಹಾಗೂ ಭದ್ರತೆಗಳ ಕಾಯ್ದೆ 1934 ರ ಕೆಲವು ಸೆಕ್ಷನ್ ಗಳನ್ನು ಉಲ್ಲಂಘಿಸಿದ್ದು, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ನ ಕಾಯ್ದೆಗಳ ಉಲ್ಲಂಘನೆಗೆ ನೆರವು ಮತ್ತು ಕುಮ್ಮಕ್ಕು ನೀಡಿದ್ದಾರೆ ಎಂದು ಸಿವಿಲ್ ದೂರಿನಲ್ಲಿ ಆರೋಪಿಸಲಾಗಿದೆ.
“ದೂರುದಾರರು ಪ್ರತಿವಾದಿಗಳಿಗೆ ನಗದು ದಂಡ ವಿಧಿಸಬೇಕು ಎಂದು ಮನವಿ ಮಾಡಿದ್ದರೂ, ನಗದು ದಂಡದ ಪ್ರಮಾಣವನ್ನು ತಮ್ಮ ದೂರಿನಲ್ಲಿ ಉಲ್ಲೇಖಿಸಿಲ್ಲ” ಎಂದು ಅದಾನಿ ಸಮೂಹ ಸ್ಪಷ್ಟನೆ ನೀಡಿದೆ.