ಸಂಭಲ್‌ ಹಿಂಸಾಚಾರ: ಸಾರ್ವಜನಿಕ ಸ್ಥಳಗಳಲ್ಲಿ ʼಕಲ್ಲು ತೂರಾಟಗಾರರʼ ಪೋಸ್ಟರ್‌ ಹಾಕಲು ಉತ್ತರ ಪ್ರದೇಶ ಸರ್ಕಾರ ಸಿದ್ಧತೆ

Update: 2024-11-27 07:21 GMT

Photo credit: PTI

ಲಕ್ನೋ: ಸಂಭಲ್ ಹಿಂಸಾಚಾರದಲ್ಲಿ ಭಾಗಿಯಾದ ಪ್ರತಿಭಟನಾಕಾರರಿಂದಲೇ ಸಾರ್ವಜನಿಕ ಆಸ್ತಿ ಹಾನಿಗೆ ಹಣ ಪಾವತಿಸುವಂತೆ ಮಾಡಲಿದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಲ್ಲು ತೂರಾಟಗಾರರ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಗುವುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಕೋಟ್ ಗಾರ್ವಿ ಪ್ರದೇಶದ ಶಾಹಿ ಜಾಮಾ ಮಸೀದಿಯ ಸರ್ವೇ ವೇಳೆ ನಡೆದ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಮಸೀದಿಯ ಸ್ಥಳದಲ್ಲಿ ಈ ಹಿಂದೆ ಹರಿಹರ ದೇವಾಲಯ ಇತ್ತು ಎಂಬ ಅರ್ಜಿಯ ನಂತರ ಸರ್ವೇ ನಡೆಸಲು ನ್ಯಾಯಾಲಯ ಆದೇಶಿಸಿತ್ತು.

"ಸಂಭಲ್ ಹಿಂಸಾಚಾರದಲ್ಲಿ ಭಾಗಿಯಾದ ವ್ಯಕ್ತಿಗಳ ವಿರುದ್ಧ ಉತ್ತರ ಪ್ರದೇಶ ಸರ್ಕಾರವು ದೃಢವಾದ ನಿಲುವನ್ನು ತೆಗೆದುಕೊಳ್ಳುತ್ತಿದೆ. ಕಲ್ಲು ತೂರಾಟಗಾರರು ಮತ್ತು ದುಷ್ಕರ್ಮಿಗಳ ಪೋಸ್ಟರ್ ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತದೆ. ಅವರಿಂದಲೇ ಹಾನಿಯ ಪಾವತಿಗೆ ಪ್ರಯತ್ನಿಸಲಾಗುತ್ತದೆ. ಆರೋಪಿಗಳ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡುವವರಿಗೆ ಬಹುಮಾನವನ್ನೂ ನೀಡಲಾಗುತ್ತದೆ" ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಹಿಂದೆ 2020 ರಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ಪ್ರತಿಭಟನಾಕಾರರ ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾಗಿತ್ತು. ಈ ಪೋಸ್ಟರ್‌ಗಳನ್ನು ರಾಜ್ಯ ರಾಜಧಾನಿ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಪ್ರದರ್ಶಿಸಿದ್ದು, ಆದರೆ ನಂತರ ನ್ಯಾಯಾಲಯದ ಆದೇಶದ ನಂತರ ಅವುಗಳನ್ನು ತೆರವು ಪಡಿಸಲಾಗಿತ್ತು.

ಸಂಭಲ್‌ ಘರ್ಷಣೆಗೆ ಸಂಬಂಧಿಸಿದಂತೆ, ಇಲ್ಲಿಯವರೆಗೆ, ಪೊಲೀಸರು 25 ವ್ಯಕ್ತಿಗಳನ್ನು ಬಂಧಿಸಿದ್ದು, ಏಳು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಸಂಭಾಲ್‌ನ ಸಮಾಜವಾದಿ ಪಕ್ಷದ ಸಂಸದ ಜಿಯಾ-ಉರ್-ರೆಹಮಾನ್ ಬಾರ್ಕ್, ಪಕ್ಷದ ಸ್ಥಳೀಯ ಶಾಸಕ ಇಕ್ಬಾಲ್ ಮೆಹಮೂದ್ ಅವರ ಪುತ್ರ ಸೊಹೇಲ್ ಇಕ್ಬಾಲ್ ಸೇರಿದಂತೆ 2,750 ಕ್ಕೂ ಹೆಚ್ಚು ಅಪರಿಚಿತ ಶಂಕಿತರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.

Full View

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News