ಪರಿಶಿಷ್ಟ ಜಾತಿ ಮೀಸಲಾತಿಯಡಿ ಉದ್ಯೋಗಕ್ಕಾಗಿ ಹಿಂದೂ ಧರ್ಮಕ್ಕೆ ಮತಾಂತರವಾದ ಕ್ರೈಸ್ತ ಮಹಿಳೆ | ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಪರಿಶಿಷ್ಟ ಜಾತಿ ಮೀಸಲಾತಿಯಡಿ ಉದ್ಯೋಗ ಪಡೆಯಲು ಯತ್ನಿಸಿ ಹಿಂದೂ ಧರ್ಮಕ್ಕೆ ಮತಾಂತರವಾದ ಕ್ರೈಸ್ತ ಮಹಿಳೆಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ತಮಿಳುನಾಡಿನ ಮಹಿಳೆಯೊಬ್ಬರು ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಪ್ರಕರಣವನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಆರ್ ಮಹದೇವನ್ ಅವರ ಪೀಠವು ಮೀಸಲಾತಿ ಪ್ರಯೋಜನಗಳನ್ನು ಪಡೆಯಲು ಮಾತ್ರ ಮಾಡಿದ ಮತಾಂತರ ಅಥವಾ ಮರುಮತಾಂತರವನ್ನು ಅನುಮತಿಸಲಾಗುವುದಿಲ್ಲ ಎಂದು ತೀರ್ಪು ನೀಡಿದೆ. ಇದು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಒದಗಿಸುವ ಉದ್ದೇಶವನ್ನು ದುರ್ಬಲಗೊಳಿಸುತ್ತದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ ಎಂದು barandbench.com ವರದಿ ಮಾಡಿದೆ.
ತಮಿಳುನಾಡಿನ ಸಿ ಸೆಲ್ವರಾಣಿ ಎಂಬವರು ಹಿಂದೂ ಧರ್ಮದ ವಲ್ಲುವನ್ ಜಾತಿಗೆ ಸೇರಿದವರು ಎಂದು ಹೇಳಿಕೊಂಡು ಪರಿಶಿಷ್ಟ ಜಾತಿಯಡಿ ಮೀಸಲಾತಿ ಕೋರಿ ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ತಮಿಳುನಾಡು ಸರ್ಕಾರವು ಅರ್ಜಿಯನ್ನು ಪರಿಶೀಲಿಸಿದಾಗ, ಆಕೆ ಹುಟ್ಟಿನಿಂದ ಕ್ರೈಸ್ತ ಧರ್ಮಕ್ಕೆ ಸೇರಿದವರು ಎಂದು ತಿಳಿದು ಬಂತು. ಆಕೆಯ ಪೋಷಕರ ವಿವಾಹವನ್ನು ಭಾರತೀಯ ಕ್ರೈಸ್ತ ವಿವಾಹ ಕಾಯ್ದೆಯಡಿ ನೋಂದಾಯಿಸಲಾಗಿದೆ. ಆಕೆಯ ಬ್ಯಾಪ್ಟಿಸಮ್ ಮತ್ತು ಚರ್ಚ್ ಹಾಜರಾತಿಯ ದಾಖಲೆಗಳು ಆಕೆಯು ಕ್ರೈಸ್ತ ಸಮುದಾಯಕ್ಕೆ ಸೇರಿದವರು ಎನ್ನುವುದಕ್ಕೆ ಪುರಾವೆ ನೀಡಿದ್ದವು.
ಗುಮಾಸ್ತ ಹುದ್ದೆಗೆ ಬೇರೊಬ್ಬರನ್ನು ನೇಮಕ ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ಸೆಲ್ವರಾಣಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮಿಳುನಾಡು ಸರಕಾರದ ಕ್ರಮವನ್ನು ಮದ್ರಾಸ್ ಹೈಕೋರ್ಟ್ 2023ರ ಜನವರಿಯಲ್ಲಿ ಎತ್ತಿಹಿಡಿದಿತ್ತು. ಅದನ್ನು ಪ್ರಶ್ನಿಸಿ ಸೆಲ್ವರಾಣಿ ಸುಪ್ರೀಂ ಕೋರ್ಟ್ ಕದತಟ್ಟಿದ್ದರು. ಸೆಲ್ವರಾಣಿ ಅವರು ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಪಡೆಯಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದ ಸುಪ್ರೀಂ ಕೋರ್ಟ್ ಹೈಕೋರ್ಟ್ನ ತೀರ್ಪನ್ನು ಎತ್ತಿಹಿಡಿದಿದೆ.
"ಧರ್ಮವನ್ನು ಅಳವಡಿಸಿಕೊಳ್ಳದೇ, ಕೇವಲ ಮೀಸಲಾತಿಯ ಉದ್ದೇಶಕ್ಕಾಗಿ ಮತಾಂತರವಾಗುವುದನ್ನು ಅನುಮತಿಸಲಾಗುವುದಿಲ್ಲ. ಈ ರೀತಿಯ ಮೀಸಲಾತಿಗಳು, ಮೀಸಲಾತಿ ನೀತಿಯ ಸಾಮಾಜಿಕ ನೀತಿಗೆ ಹಿನ್ನಡೆಯಾಗಲಿದೆ. ಸಂವಿಧಾನಿಕವಾಗಿ ಇದು ವಂಚನೆಗೆ ಕಾರಣವಾಲಿದೆ” ಎಂದು ಪೀಠವು ಉಲ್ಲೇಖಿಸಿದೆ.
ಹಿಂದೂ ಧರ್ಮಕ್ಕೆ ಮರುಮತಾಂತರಕ್ಕೆ ಸಂಬಂಧಿಸಿದ ಯಾವುದೇ ಪುರಾವೆಗಳು ಪ್ರಕರಣದಲ್ಲಿ ಕಂಡುಬಂದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮರು ಮತಾಂತರವಾಗಬೇಕಾದರೆ ಸಮಾರಂಭಗಳು, ಸಾರ್ವಜನಿಕವಾಗಿ ಪ್ರಚಾರಗಳು ಅಥವಾ ಆರ್ಯ ಸಮಾಜದಂತಹ ಸಂಸ್ಥೆಗಳೊಂದಿಗೆ ಸಂಬಂಧದ ಅಗತ್ಯವಿದೆ. ಈ ಪ್ರಕರಣದಲ್ಲಿ ಅದು ಯಾವುದೂ ನಡೆದಂತಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
"ಭಾರತದ ಜಾತ್ಯತೀತ ಚೌಕಟ್ಟಿನಲ್ಲಿ, ಪ್ರತಿಯೊಬ್ಬ ನಾಗರಿಕರಿಗೂ ಅವರ ಆಯ್ಕೆಯ ಧರ್ಮವನ್ನು ಆಚರಿಸಲು ಮತ್ತು ಪ್ರತಿಪಾದಿಸಲು ಹಕ್ಕಿದೆ. ಆದರೆ ಧರ್ಮದ ಮೇಲಿನ ದ್ವಂದ್ವ ಆಯ್ಕೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಮೇಲ್ಮನವಿದಾರರು ಬ್ಯಾಪ್ಟಿಸಮ್ ಅನ್ನು ಪಡೆದ ನಂತರ ಮೀಸಲಾತಿ ಪ್ರಯೋಜನಗಳಿಗಾಗಿ ಹಿಂದೂ ಎಂದು ಗುರುತಿಸಲು ಆಗುವುದಿಲ್ಲ," ಎಂದು ಪೀಠವು ಹೇಳಿದೆ.
ಸೆಲ್ವರಾಣಿ ಪರ ಹಿರಿಯ ವಕೀಲ ಎನ್.ಎಸ್.ನಪ್ಪಿನೈ, ವಕೀಲರಾದ ವಿ.ಬಾಲಾಜಿ, ಅಸೈತಂಬಿ ಎಂಎಸ್ಎಂ ಮತ್ತಿತರರು ವಾದ ಮಂಡಿಸಿದ್ದರು. ತಮಿಳುನಾಡು ಸರ್ಕಾರದ ಪರ ವಕೀಲರಾದ ಅರವಿಂದ್ ಎಸ್, ಅಕ್ಷಯ್ ಗುಪ್ತಾ, ಅಬ್ಬಾಸ್ ಬಿ ಮತ್ತು ಥರಾಣೆ ಎಸ್. ಹಾಜರಾಗಿದ್ದರು.